ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಕಾಸ್‌ ದುಬೆಗೆ ಜಾಮೀನು ನೀಡಿದ್ದು ವ್ಯವಸ್ಥೆಯ ವೈಫಲ್ಯ: ಸುಪ್ರೀಂ ಕೋರ್ಟ್

ತನಿಖಾ ಸಮಿತಿಗೆ ‘ಸುಪ್ರೀಂ’ ನಿವೃತ್ತ ನ್ಯಾಯಮೂರ್ತಿ ಸೇರ್ಪಡೆಗೆ ಸೂಚನೆ
Last Updated 20 ಜುಲೈ 2020, 16:33 IST
ಅಕ್ಷರ ಗಾತ್ರ

ನವದೆಹಲಿ: 64 ಪ್ರಕರಣಗಳು ದಾಖಲಾಗಿದ್ದರೂ ವಿಕಾಸ್ ದುಬೆಯಂತಹ ವ್ಯಕ್ತಿಯನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಿದ್ದು ವ್ಯವಸ್ಥೆಯ ವೈಫಲ್ಯ ಎಂದು ಸುಪ್ರೀಂ ಕೋರ್ಟ್ ಸೋಮವಾರ ಅಭಿಪ್ರಾಯಪಟ್ಟಿದೆ. ಗ್ಯಾಂಗ್‌ಸ್ಟರ್ ದುಬೆ ಎನ್‌ಕೌಂಟರ್ ಪ್ರಕರಣದ ತನಿಖಾ ಸಮಿತಿಗೆ ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ಹಾಗೂ ನಿವೃತ್ತ ಡಿಜಿಪಿಯೊಬ್ಬರನ್ನು
ನೇಮಿಸುವಂತೆ ಉತ್ತರ ಪ್ರದೇಶ ಸರ್ಕಾರಕ್ಕೆ ಸೂಚನೆ ನೀಡಿದೆ.

‘ಇದು ಸಾಂಸ್ಥಿಕ ವೈಫಲ್ಯ. ಜೈಲಿನಲ್ಲಿರಬೇಕಾದವರು ಜಾಮೀನಿನ ಮೇಲೆ ಹೊರಗಿದ್ದರು. ಅಷ್ಟೊಂದು ಪ್ರಕರಣಗಳಿದ್ದರೂ ದುಬೆ ಹೊರಗಿದ್ದುದು ದಿಗಿಲು ಮೂಡಿಸಿತು’ ಎಂದು ಮುಖ್ಯನ್ಯಾಯಮೂರ್ತಿ ಎಸ್‌.ಎ. ಬೊಬಡೆ ನೇತೃತ್ವದ ಪೀಠ ಹೇಳಿದೆ. ನ್ಯಾಯಮೂರ್ತಿಗಳಾದ ಎ.ಎಸ್. ಬೋಪಣ್ಣ, ವಿ.ಸುಬ್ರಮಣಿಯನ್ ಅವರು ಪೀಠದಲ್ಲಿದ್ದಾರೆ.

ಈ ಪ್ರಕರಣದಲ್ಲಿ ಮುಖ್ಯಮಂತ್ರಿ ಅಥವಾ ಉಪಮುಖ್ಯಮಂತ್ರಿ ಹೇಳಿಕೆ ನೀಡಿದ್ದರೆ ಅವುಗಳನ್ನು ಗಮನಿಸುವಂತೆ ಉತ್ತರ ಪ್ರದೇಶ ಸರ್ಕಾರದ ಪರ ಹಾಜರಿದ್ದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರಿಗೆ ಕೋರ್ಟ್ ಸೂಚಿಸಿತು. ಪೊಲೀಸರ ಮೇಲೆ ದಾಳಿ
ನಡೆಸಿದವರನ್ನು ನಿರ್ಮೂಲನೆ ಮಾಡಿ ಎಂದು ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿ ಹೇಳಿದ್ದಾರೆ ಎಂದುವರದಿಯಾಗಿತ್ತು. ‘ಕಾನೂನಿನ ನಿಯಮಗಳನ್ನು ಎತ್ತಿಹಿಡಿಯಬೇಕಾದವರು ನೀವು. ಇದು ನಿಮ್ಮ ಕರ್ತವ್ಯ’ ಎಂದು ಪೀಠ ತಿಳಿಸಿತು.

ಕಾನ್ಪುರದ ಸಮೀಪ ಜುಲೈ 3ರಂದು ಎಂಟು ಪೊಲೀಸರನ್ನು ಹತ್ಯೆ ಮಾಡಿದ ಆರೋಪ ದುಬೆ ಮೇಲಿತ್ತು. ಜುಲೈ 10ರಂದು ಪೊಲೀಸರ ಜತೆ ನಡೆದ ಗುಂಡಿನ ಚಕಮಕಿಯಲ್ಲಿ ದುಬೆ ಮೃತಪಟ್ಟಿದ್ದ. ಇದಕ್ಕೂ ಮುನ್ನ ದುಬೆಯ ಐವರು ಸಹಚರರು ಪ್ರತ್ಯೇಕ
ಎನ್‌ಕೌಂಟರ್‌ಗಳಲ್ಲಿ ಸತ್ತಿದ್ದಾರೆ.

ಎನ್‌ಕೌಂಟರ್: ಕಾನೂನು ಪಾಲಿಸಿ

ಕಳೆದ ವರ್ಷ ತೆಲಂಗಾಣದಲ್ಲಿ ಪಶುವೈದ್ಯೆ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ ಆರೋಪಿಗಳನ್ನು ಎನ್‌ಕೌಂಟರ್ ಮಾಡಿದ್ದಕ್ಕೂ, ದುಬೆ ಎನ್‌ಕೌಂಟರ್‌ಗೂ ಸಾಕಷ್ಟು ವ್ಯತ್ಯಾಸವಿದೆ ಎಂದು ಕೋರ್ಟ್ ಹೇಳಿತು. ‘ನೀವು ತುಂಬಾ ಜಾಗರೂಕರಾಗಿರಬೇಕು ಮತ್ತು ಕಾನೂನನ್ನು ಪಾಲಿಸಬೇಕು’ ಎಂದು ಉತ್ತರ ಪ್ರದೇಶ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಸೂಚಿಸಿತು.

ದುಬೆ ಆಪ್ತನ ಸೆರೆ

ಕಾನ್ಪುರ(ಪಿಟಿಐ): ವಿಕಾಸ್‌ ದುಬೆಯ ಆಪ್ತ ಸಹಾಯಕ ಜೈ ಬಾಜಪೇಯಿ ಮತ್ತು ಆತನ ಸಹಚರನನ್ನು ಸೋಮವಾರ ಬಂಧಿಸಲಾಗಿದೆ.

‘ದುಬೆ ಜುಲೈ 1ರಂದು ಬಾಜಪೇಯಿಗೆ ಕರೆ ಮಾಡಿದ್ದ. ಮರುದಿನ ಬಾಜಪೇಯಿ ತನ್ನ ಸಹಚರ ಪ್ರಶಾಂತ್‌ ಶುಕ್ಲಾ ಜೊತೆಗೆ ದುಬೆಯನ್ನು ಭೇಟಿಯಾಗಿ ₹ 2 ಲಕ್ಷ ನಗದು ಮತ್ತು .32 ಬೋರ್‌ ರಿವಾಲ್ವರ್‌ಗಳನ್ನು ನೀಡಿದ್ದ’ ಎಂದು ಪೊಲೀಸರು ತಿಳಿಸಿದ್ದಾರೆ.

ತನಗೆ ಕಾರು ವ್ಯವಸ್ಥೆ ಮಾಡುವಂತೆಯೂ ಬಾಜ‍ಪೇಯಿ ಯನ್ನು ದುಬೆ ಕೇಳಿಕೊಂಡಿದ್ದ.

ತೀವ್ರ ರಕ್ತಸ್ರಾವದಿಂದ ದುಬೆ ಸಾವು

ರೌಡಿ ಶೀಟರ್‌ ವಿಕಾಸ್‌ ದುಬೆ ಮರಣೋತ್ತರ ಪರೀಕ್ಷಾ ವರದಿ ಬಂದಿದ್ದು, ಅತಿಯಾದ ರಕ್ತಸ್ರಾವದಿಂದ ಸಾವನ್ನಪ್ಪಿರುವುದು ದೃಢಪಟ್ಟಿದೆ.

ಮರಣೋತ್ತರ ವರದಿಯಪ್ರಕಾರ, ದುಬೆ ದೇಹದ ಮೂಲಕ ಮೂರು ಗುಂಡುಗಳು ಹಾದುಹೋಗಿವೆ. ಈ ಗುಂಡುಗಳು ದೇಹ ಹೊಕ್ಕು ಹೊರಹೋದ ಸಂದರ್ಭದಲ್ಲಿ ಉಂಟಾದ ಆರು ಗಾಯಗಳು ಸೇರಿದಂತೆ ಆತನ ಮೃತದೇಹದಲ್ಲಿ ಒಟ್ಟು ಹತ್ತು ಗಾಯಗಳಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT