ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌–19 | ಸೋಂಕಿಲ್ಲದಲ್ಲೂ ಇರಲಿ ನಿಗಾ: ಕೇಂದ್ರ ಸೂಚನೆ

ಪ್ರಕರಣಗಳು ಕಡಿಮೆ ಇರುವ ಜಿಲ್ಲೆಗಳಲ್ಲಿ ಕಟ್ಟುನಿಟ್ಟು ಕ್ರಮಕ್ಕೆ ಸೂಚನೆ
Last Updated 31 ಜುಲೈ 2020, 20:47 IST
ಅಕ್ಷರ ಗಾತ್ರ

ನವದೆಹಲಿ: ಹಲವು ರಾಜ್ಯಗಳಲ್ಲಿ ಹೆಚ್ಚಿನ ಸಂಖ್ಯೆಯ ಕೋವಿಡ್‌–19 ಪ್ರಕರಣಗಳು ದೃಢಪಡುತ್ತಿರುವುದರಿಂದ ಸಾಧಾರಣ ಮತ್ತು ಕಡಿಮೆ ಸಂಖ್ಯೆಯ ಪ್ರಕರಣಗಳಿರುವ ಜಿಲ್ಲೆಗಳ ಮೇಲೆ ನಿಗಾ ಇರಿಸಬೇಕಾದ ಅಗತ್ಯ ಇದೆ ಎಂದು ಕೇಂದ್ರವು ಸೂಚಿಸಿದೆ. ಹೆಚ್ಚು ಪ್ರಕರಣಗಳಿರುವ ಜಿಲ್ಲೆಗಳಿಂದ ಕಡಿಮೆ ಇರುವ ಜಿಲ್ಲೆಗಳಿಗೆ ಸೋಂಕು ವಿಸ್ತರಣೆಯಾಗುವ ಅಪಾಯ ಹೆಚ್ಚು ಎಂದು ಹೇಳಲಾಗಿದೆ.

ಸತತ ಮೂರನೇ ದಿನವೂ (ಶುಕ್ರವಾರ) ದೇಶದಲ್ಲಿ 50 ಸಾವಿರಕ್ಕೂ ಹೆಚ್ಚು ಪ್ರಕರಣಗಳು ದೃಢಪಟ್ಟಿವೆ. ಸೋಂಕಿತರ ಸಂಖ್ಯೆಯು ಸಾಧಾರಣ ಮತ್ತು ಕಡಿಮೆ ಇರುವ ಜಿಲ್ಲೆಗಳು ಮತ್ತು ನಗರಗಳಲ್ಲಿ ನಿಗಾ ವ್ಯವಸ್ಥೆಯನ್ನು ಹೆಚ್ಚಿಸಬೇಕು. ಸೋಂಕಿತರ ಸಂಪರ್ಕಿತರ ಪತ್ತೆ, ಮನೆ ಮನೆ ಸಮೀಕ್ಷೆ ತೀವ್ರಗೊಳಿಸಬೇಕು. ಜ್ವರದಂತಹ ಲಕ್ಷಣ ಇರುವವರು, ಉಸಿರಾಟದ ತೊಂದರೆ ಇರುವವರನ್ನು ಗುರುತಿಸಿ ಪರೀಕ್ಷೆ ನಡೆಸಬೇಕು ಎಂದು ಕೇಂದ್ರ ಆರೋಗ್ಯ ಸಚಿವಾಲಯವು ಹೇಳಿದೆ.

ಕೋವಿಡ್‌ ಪ್ರತಿಕ್ರಿಯೆ ಸಂಬಂಧ ರೂಪಿಸಲಾದ ಸಚಿವರ ಗುಂಪಿನ 19ನೇ ಸಭೆಯನ್ನುಆರೋಗ್ಯ ಸಚಿವ ಹರ್ಷ
ವರ್ಧನ್‌ ಅವರು ಶುಕ್ರವಾರ ನಡೆಸಿದರು. ಸೋಂಕು ಹರಡುವಿಕೆ ತಡೆಯ ಕ್ರಮಗಳ ಪರಿಣಾಮಕಾರಿ ಅನುಷ್ಠಾನಕ್ಕೆ ಅವರು ಸೂಚನೆಗಳನ್ನು ನೀಡಿದರು.

ಸೋಂಕು ನಿಯಂತ್ರಣಕ್ಕೆ ಕೈಗೊಂಡ ಕ್ರಮಗಳ ಬಗ್ಗೆ ರೋಗ ನಿಯಂತ್ರಣ ರಾಷ್ಟ್ರೀಯ ಕೇಂದ್ರದ ನಿರ್ದೇಶಕ ಸುಜೀತ್‌ ಕುಮಾರ್‌ ಸಿಂಗ್‌ ಅವರು ಸಚಿವರ ಗುಂಪಿಗೆ ಮಾಹಿತಿ ನೀಡಿದರು. ಕಂಟೈನ್‌ಮೆಂಟ್‌ ವಲಯಗಳಲ್ಲಿ ಕಟ್ಟುನಿಟ್ಟಿನ ಕ್ರಮಗಳು, ರ್‍ಯಾ‍ಪಿಡ್‌ ಆ್ಯಂಟಿಜೆನ್‌ ಪರೀಕ್ಷೆ ಹೆಚ್ಚಳದ ವಿವರಗಳನ್ನು ನೀಡಿದರು. ಸೋಂಕಿತರ ಸಂಖ್ಯೆ ಹೆಚ್ಚಾಗಿರುವ ಪುಣೆ, ಠಾಣೆ, ಬೆಂಗಳೂರು ಮತ್ತು ಹೈದರಾಬಾದ್‌ನಲ್ಲಿ ಕೋವಿಡ್‌ನಿಂದಾಗಿ ಸಾವಿನ ಪ್ರಮಾಣ ಕಡಿಮೆ ಮಾಡಲು ಕೈಗೊಂಡ ಕ್ರಮಗಳ ಬಗ್ಗೆಯೂ ಅವರು ವಿವರಿಸಿದರು.

ಸಲಹೆಗಳು

ಕಂಟೈನ್‌ಮೆಂಟ್‌ ವಲಯಗಳ ಮೇಲಿನ ನಿಗಾ ಕಟ್ಟುನಿಟ್ಟುಗೊಳಿಸಿ

ರ‍್ಯಾಪಿಡ್‌ ಆ್ಯಂಟಿಜೆನ್‌ ಪರೀಕ್ಷೆ ವ್ಯಾಪಕಗೊಳಿಸಿ

ಮನೆ–ಮನೆ ಶೋಧ ತೀವ್ರಗೊಳಿಸಿ, ಸೋಂಕಿತರು/ಶಂಕಿತರಿಗಾಗಿ ಪ್ರತ್ಯೇಕವಾಸ ವ್ಯವಸ್ಥೆ ಹೆಚ್ಚಿಸಿ

****

ಗುಣಮುಖ ಪ್ರಮಾಣ

64.54%- ದೇಶದಲ್ಲಿ ಒಟ್ಟು

89.08%-ದೆಹಲಿಯಲ್ಲಿ ಗರಿಷ್ಠ

79.82% -ಹರಿಯಾಣ (ಎರಡನೇ ಸ್ಥಾನ)

39.36% -ಕರ್ನಾಟಕ (ಅತಿ ಕಡಿಮೆ)

***

ವೈದ್ಯರಿಗೆ ಸಕಾಲಕ್ಕೆ ವೇತನ ಕೊಡಿ

ಕೋವಿಡ್‌ ಕರ್ತವ್ಯದಲ್ಲಿರುವ ವೈದ್ಯರು ಮತ್ತು ಇತರ ಆರೋಗ್ಯ ಕಾರ್ಯಕರ್ತರಿಗೆ ದೆಹಲಿ, ಪಂಜಾಬ್‌, ಮಹಾರಾಷ್ಟ್ರ, ತ್ರಿಪುರಾ ಮತ್ತು ಕರ್ನಾಟಕ ಸರ್ಕಾರಗಳು ಸಕಾಲದಲ್ಲಿ ವೇತನ ಪಾವತಿಸುವಂತೆ ನೋಡಿಕೊಳ್ಳಿ ಎಂದು ಕೇಂದ್ರಕ್ಕೆ ಸುಪ್ರೀಂ ಕೋರ್ಟ್‌ ಶುಕ್ರವಾರ ಸೂಚನೆ ನೀಡಿದೆ.

ಕಡ್ಡಾಯ ಪ್ರತ್ಯೇಕವಾಸದ ಅವಧಿಗೆ ವೇತನ ಕಡಿತ ಮಾಡಲಾಗುತ್ತಿದೆ. ಇದು ಹೇಗೆ ಸಾಧ್ಯ ಎಂದು ನ್ಯಾಯಮೂರ್ತಿ ಅಶೋಕ್‌ ಭೂಷಣ್‌ ನೇತೃತ್ವದ ಪೀಠವು ಸಾಲಿಸಿಟರ್‌ಜನರಲ್‌ ತುಷಾರ್ ಮೆಹ್ತಾ ಅವರನ್ನು ಪ್ರಶ್ನಿಸಿದೆ. ಪ್ರತ್ಯೇಕವಾಸದ ಅವಧಿಯನ್ನು ರಾಜ್ಯಗಳು ರಜೆ ಎಂದು ಪರಿಗಣಿಸುವುದು ಹೇಗೆ ಎಂದೂ ಪೀಠವು ಕೇಳಿದೆ.

ಒಂದು ವಾರದಲ್ಲಿ ಇದನ್ನು ಸರಿಪಡಿಸಲಾಗುವುದು ಎಂದು ಮೆಹ್ತಾ ಭರವಸೆ ಕೊಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT