ಮಂಗಳವಾರ, ನವೆಂಬರ್ 19, 2019
23 °C
ರಸ್ತೆ ನಿರ್ಮಾಣಕ್ಕೆ ಹಣ ಬಳಕೆ l ಅಕ್ರಮಗಳ ಪತ್ತೆ ಮಾಡಿರುವ ನಾಗಮೋಹನದಾಸ್‌ ಸಮಿತಿ

ನಿರ್ಮಿಸದ ಗ್ರಂಥಾಲಯಕ್ಕೂ ಬಿಲ್‌ ಪಾವತಿ!

Published:
Updated:

ಬೆಂಗಳೂರು: ಗ್ರಂಥಾಲಯಕ್ಕೆ ಮಂಜೂರಾದ ಹಣದಲ್ಲಿ ರಸ್ತೆ ನಿರ್ಮಿಸಬಹುದೇ? ಪಾಲಿಕೆ ಅಧಿಕಾರಿಗಳ ಪ್ರಕಾರ ಇದು ಸಾಧ್ಯ. ಅಷ್ಟೇ ಅಲ್ಲ, ನಡೆಸಿದ್ದು ರಸ್ತೆ ಕಾಮಗಾರಿಯನ್ನಾದರೂ ‘ಗ್ರಂಥಾಲಯದ ನಿರ್ಮಾಣ ಪೂರ್ಣಗೊಂಡಿದೆ’ ಎಂದು ವರದಿ ನೀಡಿ ಬಿಲ್‌ ಬಿಡುಗಡೆ ಮಾಡುವಷ್ಟು ನಿಪುಣರು ಅವರು.

ಬಿಬಿಎಂಪಿಯ ಈ ಹಿಂದಿನ ರಾಜರಾಜೇಶ್ವರಿನಗರ, ಮಲ್ಲೇಶ್ವರ ಹಾಗೂ ಗಾಂಧಿನಗರ ವಲಯಗಳಲ್ಲಿ 2008ರಿಂದ 2012ರ ನಡುವೆ ಅನುಷ್ಠಾನಗೊಳಿಸಿದ್ದ ಮೂಲಸೌಕರ್ಯ ಅಭಿವೃದ್ಧಿ ಕಾಮಗಾರಿಗಳಲ್ಲಿನ ಅಕ್ರಮಗಳ ಬಗ್ಗೆ ತನಿಖೆ ನಡೆಸಿರುವ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಎಚ್‌.ಎನ್‌.ನಾಗಮೋಹನದಾಸ್‌ ಸಮಿತಿ ಈ ಅಕ್ರಮವನ್ನು ಪತ್ತೆ ಹಚ್ಚಿದೆ.

ಕಡತ ಸಂಖ್ಯೆ ಎಂ–359ರ ಪ್ರಕಾರ, ಸಂಜಯನಗರದ ಜ್ಯೋತಿವನ ಉದ್ಯಾನದಲ್ಲಿ ಗ್ರಂಥಾಲಯ ಕಟ್ಟಡ ನಿರ್ಮಾಣಕ್ಕೆ ₹69.61 ಲಕ್ಷದ ಅಂದಾಜು ಪಟ್ಟಿಗೆ ಪರಿಷ್ಕೃತ ಅನುಮೋದನೆ ನೀಡಲಾಗಿತ್ತು. ಆದರೆ, ಗುತ್ತಿಗೆದಾರರು ಗ್ರಂಥಾಲಯದ ಬದಲು ಆರ್‌ಎಂವಿ 2ನ ಹಂತದಲ್ಲಿ ರಸ್ತೆಯನ್ನು ನಿರ್ಮಿಸಿದರು. ರಸ್ತೆ ಕಾಮಗಾರಿಗೆ ಬಿಲ್‌ ಪಾವತಿಸಲಾಯಿತು. ಅಚ್ಚರಿ ಎಂದರೆ ಗ್ರಂಥಾಲಯ ಕಾಮಗಾರಿಯನ್ನು ನಡೆಸದೆಯೇ,ಅದು ಪೂರ್ಣಗೊಂಡಿದೆ ಎನ್ನುವ ವರದಿಯನ್ನು ಎಂಜಿನಿಯರ್‌ಗಳು ಸಿದ್ಧಪಡಿಸಿದ್ದರು.

ಅದೇ ರೀತಿಯಲ್ಲಿ, ಸಿ.ವಿ. ರಾಮನ್‌ ನಗರದಲ್ಲಿ 100 ಮೀಟರ್‌ ಉದ್ದದ ಪಾದಚಾರಿ ಮಾರ್ಗದ ಅಭಿವೃದ್ಧಿಗೆ ₹10 ಲಕ್ಷ ಮಂಜೂರಾಗಿತ್ತು. ಆದರೆ, ಆ ಅನುದಾನ ಬಳಸಿ ಆರ್‌ಎಂವಿ ಎಕ್ಸೆನ್ಷನ್‌ನಲ್ಲಿ ಪಾದಚಾರಿ ಮಾರ್ಗ ಹಾಗೂ ಮಳೆ ನೀರು ಚರಂಡಿ
ಅಭಿವೃದ್ಧಿಪಡಿಸಲಾಗಿತ್ತು. ಇವು ನಿಯಮ ಉಲ್ಲಂಘನೆಗೆ  ಸ್ಪಷ್ಟ ನಿದರ್ಶನಗಳು ಎಂದು ಸಮಿತಿ ಅಭಿಪ್ರಾಯಪಟ್ಟಿದೆ. 

ಎಇಇ, ಎಇ ಸಹಿ ಇಲ್ಲದೆಯೇ ಹಣ ಬಿಡುಗಡೆ

ಕೆಲವು ಕಾರ್ಯಪಾಲಕ ಎಂಜಿನಿಯರ್‌ಗಳು (ಇಇ) ಕಾಮಗಾರಿ ಅನುಷ್ಠಾನಕ್ಕೆ ಸಂಬಂಧಿಸಿದಂತೆ ತಮ್ಮ ಅಧೀನದ ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ (ಎಇಇ) ಹಾಗೂ ಸಹಾಯಕ ಎಂಜಿನಿಯರ್‌ಗಳ (ಎಇ) ಸಹಿ ಇಲ್ಲದೆಯೇ ಗುತ್ತಿಗೆದಾರರಿಗೆ ಹಣ ಬಿಡುಗಡೆ ಮಾಡಿರುವ ಪ್ರಕರಣಗಳನ್ನು ಸಮಿತಿ ಪತ್ತೆ ಹಚ್ಚಿದೆ. ಕೆಲವು ಕಾರ್ಯಪಾಲಕ ಎಂಜಿನಿಯರ್‌ಗಳು ವಿಚಾರಣೆ ವೇಳೆ ಈ ಅಂಶವನ್ನು ಒಪ್ಪಿಕೊಂಡಿದ್ದಾರೆ. ಈ ಅಕ್ರಮ ನಡೆಸುವ ವೇಳೆ ಅಳತೆ ಪುಸ್ತಕದಲ್ಲಿ (ಎಂಬಿಬಿ) ನಿಗದಿತ ಕಾಲಂಗಳನ್ನು, ಉಪವಿಭಾಗದ ಬಿಲ್‌ ರಿಜಿಸ್ಟರ್‌ (ಎಸ್‌ಬಿಆರ್‌) ಹಾಗೂ ಬಿಲ್‌ ರಿಜಿಸ್ಟರ್‌ (ಬಿಆರ್‌) ಹಾಗೂ ಕಾಮಗಾರಿ ಪರಿಶೀಲನೆ ದಿನಾಂಕ ನಮೂದಿಸಬೇಕಾದ ಜಾಗವನ್ನು ಖಾಲಿ ಬಿಡಲಾಗುತ್ತಿತ್ತು ಎಂಬುದನ್ನೂ ಸಮಿತಿ ಬಯಲಿಗೆಳೆದಿದೆ. 

ಆರ್‌.ಆರ್‌. ನಗರ ವಲಯದಲ್ಲಿ ಗೊಟ್ಟಿಗೆರೆ ಹನುಮಯ್ಯ ಬಡಾವಣೆಯಲ್ಲಿ ರಸ್ತೆ ಡಾಂಬರೀಕರಣ ಕಾಮಗಾರಿಗೆ (ಕಡತ ಸಂಖ್ಯೆ ಆರ್‌–341) ₹ 10.92 ಲಕ್ಷ ಹಣವನ್ನು ಗುತ್ತಿಗೆದಾರರಿಗೆ ಪಾವತಿ ಮಾಡಲಾಗಿದೆ. ಈ ಸಂಬಂಧ ಕಾರ್ಯಪಾಲಕ ಎಂಜಿನಿಯರ್‌ ಅವರು ಗುತ್ತಿಗೆದಾರರ, ಎಇಇ ಮತ್ತು ಎಇ ಅವರ ಸಹಿ ಪಡೆದಿರಲಿಲ್ಲ. ದಾಖಲೆಗಳಲ್ಲಿ ಎಂ.ಬಿ ಸಂಖ್ಯೆಯನ್ನೂ ನಮೂದಿಸಿರಲಿಲ್ಲ. ಈ ಅಕ್ರಮವನ್ನು ಸ್ವತಃ ಕಾರ್ಯಪಾಲಕ ಎಂಜಿನಿಯರ್‌ ಅವರೇ ಒಪ್ಪಿಕೊಂಡಿದ್ದರು ಎಂದು ಸಮಿತಿಯು ವರದಿಯಲ್ಲಿ ಉಲ್ಲೇಖಿಸಿದೆ.

ಅಂದಾಜು ಪಟ್ಟಿ ತಯಾರಿ
ಹಂತದ ಪ್ರಮುಖ ಅಕ್ರಮಗಳು

l ಚಾಲ್ತಿಯಲ್ಲಿರುವ ವರ್ಷದ ಎಸ್‌.ಆರ್‌ ದರದ ಬದಲು ಹಿಂದಿನ ವರ್ಷದ ಎಸ್‌.ಆರ್‌.ದರದ ಆಧಾರದಲ್ಲಿ ಅಂದಾಜು ಪಟ್ಟಿ ತಯಾರಿ

l ಅಂದಾಜು ಪಟ್ಟಿಯಲ್ಲಿ ಪೂರಕ ವರದಿ ಹಾಗೂ ನಕ್ಷೆಗಳಿರಲಿಲ್ಲ

l ಆಡಳಿತಾತ್ಮಕ ಅನುಮೋದನೆ ಹಾಗೂ ತಾಂತ್ರಿಕ ಮಂಜೂರಾತಿ ಪತ್ರಗಳಿಗೆ ಸಂಬಂಧಪಟ್ಟ ಅಧಿಕಾರಿಗಳ ಸಹಿಯೇ ಇಲ್ಲ

l ತಾಂತ್ರಿಕ ಮಂಜೂರಾತಿ ಹಾಗೂ ಆಡಳಿತಾತ್ಮಕ ಅನುಮೋದನೆಗೆ ತಾಳಮೇಳ ಇರಲಿಲ್ಲ

l ಡಾಂಬರಿಗೆ ಲೋಕೋಪಯೊಗಿ ಇಲಾಖೆಯ ದರಪಟ್ಟಿ ಬದಲು ರಾಷ್ಟ್ರೀಯ ಹೆದ್ದಾರಿಯ ದರ ಪಟ್ಟಿ ನಮೂದಿಸಿದ್ದರಿಂದ ಹೆಚ್ಚುವರಿ ಆರ್ಥಿಕ ಹೊರೆ

l ಹೆಚ್ಚುವರಿ ವೆಚ್ಚಕ್ಕೆ ಸಂಬಂಧಪಟ್ಟ ಅಧಿಕಾರಿಯ ಅನುಮತಿ ಪಡೆದಿರಲಿಲ್ಲ

l ಕಾಮಗಾರಿ ತಮ್ಮ ಅಧಿಕಾರ ವ್ಯಾಪ್ತಿಯ ಒಳಗಿರಬೇಕು ಎಂಬ ಕಾರಣಕ್ಕೆ ಅಂದಾಜು ವೆಚ್ಚವನ್ನೇ ವಿಭಜಿಸಲಾಗಿದೆ

l ಮಂಜೂರಾದ ಅಂದಾಜು ಪಟ್ಟಿಯೇ ಬೇರೆ, ಅನುಷ್ಠಾನ ಮಾಡಿದ್ದೇ ಬೇರೆ.

ಪ್ರತಿಕ್ರಿಯಿಸಿ (+)