ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Covid-19 India Update | ದೇಶದಲ್ಲಿ 15 ಲಕ್ಷದ ಸಮೀಪಕ್ಕೆ ಕೋವಿಡ್-19 ಪ್ರಕರಣ

ಅಕ್ಷರ ಗಾತ್ರ

ನವದೆಹಲಿ: ಸತತ ಆರನೇ ದಿನವೂ ಭಾರತದಲ್ಲಿ ಕೋವಿಡ್-19 ದೃಢಪಟ್ಟ ಪ್ರಕರಣಗಳ ಸಂಖ್ಯೆಯು 45 ಸಾವಿರಕ್ಕೂ ಅಧಿಕವಾಗಿದ್ದು, ದೇಶದಾದ್ಯಂತ ಹೊಸದಾಗಿ 47,704 ಹೊಸ ಪ್ರಕರಣಗಳು ಪತ್ತೆಯಾಗಿವೆ. ಈ ಮೂಲಕ ಒಟ್ಟಾರೆ ಸೋಂಕಿತರ ಸಂಖ್ಯೆ 14.83 ಲಕ್ಷಕ್ಕೆ ಏರಿಕೆಯಾಗಿದೆ.

ದಿನದಲ್ಲಿ ಕೊರೊನಾ ವೈರಸ್ ಸೋಂಕಿನಿಂದಾಗಿ 654 ಜನರು ಮೃತಪಟ್ಟಿದ್ದು, ಈವರೆಗೆ ಮೃತಪಟ್ಟವರ ಸಂಖ್ಯೆಯು 33,425ಕ್ಕೆ ಏರಿದೆ. ಇದರೊಂದಿಗೆ ದೇಶದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 14,83,157ಕ್ಕೆ ಏರಿದ್ದು, ಇದುವರೆಗೆ9,52,744 ಮಂದಿ ಗುಣಮುಖರಾಗಿದ್ದಾರೆ. ಇನ್ನೂ4,96,988 ಪ್ರಕರಣಗಳು ಸಕ್ರಿಯವಾಗಿವೆ.

ದೇಶದಾದ್ಯಂತ ಸತತ ಎರಡನೇ ದಿನವೂ ಐದು ಲಕ್ಷಕ್ಕಿಂತ ಹೆಚ್ಚು ಜನರಿಗೆ ಕೋವಿಡ್–19 ಪರೀಕ್ಷೆ ನಡೆಸಲಾಗಿದೆ. ಈ ಬಗ್ಗೆ ಇಲಾಖೆ ಟ್ವಿಟರ್‌ನಲ್ಲಿ ನೀಡಿರುವ ಮಾಹಿತಿ ಪ್ರಕಾರ ಜುಲೈ 26 ರಂದು5,15,000 ಹಾಗೂಜುಲೈ 27 ರಂದು 5,28,000 ಜನರಿಗೆ ಕೋವಿಡ್‌–19 ಸೋಂಕು ಪರೀಕ್ಷೆ ನಡೆಸಲಾಗಿದೆ.

ಜಾಗತಿಕವಾಗಿ ಭಾರತದ ಚೇತರಿಕೆಯ ಪ್ರಮಾಣವು ಶೇ 64.23ಕ್ಕೆ ಏರಿದೆ. ಹೊಸ ಪ್ರಕರಣಗಳ ಸಂಖ್ಯೆಯಲ್ಲಿ ಏರಿಕೆ ಕಂಡುಬಂದರೆ ಕೋವಿಡ್-19ನಿಂದಾಗಿ ಸುಮಾರು 6,50,000 ಸಾವುಗಳು ಸಂಭವಿಸಬಹುದು ಎನ್ನಲಾಗಿದೆ.

ಅತಿ ಹೆಚ್ಚು ಸೋಂಕಿತರನ್ನು ಹೊಂದಿರುವ ಮಹಾರಾಷ್ಟ್ರದಲ್ಲಿ 13,656 ಮೃತಪಟ್ಟಿದ್ದಾರೆ. ಇನ್ನೂ 1,48,905 ಪ್ರಕರಣಗಳು ಸಕ್ರಿಯವಾಗಿವೆ.ತಮಿಳುನಾಡಿನಲ್ಲಿಇದುವರೆಗೆ 3,493 ಮಂದಿ ಸಾವಿಗೀಡಾಗಿದ್ದು,ಇನ್ನೂ53,703ಪ್ರಕರಣಗಳು ಸಕ್ರಿಯವಾಗಿವೆ.
ರಾಜಧಾನಿ ದೆಹಲಿಯಲ್ಲಿ 3,827 ಮಂದಿ ಮೃತಪಟ್ಟಿದ್ದು, 11,904 ಸಕ್ರಿಯ ಪ್ರಕರಣಗಳಿವೆ.

ಫ್ರಾನ್ಸ್‌ನಿಂದ ವೈದ್ಯಕೀಯ ಉಪಕರಣ ಹಸ್ತಾಂತರ

ಕೋವಿಡ್-19 ಸಾಂಕ್ರಾಮಿಕ ರೋಗದ ವಿರುದ್ಧದ ಹೋರಾಟದಲ್ಲಿ ನೆರವಿನ ಭಾಗವಾಗಿ ಫ್ರಾನ್ಸ್ ಮಂಗಳವಾರ ಭಾರತಕ್ಕೆ ವೆಂಟಿಲೇಟರ್‌ಗಳು, ಪರೀಕ್ಷಾ ಕಿಟ್‌ಗಳು ಮತ್ತು ಇತರ ವೈದ್ಯಕೀಯ ಉಪಕರಣಗಳನ್ನು ಹಸ್ತಾಂತರಿಸಿದೆ.

ಫ್ರೆಂಚ್ ವಾಯುಪಡೆಯ ವಿಮಾನದಲ್ಲಿ ವೈದ್ಯಕೀಯ ಉಪಕರಣಗಳನ್ನು ನವದೆಹಲಿಗೆ ತಂದ ಬಳಿಕ ಪಾಲಂ ವಾಯುಪಡೆಯ ನಿಲ್ದಾಣದಲ್ಲಿ ಭಾರತದ ಫ್ರೆಂಚ್ ರಾಯಭಾರಿ ಎಮ್ಯಾನುಯೆಲ್ ಲೆನೈನ್ ಅವರು ಭಾರತೀಯ ರೆಡ್ ಕ್ರಾಸ್ ಸೊಸೈಟಿಗೆ ಹಸ್ತಾಂತರಿಸಿದರು.

ಗರ್ಭದಲ್ಲೇ ತಾಯಿಯಿಂದ ಮಗುವಿಗೆ ಸೋಂಕು

ಕೋವಿಡ್-19 ಸೋಂಕಿನಿಂದ ಬಳಲುತ್ತಿದ್ದ ಗರ್ಭಿಣಿಯಿಂದ ಹೊಕ್ಕುಳಬಳ್ಳಿಯ ಮೂಲಕ ತನ್ನ ಮಗುವಿಗೆ ವೈರಸ್ ಹರಡಲು ಸಾಧ್ಯವಿದೆ ಎಂದು ಪುಣೆಯ ವೈದ್ಯರು ಖಚಿತಪಡಿಸಿದ್ದಾರೆ. ಲಂಬ ಪ್ರಸರಣದ (ತಾಯಿಯಿಂದ ಮಗುವಿಗೆ) ಮೂಲಕ ಸೋಂಕು ತಗುಲಿದ ಮೊದಲ ದಾಖಲೆಯ ಪ್ರಕರಣವು ಪುಣೆ ಆಸ್ಪತ್ರೆಯಲ್ಲಿ ಕಂಡುಬಂದಿದ್ದು, ಬಳಿಕ ಶಿಶು ತೀವ್ರ ಅನಾರೋಗ್ಯವನ್ನ ಎದುರಿಸುತ್ತಿದೆ.

ಹಿಂದೂಸ್ತಾನ್ ಟೈಮ್ಸ್‌ನ ವರದಿ ಪ್ರಕಾರ, ಮೇ 27 ರಂದು ಬಿಜೆ ವೈದ್ಯಕೀಯ ಕಾಲೇಜು ಮತ್ತು ಸಾಸೂನ್ ಜನರಲ್ ಆಸ್ಪತ್ರೆಯಲ್ಲಿ 22 ವರ್ಷದ ತಾಯಿಗೆ ಜನಿಸಿದ ಹೆಣ್ಣು ಮಗು ದೇಶದಲ್ಲೇ ಮೊದಲ ಬಾರಿಗೆ ಕೋವಿಡ್-19 ಪಾಸಿಟಿವ್ ಆಗಿ ಜನಿಸಿದೆ. ಶಿಶುವಿಗೆ ತೀವ್ರ ನಿಗಾದ ಅಗತ್ಯವಿತ್ತು ಆದರೆ ಮೂರು ವಾರಗಳಲ್ಲಿ ಸಂಪೂರ್ಣ ಚೇತರಿಸಿದೆ. ನಂತರ ಅವಳನ್ನು ಜೂನ್‌ನಲ್ಲಿ ಬಿಡುಗಡೆ ಮಾಡಲಾಯಿತು.

ಟೈಮ್ಸ್ ಆಫ್ ಇಂಡಿಯಾದ ವರದಿಯ ಪ್ರಕಾರ, ತಾಯಿಗೆ ಕೋವಿಡ್-19 ಸೋಂಕು ತಗುಲಿರುವುದು ಪತ್ತೆಯಾದ ಬಳಿಕ ನವಜಾತ ಶಿಶು ಮತ್ತು ತಾಯಿಯನ್ನು ಪ್ರತ್ಯೇಕಗೊಳಿಸಲಾಯಿತು. ಮಗುವಿಗೂ ಕೂಡ ಜ್ವರ, ಜಡತೆ ಮತ್ತು ಅಸಹಜ ರಕ್ತದ ಏರಿಳಿತ ಸೇರಿದಂತೆ ಉರಿಯೂತವನ್ನು ಸೂಚಿಸುವ ಸೋಂಕಿನ ತೀವ್ರವಾದ ಲಕ್ಷಣಗಳು ಮಗುವಿಗೆ ಕಂಡುಬಂದಿವೆ.

ಭಾರತದಲ್ಲಿ ಸಾವಿನ ಪ್ರಮಾಣ ಶೇ 2.25ಕ್ಕೆ ಇಳಿಕೆ

ದೇಶದಲ್ಲಿ ಕೋವಿಡ್–19 ಸಂಬಂಧಿತ ಕಾರಣಗಳಿಂದ ಸಾವಿಗೀಡಾಗುತ್ತಿರುವ ಪ್ರಮಾಣದಲ್ಲಿ ಇಳಿಕೆಯಾಗಿದೆ ಹಾಗೂ ಸೋಂಕಿನಿಂದ ಗುಣಮುಖರಾಗುತ್ತಿರುವವರ ಸಂಖ್ಯೆ ಶೇ 64ಕ್ಕಿಂತಲೂ ಹೆಚ್ಚಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಹೇಳಿದೆ.

ಜೂನ್‌ 18ರವರೆಗೂ ಶೇ 3.33ರಷ್ಟಿದ್ದ ಕೋವಿಡ್‌ನಿಂದ ಸಂಭವಿಸಿದ ಸಾವು ಪ್ರಮಾಣ ಈಗ ಶೇ 2.25ಕ್ಕೆ ಇಳಿಕೆಯಾಗಿದೆ. ಕಳೆದ 24 ಗಂಟೆಗಳಲ್ಲಿ 35,176 ಜನರು ಕೊರೊನಾ ಸೋಂಕಿನಿಂದ ಗುಣಮುಖರಾಗಿದ್ದು, ಈವರೆಗೂ ಒಟ್ಟು 9,52,743 ಮಂದಿ ಚೇತರಿಸಿಕೊಂಡಿದ್ದಾರೆ. ಪ್ರಸ್ತುತ ದೇಶದಲ್ಲಿ 4,96,988 ಸಕ್ರಿಯ ಪ್ರಕರಣಗಳಿವೆ.

3 ತಿಂಗಳಲ್ಲೇ ಅತಿ ಕಡಿಮೆ ಕೋವಿಡ್-19 ಪ್ರಕರಣಗಳು ದಾಖಲು

ಮುಂಬೈನಲ್ಲಿ ಈ ಹಿಂದೆ ದಿನವೊಂದಕ್ಕೆ ಅತ್ಯಧಿಕ ಸುಮಾರು 9 ಸಾವಿರ ಕೋವಿಡ್-19 ಪ್ರಕರಣಗಳು ಪತ್ತೆಯಾಗಿದೆ. ಆದರೆ ಮಂಗಳವಾರ ಕಳೆದ ಮೂರು ತಿಂಗಳಲ್ಲೇ ಅತಿ ಕಡಿಮೆ ಪ್ರಕರಣಗಳು ದೃಢಪಟ್ಟಿವೆ. ಸೋಮವಾರ ನಡೆಸಿದ 8,776 ಮಾದರಿ ಪರೀಕ್ಷೆಗಳಿಂದ ಕೇವಲ 700 ಕೋವಿಡ್-19 ಪ್ರಕರಣಗಳು ದೃಢಪಟ್ಟಿದೆ.

ನಗರದಲ್ಲಿ ಭಾನುವಾರ ನಡೆಸಿದ್ದ ಪರೀಕ್ಷೆಗಳ ಪೈಕಿ ಸೋಮವಾರ 1,033 ಕೋವಿಡ್-19 ಪ್ರಕರಣಗಳು ಪತ್ತೆಯಾಗಿದ್ದವು. ಸದ್ಯ ಮುಂಬೈನ ಚೇತರಿಕೆ ಪ್ರಮಾಣವು ಶೇ 73 ರಷ್ಟಿದೆ. ಜುಲೈ 20 ರಿಂದ ಜುಲೈ 26 ರವರೆಗೆ ಮುಂಬೈನಲ್ಲಿನ ಕೊರೊನಾ ವೈರಸ್ ಪ್ರಕರಣಗಳ ಒಟ್ಟಾರೆ ಬೆಳವಣಿಗೆ ದರವು ಶೇ 1.03 ರಷ್ಟಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT