ಬುಧವಾರ, ಆಗಸ್ಟ್ 4, 2021
23 °C

ಕೋವಿಡ್ ಲಸಿಕೆಗೆ ಆಗಸ್ಟ್‌ 15ರ ಡೆಡ್‌ಲೈನ್ ಸಮರ್ಥಿಸಿಕೊಂಡ ಐಸಿಎಂಆರ್‌

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಕೋವಿಡ್-19 ಪಿಡುಗಿಗೆ ಶೀಘ್ರ ಲಸಿಕೆಗೆ ಆಗಸ್ಟ್‌ 15ರ ಗಡುವು ನೀಡಿರುವ ಕ್ರಮವನ್ನು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಸಮರ್ಥಿಸಿಕೊಂಡಿದೆ.

ಸಂಶೋಧನೆಗೆ ಗಡುವು ವಿಧಿಸುವ ಐಸಿಎಂಆರ್ ಕ್ರಮದ ಬಗ್ಗೆ ತಜ್ಞರು ಆತಂಕ ವ್ಯಕ್ತಪಡಿಸಿದ ಬೆನ್ನಿಗೇ, 'ವೇಗವಾಗಿ ಲಸಿಕೆ ಅಭಿವೃದ್ಧಿಪಡಿಸಲು ರೂಪಿಸಿರುವ ಜಾಗತಿಕ ಮಾನದಂಡಗಳಿಗೆ ತನ್ನ ನಿರ್ಧಾರವು ಅನುಗುಣವಾಗಿದೆ' ಎಂದು ಐಸಿಎಂಆರ್ ಸಮರ್ಥಿಸಿಕೊಂಡಿದೆ.

'ಸಂಶೋಧನೆಗೆ ವಿನಾ ಕಾರಣ ಅಡ್ಡಿಯುಂಟು ಮಾಡುವ ಕೆಂಪು ಪಟ್ಟಿ ಧೋರಣೆಗೆ (ರೆಡ್‌ ಟೇಪ್) ಕಡಿವಾಣ ಹಾಕುವ ಉದ್ದೇಶದಿಂದ ಮಹಾ ನಿರ್ದೇಶಕರು ಕ್ಲಿನಿಕಲ್ ಸಂಶೋಧನೆ ನಡೆಸುತ್ತಿರುವವರಿಗೆ ಪತ್ರ ಬರೆದಿದ್ದಾರೆ. ಆದರೆ ಸಂಶೋಧನೆಯಲ್ಲಿ ಯಾವುದೇ ನಿಯಮಗಳನ್ನು ಉಲ್ಲಂಘಿಸುವುದಿಲ್ಲ' ಎಂದು ಐಸಿಎಂಆರ್ ಹೇಳಿದೆ.

ಹೈದರಾಬಾದ್‌ನ ಭಾರತ್ ಬಯೋಟೆಕ್ ಕಂಪೆನಿಯು ಪುಣೆಯ ರಾಷ್ಟ್ರೀಯ ವೈರಾಲಜಿ ಸಂಸ್ಥೆಯ ಸಹಯೋಗದೊಂದಿಗೆ ಈ ಲಸಿಕೆ ಅಭಿವೃದ್ಧಿಪಡಿಸುತ್ತಿದೆ. ಮಾನವರ ಮೇಲೆ ಲಸಿಕೆಯ ಪರಿಣಾಮದ ಸಂಶೋಧನೆಗಾಗಿ ವೈದ್ಯಕೀಯ ಶಿಕ್ಷಣ ಸಂಸ್ಥೆಗಳು ಮತ್ತು ಆಸ್ಪತ್ರೆಗಳನ್ನು ಶೀಘ್ರ ಆಯ್ಕೆ ಮಾಡಿಕೊಳ್ಳಬೇಕು ಎಂದು ಜುಲೈ 2ರಂದು ಭಾರ್ಗವ ಮುಖ್ಯ ಸಂಶೋಧಕರಿಗೆ ಪತ್ರ ಬರೆದಿದ್ದರು.

'ಲಸಿಕೆ ಅಭಿವೃದ್ಧಿಪಡಿಸಲು ವಿಶ್ವದ ವಿವಿಧೆಡೆ ನಡೆಯುತ್ತಿರುವ ಪ್ರಯತ್ನಗಳೂ ಇದೇ ರೀತಿ ತ್ವರಿತಗತಿಯಲ್ಲಿ ಸಾಗಿವೆ. ಪ್ರಿ ಕ್ಲಿನಿಕಲ್ ಅಧ್ಯಯನಗಳ ದತ್ತಾಂಶ ಆಧರಿಸಿ 'ಕೊವಾಕ್ಸಿನ್‌' ಲಸಿಕೆಯ 1 ಮತ್ತು 2ನೇ ಹಂತದ (ಮಾನವರ ಮೇಲಿನ) ಸಂಶೋಧನೆಗಳಿಗೆ ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ (ಔಷಧಗಳ ಮಹಾ ನಿಯಂತ್ರಕರು) ಅನುಮತಿ ನೀಡಿದ್ದಾರೆ' ಎಂದು ಐಸಿಎಂಆರ್ ತಿಳಿಸಿದೆ.

'ಹೊಸ ಮಾದರಿಯ ಟೆಸ್ಟಿಂಗ್ ಕಿಟ್‌ಗಳಿಗೆ ಅನುಮೋದನೆ ನೀಡುವಾಗ ಅಥವಾ ಕೋವಿಡ್-19ಕ್ಕೆ ಸಂಬಂಧಿಸಿದ ಔಷಧಗಳಿಗೆ ಅನುಮತಿ ನೀಡುವಾಗ ಕೆಂಪು ಪಟ್ಟಿಯ ಸಮಸ್ಯೆ ಬಾಧಿಸಲು ಅವಕಾಶ ನೀಡಲಿಲ್ಲ. ದೇಶೀಯ ಲಸಿಕೆ ಅಭಿವೃದ್ಧಿ ಪ್ರಯತ್ನಕ್ಕೂ ಇದು ಅನ್ವಯಿಸುತ್ತದೆ. ನಿಧಾನಗತಿಯಲ್ಲಿ ಕಡತಗಳು ಹರಿದಾಡುವುದೇ ಒಂದು ಸಮಸ್ಯೆಯಾಗಬಾರದು' ಎಂದು ಹೇಳಿದೆ.

'ಆರಂಭಿಕ ಹಂತಗಳನ್ನು ಸಾಧ್ಯವಾದಷ್ಟೂ ಬೇಗ ಮುಗಿಸಿದರೆ ಮುಂದಿನ ಹಂತದ ಸಂಶೋಧನೆಗಳನ್ನು (ಸಮುದಾಯ ಆಧರಿತ) ಬೇಗ ಆರಂಭಿಸಲು ತಡವಾಗುವುದಿಲ್ಲ. ದತ್ತಾಂಶಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಿದ ನಂತರವೇ ಕ್ಲಿನಿಕಲ್ ಅಭಿವೃದ್ಧಿಗೆ ಅವಕಾಶ ನೀಡಲಾಗುತ್ತಿದೆ. ಬಹುಜನರ ಹಿತದ ದೃಷ್ಟಿಯಿಂದ ಕ್ಲಿನಿಕಲ್ ಟ್ರಯಲ್‌ಗಳಿಗೆ ವೇಗ ನೀಡಲು ಐಸಿಎಂಆರ್ ಯತ್ನಿಸುತ್ತಿದೆ' ಎಂದು ಹೇಳಿದೆ.

'ಇದು ಅತ್ಯಂತ ಮುಖ್ಯವಾದ ಯೋಜನೆ. ಸರ್ಕಾರದ ಉನ್ನತ ಮಟ್ಟದ ಅಧಿಕಾರಿಗಳು ಇದನ್ನು ಗಮನಿಸುತ್ತಿದ್ದಾರೆ. ಕ್ಲಿನಿಕಲ್ ಟ್ರಯಲ್‌ಗಳನ್ನು ಮುಗಿಸಿ, ಆಗಸ್ಟ್ 15ರ ಒಳಗೆ ಸಾರ್ವಜನಿಕ ಸೇವೆಗೆ ಲಸಿಕೆಗಳು ಲಭ್ಯವಿರಬೇಕು. ಸಂಶೋಧನೆಗೆ ವ್ಯಕ್ತಿಗಳನ್ನು ಗುರುತಿಸುವ ಪ್ರಕ್ರಿಯೆಯನ್ನು ಜುಲೈ 7ರ ಒಳಗೆ ಮುಗಿಸಿಕೊಳ್ಳಬೇಕು. ಸಕಾಲಲದಲ್ಲಿ ಸ್ಪಂದಿಸದಿದ್ದರೆ ಶಿಸ್ತುಕ್ರಮ ಎದುರಿಸಬೇಕಾಗುತ್ತದೆ. ಈ ಯೋಜನೆಯ ಮಹತ್ವ ಅರಿತುಕೊಂಡು, ಎಲ್ಲ ಗಡುವುಗಳನ್ನು ಪಾಲಿಸಬೇಕು' ಎಂದು ಐಸಿಎಂಆರ್ ಮಹಾ ನಿರ್ದೇಶಕರು ಪತ್ರದಲ್ಲಿ ಸೂಚಿಸಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು