ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಷ್ಟ್ರಪತಿ ರಾಮನಾಥ ಕೋವಿಂದ್ ಭೇಟಿಯಾಗಿ ಪ್ರಮುಖ ವಿದ್ಯಮಾನಗಳ ಮಾಹಿತಿ ನೀಡಿದ ಮೋದಿ

Last Updated 5 ಜುಲೈ 2020, 17:36 IST
ಅಕ್ಷರ ಗಾತ್ರ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ರಾಷ್ಟ್ರಪತಿ ರಾಮನಾಥ ಕೋವಿಂದ್‌ ಅವರನ್ನು ಭಾನುವಾರ ಭೇಟಿಯಾಗಿದ್ದಾರೆ. ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಹತ್ವದ ವಿಚಾರಗಳ ಬಗ್ಗೆ ಇಬ್ಬರೂ ಚರ್ಚಿಸಿದ್ದಾರೆ ಎಂದು ರಾಷ್ಟ್ರಪತಿ ಭವನದ ಅಧಿಕಾರಿಗಳು ತಿಳಿಸಿದ್ದಾರೆ.

ಈ ಕುರಿತು ರಾಷ್ಟ್ರಪತಿ ಭವನದ ಅಧಿಕೃತ ಟ್ವಿಟರ್ ಖಾತೆಯಲ್ಲಿ ಟ್ವೀಟ್ ಮಾಡಲಾಗಿದೆ. ಮೋದಿಯವರು ಶುಕ್ರವಾರ ಲಡಾಖ್‌ಗೆ ಹಠಾತ್ ಭೇಟಿ ನೀಡಿ ಚೀನಾ ಜತೆಗಿನ ಗಡಿ ಸಂಘರ್ಷಕ್ಕೆ ಸಂಬಂಧಿಸಿ ಹಿರಿಯ ಅಧಿಕಾರಿಗಳಿಂದ ಮಾಹಿತಿ ಪಡೆದಿದ್ದರು. ‘ರಕ್ಷಣಾ ಪಡೆಗಳ ಮುಖ್ಯಸ್ಥ (ಸಿಡಿಎಸ್‌)’ ಜನರಲ್ ಬಿಪಿನ್ ರಾವತ್, ಸೇನಾ ಮುಖ್ಯಸ್ಥ ಮನೋಜನ್ ಮುಕುಂದ್ ನರವಣೆ ಸಹ ಮೋದಿ ಜತೆಗಿದ್ದರು.

ಮೋದಿ–ಕೋವಿಂದ್‌ ಭೇಟಿಯಲ್ಲಿ ಯಾವ ವಿಷಯಗಳು ಚರ್ಚೆಯಾಗಿವೆ ಎಂಬ ಬಗ್ಗೆ ರಾಷ್ಟ್ರಪತಿ ಭವನ ಏನನ್ನೂ ಹೇಳಿಲ್ಲ. ರಾಷ್ಟ್ರಪತಿಯು ಭಾರತದ ಭೂಸೇನೆ, ವಾಯುಪಡೆ ಮತ್ತು ನೌಕಾಪಡೆಯ ಸರ್ವೋಚ್ಚ ಕಮಾಂಡರ್‌. ಹಾಗಾಗಿ, ಚೀನಾ ಜತೆಗೆ ವಾಸ್ತವ ನಿಯಂತ್ರಣ ರೇಖೆಯಲ್ಲಿ ಸಂಘರ್ಷ ನಡೆದಿರುವ ಈ ಸಂದರ್ಭದಲ್ಲಿ ಭೇಟಿ ನಡೆದಿರುವುದು ಮಹತ್ವದ್ದಾಗಿದೆ.

ಪೂರ್ವ ಲಡಾಖ್‌ನ ಗಾಲ್ವನ್‌ ಕಣಿವೆಯ ಸಮೀಪ ಭಾರತ ಮತ್ತು ಚೀನಾ ಸೈನಿಕರ ನಡುವೆ ಜೂನ್‌ 15ರಂದು ಸಂಘರ್ಷ ನಡೆದಿತ್ತು. ಅದರಲ್ಲಿ ಭಾರತದ 20 ಯೋಧರು ಹುತಾತ್ಮರಾಗಿದ್ದರು. ಗಡಿಯಲ್ಲಿನ ಪರಿಸ್ಥಿತಿಯ ಅವಲೋಕನಕ್ಕೆ ಮೋದಿ ಅವರು ನಿಮುವಿಗೆ ಭೇಟಿ
ನೀಡಿದ್ದರು.

ಸಂಘರ್ಷ ನಡೆದ ಸ್ಥಳದಿಂದ 250 ಕಿ.ಮೀ. ದೂರದ ನಿಮುವಿಗೆ ಪ್ರಧಾನಿಯವರು ಗುರುವಾರ ಭೇಟಿ ನೀಡಿದ್ದರು. ನಿಮು ಭೇಟಿ, ವಾಸ್ತವ ನಿಯಂತ್ರಣ ರೇಖೆಯಲ್ಲಿನ ಪರಿಸ್ಥಿತಿ ಮತ್ತು ಭಾರತ–ಚೀನಾ ನಡುವಣ ಮಾತುಕತೆಗಳ ವಿವರಗಳನ್ನು ಕೋವಿಂದ್‌ ಅವರಿಗೆ ಮೋದಿ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ನಿಯಂತ್ರಣ ರೇಖೆಯ ಉದ್ದಕ್ಕೂ ಪಾಕಿಸ್ತಾನವು ಅಪ್ರಚೋದಿತವಾಗಿ ಕದನ ವಿರಾಮ ಉಲ್ಲಂಘಿಸಿ, ಗುಂಡಿನ ದಾಳಿ ನಡೆಸುತ್ತಿದೆಎಂಬ ಮಾಹಿತಿಯನ್ನೂ ಪ್ರಧಾನಿನೀಡಿದ್ದಾರೆ.

ಲಡಾಖ್‌ನ ಗಾಲ್ವನ್ ಕಣಿವೆ ಪ್ರದೇಶದಲ್ಲಿ ಜೂನ್ 15ರಂದು ಚೀನಾ–ಭಾರತ ಸೇನಾ ಪಡೆಗಳ ನಡುವೆ ನಡೆದಿದ್ದ ಘರ್ಷಣೆಯಲ್ಲಿ ಭಾರತೀಯ ಸೇನೆಯ ಕರ್ನಲ್ ಶ್ರೇಣಿಯ ಅಧಿಕಾರಿ ಸೇರಿ 20 ಯೋಧರು ಹುತಾತ್ಮರಾಗಿದ್ದರು. ಅದಾದ ಬಳಿಕ ಉಭಯ ರಾಷ್ಟ್ರಗಳ ನಡುವೆ ಉದ್ವಿಗ್ನ ಪರಿಸ್ಥಿತಿ ಸೃಷ್ಟಿಯಾಗಿದೆ. ಭಾರತವೂ ಚೀನಾ ವಿರುದ್ಧ ರಾಜತಾಂತ್ರಿಕವಾಗಿ ಹಲವು ಕ್ರಮಗಳನ್ನು ಕೈಗೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT