ಬುಧವಾರ, ಸೆಪ್ಟೆಂಬರ್ 23, 2020
27 °C
ಅಯೋಧ್ಯೆ ನಗರದಲ್ಲಿ ಸಂಭ್ರಮ, ಸಡಗರ

ರಾಮ ಮಂದಿರಕ್ಕೆ ಇಂದು ಮುಹೂರ್ತ: ಪ್ರಧಾನಿ ಮೋದಿಯಿಂದ ಭೂಮಿಪೂಜೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಿಲಾನ್ಯಾಸ ಕಾರ್ಯಕ್ರಮದ ಸಿದ್ಧತೆಯ ಅಂಗವಾಗಿ ಅಯೋಧ್ಯೆಯ ಹನುಮಾನ್‌ ಗರ್ಹಿ ದೇವಾಲಯಕ್ಕೆ ಕಾರ್ಮಿಕರು ಮಂಗಳವಾರ ಬಣ್ಣ ಬಳಿದರು –ಎಎಫ್‌ಪಿ ಚಿತ್ರ

ಲಖನೌ: ಗೋಡೆಗಳಿಗೆ ಹಳದಿ ಬಣ್ಣ, ಪ್ರಖರ ದೀಪದ ಬೆಳಕಿನ ಅಲಂಕಾರ, ಅಯೋಧ್ಯೆ ನಗರವು ದೀಪಾವಳಿಯಂತೆ ಬುಧವಾರ ನಡೆಯಲಿರುವ ರಾಮಮಂದಿರದ ಭೂಮಿಪೂಜೆಗೆ ಸಜ್ಜಾಗಿದೆ. ತನ್ನ ಇತಿಹಾಸದಲ್ಲಿಯೇ ಅತ್ಯಂತ ದೊಡ್ಡ ಕಾರ್ಯಕ್ರಮಕ್ಕೆ ಸಾಕ್ಷಿಯಾಗಲು ಅಯೋಧ್ಯೆ ನಗರಿಯು ಕಾತರದಿಂದ ಕಾಯುತ್ತಿದೆ. 

ದೇಶದ ವಿವಿಧೆಡೆಯಿಂದ ಬಂದ ಸಾಧು, ಸಂತರು ಮತ್ತು ಗಣ್ಯರ ಸಮ್ಮುಖದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ರಾಮಮಂದಿರಕ್ಕೆ ಶಿಲಾನ್ಯಾಸ ಮಾಡಲಿದ್ದಾರೆ. 

ಅಯೋಧ್ಯೆ ನಗರದಲ್ಲಿ ಮಂಗಳವಾರದಿಂದಲೇ ಹಬ್ಬದ ವಾತಾವರಣ ಮೂಡಿದೆ. ಪ್ರಮುಖ ದೇವಾಲಯಗಳು, ಆಶ್ರಮಗಳು ಮತ್ತು ಅಂಗಡಿಗಳಲ್ಲಿನ ಧ್ವನಿವರ್ಧಕಗಳಲ್ಲಿ ರಾಮಚರಿತ ಮಾನಸದ ಸಾಲುಗಳು ಮೊಳಗುತ್ತಿವೆ. ರಾಮಜನ್ಮಭೂಮಿಯತ್ತ ಸಾಗುವ ಮಾರ್ಗಗಳಲ್ಲಿ ಕಮಾನು ನಿರ್ಮಿಸಿ ಅವುಗಳನ್ನು ಅಲಂಕರಿಸಲಾಗಿದೆ. ಮನೆಗಳು, ಅಂಗಡಿಗಳ ಮಾಡಿನಲ್ಲಿ ಹಳದಿ ಮತ್ತು ಕೇಸರಿ ಧ್ವಜಗಳು ರಾರಾಜಿಸುತ್ತಿವೆ. 

ಸಾಕೇತ್‌ ಪದವಿ ಕಾಲೇಜಿನಿಂದ ಜನ್ಮಭೂಮಿವರೆಗೆ ರಸ್ತೆಯ ಇಕ್ಕೆಲಗಳಲ್ಲಿಯೂ ಐದು ಸಾವಿರಕ್ಕೂ ಹೆಚ್ಚು ಕಲಶಗಳನ್ನು ಬುಧವಾರ ಇರಿಸಲಾಗುವುದು. ಕಾಲೇಜು ಆವರಣದಲ್ಲಿ ನಿರ್ಮಾಣವಾಗಿರುವ ಹೆಲಿಪ್ಯಾಡ್‌ಗೆ ಮೋದಿ ಅವರು ಆಗಮಿಸಲಿದ್ದಾರೆ. ಅಲ್ಲಿಂದ ಅವರು ರಸ್ತೆ ಮೂಲಕ ರಾಮಜನ್ಮಭೂಮಿಗೆ ಹೋಗಲಿದ್ದಾರೆ. 

ಹನುಮಾನ್‌ ಮಂದಿರಕ್ಕೆ: ಮೋದಿ ಅವರು ಮೊದಲಿಗೆ ಪ್ರಸಿದ್ಧ ಹನುಮಾನ್‌ ಗರ್ಹಿ ದೇವಾಲಯಕ್ಕೆ ಹೋಗಲಿದ್ದಾರೆ. ರಾಮಮಂದಿರಕ್ಕೆ ಭೇಟಿ ನೀಡುವ ಮೊದಲು ಹನುಮಾನ್‌ ಮಂದಿರದಲ್ಲಿ ಪೂಜೆ ಸಲ್ಲಿಸಬೇಕು ಎಂಬ ನಂಬಿಕೆ ಇದೆ. 

ಮೋದಿ ಅವರಿಗೆ ಗದೆ, ಕಿರೀಟ, ಬೆಳ್ಳಿಯ ಇಟ್ಟಿಗೆ, ಶಾಲು ಇತ್ಯಾದಿ ಉಡುಗೊರೆಗಳನ್ನು ನೀಡಲು ದೇವಸ್ಥಾನದ ಅರ್ಚಕರು ಸಿದ್ಧತೆ ನಡೆಸಿದ್ದರು. ಆದರೆ, ಕೋವಿಡ್‌ ಕಾರಣದಿಂದಾಗಿ ಮೋದಿ ಅವರ ಹತ್ತಿರ ಬರಲು ಯಾರಿಗೂ ಅವಕಾಶ ಇಲ್ಲ. ಹಾಗಾಗಿ, ಉಡುಗೊರೆ ನೀಡಿಕೆಯನ್ನು ಕೈಬಿಡಲಾಗಿದೆ.

ಮೋದಿ ಅವರು 5–7 ನಿಮಿಷ ಈ ದೇಗುಲದಲ್ಲಿ ಇರಲಿದ್ದಾರೆ.

175 ಗಣ್ಯರು

ಕಾರ್ಯಕ್ರಮಕ್ಕೆ 175 ಗಣ್ಯರನ್ನು ಆಹ್ವಾನಿಸಲಾಗಿದೆ ಎಂದು ರಾಮಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್‌ ರಾಯ್‌ ತಿಳಿಸಿದ್ದಾರೆ.

ಬಿಜೆಪಿಯ ಹಿರಿಯ ನಾಯಕರಾದ ಎಲ್‌.ಕೆ. ಅಡ್ವಾಣಿ ಮತ್ತು ಮುರಳಿ ಮನೋಹರ ಜೋಶಿ ಹಾಗೂ ವಕೀಲ ಕೆ.ಪರಾಶರನ್‌ ಅವರೊಂದಿಗೆ ಚರ್ಚಿಸಿದ ಬಳಿಕವೇ ಆಹ್ವಾನಿತರ ಪಟ್ಟಿ ಸಿದ್ಧಪಡಿಸಲಾಗಿದೆ.

175 ಅತಿಥಿಗಳಲ್ಲಿ 135 ಸಂತರಿದ್ದಾರೆ. ಅತಿಹೆಚ್ಚು ಆಧ್ಯಾತ್ಮ ಪರಂಪರೆಗಳನ್ನು ಪ್ರತಿನಿಧಿಸುವಂತೆ ಸಂತರನ್ನು ಆಯ್ಕೆ ಮಾಡಲಾಗಿದೆ. ಅಯೋಧ್ಯೆಯ ಕೆಲವು ಗಣ್ಯರನ್ನೂ ಆಹ್ವಾನಿಸಲಾಗಿದೆ.

ಜನಕಪುರವು ಬಿಹಾರ, ಉತ್ತರ ಪ್ರದೇಶ ಮತ್ತು ಅಯೋಧ್ಯೆ ಜತೆಗೆ ನಂಟು ಹೊಂದಿತ್ತು ಎಂಬ ಕಾರಣಕ್ಕೆ ನೇಪಾಲದ ಸಂತರನ್ನೂ ಆಹ್ವಾನಿಸಲಾಗಿದೆ.

 ಮಹಾ ಆರತಿ

* ಸರಯೂ ನದಿ ದಂಡೆಯಲ್ಲಿ ಮಹಾಆರತಿ ನಡೆಯಲಿದೆ, 2,100 ದೀಪಗಳನ್ನು ಹಚ್ಚಲಾಗುವುದು

* ಸೋಮವಾರ ಆರಂಭವಾದ ಭೂಮಿಪೂಜೆ ವಿಧಿವಿಧಾನಗಳು, ಪ್ರಧಾನಿ ಶಿಲಾನ್ಯಾಸ ನಡೆಸುವುದರೊಂದಿಗೆ ಪೂರ್ಣಗೊಳ್ಳಲಿದೆ

* ಶಿಲಾನ್ಯಾಸದ ಫಲಕವನ್ನು ಮೋದಿ ಅವರು ಅನಾವರಣಗೊಳಿಸಲಿದ್ದಾರೆ, ಜತೆಗೆ ರಾಮಮಂದಿರ ನಿರ್ಮಾಣದ ನೆನಪಿನ ಅಂಚೆಚೀಟಿಯನ್ನೂ ಬಿಡುಗಡೆ ಮಾಡಲಿದ್ದಾರೆ

* ಅಯೋಧ್ಯೆ ನಗರದ ಗಡಿಗಳನ್ನು ಮುಚ್ಚಲಾಗಿದ್ದು, ಪಾಸ್‌ ಹೊಂದಿರುವವರಿಗೆ ಮಾತ್ರ ಪ್ರವೇಶ

* ಒಂದು ಲಕ್ಷ ಕಿಲೋ ಲಾಡು ತಯಾರಿಸಲಾಗಿದ್ದು, ಸ್ಥಳೀಯರಿಗೆ ಪ್ರಸಾದವಾಗಿ ಹಂಚಲಾಗುವುದು

* ರಾಮ, ಸೀತೆ, ಲಕ್ಷ್ಮಣ ಮತ್ತು ಹನುಮಂತನ ಚಿತ್ರ ಕೆತ್ತಿರುವ ಬೆಳ್ಳಿ ನಾಣ್ಯವನ್ನು ಅತಿಥಿಗಳಿಗೆ ಉಡುಗೊರೆಯಾಗಿ ನೀಡಲಾಗುವುದು

ಎಲ್ಲ ದೇವಸ್ಥಾನಗಳಲ್ಲಿ ಪೂಜೆಗೆ ಮನವಿ

ಬೆಂಗಳೂರು: ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ನಿರ್ವಿಘ್ನವಾಗಿ ನಡೆಯಬೇಕು ಎಂದು ರಾಜ್ಯದ ಎಲ್ಲ ದೇವಾಲಯಗಳಲ್ಲಿ ಮತ್ತು ಪ್ರತಿ ಮನೆಗಳಲ್ಲೂ ಇಷ್ಟ ದೇವರಿಗೆ ವಿಶೇಷ ಪೂಜೆ ಸಲ್ಲಿಸುವಂತೆ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಮನವಿ ಮಾಡಿದ್ದಾರೆ. ಈ ಸಂಬಂಧ ಟ್ವೀಟ್‌ ಮಾಡಿರುವ ಅವರು, ‘ಎಲ್ಲರಿಗೂ ಪ್ರಭು ಶ್ರೀರಾಮಚಂದ್ರ ಶಾಂತಿ, ನೆಮ್ಮದಿ ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ’ ಎಂದು ಹೇಳಿದ್ದಾರೆ.

* ಶ್ರೀರಾಮನ ಘನತೆ, ಗೌರವದ ಮೂರ್ತರೂಪ. ಈ ಮೌಲ್ಯಗಳನ್ನು ರೂಢಿಸಿಕೊಳ್ಳಲು ರಾಮಮಂದಿರವು ಎಲ್ಲ ಭಾರತೀಯರಿಗೆ ಸ್ಫೂರ್ತಿಯಾಗಲಿದೆ

- ಎಲ್‌.ಕೆ. ಅಡ್ವಾಣಿ, ಬಿಜೆಪಿಯ ಹಿರಿಯ ನಾಯಕ

* ಈ ದಿನವು ಸ್ವಾತಂತ್ರ್ಯದಿನದಷ್ಟೇ ಚಾರಿತ್ರಿಕ. ಕಾರ್ಗಿಲ್‌ ಯುದ್ಧ ಗೆದ್ದಾಗ ಅಥವಾ ಅಣ್ವಸ್ತ್ರ ಸಿಡಿಸಿದಾಗ ಆದಷ್ಟೇ ಆನಂದ ದೇಶದ ಜನರಿಗೆ ಈಗಲೂ ಆಗಿದೆ

- ಚಂಪತ್‌ ರಾಯ್‌, ರಾಮಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್‌ನ ‍ಪ್ರಧಾನ ಕಾರ್ಯದರ್ಶಿ

* ಶ್ರೀರಾಮ ಎಲ್ಲರಿಗೂ ಸೇರಿದವನು. ಎಲ್ಲರ ಅಭಿವೃದ್ಧಿಯೇ ಶ್ರೀರಾಮನ ಬಯಕೆ. ಹಾಗಾಗಿಯೇ ಆತನನ್ನು ಮರ್ಯಾದಾಪುರುಷೋತ್ತಮ ಎಂದು ಕರೆಯಲಾಗುತ್ತದೆ

- ಪ್ರಿಯಾಂಕಾ ಗಾಂಧಿ ವಾದ್ರಾ, ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು