ಮಂಗಳವಾರ, ಆಗಸ್ಟ್ 3, 2021
20 °C
ಮೂರು ಹಂತದ ನಿರ್ಬಂಧ

Explainer | ಕೊರೊನಾ ಸೋಂಕು ವ್ಯಾಪಕ: ತಿರುವನಂತಪುರದಲ್ಲಿ ಟ್ರಿಪಲ್ ಲಾಕ್‌ಡೌನ್

ಪ್ರಜಾವಾಣಿ ವೆಬ್‌ಡೆಸ್ಕ್‌ Updated:

ಅಕ್ಷರ ಗಾತ್ರ : | |

ತಿರುವನಂತಪುರ: ಕೊರೊನಾ ಸೋಂಕು ವ್ಯಾಪಕವಾಗಿ ಹರಡುವುದನ್ನು ತಡೆಯಲೆಂದು ಕೇರಳ ರಾಜಧಾನಿಯಲ್ಲಿ ಸೋಮವಾರದಿಂದ ಮೂರು ಹಂತದ ಲಾಕ್‌ಡೌನ್ (ಟ್ರಿಪಲ್ ಲಾಕ್‌ಡೌನ್) ಜಾರಿಯಾಗಿದೆ.

ಭಾನುವಾರ ಕೇರಳದಲ್ಲಿ ಒಟ್ಟು 225 ಹೊಸ ಸೋಂಕು ಪ್ರಕರಣಗಳು ವರದಿಯಾಗಿದ್ದವು. ಈ ಪೈಕಿ 38 ಪ್ರಕರಣಗಳು ಸ್ಥಳೀಯ ಮೂಲಗಳಿಂದಲೇ ಹರಡಿತ್ತು. ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿರುವ ಕೇರಳ ಸರ್ಕಾರ ಹೊಸ ಕ್ರಮಗಳನ್ನು ಘೋಷಿಸಿದೆ.

ಸ್ಥಳೀಯವಾಗಿ ಹರಡಿರುವ 38 ಪ್ರಕರಣಗಳ ಪೈಕಿ 22 ಪ್ರಕರಣಗಳು ರಾಜಧಾನಿ ತಿರುವನಂತಪುರದಲ್ಲಿಯೇ ವರದಿಯಾಗಿದ್ದವು. 'ಸ್ಥಳೀಯವಾಗಿ ಹರಡಿದ ಅತಿದೊಡ್ಡ ಸಂಖ್ಯೆ ಇದಾಗಿದೆ. ರಾಜಧಾನಿಯಲ್ಲಿ ಪರಿಸ್ಥಿತಿ ಗಂಭೀರವಾಗಿರುವುದನ್ನು ಇದು ಸೂಚಿಸುತ್ತದೆ' ಎಂದು ಪ್ರವಾಸೋದ್ಯಮದ ಸಚಿವ ಕದಕಂಪಲ್ಲಿ ಸುರೇಂದ್ರನ್ ವಿಶ್ಲೇಷಿಸಿದ್ದರು.

'ಲಾಕ್‌ಡೌನ್ ಅವಧಿಯಲ್ಲಿ ರಾಜಧಾನಿಯ ಎಲ್ಲ ರಸ್ತೆಗಳನ್ನು ನಿರ್ಬಂಧಿಸಲಾಗುವುದು. ಅತ್ಯಗತ್ಯ ಕೆಲಸಗಳಿಗೆ ಜನರು ಪೊಲೀಸರ ಸಹಕಾರ ಪಡೆದುಕೊಳ್ಳಬಹುದು ಎಂದು ಪೊಲೀಸ್ ಮುಖ್ಯಸ್ಥ ಲೋನಥ್ ಬೆಹೆರಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಏನಿದು ಟ್ರಿಪಲ್ ಲಾಕ್‌ಡೌನ್?

ತೀವ್ರಗತಿಯಲ್ಲಿ ಹರಡುತ್ತಿರುವ ಸಾಂಕ್ರಾಮಿಕ ರೋಗಗಳಿಗೆ ಕಡಿವಾಣ ಹಾಕಲು ಇದು ಅತಿಮುಖ್ಯ ತಂತ್ರ. ಹೆಸರೇ ಹೇಳುವಂತೆ ಇದರಲ್ಲಿ ಮೂರು ಹಂತಗಳ ನಿರ್ಬಂಧ ಇರುತ್ತದೆ.

1) ನಿರ್ದಿಷ್ಟ ಪ್ರದೇಶವನ್ನು (ತಿರುವನಂತಪುರ ಪಾಲಿಕೆ) ಲಾಕ್‌ಡೌನ್ ಮಾಡಲಾಗುತ್ತದೆ. ಮಹಾನಗರಪಾಲಿಕೆ ವ್ಯಾಪ್ತಿಗೆ ಹೊರಗಿನಿಂದ ಯಾರೊಬ್ಬರಿಗೂ ಪ್ರವೇಶ, ನಿರ್ಗಮನದ ಅವಕಾಶ ಇರುವುದಿಲ್ಲ.

2) ಸೋಂಕು ವರದಿಯಾದ ಪ್ರದೇಶವನ್ನು ಸೀಲ್‌ಡೌನ್ ಮಾಡಲಾಗುತ್ತದೆ. ಈ ಪ್ರದೇಶಕ್ಕೆ ಪಾಲಿಕೆ ವ್ಯಾಪ್ತಿಯ ಇತರ ಪ್ರದೇಶಗಳಿಂದಲೂ ಸಂಪರ್ಕ ಕಡಿತಗೊಳಿಸಲಾಗುತ್ತದೆ.

3) ಸೋಂಕಿತರ ಕುಟುಂಬದ ಸದಸ್ಯರಿಗೆ ಮನೆಯಿಂದ ಹೊರಬರಲು ಅವಕಾಶ ನೀಡುವುದಿಲ್ಲ. ಸಮುದಾಯಕ್ಕೆ ಸೋಂಕು ಹರಡುವುದನ್ನು ತಡೆಯುವಲ್ಲಿ ಇದು ಮಹತ್ವದ ಪಾತ್ರ ನಿರ್ವಹಿಸುತ್ತದೆ.

* ಟ್ರಿಪಲ್ ಲಾಕ್‌ಡೌನ್ ಅವಧಿಯಲ್ಲಿ ಏನೆಲ್ಲಾ ಲಭ್ಯ?

- ಆಸ್ಪತ್ರೆ ಮತ್ತು ಮೆಡಿಕಲ್ ಶಾಪ್ ಮಾತ್ರ ತೆರೆದಿರುತ್ತವೆ. ಆಸ್ಪತ್ರೆಗೆ ತೆರಳಲೆಂದು ಮನೆಯಿಂದ ಹೊರಗೆ ಕಾಲಿಟ್ಟರೂ ನೀವು ಪ್ರಮಾಣ ಪತ್ರ ಅಥವಾ ಪ್ರಿಸ್‌ಕ್ರಿಪ್ಷನ್ ಇಟ್ಟುಕೊಂಡಿರಬೇಕು. ಪೊಲೀಸರಿಗೆ ಅದನ್ನು ತೋರಿಸಬೇಕು. ತುರ್ತು ಪರಿಸ್ಥಿತಿಯಿದ್ದ ಕಾರಣಕ್ಕೆ ಮನೆಯಿಂದ ಹೊರಗೆ ಬಂದಿದ್ದೀರಿ ಎಂಬುದನ್ನು ವಿವರಿಸಬೇಕು.

- ನಗರದ ಯಾವುದೇ ರಸ್ತೆಯಲ್ಲಿ ಸಂಚಾರಕ್ಕೆ ಅವಕಾಶ ಇರುವುದಿಲ್ಲ.

- ಸಚಿವಾಲಯ ಸೇರಿ ಎಲ್ಲ ಸರ್ಕಾರಿ ಕಚೇರಿಗಳೂ ಬಾಗಿಲು ಹಾಕಿರುತ್ತವೆ.

- ಅತ್ಯಗತ್ಯ ವಸ್ತುಗಳನ್ನು ಮನೆ ಬಾಗಿಲಿಗೆ ತಲುಪಿಸಲಾಗುವುದು. ತುರ್ತು ಪರಿಸ್ಥಿತಿಯಲ್ಲಿ ಸಂಪರ್ಕಿಸಬೇಕಾದ ದೂರವಾಣಿ ಸಂಖ್ಯೆಗಳನ್ನು ಪೊಲೀಸರು ಪ್ರಕಟಿಸುತ್ತಾರೆ. ಅಂಗಡಿಗಳಿಗೆ ಜನರು ಭೇಟಿ ನೀಡುವುದನ್ನು ಸಂಪೂರ್ಣ ನಿರ್ಬಂಧಿಸಲಾಗಿದೆ.

- ಬಸ್‌ ಪ್ರಯಾಣಕ್ಕೆ ಅವಕಾಶ ಇರುವುದಿಲ್ಲ. ಇದನ್ನು ಕಟ್ಟುನಿಟ್ಟಾಗಿ ಜಾರಿ ಮಾಡಲಾಗುತ್ತದೆ.

* ಈ ಹಿಂದೆ ಎಲ್ಲಾದರೂ ಟ್ರಿಪಲ್ ಲಾಕ್‌ಡೌನ್ ಜಾರಿಯಾಗಿತ್ತೆ?

ಕಾಸರಗೋಡಿನಲ್ಲಿ ಏಪ್ರಿಲ್ 10ರಂದು ಒಂದೇ ದಿನ 155 ಸೋಂಕು ಪ್ರಕರಣಗಳು ವರದಿಯಾಗಿದ್ದವು. ಸೋಂಕು ವ್ಯಾಪಕವಾಗಿ ಹರಡುವುದನ್ನು ತಡೆಯಲು ಕೇರಳ ಸರ್ಕಾರ ಟ್ರಿಪಲ್ ಲಾಕ್‌ಡೌನ್ ಜಾರಿ ಮಾಡಿತ್ತು. ನಂತರದ ದಿನಗಳಲ್ಲಿ ಕಾಸರಗೋಡು ಚೇತರಿಸಿಕೊಂಡಿತ್ತು, ಸೋಂಕು ಪ್ರಕರಣಗಳು ನಿಯಂತ್ರಣಕ್ಕೆ ಬಂದಿದ್ದವು.

* ಕಾಸರಗೋಡಿನಲ್ಲಿ ಏನೆಲ್ಲಾ ನಿರ್ಬಂಧ ಹೇರಲಾಗಿತ್ತು?

ಕಾಸರಗೋಡಿನಲ್ಲಿ ಪೊಲೀಸರು ಕಟ್ಟುನಿಟ್ಟಿನ ನಿರ್ಬಂಧಗಳನ್ನು ಹೇರಿದ್ದರು. ದ್ವಿಚಕ್ರ ವಾಹನಗಳಲ್ಲಿ ಹಿಂಬದಿ ಸವಾರಿಗೆ ಅವಕಾಶ ಇರಲಿಲ್ಲ, ಕಾರುಗಳಲ್ಲಿ ಕೇವಲ ಇಬ್ಬರಿಗೆ ಸಂಚರಿಸಲು ಅವಕಾಶವಿತ್ತು, ತುರ್ತು ಪರಿಸ್ಥಿತಿಯಿಂದಾಗಿಯೇ ಮನೆಯಿಂದ ಹೊರಗೆ ಬಂದಿದ್ದೇವೆ ಎಂಬುದನ್ನು ಪೊಲೀಸರಿಗೆ ಜನರು ವಿವರಿಸುವುದ ಕಡ್ಡಾಯವಾಗಿತ್ತು. ಮನೆ ಬಾಗಿಲಿಗೆ ಅತ್ಯಗತ್ಯ ವಸ್ತುಗಳನ್ನು ತಲುಪಿಸಲು ಸರ್ಕಾರ ವ್ಯವಸ್ಥೆ ಮಾಡಿತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು