ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಗರದ ಬಾವಿಗಳಿಗೆ ಪುನರ್ಜನ್ಮದ ಕಾಲ

Last Updated 21 ಮಾರ್ಚ್ 2019, 19:31 IST
ಅಕ್ಷರ ಗಾತ್ರ

ಬೆಂಗಳೂರು: ನಗರದ ವಿವಿಧ ಬಡಾವಣೆಗಳಲ್ಲಿ ಬಾವಿ ಪುನಶ್ಚೇತನದ ಯಶೋಗಾಥೆಗಳು ಕೇಳಿಬರುತ್ತಿವೆ. ಆ ಯಶೋಗಾಥೆಗಳಲ್ಲಿ ಬಾವಿಗೆ ಮಳೆ ನೀರು ತುಂಬಿಸುವ ಮತ್ತು ಇಂಗು ಬಾವಿಗಳಾಗಿ ಪರಿವರ್ತಿಸುವ ಜತೆಗೆ, ಮಳೆ ನೀರನ್ನು ಅಂತರ್ಜಲವಾಗಿ ಕಾಪಿಡುವಂತಹ, ಕೊಳವೆಬಾವಿಗಳಿಗೆ ಜಲಮರುಪೂರಣ ಮಾಡಿ ಯಶಸ್ವಿಯಾದ ದೃಷ್ಟಾಂತಗಳೂ ಇಣುಕಲಾರಂಭಿಸಿವೆ.

ಬಯೋಮ್ ಎನ್ವಿರಾನ್ಮೆಂಟಲ್ ಸಲ್ಯೂಷನ್ ತಂಡ, ಬಾವಿ ಪುನಶ್ಚೇತನ ಮತ್ತು ಇಂಗು ಬಾವಿಗಳ ಮೂಲಕ ಮಳೆ ನೀರನ್ನು ಅಂತರ್ಜಲ ವಾಗಿಸುವ ಕಾರ್ಯಕ್ಕೆ ಚಾಲನೆ ನೀಡಿದೆ. ಜಲತಜ್ಞ ಎಸ್. ವಿಶ್ವನಾಥ್ ನೇತೃತ್ವದಲ್ಲಿ ಒಂದಷ್ಟು ಆಸಕ್ತರು ಅಭಿಯಾನದ ರೂಪದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.

ಈ ಕಾರ್ಯದಲ್ಲಿ ನಗರದ ಮನೆಗಳು, ಸಾರ್ವಜನಿಕ ಸ್ಥಳಗಳಲ್ಲಿರುವ ಕೆಲವು ಹಳೆಯ ಬಾವಿಗಳು ಮರು ಜೀವ ಪಡೆದುಕೊಂಡಿವೆ. ಹೊಸದಾಗಿ ನಿರ್ಮಾಣವಾಗುವ ಮನೆಗಳು, ಅಪಾರ್ಟ್‌ಮೆಂಟ್‌ಗಳಲ್ಲಿ 20ರಿಂದ 40 ಅಡಿ ಆಳದ ಇಂಗು ಬಾವಿಗಳು ನಿರ್ಮಾಣವಾಗುತ್ತಿವೆ. ಮನೆಯ ಚಾವಣಿ ಮೇಲೆ ಸುರಿಯುವ ಮಳೆ ನೀರು ಸಂಗ್ರಹಿಸಬೇಕೆಂಬ ಅಭಿಯಾನಕ್ಕೀಗ ಹೊಸ ರೂಪ ಬಂದಿದೆ. ಆಗಿನ ಇಂಗು ಗುಂಡಿ, ಈಗ ಇಂಗುಬಾವಿಯಾಗಿದೆ.

ಕಥೆ ಹೇಳುತ್ತಾ ಜಾಗೃತಿ ಮೂಡಿಸುತ್ತಾ: ನಗರದಲ್ಲಿ ಹಳೆಯ ಬಾವಿಗಳನ್ನು ಗುರುತಿಸಿ, ಮ್ಯಾಪ್ ಮಾಡಿ, ಪ್ರತಿ ಬಾವಿಯ ಹಿಂದಿರುವ ಇತಿಹಾಸ ಮತ್ತು ಕಥೆಗಳನ್ನು ದಾಖಲಿಸಲಾಗುತ್ತಿದೆ. ಅದನ್ನು ಸಮುದಾಯದ ಮುಂದೆ ಪ್ರಸ್ತುತಪಡಿಸಲಾಗುತ್ತಿದೆ. ಈ ಮೂಲಕ ಜನರಲ್ಲಿ ಬಾವಿಗಳ ಮಹತ್ವ ಮತ್ತು ಉಪಯೋಗದ ಬಗ್ಗೆ ಅರಿವು ಮೂಡಿಸಲಾಗುತ್ತಿದೆ.

ಬಾವಿಗಳನ್ನು ತೆಗೆಯುವ ಮಣ್ಣು ಒಡ್ಡರ ತಂಡದೊಂದಿಗೆ ಹೆಜ್ಜೆ ಹಾಕುತ್ತಿರುವ ಈ ಸಂಸ್ಥೆ, ನಾಲ್ಕೈದು ವರ್ಷಗಳಲ್ಲಿ ಅಂದಾಜು ಸಾವಿರಕ್ಕೂ ಹೆಚ್ಚು ಬಾವಿಗಳು ಪುನಶ್ಚೇತನಗೊಳಿಸಿದೆ. ಹಾಗೆಯೇ ಹೊಸ ಇಂಗು ಬಾವಿಗಳ ನಿರ್ಮಾಣಕ್ಕೂ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಕೈ ಜೋಡಿಸಿದೆ.

ಪ್ರವಾಹ ತಡೆಗೆ ಪರಿಹಾರ: ಬೆಂಗಳೂರಿನ ನೀರಿನ ಸಮಸ್ಯೆ ಮತ್ತು ಮಳೆಗಾಲದಲ್ಲಿ ಎದುರಾಗುವ ಪ್ರವಾಹ ಪರಿಸ್ಥಿತಿ ನಿಭಾಯಿಸಲು ಇಂಗು ಬಾವಿ ತೆಗೆಸುವುದು ಮತ್ತು ಹಳೆಯ ಬಾವಿಗಳ ಪುನಶ್ಚೇತನ ಸೂಕ್ತ ಪರಿಹಾರ ಎನ್ನುವುದು ಬಯೋಮ್‌ ಎನ್ವಿರಾನ್ಮೆಂಟಲ್ ಸಲ್ಯೂಷನ್ ತಂಡದ ಅಭಿಪ್ರಾಯ.

ಚಾವಣಿ ಮೇಲೆ ಸುರಿಯುವ ಮಳೆ ನೀರನ್ನು ಇಂಗು ಬಾವಿಗಳಿಗೆ ಅಥವಾ ತೆರೆದಬಾವಿಗಳಿಗೆ ಸಂಪರ್ಕ ಕೊಡಿಸಬೇಕು. ಮಳೆ ನೀರು ತುಂಬಿ ಇಂಗಿದ ನಂತರ ಹೆಚ್ಚಾಗುವ ನೀರನ್ನು ಕೊಳವೆಬಾವಿಗಳಿಗೆ (ಇದ್ದರೆ) ಮರುಪೂರಣ ಮಾಡಬಹುದು. ಇದರಿಂದ ಸಣ್ಣ ಸಣ್ಣ ಮಳೆಗೂ ದಿಢೀರನೆ ಉದ್ಭವಿಸುವ ಪ್ರವಾಹವನ್ನು ತಪ್ಪಿಸಬಹುದು ಎಂದು ತಂಡದ ಸದಸ್ಯರು ತಿಳಿಸುತ್ತಾರೆ.

ದಶಲಕ್ಷ ಬಾವಿ ಗುರಿ: 800 ಚ.ಕಿ.ಮೀ ವಿಸ್ತೀರ್ಣವಿರುವ ಬೆಂಗಳೂರು ಮಹಾನಗರದ ಮೇಲೆ ವಾರ್ಷಿಕವಾಗಿ ಸರಾಸರಿ 950 ಮಿಮೀ ಮಳೆ ಸುರಿಯುತ್ತದೆ. ನಗರದ ಶೇ 50ರಷ್ಟು ಮಳೆ ನೀರನ್ನು ಬಾವಿಗಳ ಮೂಲಕವೇ ಅಂತರ್ಜಲವಾಗಿ ಪರಿವರ್ತಿಸಬಹುದು. ಆ ಉದ್ದೇಶದಿಂದಲೇ ನಾವು 'ಮಹಾನಗರಕ್ಕೆ ದಶಲಕ್ಷ ಬಾವಿ' ಎಂಬ ಗುರಿ ಇಟ್ಟುಕೊಂಡಿದ್ದೇವೆ' ಎನ್ನುತ್ತಾರೆ ‘ಬಯೋಮ್’ ತಂಡದವರಲ್ಲೊಬ್ಬರಾದ ಅವಿನಾಶ್.

ಅಭಿಯಾನದ ಉದ್ದೇಶ ಈಡೇರಿದರೆ ಬೆಳೆಯುತ್ತಿರುವ ಬೆಂಗಳೂರಿಗೆ ‘ಮತ್ತೊಂದು ಕಾವೇರಿ’ಯ ಅವಶ್ಯಕತೆ ಇರುವುದಿಲ್ಲ ಎನ್ನುವುದು ಅವರ ವಿಶ್ವಾಸದ ಮಾತು.

ಇಂಗುಬಾವಿ ಕುರಿತ ಹೆಚ್ಚಿನ ಮಾಹಿತಿಗೆ: http://bengaluru.urbanwaters.in

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT