ಬೆಂಗಳೂರು: 'ಭಾರತದ ನೆಲವನ್ನು ರಫೇಲ್ ಯುದ್ಧ ವಿಮಾನಗಳು ಸ್ಪರ್ಶಿಸಿರುವುದು ನಮ್ಮ ಮಿಲಿಟರಿ ಇತಿಹಾಸದಲ್ಲಿ ಹೊಸ ಯುಗಾರಂಭವಾದಂತಾಗಿದೆ. ಬಹುಪಾತ್ರಗಳನ್ನು ವಹಿಸುವ ಈ ವಿಮಾನಗಳು ಭಾರತೀಯ ವಾಯುಪಡೆಯ ಸಾಮರ್ಥ್ಯಗಳಲ್ಲಿ ದೊಡ್ಡ ಬದಲಾವಣೆ ತರಲಿದೆ. ಲೋಹದ ಹಕ್ಕಿಗಳು ಅಂಬಾಲದಲ್ಲಿ ಸುರಕ್ಷಿತವಾಗಿ ಇಳಿದಿವೆ' ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಬುಧವಾರ ಟ್ವೀಟ್ ಮಾಡಿದ್ದಾರೆ.
ಯುದ್ಧ ವಿಮಾನಗಳನ್ನು ಫ್ರಾನ್ಸ್‌ನಿಂದ ವೃತ್ತಿಪರ ವ್ಯವಸ್ಥೆಯೊಂದಿಗೆ ದೇಶಕ್ಕೆ ತಂದ ಭಾರತೀಯ ವಾಯುಪಡೆಗೆ ರಾಜನಾಥ್ ಸಿಂಗ್ ಶುಭ ಕೋರಿದ್ದಾರೆ. ವಾಯುಪಡೆಯ 17ನೇ ಸ್ಕ್ವಾಡ್ರನ್ 'ಗೋಲ್ಡನ್ ಆ್ಯರೋಸ್' ಅದರ ಧ್ಯೇಯವಾಕ್ಯದಂತೆ 'ಉದಯಾಮ ಅಜಸ್ರಮ್' (ಸದಾ ಮೇಲಕ್ಕೇರೋಣ) ಮುಂದುವರಿಯಲಿದೆ ಎಂಬ ಭರವಸೆ ಇದೆ. ಭಾರತದ ವಾಯುಪಡೆಯ ಸಮರ ಸಾಮರ್ಥ್ಯಕ್ಕೆ ಸೂಕ್ತ ಸಮಯದಲ್ಲಿ ಬಲ ವೃದ್ಧಿಯಾದಂತಾಗಿದೆ ಎಂದಿದ್ದಾರೆ.
ಭಾರತೀಯ ವಾಯುಪಡೆಯ ಹೊಸ ಸಾಮರ್ಥ್ಯದ ಬಗ್ಗೆ ಯಾರಾದರೂ ತಲೆ ಕೆಡಿಸಿಕೊಳ್ಳುವುದಾದರೆ, ಅದು ದೇಶದ ಪ್ರಾದೇಶಿಕ ಸಾರ್ವಭೌಮತೆಗೆ ಧಕ್ಕೆಯುಂಟು ಮಾಡಲು ಬಯಸುವವರೇ ಆಗಿರುತ್ತಾರೆ ಎಂದಿದ್ದಾರೆ.
ಕೋವಿಡ್ ಅಡೆತಡೆಗಳ ನಡುವೆಯೂ ನಿಗದಿತ ಸಮಯದಲ್ಲಿ ವಿಮಾನ ಹಾಗೂ ಅದರ ಶಸ್ತ್ರಾಸ್ತ್ರಗಳನ್ನು ಪೂರೈಸಲು ನೆರವಾದ ಫ್ರಾನ್ಸ್ ಸರ್ಕಾರ, ಡಸಲ್ಟ್ ಏವಿಯೇಷನ್ ಹಾಗೂ ಇತರೆ ಫ್ರೆಂಚ್ ಕಂಪನಿಗಳಿಗೆ ಧನ್ಯವಾದ ತಿಳಿಸಿದ್ದಾರೆ.
ಬಹಳ ಕಾಲದಿಂದ ಪೂರ್ಣಗೊಳ್ಳದೆ ಉಳಿದಿದ್ದ ರಫೇಲ್ ಖರೀದಿ ಪ್ರಕ್ರಿಯೆಯು ಪ್ರಧಾನಿ ನರೇಂದ್ರ ಮೋದಿ ಅವರ ಸೂಕ್ತ ನಿರ್ಧಾರದಿಂದ ಬೆಳವಣಿಗೆ ಕಂಡಿತು. ಫ್ರಾನ್ಸ್ ಜೊತೆಗಿನ ಸರ್ಕಾರದ ಮಟ್ಟದ ಒಪ್ಪಂದದಿಂದಾಗಿ ವಿಮಾನಗಳನ್ನು ಪಡೆಯಲು ಸಾಧ್ಯವಾಗಿದೆ. ಅವರ ಧೈರ್ಯ ಮತ್ತು ನಿರ್ಣಯಗಳಿಗಾಗಿ ಧನ್ಯವಾದ ಅರ್ಪಿಸುತ್ತಿರುವುದಾಗಿ ಹೇಳಿದ್ದಾರೆ.
ಈ ವಿಮಾನ ಅತ್ಯುತ್ತಮ ಹಾರಾಟ ಸಾಮರ್ಥ್ಯ, ಶಸ್ತ್ರಾಸ್ತ್ರಗಳು, ರಡಾರ್ ಹಾಗೂ ಇತರೆ ಸೆನ್ಸರ್‌ಗಳ ಸಾಮರ್ಥ್ಯ ಜಗತ್ತಿನಲ್ಲೇ ಅತ್ಯುತ್ತಮವಾದುದಾಗಿದೆ. ದೇಶಕ್ಕೆ ಎದುರಾಗುವ ಯಾವುದೇ ತೊಂದರೆಯನ್ನು ಮತ್ತಷ್ಟು ಸಮರ್ಥವಾಗಿ ಎದುರಿಸಲು ಭಾರತೀಯ ವಾಯುಪಡೆಗೆ ಇದರಿಂದ ಸಾಧ್ಯವಾಗಲಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.