‘ಪುರುಷ ಪ್ರಧಾನ ಮನಸ್ಥಿತಿಯಿಂದ ಹಿನ್ನಡೆ’

7
ಭಾರತೀಯ ಮಹಿಳಾ ಕಾಕಸ್ ಸಮ್ಮೇಳನ

‘ಪುರುಷ ಪ್ರಧಾನ ಮನಸ್ಥಿತಿಯಿಂದ ಹಿನ್ನಡೆ’

Published:
Updated:
Deccan Herald

ಬೆಂಗಳೂರು: ಅಲ್ಲಿ, ಪ್ರಗತಿಪರ ಚಿಂತಕಿಯರು, ರಾಜಕೀಯ ನಾಯಕಿಯರು, ಪತ್ರಕರ್ತೆಯರು, ಬರಹಗಾರ್ತಿಯರ ದಂಡೇ ನೆರೆದಿತ್ತು. 

ಶಾಸಕಿಯರು ಮತ್ತು ಸಂಸತ್ ಸದಸ್ಯರಾಗಿ ಮಹಿಳಾ ಅಭ್ಯರ್ಥಿಗಳು ಚುನಾಯಿತರಾಗಲು ರಾಜಕೀಯ ಪಕ್ಷಗಳು ಟಿಕೆಟ್ ನೀಡುತ್ತಿಲ್ಲವೋ ಅಥವಾ ಮಹಿಳೆಯರು ಅಸಮರ್ಥರಾಗಿದ್ದಾರೋ ಎಂಬುದು ಅಲ್ಲಿ ನೆರೆದವರ ಚರ್ಚೆಯ ವಿಷಯವಾಗಿತ್ತು.

ನಗರದಲ್ಲಿ ಶನಿವಾರ ಭಾರತೀಯ ಮಹಿಳಾ ಕಾಕಸ್, ಈ ಸಮ್ಮೇಳನ ಆಯೋಜಿಸಿತ್ತು.

ಮಹಿಳೆಯರ ರಾಜಕೀಯ ಪ್ರವೇಶವನ್ನು ವಿರೋಧಿಸಲು, ಅವರು ರಾಜಕೀಯದಲ್ಲಿ ಆಸಕ್ತಿ ಹೊಂದಿಲ್ಲ. ಆಡಳಿತ ಮತ್ತು ರಾಜಕೀಯಕ್ಕೆ ಅಸಮರ್ಥರು ಎಂಬ ವಾದ ಮಾಡಲಾಗುತ್ತದೆ. ಪುರುಷ ಪ್ರಧಾನ ಮನಸ್ಥಿತಿಯ ಚಿಂತನೆಗಳು ರಾಜಕೀಯದಲ್ಲಿ ಮಹಿಳಾ ಮುನ್ನಡೆಗೆ ಬೆಂಬಲಿಸುತ್ತಿಲ್ಲ ಎಂದು ಸಭೆ ಅಭಿಪ್ರಾಯಪಟ್ಟಿತು.

ಬರಹಗಾರ್ತಿ ಶ್ರೀಲತಾ ಬಾಟ್ಲಿವಾಲ, ‘ಪುರುಷ ಪ್ರಧಾನ ಸಮಾಜದಲ್ಲಿ ಅರ್ಹರಲ್ಲದವರಿಗೆ ನಾವೇಕೆ ದೇಶ ಮುನ್ನಡೆಸುವ ಜವಾಬ್ದಾರಿಯನ್ನು ನೀಡಿದ್ದೇವೆ? ಅನೇಕ ಮಹಿಳೆಯರು ನ್ಯಾಯ, ಮಾನವ ಹಕ್ಕುಗಳಿಗಾಗಿ ಪ್ರಾಮಾಣಿಕವಾಗಿ ಶ್ರಮಿಸಿದ್ದಾರೆ. ಸಮಾಜಮುಖಿ ಕೆಲಸಗಳಲ್ಲಿ ತೊಡಗಿದ್ದಾರೆ. ಇಂಥವರನ್ನು ರಾಜಕೀಯ ನಾಯಕರ ಸ್ಥಾನದಲ್ಲಿ ನೋಡಲು ಯಾಕೆ ಸಾಧ್ಯವಾಗುತ್ತಿಲ್ಲ’ ಎಂಬ ಪ್ರಶ್ನೆ ಎತ್ತಿದರು. 

‘ರಾಜಕೀಯದಲ್ಲಿ ಪುರುಷ ಪ್ರಾಧಾನ್ಯ ಹೆಚ್ಚಾಗಿರುವುದರಿಂದ ಮಹಿಳೆಯರಿಗೆ ಅವಕಾಶಗಳು ಸಿಗುತ್ತಿಲ್ಲ. ಎಲ್ಲ ಪಕ್ಷಗಳು, ಅಭ್ಯರ್ಥಿಯ ಆರ್ಥಿಕ ಸ್ಥಿತಿಗತಿ, ಭದ್ರತೆ, ಬೆಂಬಲಿಗರನ್ನು ನೋಡಿಕೊಂಡೇ ಚುನಾವಣೆಗೆ ಸ್ಪರ್ಧಿಸಲು ಟಿಕೆಟ್ ನೀಡುತ್ತಿವೆ’ ಎಂದು ಕಾಂಗ್ರೆಸ್‌ ನಾಯಕಿ ಸಿ.ಮೋಟಮ್ಮ ಅಭಿಪ್ರಾಯಪಟ್ಟರು.

‘ಕುಟುಂಬದ ಬೆಂಬಲ ಇಲ್ಲದಿರುವುದು, ಹಣ, ಜಾತಿಯ ಪ್ರಶ್ನೆಗಳಿಂದಾಗಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ರಾಜಕೀಯಕ್ಕೆ ಬರಲಾಗುತ್ತಿಲ್ಲ’ ಎಂದು ರಾಜಕೀಯ ವಿಶ್ಲೇಷಕಿ ಸುರಭಿ ಹೊಡಿಗೆರೆ ಅಭಿಪ್ರಾಯಪಟ್ಟರು.

ಕಾಂಗ್ರೆಸ್‌ ವಕ್ತಾರೆ ಕವಿತಾ ರೆಡ್ಡಿ, ‘ಪಕ್ಷ ಮುಖ್ಯವಲ್ಲ. ಆದರೆ, ರಾಜಕೀಯದಲ್ಲಿ ಮಹಿಳೆಯರಿಗೆ ನೀಡುತ್ತಿರುವ ಪ್ರಾತಿನಿಧ್ಯ ಮುಖ್ಯ. ಕ್ಷೇತ್ರಗಳಲ್ಲಿ ಉತ್ತಮವಾಗಿ ಕೆಲಸ ಮಾಡುವರಿದ್ದರೆ ಪಕ್ಷಗಳು ಖಂಡಿತವಾಗಿಯೂ ಟಿಕೆಟ್ ನೀಡುತ್ತವೆ’ ಎಂದು ಹೇಳಿದರು.

‘ನೂರೆಂಟು ಕಟ್ಟು ಕಥೆಗಳ ನಡುವೆಯೂ ಮಹಿಳೆ ರಾಜಕೀಯ ಕ್ಷೇತ್ರದಲ್ಲಿ ಮುನ್ನುಗುತ್ತಿದ್ದಾಳೆ ಎನ್ನುವುದು ಖುಷಿಯ ಸಂಗತಿ’ ಎಂದು ಲೇಖಕಿ ತಾರಾ ಕೃಷ್ಣಸ್ವಾಮಿ ವಿವರಿಸಿದರು.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !