ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇಶೀಯ ಆ್ಯಂಟಿಜೆನ್ ರ್‍ಯಾಪಿಡ್ ಪರೀಕ್ಷಾ ಕಿಟ್ ಬಳಕೆಗೆ ICMR ಅನುಮತಿ: ಬೆಲೆ ₹450

Last Updated 23 ಜುಲೈ 2020, 2:24 IST
ಅಕ್ಷರ ಗಾತ್ರ

ನವದೆಹಲಿ: ಕ್ಷಿಪ್ರಗತಿಯಲ್ಲಿ ಕೊರೊನಾ ವೈರಸ್‌ ಸೋಂಕು ಪರೀಕ್ಷೆ ನಡೆಸಲು ಬಳಸುವ ಮತ್ತೊಂದು ರ್‍ಯಾಪಿಡ್ ಆ್ಯಂಟಿಜೆನ್ ಪರೀಕ್ಷಾ ಕಿಟ್‌ಗೆ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್‌) ಬುಧವಾರ ಅನುಮೋದನೆ ನೀಡಿದೆ.

ಇದು ಸಾರ್ವಜನಿಕ ಬಳಕೆಗೆ ಅನುಮತಿ ಪಡೆದಿರುವ ಮೊದಲ ದೇಶೀಯ ನಿರ್ಮಿತ ತಪಾಸಣೆ ಕಿಟ್‌. ಪುಣೆ ಮೂಲದ ಮೈಲ್ಯಾಬ್‌ ಡಿಸ್ಕವರಿ ಸಲ್ಯೂಷನ್ಸ್‌ 'ಪ್ಯಾಥೊಕ್ಯಾಚ್‌' ಕೋವಿಡ್‌–19 ಆ್ಯಂಟಿಜೆನ್ ರ್‍ಯಾಪಿಡ್ ಪರೀಕ್ಷಾ ಕಿಟ್‌ನ್ನು ಸಂಪೂರ್ಣ ಭಾರತದಲ್ಲಿಯೇ ಸಿದ್ಧಪಡಿಸಿದೆ. ತಕ್ಷಣದಿಂದಲೇ ಆರ್ಡರ್‌ ಮಾಡಬಹುದಾಗಿದ್ದು, ಪ್ರತಿ ಕಿಟ್‌ಗೆ ₹450 ನಿಗದಿ ಪಡಿಸಲಾಗಿದೆ.

'ಕೊರೊನಾ ಸಾಂಕ್ರಾಮಿಕದ ವಿರುದ್ಧ ಹೋರಾಟಕ್ಕೆ ಸಾಧ್ಯವಿರುವ ಎಲ್ಲ ರೀತಿಯಲ್ಲೂ ಮೈಲ್ಯಾಬ್‌ ಪೂರ್ಣಪ್ರಮಾಣದಲ್ಲಿ ಪ್ರಯತ್ನಿಸುತ್ತಿದೆ. ವಿದೇಶಿ ಕಿಟ್‌ಗಳ ಮೇಲೆ ಅವಲಂಬನೆ ಕಡಿಮೆ ಮಾಡಲು ಕೈಗೆಟುಕುವ ದರದಲ್ಲಿ ಆರ್‌ಟಿ–ಪಿಸಿಆರ್‌ ತಪಾಸಣೆ ಸಾಧನಗಳನ್ನು ಪರಿಚಯಿಸಲಾಯಿತು. ಕೋವಿಡ್–19 ಪರೀಕ್ಷೆ ಹೆಚ್ಚಿಸಲು ಚಿಕ್ಕ ಜಾಗದಲ್ಲೇ ಪರೀಕ್ಷೆ ಕೈಗೊಳ್ಳಲು ಕಾಂಪ್ಯಾಕ್ಟ್ ಎಕ್ಸ್ಎಲ್‌ (ಆಟೊಮೇಟೆಡ್ ಪ್ರಯೋಗಾಲಯ) ಬಿಡುಗಡೆ ಮಾಡಲಾಯಿತು. ಈಗ ಆ್ಯಂಟಿಜೆನ್‌ ಕಿಟ್‌ಗೆ ಅನುಮತಿ ದೊರೆಯುವ ಮೂಲಕ ಕೋವಿಡ್‌–19 ಪರೀಕ್ಷೆ ನಡೆಸಬಹುದಾದ ಎಲ್ಲ ಸಾಧ್ಯತೆಗಳನ್ನು ತಲುಪಿದ್ದೇವೆ...' ಎಂದು ಮೈಲ್ಯಾಬ್‌ ಡಿಸ್ಕವರಿ ಸಲ್ಯೂಷನ್ಸ್‌ ವ್ಯವಸ್ಥಾಪಕ ನಿರ್ದೇಶಕ ಹಸ್ಮುಖ್‌ ರಾವಲ್‌ ಹೇಳಿದ್ದಾರೆ.

ಇದೇ ಸಂಸ್ಥೆಯ ಆರ್‌ಟಿ–ಪಿಸಿಆರ್‌ (ರಿಯಲ್‌ ಟೈಮ್‌ ರಿವರ್ಸ್‌ ಟ್ರ್ಯಾನ್ಸ್‌ಕ್ರಿಪ್ಷನ್‌ ಪಾಲಿಮೆರೇಸ್‌ ಚೇನ್‌ ರಿಯಾಕ್ಷನ್‌) ಟೆಸ್ಟ್‌ ಕಿಟ್‌ ಸಹ ದೇಶೀಯವಾಗಿ ನಿರ್ಮಿಸಲಾಗಿದ್ದು, ಭಾರತದಲ್ಲಿ ಬಳಸಲು ಐಸಿಎಂಆರ್‌ ಅನುಮತಿ ನೀಡಿದ ಮೊದಲ ಭಾರತೀಯ ತಪಾಸಣೆ ಕಿಟ್‌ ಆಗಿದೆ.

ಕಂಟೈನ್‌ಮೆಂಟ್‌ ಪ್ರದೇಶ ಹಾಗೂ ಆಸ್ಪತ್ರೆಗಳಲ್ಲಿ ಕೋವಿಡ್‌–19 ಪರೀಕ್ಷೆಗಾಗಿ ಆರ್‌ಟಿ–ಪಿಸಿಆರ್‌ ಪರೀಕ್ಷೆ ಜೊತೆಗೆ ರ್‍ಯಾಪಿಡ್ ಆ್ಯಂಟಿಜೆನ್‌ ಪರೀಕ್ಷಾ ಕಿಟ್‌ಗಳನ್ನು ಬಳಸಲು ಈ ಹಿಂದೆಯೇ ಐಸಿಎಂಆರ್‌ ಶಿಫಾರಸ್ಸು ಮಾಡಿದೆ. ಆರ್‌ಟಿ–ಪಿಸಿಆರ್‌ ಕಿಟ್‌ನಲ್ಲಿ ಪರೀಕ್ಷೆ ಫಲಿತಾಂಶ ಪಡೆಯಲು ಕನಿಷ್ಠ ಎರಡೂವರೆ ಗಂಟೆಯಿಂದ 5 ಗಂಟೆ ಅಗತ್ಯವಿದೆ. ಆದರೆ, ರ್‍ಯಾಪಿಡ್ ಆ್ಯಂಟಿಜೆನ್‌ ಕಿಟ್‌ ಮೂಲಕ ಕೇವಲ 30 ನಿಮಿಷಗಳಲ್ಲಿ ಪರೀಕ್ಷೆ ಪೂರ್ಣಗೊಳಿಸಬಹುದಾಗಿದೆ. ಸುಸಜ್ಜಿತ ಪ್ರಯೋಗಾಲಯದ ವ್ಯವಸ್ಥೆ ಇಲ್ಲದೆಯೇ ರ್‍ಯಾಪಿಡ್ ಪರೀಕ್ಷೆ ನಡೆಸಬಹುದು.

ಕಡಿಮೆ ಸಮಯದಲ್ಲಿ ಸೋಂಕಿತರನ್ನು ಪತ್ತೆ ಮಾಡುವುದು ಹಾಗೂ ಅವರನ್ನು ಐಸೊಲೇಟ್‌ ಆಗುವಂತೆ ಮಾಡುವ ಮೂಲಕ ಸೋಂಕು ಹರಡುವುದನ್ನು ತಪ್ಪಿಸಬಹುದು ಎಂದು ವೆಲ್ಲೂರ್‌ ಕ್ರಿಶ್ಚಿಯನ್‌ ಮೆಡಿಕಲ್‌ ಕಾಲೇಜಿನ ವೈರಾಲಜಿ ವಿಭಾಗ ಮಾಜಿ ಮುಖ್ಯಸ್ಥ ಜಾಕೋಬ್‌ ಜಾನ್‌ ಹೇಳಿದ್ದಾರೆ. ಈ ಬಗ್ಗೆ ಹಿಂದುಸ್ತಾನ್‌ ಟೈಮ್ಸ್‌ ವರದಿ ಮಾಡಿದೆ.

ದಕ್ಷಿಣ ಕೊರಿಯಾದ ಎಸ್‌ಡಿ ಬಯೋಸೆನ್ಸರ್‌ ತಯಾರಿಸಿರುವ ಆ್ಯಂಟಿಜೆನ್ ಪರೀಕ್ಷೆ ಕಿಟ್‌ ಐಸಿಎಂಆರ್‌ ಅನುಮತಿ ನೀಡಿರುವ ಮೊದಲ ಆ್ಯಂಟಿಜೆನ್ ಪರೀಕ್ಷೆ ಕಿಟ್‌ ಆಗಿದೆ. ಹರಿಯಾಣದಲ್ಲಿ ಕಂಪನಿಯ ಶಾಖೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT