ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾವುದೇ ಸಮಸ್ಯೆ ಇಲ್ಲ ಎಂಬ 'ಮಹಾ' ಸರ್ಕಾರದ ವಾದ ಒಪ್ಪಲು ಸಾಧ್ಯವಿಲ್ಲ: ಸುಪ್ರೀಂ

Last Updated 9 ಜುಲೈ 2020, 8:51 IST
ಅಕ್ಷರ ಗಾತ್ರ

ನವದೆಹಲಿ: ವಲಸೆ ಕಾರ್ಮಿಕರ ಸಮಸ್ಯೆ, ಸಂಕಷ್ಟಗಳಿಗೆ ಸಂಬಂಧಿಸಿದಂತೆ ಮಹಾರಾಷ್ಟ್ರ ಸರ್ಕಾರ ಸಲ್ಲಿಸಿದ್ದ ಅಫಡವಿಟ್‌ ಅಸಮರ್ಪಕವಾಗಿದೆ ಎಂದು ‘ಮಹಾ’ಸರ್ಕಾರವನ್ನು ಸುಪ್ರೀಂ ಕೋರ್ಟ್ ಗುರುವಾರ ತರಾಟೆಗೆ ತೆಗೆದುಕೊಂಡಿದೆ.

ಲಾಕ್‌ಡೌನ್‌ ಸಂದರ್ಭದಲ್ಲಿ ಕಾರ್ಮಿಕರ ಸ್ಥಿತಿಗತಿಯನ್ನು ಕುರಿತು ವಿವಿಧ ಮಾಧ್ಯಮಗಳಲ್ಲಿ ಬಂದಿರುವ ವರದಿಗಳು ಹಾಗೂ ಸಮಾಜದ ವಿವಿಧ ಕ್ಷೇತ್ರಗಳ ಗಣ್ಯರಿಂದ ಬಂದಿರುವ ಪತ್ರಗಳನ್ನು ಪರಿಗಣಿಸಿ ಸುಪ್ರೀಂ ಕೋರ್ಟ್‌, ಸ್ವಯಂಪ್ರೇರಣೆಯಿಂದ ವಲಸಿಗರ ಸಮಸ್ಯೆಗಳ ಬಗ್ಗೆ ವಿಚಾರಣೆ ನಡೆಸುತ್ತಿದೆ. ನ್ಯಾಯಮೂರ್ತಿಗಳಾದ ಅಶೋಕ್‌ ಭೂಷಣ್‌, ಸಂಜಯ್‌ಕೃಷ್ಣ ಕೌಲ್‌, ಹಾಗೂ ಎಂ.ಆರ್‌. ಶಾ ಅವರನ್ನೊಳಗೊಂಡ ಪೀಠವು ನಿರಂತರವಾಗಿ ವಿಚಾರಣೆ ನಡೆಸುತ್ತಿದೆ.

ಇಂದು ಒಂದು ವ್ಯಾಜ್ಯವಲ್ಲ, ಸರ್ಕಾರ ಕಾರ್ಯನ್ಮೂಖವಾಗಲು ಮತ್ತು ಕರ್ತವ್ಯ ನಿರ್ವಹಿಸುವ ಒಂದು ಪ್ರಕ್ರಿಯೆ ಎಂದು ಅಭಿಪ್ರಾಯಪಟ್ಟಿರುವ ನ್ಯಾಯಪೀಠ, ಒಂದು ವಾರದೊಳಗೆ ರಾಜ್ಯಕ್ಕೆ ಬರಲು ಕಾಯುತ್ತಿರುವ ವಲಸಿಗರ ಸಂಪೂರ್ಣಮಾಹಿತಿಯ ಅಫಿಡವಿಟ್‌ಸಲ್ಲಿಸುವಂತೆ ಸೂಚಿಸಿತು.

ರಾಜ್ಯದಲ್ಲಿ ಯಾವುದೇ ಸಮಸ್ಯೆ ಇಲ್ಲ ಎಂಬಸರ್ಕಾರದ ವಾದವನ್ನು ಒಪ್ಪಲು ಸಾಧ್ಯವಿಲ್ಲ ಹಾಗೂ ಸರ್ಕಾರದ ಹೇಳಿಕೆಯಂತಿರುವ ಅಫಿಡೆವಿಟ್‌ ಅನ್ನು ಪುರಸ್ಕರಿಸಲು ಸಾಧ್ಯವಾಗದು, ಮುಂದಿನ ವಾರ ರಾಜ್ಯಕ್ಕೆ ಮರಳಲು ಕಾಯುತ್ತಿರುವ ವಲಸಿಗರ ವಿವರಗಳ ಬಗ್ಗೆ ಅಫಿಡವಿಟ್ ಸಲ್ಲಿಸುವಂತೆ ಮಹಾರಾಷ್ಟ್ರ ಸರ್ಕಾರ ಪ್ರತಿನಿಧಿಸುವ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರಿಗೆ ನ್ಯಾಯಪೀಠ ಸೂಚಿಸಿತು.

ಸರ್ಕಾರಕ್ಕೆ ಸೂಕ್ತ ಮಾರ್ಗದರ್ಶನ ನೀಡುವಂತೆಯೂ ತುಷಾರ್ ಮೆಹ್ತಾ ಅವರಿಗೆ ನ್ಯಾಯಾಲಯ ಸೂಚನೆ ನೀಡಿತು.

ರಾಜ್ಯದಲ್ಲಿ ಕೋವಿಡ್‌ ಕಂಟೆನ್ಮೆಂಟ್ ಎಂಬ ರಾಷ್ಟ್ರೀಯ ಯೋಜನೆಯನ್ನು ಜಾರಿ ಮಾಡಲಾಗಿದೆ, ಇದರ ಮಾಹಿತಿಯನ್ನು ನಾಳೆ ಸಂಜೆಯ ಒಳಗೆ ನೀಡಲಾಗುವುದು ಎಂದು ಮೆಹ್ತಾ ನ್ಯಾಯಾಲಯಕ್ಕೆ ಹೇಳಿದರು. ವಿಚಾರಣೆಯನ್ನು ನ್ಯಾಯಪೀಠ ಜುಲೈ 17ಕ್ಕೆ ಮುಂದೂಡಿತು.

ಇದೇ ವೇಳೆ ವಲಸೆ ಕಾರ್ಮಿಕರಿಗೆ ಸಂಬಂಧಿಸಿದ ಇತರೆ ಅರ್ಜಿಗಳನ್ನು ನ್ಯಾಯಪೀಠ ವಿಚಾರಣೆಗೆ ಕೈಗೆತ್ತಿಕೊಂಡಿತು.

ಹಿನ್ನೆಲೆ...

ಲಾಕ್‌ಡೌನ್‌ ಸಂದರ್ಭದಲ್ಲಿ ವಲಸೆ ಕಾರ್ಮಿಕ ಸಮಸ್ಯೆ ಮತ್ತು ಸಂಕಷ್ಟಗಳ ಕುರಿತಂತೆ ಸುಪ್ರೀಂ ಕೋರ್ಟ್‌ ಸ್ವಯಂ ಪ್ರೇರಣೆಯಿಂದ ವಿಚಾರಣೆ ನಡೆಸುತ್ತಿದೆ. ವಲಸೆ ಕಾರ್ಮಿಕರ ಸಮಸ್ಯೆಗಳನ್ನು ಪರಿಹರಿಸುವಂತೆ ರಾಜ್ಯ ಸರ್ಕಾರಗಳಿಗೆ ಸೂಚನೆ ನೀಡಿತ್ತು. ಈ ಬಗ್ಗೆ ನ್ಯಾಯಾಲಯಕ್ಕೆ ಅಫಿಡೆವಿಟ್‌ ಸಲ್ಲಿಸುವಂತೆಯೂ ಸುಪ್ರೀಂ ನಿರ್ದೇಶನನೀಡಿತು.

ವಲಸೆ ಕಾರ್ಮಿಕರು ತವರು ರಾಜ್ಯಗಳಿಗೆ ಹೋಗಲು ಇಚ್ಚಿಸಿದರೆ ಅವರಿಗೆ ರಾಜ್ಯ ಸರ್ಕಾರಗಳು ಪ್ರಯಾಣದ ಅನುಕೂಲತೆ ಕಲ್ಪಿಸಬೇಕು, ಆಹಾರ, ನೀರು, ವಸತಿ ಸೇರಿದಂತೆ ಅವರಿಗೆ ಉದ್ಯೋಗ ನೀಡಬೇಕು ಎಂದು ಸುಪ್ರೀಂ ಕೋರ್ಟ್ ಹೇಳಿತ್ತು. ಈ ಬಗ್ಗೆ ನಿರ್ದೇಶನಗಳನ್ನು ನೀಡಿತ್ತು.

ನಿರ್ದೇಶನಗಳು
* ವಲಸೆ ಕಾರ್ಮಿಕರ ನೋಂದಣಿಗೆ ಸ್ಥಳೀಯ ಅಥವಾ ಪೊಲೀಸ್‌ ಠಾಣೆ ಮಟ್ಟದಲ್ಲಿ ಕ್ರಮ ಕೈಗೊಳ್ಳಬೇಕು
* ವಲಸಿಗರ ಪ್ರಯಾಣ‌ ವ್ಯವಸ್ಥೆ ಬಗ್ಗೆ ಸ್ಥಳೀಯ ದಿನಪತ್ರಿಕೆಗಳು, ಸುದ್ದಿ ವಾಹಿನಿಗಳಲ್ಲಿ ಪ್ರಚಾರ ನೀಡಬೇಕು
* ವಲಸೆ ಕಾರ್ಮಿಕರಿಗಾಗಿ ರಾಜ್ಯವು ರೈಲಿಗೆ ಬೇಡಿಕೆ ಇಟ್ಟ 24 ತಾಸುಗಳಲ್ಲಿ ರೈಲ್ವೆಯು ಅದನ್ನು ಒದಗಿಸಬೇಕು
* ಊರಿಗೆ ಮರಳಿರುವ ವಲಸೆ ಕಾರ್ಮಿಕರ ಕೌಶಲ ಮತ್ತಿತರ ವಿವರ ಸಂಗ್ರಹಿಸಬೇಕು
* ವಲಸೆ ಕಾರ್ಮಿಕರ ವಿರುದ್ಧ ವಿಕೋಪ ನಿರ್ವಹಣೆ ಕಾಯ್ದೆ ಅಡಿಯಲ್ಲಿ ದಾಖಲಾಗಿರುವ ಪ್ರಕರಣಗಳ ರದ್ದತಿಯನ್ನು ಪರಿಶೀಲಿಸಬೇಕು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT