ಗುರುವಾರ , ಆಗಸ್ಟ್ 5, 2021
21 °C
ಎಸ್‌ಟಿಎಫ್‌ನಿಂದ ಕಾರ್ಯಾಚರಣೆ

ಕಾನ್ಪುರ: ದುಬೆ ಸಹಚರನ ಹತ್ಯೆ, ಆರು ಜನರ ಬಂಧನ

ಪಿಟಿಐ Updated:

ಅಕ್ಷರ ಗಾತ್ರ : | |

prajavani

ಲಖನೌ/ಕಾನ್ಪುರ: ಎಂಟು ಮಂದಿ ಪೊಲೀಸರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹಮೀರಪುರ ಜಿಲ್ಲೆಯಲ್ಲಿ ಬುಧವಾರ ವಿಶೇಷ ಕಾರ್ಯಪಡೆ ನಡೆಸಿದ ಪ್ರತ್ಯೇಕ  ಕಾರ್ಯಾಚರಣೆಗಳಲ್ಲಿ ರೌಡಿಶೀಟರ್‌ ವಿಕಾಸ್‌ ದುಬೆ ಸಹಚರನೊಬ್ಬನನ್ನು ಹೊಡೆದುರುಳಿಸಲಾಗಿದ್ದು, 6 ಜನ ಸಹಚರರನ್ನು ಬಂಧಿಸಲಾಗಿದೆ.

ಅಮರ್‌ ದುಬೆ ಈ ಕಾರ್ಯಾಚರಣೆಯಲ್ಲಿ ಕೊಲೆಯಾದ ರೌಡಿ. ವಿಕಾಸ್‌ ದುಬೆ ಸಹಚರರ ಪೈಕಿ  ಪೊಲೀಸರೊಂದಿಗಿನ ಗುಂಡಿನ ಚಕಮಕಿಯಲ್ಲಿ ಹತನಾದ ಮೂರನೇ ವ್ಯಕ್ತಿ ಅಮರ್‌.

‘ಗ್ರಾಮದಲ್ಲಿ ಅಮರ್ ದುಬೆ ಅಡಗಿರುವ ಸ್ಥಳವನ್ನು ಎಸ್‌ಟಿಎಫ್‌ ಹಾಗೂ ಸ್ಥಳೀಯ ಪೊಲೀಸರು ಸುತ್ತುವರಿದರು. ನಂತರ ನಡೆದ ಗುಂಡಿನ ಕಾಳಗದಲ್ಲಿ ಗಾಯಗೊಂಡಿದ್ದ ಅಮರ್‌ನನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಚಿಕಿತ್ಸೆ ಫಲಕಾರಿಯಾಗದೇ ಆತ ಮೃತಪಟ್ಟ. ಈ ಸಂದರ್ಭದಲ್ಲಿ ಇಬ್ಬರು ಪೊಲೀಸ್‌ ಅಧಿಕಾರಿಗಳಿಗೂ ಗಾಯಗಳಾಗಿವೆ’ ಎಂದು ಎಸ್ಪಿ ಶ್ಲೋಕ್ ಕುಮಾರ್‌ ತಿಳಿಸಿದ್ದಾರೆ. 

ಮಂಗಳವಾರ ರಾತ್ರಿ ಕಾನ್ಪುರದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಮೂರು ಜನ, ಹರಿಯಾಣದ ಫರಿದಾಬಾದ್‌ ಜಿಲ್ಲೆಯ ಖೇರಿಪುರದಲ್ಲಿ ಪೊಲೀಸರು ಮತ್ತೆ ಮೂವರನ್ನು ಬಂಧಿಸಿದ್ದಾರೆ.

ಪೊಲೀಸರು ಬರುವ ಮೊದಲೇ ಪರಾರಿ

ಲಖನೌ: ಪೊಲೀಸರ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ವಿಕಾಸ್‌ ದುಬೆ, ಹರಿಯಾಣದ ಫರೀದಾಬಾದ್‌ನ ಹೋಟೆಲ್‌ ಒಂದರಲ್ಲಿ ಕಾಣಿಸಿಕೊಂಡಿದ್ದಾನೆ. ಆದರೆ, ಪೊಲೀಸರು ಅಲ್ಲಿಗೆ ತಲುಪುವ ಮೊದಲೇ ಪರಾರಿಯಾಗಿದ್ದಾನೆ.

‘ಮಂಗಳವಾರ ರಾತ್ರಿ ಫರೀದಾಬಾದ್‌ನ ಹೋಟೆಲ್‌ಗೆ ಬಂದಿದ್ದ ದುಬೆ, ತನಗಾಗಿ ಒಂದು ಕೊಠಡಿ ಬುಕ್‌ ಮಾಡಲು ಮುಂದಾಗಿದ್ದ. ಹೋಟೆಲ್‌ನ ಸಿಸಿಟಿವಿ ಕ್ಯಾಮೆರಾದಲ್ಲಿ ಈ ದೃಶ್ಯ ಸೆರೆಯಾಗಿತ್ತು ಮತ್ತು ಅದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿತ್ತು. ಆದರೆ ಪೊಲೀಸರು ಅಲ್ಲಿಗೆ ತಲುಪುವ ಮೊದಲೇ ಆತ ಪರಾರಿಯಾಗಿದ್ದಾನೆ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇನ್ನೊಂದೆಡೆ, ಉತ್ತರಪ್ರದೇಶ ಎಸ್‌ಟಿಎಫ್‌ ಹಾಗೂ ಕ್ರೈಂ ಬ್ರಾಂಚ್‌ ಪೊಲೀಸರು ಫರೀದಾಬಾದ್‌ನಲ್ಲಿ ಜಂಟಿ ಕಾರ್ಯಾಚರಣೆ ನಡೆಸಿ, ವಿಕಾಸ್‌ ದುಬೆಯ ಸಮೀಪವರ್ತಿಗಳೆನಿಸಿಕೊಂಡ ಅಂಕುರ್‌, ಶ್ರವಣ್‌ ಹಾಗೂ ಕಾರ್ತಿಕೇಯ ಅಲಿಯಾಸ್‌ ಪ್ರಭಾತ್‌ ಎಂಬುವರನ್ನು ಬಂಧಿಸಿದ್ದಾರೆ. ಬಂಧಿತರಿಂದ ನಾಲ್ಕು ಪಿಸ್ತೂಲ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಇವುಗಳಲ್ಲಿ ಎರಡು ಪಿಸ್ತೂಲ್‌ಗಳು ಘಟನೆಯಲ್ಲಿ ಮೃತಪಟ್ಟಿದ್ದ ಪೊಲೀಸರ ಬಳಿ ಇದ್ದವುಗಳು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು