ಬುಧವಾರ, ಆಗಸ್ಟ್ 4, 2021
27 °C

ಉತ್ತರ ಪ್ರದೇಶವನ್ನು ಅಪರಾಧ ಪ್ರದೇಶವಾಗಿಸಿದ ಬಿಜೆಪಿ ಸರ್ಕಾರ: ಪ್ರಿಯಾಂಕಾ ಕಿಡಿ

ಎಎನ್‌ಐ Updated:

ಅಕ್ಷರ ಗಾತ್ರ : | |

ನವದೆಹಲಿ: ಬಿಜೆಪಿ ಸರ್ಕಾರವೂ ಉತ್ತರ ಪ್ರದೇಶವನ್ನು ‘ಅಪರಾಧ ಪ್ರದೇಶ’ವಾಗಿ ಪರಿವರ್ತಿಸಿದೆ ಎಂದು ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಶುಕ್ರವಾರ ಆರೋಪಿಸಿದ್ದಾರೆ.

ಟ್ವಿಟರ್‌ನಲ್ಲಿ ವಿಡಿಯೊವೊಂದನ್ನು ಹಂಚಿಕೊಂಡಿರುವ ಅವರು, ‘ಉತ್ತರ ಪ್ರದೇಶದ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ರಾಜಕಾರಣಿ-ಅಪರಾಧ ಮೈತ್ರಿ ರಾಜ್ಯದಲ್ಲಿ ಪ್ರಾಬಲ್ಯ ಮೆರೆಯುತ್ತಿವೆ. ಕಾನ್ಪುರದ ವಿಕಾಸ್‌ ದುಬೆ ಎನ್‌ಕೌಂಟರ್‌ ಪ್ರಕರಣದಲ್ಲಿ ಈ ಮೈತ್ರಿಯು ಬೆಳಕಿಗೆ ಬಂದಿದೆ. ಇಂಥ ಅಪರಾಧಿಗಳನ್ನು ಬೆಳೆಸುತ್ತಿರುವವರು ಯಾರು? ಇದು ಬಹಿರಂಗವಾಗಬೇಕು. ಸುಪ್ರೀಂ ಕೋರ್ಟ್‌ನ ಹಾಲಿ ನ್ಯಾಯಮೂರ್ತಿಗಳಿಂದ ಈ ಇಡೀ ಪ್ರಕರಣದ ನ್ಯಾಯಾಂಗ ತನಿಖೆ ನಡೆಸಬೇಕೆಂದು ಕಾಂಗ್ರೆಸ್‌ ಆಗ್ರಹಿಸುತ್ತದೆ,’ ಎಂದು ಪ್ರಿಯಾಂಕಾ ಹೇಳಿದ್ದಾರೆ.

ಉತ್ತರ ಪ್ರದೇಶವನ್ನು ಬಿಜೆಪಿ ಸರ್ಕಾರ ಅಪರಾಧ ಪ್ರದೇಶವನ್ನಾಗಿ ಪರಿವರ್ತಿಸಿದೆ ಎಂದು ಪ್ರಿಯಾಂಕಾ ಹೇಳಿರುವುದಾಗಿ ಸುದ್ದಿ ಸಂಸ್ಥೆ ಎಎನ್‌ಐ ವರದಿ ಮಾಡಿದೆ.

ಗ್ಯಾಂಗ್‌ಸ್ಟರ್‌ ವಿಕಾಸ್‌ ದುಬೆಯನ್ನು ಶುಕ್ರವಾರ ಪೊಲೀಸರು ಎನ್‌ಕೌಂಟರ್‌ನಲ್ಲಿ ಹತ್ಯೆಗೈದಿದ್ದರು. ಎಂಟು ಮಂದಿ ಪೊಲೀಸರನ್ನು ಹತ್ಯೆ ಮಾಡಿ ಪರಾರಿಯಾಗಿದ್ದ ಕುಖ್ಯಾತ ರೌಡಿಶೀಟರ್‌ ವಿಕಾಸ್‌ ದುಬೆಯನ್ನು ಮಧ್ಯಪ್ರದೇಶದ ಉಜ್ಜಯನಿಯಲ್ಲಿ ಪೊಲೀಸರು ಗುರುವಾರ ಬಂಧಿಸಿದ್ದರು. ಆತನನ್ನು ಮಧ್ಯಪ್ರದೇಶ ಪೊಲೀಸರು ಉತ್ತರ ಪ್ರದೇಶ ಪೊಲೀಸರಿಗೆ ಹಸ್ತಾಂತರಿಸಿದ್ದರು. ಉಜ್ಜಯನಿಯಿಂದ ಕಾನ್ಪುರಕ್ಕೆ ಕರೆತರುವ ವೇಳೆ ಪೊಲೀಸರ ಬೆಂಗಾವಲು ವಾಹನ ಮಗುಚಿದೆ. ಈ ಅಪಘಾತದ ನಡುವೆ ಪರಾರಿಯಾಗಲು ಯತ್ನಿಸಿದ ವಿಕಾಸ್‌ ದುಬೆ ಎನ್‌ಕೌಂಟರ್‌ನಿಂದ ಸಾವಿಗೀಡಾಗಿರುವುದಾಗಿ ಪೊಲೀಸರು ಹೇಳಿದ್ದಾರೆ.

ಸದ್ಯ ಪೊಲೀಸರ ಗುಂಡೇಟಿಗೆ ಬಲಿಯಾಗಿರುವ ವಿಕಾಸ್‌ ದುಬೆಗೆ ರಾಜಕಾರಣಿಗಳ ನಂಟಿತ್ತು ಎಂದು ಹೇಳಲಾಗುತ್ತಿದೆ. ‘ಇದೇ ವಿಚಾರಕ್ಕೆ ಆತನನ್ನು ಪೊಲೀಸರು ನಕಲಿ ಎನ್‌ಕೌಂಟರ್‌ ಮಾಡಿ ಕೊಂದಿದ್ದಾರೆ,’ ಎಂದು ಟ್ವಿಟರ್‌ನಲ್ಲಿ ಹಲವರು ಅಭಿಪ್ರಾಯಪಟ್ಟಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು