ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜಸ್ಥಾನ: ಶಾಸಕಾಂಗ ಪಕ್ಷದ ಎರಡನೇ ಸಭೆ ಆರಂಭ

Last Updated 14 ಜುಲೈ 2020, 8:28 IST
ಅಕ್ಷರ ಗಾತ್ರ

ಜೈಪುರ: ಮುಖ್ಯಮಂತ್ರಿ ಅಶೋಕ್‌ ಗೆಹ್ಲೊಟ್‌ ಬೆಂಬಲಿಗ ಕಾಂಗ್ರೆಸ್‌ ಶಾಸಕರು ಸೋಮವಾರದಿಂದ ಇಲ್ಲಿನ ರೆಸಾರ್ಟ್‌ ಒಂದಕ್ಕೆ ಸ್ಥಳಾಂತರಗೊಂಡಿದ್ದು, ಕಾಂಗ್ರೆಸ್‌ ಶಾಸಕಾಂಗ ಪಕ್ಷದ ಎರಡನೇ ಸಭೆಯು ಅಲ್ಲಿ ಆರಂಭವಾಗಿದೆ.

ಆದರೆ, ಮುಖ್ಯಮಂತ್ರಿಯ ವಿರುದ್ಧ ಬಂಡಾಯ ಎದ್ದಿರುವ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ, ಉಪಮುಖ್ಯಮಂತ್ರಿ ಸಚಿನ್‌ ಪೈಲಟ್‌ ಎರಡನೆಯ ದಿನದ ಸಭೆಗೂ ಹಾಜರಾಗಿಲ್ಲ. ಅಷ್ಟೇ ಅಲ್ಲ ಅವರ ಜತೆಗೆ ಗುರುತಿಸಿಕೊಂಡಿರುವ ಶಾಸಕರು ಸಹ ಸಭೆಯಲ್ಲಿ ಪಾಲ್ಗೊಂಡಿಲ್ಲ.

ಕಾಂಗ್ರೆಸ್‌ನಲ್ಲಿ ಬಂಡಾಯದ ಲಕ್ಷಣಗಳು ಕಾಣಿಸಿಕೊಂಡ ನಂತರ ಶಾಸಕಾಂಗ ಪಕ್ಷದ ಮೊದಲ ಸಭೆಯು ಮುಖ್ಯಮಂತ್ರಿಯ ನಿವಾಸದಲ್ಲಿ ಸೋಮವಾರ ನಡೆದಿತ್ತು. ಆ ಸಭೆಗೆ 18 ಕಾಂಗ್ರೆಸ್‌ ಶಾಸಕರು ಗೈರಾಗಿದ್ದರು. ಆದರೆ ಪಕ್ಷೇತರ ಹಾಗೂ ಬೇರೆ ಪಕ್ಷಗಳ ಕೆಲವು ಶಾಸಕರು ಹಾಜರಾಗಿ, ಗೆಹ್ಲೊಟ್‌ ಅವರಿಗೆ ಬೆಂಬಲ ಸೂಚಿಸಿದ್ದರು.

ರೆಸಾರ್ಟ್‌ನಲ್ಲಿ ಆಯೋಜಿಸಿರುವ ಸಭೆಗೆ ಹಾಜರಾಗುವಂತೆ ಪಕ್ಷದ ರಾಜ್ಯ ಘಟಕದ ಉಸ್ತುವಾರಿ ಅವಿನಾಶ್‌ ಪಾಂಡೆ ಅವರು ಟ್ವೀಟ್‌ ಮೂಲಕ ಸಚಿನ್‌ ಹಾಗೂ ಅವರ ಬೆಂಬಲಿಗ ಶಾಸಕರಿಗೆ ಮಂಗಳವಾರ ಬೆಳಿಗ್ಗೆ ಮನವಿ ಮಾಡಿದ್ದರು.

‘ಸಚಿನ್‌ ಹಾಗೂ ಅವರ ಬೆಂಬಲಿಗರಿಗೆ ಎರಡನೇ ಅವಕಾಶವನ್ನು ನೀಡುತ್ತಿದ್ದೇವೆ. ಜನರು ಆಯ್ಕೆಮಾಡಿರುವ ಮತ್ತು ರಾಜ್ಯದ ಅಭಿವೃದ್ಧಿಯನ್ನು ಬಯಸುವ ನಾಯಕತ್ವಕ್ಕೆ ಅವರು ಬೆಂಬಲ ಸೂಚಿಸಬೇಕು ಎಂದು ನಾವು ನಿರೀಕ್ಷಿಸುತ್ತೇವೆ’ ಎಂದು ಅವರು ಮಾಧ್ಯಮದವರ ಜತೆ ಮಾತನಾಡುತ್ತಾ ತಿಳಿಸಿದರು.

ಸೋಮವಾರ ನಡೆದ ಸಭೆಯಲ್ಲಿ 106 ಶಾಸಕರು ಪಾಲ್ಗೊಂಡಿದ್ದರು ಎಂದು ನಾಯಕರು ವಾದಿಸಿದ್ದರು. ಆದರೆ ಇದನ್ನು ಸಚಿನ್‌ ಪೈಲೆಟ್‌ ನಿರಾಕರಿಸಿದ್ದರು. ಬದಲಿಗೆ, 30 ಶಾಸಕರು ನಮ್ಮ ಜತೆಗಿದ್ದಾರೆ ಎಂದು ಅವರು ವಾದಿಸಿದ್ದಾರೆ.

ಪಕ್ಷದ ಹಿರಿಯ ಮುಖಂಡರಾದ ರಾಹುಲ್‌ ಹಾಗೂ ಪ್ರಿಯಾಂಕಾ ಗಾಂಧಿ ಅವರು ಸಚಿನ್‌ ಜತೆ ಸಂಪರ್ಕದಲ್ಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT