ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಗುವಿಗೆ ಜನ್ಮವೀಯುವ ಮುನ್ನ ಕೋವಿಡ್-19 ಟೆಸ್ಟಿಂಗ್ ಕಿಟ್‌ಗೆ ಜೀವ ನೀಡಿದ ಮಹಿಳೆ!

Last Updated 28 ಮಾರ್ಚ್ 2020, 12:07 IST
ಅಕ್ಷರ ಗಾತ್ರ

ಪುಣೆ: ಈ ಮಹಿಳೆ ಮಗುವಿಗೆ ಜನ್ಮ ನೀಡುವ ಕೆಲವೇ ಗಂಟೆಗಳ ಮುಂಚೆಯಷ್ಟೇಮೊದಲ ದೇಶೀಯ ನಿರ್ಮಿತ ಟೆಸ್ಟಿಂಗ್‌ ಕಿಟ್‌ ಹೊರತಂದರು. ಅದುವಿದೇಶಿ ಕಿಟ್‌ಗಳಿಗಿಂತಲೂ ಕ್ಷಿಪ್ರವಾಗಿ ಪರೀಕ್ಷೆ ನಡೆಸಬಲ್ಲದು.ಇದರಿಂದಾಗಿ ಗುರುವಾರ ಕೊರೊನಾವೈರಸ್ ಸೋಂಕು ಪರೀಕ್ಷೆ ನಡೆಸಲು ಅನುವಾಗುವ ಮೊದಲ ಮೇಡ್‌–ಇನ್‌–ಇಂಡಿಯಾ ಕಿಟ್‌ ಮಾರುಕಟ್ಟೆ ಪ್ರವೇಶಿಸಿದೆ. ಕೊರೊನಾ ವೈರಸ್ ವಿರುದ್ಧದ ಹೋರಾಟಕ್ಕೆ ಸೋಂಕು ಪರೀಕ್ಷೆ ನಡೆಸಲು ಅಗತ್ಯವಿರುವ ಕಿಟ್‌ಗಳು ದೊಡ್ಡ ಬಲ ನೀಡಲಿವೆ.

ಜ್ವರ, ಕೆಮ್ಮು ಮತ್ತು ನೆಗಡಿ ಲಕ್ಷಣಗಳನ್ನು ಹೊಂದಿರುವ ರೋಗಿಗಳ ಸಂಖ್ಯೆ ಹೆಚ್ಚಿದಂತೆ ಕೊರೊನಾ ವೈರಸ್‌ ಸೋಂಕು ಇರುವ ಅಥವಾ ಇಲ್ಲದಿರುವ ಬಗ್ಗೆ ಖಚಿತಪಡಿಸಿಕೊಳ್ಳಲು ಇಂಥಕಿಟ್‌ಗಳು ನೆರವಾಗಲಿವೆ. ಸೂಕ್ತ ಟೆಸ್ಟಿಂಗ್‌ ಕಿಟ್‌ಗಳಿಲ್ಲದೆ ದೇಶ ಟೀಕೆಗಳಿಗೆ ಒಳಗಾಗಿತ್ತು. ವೈರಾಣುಗಳ ಬಗ್ಗೆ ಅಧ್ಯಯನ ನಡೆಸುತ್ತಿರುವ ಪುಣೆಯ ವೈರಾಣು ಶಾಸ್ತ್ರಜ್ಞೆ (virologist)ಮಿನಾಲ್‌ ಡಾಖವೆ ಭೋಸ್ಲೆ ಶ್ರಮದಿಂದಾಗಿ ದೇಶಕ್ಕೆ ಅಗತ್ಯವಿರುವ ಕಿಟ್‌ಗಳು ಪೂರೈಕೆಯಾಗುವ ವಿಶ್ವಾಸ ವ್ಯಕ್ತವಾಗಿದೆ.

ಪುಣೆಯ 'ಮೈಲ್ಯಾಬ್‌ ಡಿಸ್ಕವರಿ' ಕೋವಿಡ್‌–19 ಟೆಸ್ಟಿಂಗ್‌ ಕಿಟ್‌ಗಳನ್ನು ತಯಾರಿಸಲು ಹಾಗೂ ಮಾರಾಟ ಮಾಡಲು ಮಾನ್ಯತೆ ಪಡೆದಿರುವ ದೇಶದ ಮೊದಲ ಸಂಸ್ಥೆಯಾಗಿದೆ. ಮೊದಲ ಹಂತದಲ್ಲಿ 150 ಕಿಟ್‌ಗಳನ್ನು ಪುಣೆ, ಮುಂಬೈ, ಬೆಂಗಳೂರು, ದೆಹಲಿ ಹಾಗೂ ಗೋವಾದಲ್ಲಿನ ಡಯಾಗ್ನಾಸ್ಟಿಕ್‌ ಸೆಂಟರ್‌ಗಳಿಗೆ ತಲುಪಿವೆ. ಮತ್ತಷ್ಟು ಕಿಟ್‌ಗಳನ್ನು ಸಿದ್ಧಪಡಿಸುವ ಕಾರ್ಯ ನಡೆಯುತ್ತಿದ್ದು, ಸೋಮವಾರ ಮತ್ತೊಂದು ಹಂತದಲ್ಲಿ ಕಿಟ್‌ಗಳನ್ನು ರವಾನಿಸಲಾಗುತ್ತದೆ ಎಂದು ಮೈ ಲ್ಯಾಬ್ಸ್‌ನ ವೈದ್ಯಕೀಯ ವ್ಯವಹಾರಗಳ ನಿರ್ದೇಶಕ ಡಾ.ಗೌತಮ್‌ ವಾಂಖೆಡೆ ತಿಳಿಸಿರುವುದಾಗಿ ಬಿಬಿಸಿ ವರದಿ ಮಾಡಿದೆ.

ಎಚ್‌ಐವಿ, ಹೆಪಟೈಟಿಸ್‌ ಬಿ ಮತ್ತು ಸಿ ಸೇರಿದಂತೆ ಹಲವು ರೋಗಗಳ ಪರೀಕ್ಷೆಗಳಿಗೆ ಬಳಸುವ ಕಿಟ್‌ಗಳನ್ನು ಈ ಸಂಸ್ಥೆ ಸಿದ್ಧಪಡಿಸುತ್ತಿದೆ. ಒಂದು ವಾರದಲ್ಲಿ ಸುಮಾರು 1,00,000 ಕೋವಿಡ್‌–19 ಟೆಸ್ಟಿಂಗ್‌ ಕಿಟ್‌ಗಳನ್ನು ಪೂರೈಸುವ ಸಾಮರ್ಥ್ಯ ಹೊಂದಿರುವುದಾಗಿ ತಿಳಿಸಿದ್ದು, ಅಗತ್ಯವಾದರೆ 2,00,000 ಕಿಟ್‌ಗಳನ್ನೂ ಪೂರೈಸಲು ಸಿದ್ಧವಿರುವುದಾಗಿ ಹೇಳಿದೆ.

ಮೈಲ್ಯಾಬ್‌ ಸಿದ್ಧಪಡಿಸಿರುವ ಒಂದು ಕಿಟ್‌ನಲ್ಲಿ 100 ಮಾದರಿಗಳನ್ನು ಪರೀಕ್ಷಿಸಬಹುದಾಗಿದೆ ಹಾಗೂ ಅದಕ್ಕೆ ತಗುಲುವ ವೆಚ್ಚ ₹1,200. ಹೊರ ದೇಶಗಳಿಂದ ಆಮದು ಮಾಡಿಕೊಳ್ಳುವ ಕಿಟ್‌ಗೆ ₹4,500 ಪಾವತಿಸಬೇಕಿದೆ.

ಮೊದಲು ಕಿಟ್‌ ಡೆಲಿವರಿ, ನಂತರ ಮಗುವಿಗೆ ಜನ್ಮ

ಪ್ರಸ್ತುತ ಸಿದ್ಧಪಡಿಸಲಾಗಿರುವ ಕಿಟ್‌ ಮೂಲಕ ಎರಡೂವರೆ ಗಂಟೆಗಳಲ್ಲಿ ವರದಿ ಪಡೆಯಲು ಸಾಧ್ಯವಿದೆ. ಆಮದು ಮಾಡಿಕೊಂಡಿರುವ ಕಿಟ್‌ಗಳಲ್ಲಿ 6–7 ಗಂಟೆ ನಂತರವೇ ವರದಿ ಪಡೆಯಲು ಸಾಧ್ಯ ಎಂದು ಮೈಲ್ಯಾಬ್‌ನ ಸಂಶೋಧನೆ ಮತ್ತು ಅಭಿವೃದ್ಧಿ ಘಟಕದ ಮುಖ್ಯಸ್ಥೆ, ವೈರಾಲಜಿಸ್ಟ್‌ ಮಿನಾಲ್‌ ಡಾಖವೆ ಭೋಸ್ಲೆ ಹೇಳಿದ್ದಾರೆ.

ಮೂರು ಅಥವಾ ನಾಲ್ಕು ತಿಂಗಳ ಬದಲು ಕೇವಲ 6 ವಾರಗಳಲ್ಲಿಯೇ ನಮ್ಮ ತಂಡ ಪ್ಯಾಥೊ ಡಿಟೆಕ್ಟ್‌ ಹೆಸರಿನ ಕೊರೊನಾ ವೈರಸ್‌ ಟೆಸ್ಟಿಂಗ್‌ ಕಿಟ್‌ ವಿನ್ಯಾಸಗೊಳಿಸಿತು. ಅತ್ಯಂತ ಕಡಿಮೆ ಅವಧಿಯಲ್ಲಿ ಕಿಟ್‌ ವಿನ್ಯಾಸಗೊಳಿಸಿದ್ದು ದಾಖಲೆಯಾಗಿದೆ. ಗರ್ಭಿಣಿಯಾಗಿದ್ದ ಮಿನಾಲ್‌ ಅವರು ಕೆಲವು ತೊಡಕುಗಳು ಎದುರಾಗಿ ಆಗ ತಾನೇ ಆಸ್ಪತ್ರೆಯಿಂದ ಚಿಕಿತ್ಸೆ ಪಡೆದು ಹಿಂದಿರುಗಿದ್ದರು. ದೇಶದಲ್ಲಿ ಕೊರೊನಾ ಸೋಂಕು ಭೀತಿ ವ್ಯಾಪಿಸುತ್ತಿರುವುದನ್ನು ಮನಗಂಡು ಫೆಬ್ರುವರಿಯಲ್ಲಿ ಟೆಸ್ಟ್‌ ಕಿಟ್‌ ಸಿದ್ಧಪಡಿಸುವ ಕಾರ್ಯದಲ್ಲಿ ತೊಡಗಿಕೊಂಡರು. ಕಿಟ್‌ ಸಿದ್ಧಪಡಿಸಿ ಡೆಲಿವರಿ ನೀಡಿದ ಕೆಲವೇ ಗಂಟೆಗಳಲ್ಲಿ ಅವರು ಹೆಣ್ಣು ಮಗುವಿಗೆ ಜನ್ಮ ನೀಡಿದರು.

'ಕಿಟ್‌ ಸಿದ್ಧಪಡಿಸುವುದು ಅತ್ಯಂತ ತುರ್ತು ಕಾರ್ಯವಾಗಿತ್ತು, ಅದನ್ನು ನಾನು ಸವಾಲಾಗಿ ಸ್ವೀಕರಿಸಿದೆ. ನಾನು ದೇಶಕ್ಕಾಗಿ ಕೆಲಸ ಮಾಡಲು ಮುಂದಾದೆ. 10 ಜನರ ನನ್ನ ತಂಡ ಬಹಳಷ್ಟು ಶ್ರಮಿಸುವ ಮೂಲಕ ಈ ಯೋಜನೆ ಯಶಸ್ವಿಯಾಯಿತು' ಎಂದು ಅನುಭವ ಹಂಚಿಕೊಂಡಿದ್ದಾರೆ.

ಮಗಳಿಗೆ ಜನ್ಮ ನೀಡುವುದಕ್ಕೆ ಹಿಂದಿನ ದಿನ, ಮಾರ್ಚ್‌ 18ರಂದು ಕಿಟ್‌ ಸಿದ್ಧಪಡಿಸಿ ನ್ಯಾಷನಲ್‌ ಇನ್‌ಸ್ಟಿಟ್ಯೂಟ್‌ ಆಫ್‌ ವೈರಾಲಜಿಗೆ (ಎನ್‌ಐವಿ) ಅದರ ಪರಿಶೀಲನೆಗಾಗಿ ನೀಡಲಾಯಿತು. ಅದೇ ದಿನ ಸಂಜೆ ಮಿನಾಲ್‌ ಅವರನ್ನು ಸಿಜೇರಿಯನ್‌ಗಾಗಿ ಆಸ್ಪತ್ರೆಗೆ ಕರೆದೊಯ್ಯುವ ಕೆಲವೇ ಗಂಟೆಗಳ ಮುನ್ನ ಭಾರತದ ಎಫ್‌ಡಿಎ (ಆಹಾರ ಮತ್ತು ಔಷಧ ಸುರಕ್ಷತಾ ಮಂಡಳಿ) ಹಾಗೂ ಕೇಂದ್ರ ಔಷಧ ಗುಣಮಟ್ಟ ನಿಯಂತ್ರಣ ಸಂಸ್ಥೆಗೆ (CDSCO)ಕಿಟ್‌ನ್ನು ವಾಣಿಜ್ಯ ಬಳಕೆಗೆ ತರಲು ಅನುಮತಿ ಕೋರಿ ಪ್ರಸ್ತಾಪ ಕಳುಹಿಸಿದ್ದರು.

ಸಮಯದ ವಿರುದ್ಧದ ಓಟದಂತಹ ಸ್ಥಿತಿ, ಒಂದೇ ಪ್ರಯತ್ನದಲ್ಲಿಯೇ ಎಲ್ಲವೂ ಸರಿಯಾಗಿರಬೇಕಾದ ಅನಿವಾರ್ಯತೆ. ಕಿಟ್‌ಗಳನ್ನು ಪರಿಶೀಲನೆಗೆ ಕಳುಹಿಸುವ ಮುನ್ನ ಅದನ್ನು ತಂಡ ಹಲವು ಬಾರಿ, ಎಲ್ಲ ರೀತಿಯಲ್ಲಿಯೂ ಪರೀಕ್ಷೆಗೆ ಒಳಪಡಿಸಬೇಕಿತ್ತು. ನಾವು ಒಂದೇ ಮಾದರಿಯನ್ನು 10 ಬಾರಿ ಪರೀಕ್ಷೆ ನಡೆಸಿದರೂ ಬರುವ ಫಲಿತಾಂಶ ಒಂದೇ ಆಗಿರಬೇಕಿತ್ತು. ನಾವು ಅದನ್ನು ಸಾಧಿಸಿದೆವು, ನಮ್ಮ ಕಿಟ್‌ ಅತ್ಯುತ್ತಮವಾಗಿ ಕಾರ್ಯನಿರ್ವಹಿಸಿತ್ತು ಎಂದು ಶ್ರಮದ ಹಿಂದಿನ ಕಥೆ ಬಿಚ್ಚಿಟ್ಟಿದ್ದಾರೆ.

ಭಾರತದಲ್ಲಿ10 ಲಕ್ಷ ಜನರ ಪೈಕಿ ಕೇವಲ 6.8ರಷ್ಟು ಪರೀಕ್ಷೆ!

ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯ (ಐಸಿಎಂಆರ್) ಅಡಿಯಲ್ಲಿ ಕಾರ್ಯನಿರ್ವಹಿಸುವ ಎನ್‌ಐವಿ, ಕಿಟ್‌ಗೆ ಸಮ್ಮತಿ ನೀಡಿತು. ಮೈಲ್ಯಾಬ್‌ ಮಾತ್ರವೇ ದೇಶದಲ್ಲಿ ಶೇ 100ರಷ್ಟು ಫಲಿತಾಂಶ ಸಾಧಿಸಿರುವುದು ಎಂದು ತಿಳಿಸಿತು.

ಭಾರತದಲ್ಲಿ ಸೋಂಕು ಲಕ್ಷಣಗಳು ಕಾಣಿಸಿಕೊಂಡರೂ ಎಲ್ಲರನ್ನೂ ಪರೀಕ್ಷೆಗೆ ಒಳಪಡಿಸದಿರುವ ಬಗ್ಗೆ ಸಾಕಷ್ಟು ಟೀಕೆಗಳು ಕೇಳಿ ಬಂದಿವೆ. ಭಾರತದಲ್ಲಿ ಮಾತ್ರವೇ 10 ಲಕ್ಷ ಜನರ ಪೈಕಿ ಕೇವಲ 6.8ರಷ್ಟು ಪರೀಕ್ಷೆ ನಡೆಸಲಾಗಿದೆ. ಆರಂಭದಲ್ಲಿ ಸೋಂಕು ಹೆಚ್ಚು ದಾಖಲಾಗಿರುವ ರಾಷ್ಟ್ರಗಳಲ್ಲಿ ಪ್ರಯಾಣ ಮಾಡಿ ಬಂದವರು, ಸೋಂಕಿತರೊಂದಿಗೆ ಸಂಪರ್ಕ ಹೊಂದಿದ್ದವರು, ಸೋಂಕಿತರಿಗೆ ಚಿಕಿತ್ಸೆ ನೀಡುತ್ತಿದ್ದರು, ಆರೋಗ್ಯ ಸೇವೆ ಸಲ್ಲಿಸುತ್ತಿದ್ದವರನ್ನು ಮಾತ್ರ ಪರೀಕ್ಷೆಗೆ ಒಳಪಡಿಸಲಾಗುತ್ತಿತ್ತು. ಅನಂತರದಲ್ಲಿ ಉಸಿರಾಟದ ಸಮಸ್ಯೆ ಕಾಣಿಸಿಕೊಂಡು ಆಸ್ಪತ್ರೆಗೆ ದಾಖಲಾಗುವ ಎಲ್ಲರನ್ನೂ ಪರೀಕ್ಷೆಗೆ ಒಳಪಡಿಸುವಂತೆ ಸೂಚಿಸಲಾಯಿತು.

ಕೆಲವು ದಿನಗಳ ಹಿಂದೆಯಷ್ಟೇ ಭಾರತ ಸರ್ಕಾರ 15 ಖಾಸಗಿ ಕಂಪನಿಗಳಿಗೆ ಟೆಸ್ಟಿಂಗ್‌ ಕಿಟ್‌ ಮಾರಾಟ ಮಾಡಲು ಅನುಮತಿ ನೀಡಿದೆ. ಅಮೆರಿಕ, ಯುರೋಪ್‌ ಹಾಗೂ ಇತರೆ ರಾಷ್ಟ್ರಗಳಲ್ಲಿ ಅವುಗಳು ಪಡೆದಿರುವ ಮಾನ್ಯತೆಯ ಆಧಾರದ ಮೇಲೆ ಕಿಟ್‌ ಮಾರಾಟಕ್ಕೆ ಅವಕಾಶ ನೀಡಲಾಗಿದೆ. ಇದರಿಂದಾಗಿ ಕಿಟ್‌ಗಳ ಪೂರೈಕೆ ಹೆಚ್ಚುತ್ತಿದ್ದು, ಪರೀಕ್ಷೆಗೆ ಒಳಪಡುವವರ ಸಂಖ್ಯೆ ಹೆಚ್ಚಲಿದೆ ಎಂದು ಡಾ.ವಾಂಖೆಡೆ ಅಭಿಪ್ರಾಯ ಪಟ್ಟಿದ್ದಾರೆ.

ದಕ್ಷಿಣ ಕೊರಿಯಾದಂತಹ ರಾಷ್ಟ್ರದಲ್ಲಿಯೇ ಪರೀಕ್ಷೆಗಳಿಗಾಗಿ 650 ಪ್ರಯೋಗಾಲಯಗಳನ್ನು ತೆರೆಯಲಾಗಿತ್ತು. ಆದರೆ, ಭಾರತದಲ್ಲಿ ಪ್ರಸ್ತುತ 118 ಸರ್ಕಾರಿ ಪ್ರಯೋಗಾಲಯಗಳು ಮಾತ್ರ ಕಾರ್ಯನಿರ್ವಹಿಸುತ್ತಿವೆ. ಇದರೊಂದಿಗೆ 50 ಖಾಸಗಿ ಪ್ರಯೋಗಾಲಯಗಳನ್ನೂ ಸೇರಿಸಿಕೊಳ್ಳುವ ಪ್ರಯತ್ನ ನಡೆದಿದೆ. ಆದರೆ, ಸುಮಾರು 130 ಕೋಟಿ ಜನಸಂಖ್ಯೆಯ ರಾಷ್ಟ್ರಕ್ಕೂ ಪ್ರಯೋಗಾಲಯಗಳ ಸಂಖ್ಯೆಗೂ ವಿಪರೀತ ಅಂತರವಿದೆ. ಕೂಡಲೇ ಪ್ರಯೋಗಾಲಯಗಳನ್ನು ಗುರುತಿಸುವುದು, ಹೊಸದನ್ನು ತೆರೆಯುವುದು ಹಾಗೂ ಪರೀಕ್ಷೆ ಕಾರ್ಯಗಳನ್ನು ನಡೆಸಲು ಟೆಕ್ನಿಷಿಯನ್‌ಗಳಿಗೆ ತರಬೇತಿ ನೀಡುವುದು ಇಂದಿನ ಅಗತ್ಯವಾಗಿ ತೋರುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT