ಬುಧವಾರ, ಆಗಸ್ಟ್ 4, 2021
26 °C

‘ಕೇಂದ್ರವು ಉದ್ಯಮದ ಪರ; ಹೆಚ್ಚು ಉದ್ಯೋಗ ಸೃಷ್ಟಿಸಿ ಬಡತನ ನಿರ್ಮೂಲನೆ ಮಾಡುತ್ತೇವೆ’

ಏಜೆನ್ಸೀಸ್ Updated:

ಅಕ್ಷರ ಗಾತ್ರ : | |

ನಾಗ್ಪುರ (ಮಹಾರಾಷ್ಟ್ರ): ಕೇಂದ್ರ ಸರ್ಕಾರವು ಕೈಗಾರಿಕೆ ಹಾಗೂ ಅಭಿವೃದ್ಧಿ ಪರವಾಗಿದ್ದು, ಹೆಚ್ಚು ಉದ್ಯೋಗಗಳನ್ನು ಸೃಷ್ಟಿಸಿ ಬಡತನವನ್ನು ನಿರ್ಮೂಲನೆ ಮಾಡಲು ಬಯಸಿದೆ ಎಂದು ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.

ಆತ್ಮನಿರ್ಭರ ಭಾರತ್ ವೆಬ್ ಸಂವಾದದಲ್ಲಿ ಮಾತನಾಡಿದ ಅವರು, ‘ದೇಶಕ್ಕೆ ಬಹುದೊಡ್ಡ ಮಾರುಕಟ್ಟೆ, ನುರಿತ ಮಾನವಶಕ್ತಿ, ಕಚ್ಚಾ ವಸ್ತುಗಳ ಲಭ್ಯತೆ ಇದೆ. ಸರ್ಕಾರವು ಅಭಿವೃದ್ಧಿ ಹಾಗೂ ಉದ್ಯಮದ ಪರವಾಗಿದೆ. ಏಕೆಂದರೆ ನಾವು ಹೆಚ್ಚಿನ ಪ್ರಮಾಣದಲ್ಲಿ ಉದ್ಯೋಗಾವಕಾಶಗಳನ್ನು ಸೃಷ್ಟಿಸಲು ಮತ್ತು ಬಡತನವನ್ನು ನಿರ್ಮೂಲನೆ ಮಾಡಲು ಬಯಸಿದ್ದೇವೆ’ ಎಂದು ತಿಳಿಸಿದ್ದಾರೆ.

‘ನಾಲ್ಕು ದಿನಗಳ ಹಿಂದೆ ಫಿಲಿಪ್‌ ಕ್ಯಾಪಿಟಲ್‌ ಅಮೆರಿಕದಲ್ಲಿ ಹೂಡಿಕೆದಾರರಿಗಾಗಿ ಕಾರ್ಯಕ್ರಮ ಆಯೋಜಿಸಿತ್ತು. ಅಂತರ್ಜಾಲದ ಮೂಲಕ ಆಯೋಜಿಸಿದ್ದ ಆ ಕಾರ್ಯಕ್ರಮದಲ್ಲಿ ನಾನೂ ಸೇರಿದಂತೆ ಸುಮಾರು 10 ಸಾವಿರ ಹೂಡಿಕೆದಾರರು ಭಾಗವಹಿಸಿದ್ದೆವು. ಉತ್ತಮ ಆದಾಯ ಇರುವುದರಿಂದ ಹೂಡಿಕೆದಾರರು ಭಾರತದಲ್ಲಿ ಹೂಡಿಕೆ ಮಾಡಲು ಬಯಸುತ್ತಾರೆ. ಭಾರತ ಹೂಡಿಕೆಗೆ ಸುರಕ್ಷಿತವಾದ ತಾಣವಾಗಿದೆ’ ಎಂದು ಅಭಿಪ್ರಾಯಪಟ್ಟಿದ್ದಾರೆ.

ಉದ್ಯಮಗಳಲ್ಲಿ ವಿದೇಶಿ ನೇರ ಹೂಡಿಕೆಗೆ ಉತ್ತೇಜನ ನೀಡಲಾಗುತ್ತಿದೆ ಎಂದೂ ಹೇಳಿದ ಸಚಿವರು, ‘ನಾವು ಅತಿಸಣ್ಣ, ಸಣ್ಣ ಮತ್ತು ಮಧ್ಯಮ ಪ್ರಮಾಣದ ಉದ್ಯಮಗಳಲ್ಲಿ (ಎಂಎಸ್‌ಎಂಇ) ಹೆಚ್ಚಿನ ಹೂಡಿಕೆ ಮಾಡಲು ಪ್ರಯತ್ನಿಸುತ್ತಿದ್ದೇವೆ. ಅದೇರೀತಿ ಎಂಎಸ್‌ಎಂಇಗಳ ವ್ಯಾಖ್ಯಾನವನ್ನೂ ಬದಲಿಸಲು ಪ್ರಯತ್ನಿಸುತ್ತಿದ್ದೇವೆ. ಉತ್ಪಾದನಾ ವಲಯ ಮತ್ತು ಸೇವಾ ವಲಯ ಎಂದು ಪ್ರತ್ಯೇಕವಾಗಿ ವರ್ಗೀಕರಿಸಲಾಗಿದೆ. ಆದರೆ, ಈಗ ಅವುಗಳು ವಿಲೀನಗೊಂಡಿವೆ. ಹಾಗಾಗಿ ನಾವು ಅದನ್ನು ‘ಉತ್ಪಾದನಾ ಮತ್ತು ಸೇವಾ ವಲಯ’ವೆಂದು ಹೆಸರಿಸಿದ್ದೇವೆ’ ಎಂದಿದ್ದಾರೆ.

ಮುಂದುವರಿದು, ಅತಿಸಣ್ಣ ಉದ್ಯಮಗಳಲ್ಲಿನ ಹೂಡಿಕೆಗೆ ಈ ಹಿಂದೆ ₹ 25 ಲಕ್ಷ ನಿಗದಿಪಡಿಸಲಾಗಿತ್ತು. ಅದನ್ನು ಈಗ ₹ 1ಕೋಟಿಗೆ ಏರಿಸಲಾಗಿದೆ. ಅದರ ವಹಿವಾಟು ಈ ಹಿಂದೆ ₹ 10 ಲಕ್ಷವಾಗಿತ್ತು. ಇದೀಗ ₹ 5 ಕೋಟಿಗೆ ತಲುಪಿದೆ. ಸಣ್ಣ ಪ್ರಮಾಣದ ಕೈಗಾರಿಕೆಗಳಿಗೆ ಇದ್ದ ₹ 5 ಕೋಟಿ ಹೂಡಿಕೆ ಮಿತಿಯನ್ನು ಈಗ ₹ 10 ಕೋಟಿಗೆ ಹೆಚ್ಚಿಸಲಾಗಿದೆ. ವಹಿವಾಟು ಮಿತಿ ₹ 2 ಕೋಟಿಯಿಂದ ₹ 50 ಕೋಟಿಗೆ ಏರಿಕೆಯಾಗಿದೆ. ಮಧ್ಯಮ ಪ್ರಮಾಣದ ಕೈಗಾರಿಕೆಗಳಲ್ಲಿ ₹ 10 ಕೋಟಿ ಹೂಡಿಕೆ ಮಿತಿ ಇತ್ತು. ಅದು ಈಗ ₹ 50 ಕೋಟಿಗೆ ಹೆಚ್ಚಳವಾಗಿದೆ. ವಹಿವಾಟು ₹ 5 ಕೋಟಿಯಿಂದ ₹ 250 ಕೋಟಿ ರೂ.ಗೆ ಏರಿದೆ ಎಂದು ಮಾಹಿತಿ ನೀಡಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು