ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಬೂಲ್‌ | ಆತ್ಮಾಹುತಿ ಬಾಂಬ್ ದಾಳಿಗೆ 63 ಮಂದಿ ಬಲಿ: ಮದುವೆ ಮಂಟಪವಾಯ್ತು ಮಸಣ

182ಕ್ಕೂ ಹೆಚ್ಚು ಮಂದಿಗೆ ಗಾಯ
Last Updated 18 ಆಗಸ್ಟ್ 2019, 11:57 IST
ಅಕ್ಷರ ಗಾತ್ರ

ಕಾಬೂಲ್: ಆ‌ಘ್ಘಾನಿಸ್ತಾನದ ರಾಜಧಾನಿ ಕಾಬೂಲ್‌ನಲ್ಲಿ ಶನಿವಾರ ರಾತ್ರಿ ಮದುವೆ ಮಂಟಪವೊಂದರಲ್ಲಿ ನಡೆದ ಆತ್ಮಾಹುತಿ ಬಾಂಬ್ ದಾಳಿಗೆ 63 ಮಂದಿ ಬಲಿಯಾಗಿದ್ದು, 182ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.

ಆಫ್ಘಾನಿಸ್ತಾನದಲ್ಲಿರುವ ಅಮೆರಿಕದ ಮಿಲಿಟರಿ ಪಡೆಗಳನ್ನು ಕಡಿಮೆಗೊಳಿಸಿ, ಕದನವಿರಾಮಕ್ಕೆ ಅವಕಾಶ ಕೊಡಬೇಕೆಂದು ವಾಷಿಂಗ್ಟನ್ ಮತ್ತು ತಾಲಿಬಾನ್ ಒಪ್ಪಂದವನ್ನು ಅಂತಿಮಗೊಳಿಸಿದ ಬೆನ್ನಲ್ಲೇ ಈ ದುರ್ಘಟನೆ ನಡೆದಿದೆ. ದಾಳಿಯ ಹೊಣೆಯನ್ನು ಇದುವರೆಗೆ ಯಾವ ಸಂಘಟನೆಯೂ ಒಪ್ಪಿಕೊಂಡಿಲ್ಲ. ಆದರೆ, ದಾಳಿಯಲ್ಲಿ ತನ್ನ ಪಾತ್ರವಿಲ್ಲವೆಂದು ತಾಲಿಬಾನ್ ಸ್ಪಷ್ಟಪಡಿಸಿದೆ.

ಮದುವೆ ಮನೆಯಾಯ್ತು ಮಸಣ:ಹೊಸ ಜೀವನಕ್ಕೆ ಕಾಲಿಡುವ ಕ್ಷಣಗಳು ಸಾವಿನ ಕ್ಷಣಗಳಾಗಿ ಬದಲಾಗಿದ್ದನ್ನು ನೆನೆದು ನವ ವರ ಮಿರ್‌ವೈಸ್ ದುಃಖತಪ್ತರಾದರು. ಶನಿವಾರ ಮಧ್ಯಾಹ್ನ ತಮ್ಮನ್ನು ಮದುವೆ ಮಂಟಪದ ವೇದಿಕೆಯಲ್ಲಿ ಹರಸಲು ಬಂದಿದ್ದ ಅತಿಥಿಗಳು ಕೆಲವೇ ಕ್ಷಣಗಳಲ್ಲಿ ಶವಗಳಾಗಿದ್ದನ್ನು ಕಂಡು ಮರುಗಿದರು.

‘ಕೆಲವೇ ಕ್ಷಣಗಳಲ್ಲಿ ನನ್ನ ಸಂತೋಷವು ದುಃಖವಾಗಿ ಪರಿವರ್ತನೆಯಾಯಿತು’ ಎಂದು ಅವರು ಸ್ಥಳೀಯ ಟಿವಿ ವಾಹಿನಿಗಳಿಗೆ ತಿಳಿಸಿದ್ದಾರೆ.

‘ನನ್ನ ಕುಟುಂಬ ಮತ್ತು ವಧು ಈ ಘಟನೆಯಿಂದ ತೀವ್ರವಾಗಿ ಆಘಾತಗೊಂಡಿದ್ದಾರೆ. ಮಾತುಗಳೇ ಹೊರಡುತ್ತಿಲ್ಲ. ನವವಧು ಇನ್ನೂ ಭೀತಿಯಿಂದ ಹೊರಬಂದಿಲ್ಲ. ಆತ್ಮಾಹುತಿ ದಾಳಿಯಲ್ಲಿ ನನ್ನ ಸಹೋದರ, ಸ್ನೇಹಿತರು ಮತ್ತು ಸಂಬಂಧಿಕರನ್ನು ಕಳೆದುಕೊಂಡಿರುವೆ. ನನ್ನ ಜೀವನದಲ್ಲಿ ಮತ್ತೆಂದೂ ಸಂತಸವನ್ನು ಕಾಣಲಾರೆ’ ಎಂದು ಅವರು ದುಃಖತಪ್ತರಾಗಿ ನುಡಿದರು.

ದಾಳಿ ಸಂಭವಿಸುವ ಸಂದರ್ಭದಲ್ಲಿ ಮದುವೆಗೆ ಬಂದಿದ್ದ ಅತಿಥಿಗಳು ನೃತ್ಯ ಮಾಡುವುದರಲ್ಲಿ ತಲ್ಲೀನರಾಗಿದ್ದರು. ದಿಢೀರನೆ ದಾಳಿ ನಡೆದಾಗ ಎಲ್ಲರೂ ಚೆಲ್ಲಾಪಿಲ್ಲಿಯಾಗಿ ಓಡಿದರು. ಎತ್ತ ನೋಡಿದರೂ ಚೀರಾಟ, ನರಳಾಟ ಕೇಳಿಸುತ್ತಿತ್ತು. ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡವರು ಅಳುತ್ತಿದ್ದರು’ ಎಂದು ತೀವ್ರವಾಗಿ ಗಾಯಗೊಂಡಿರುವ ಮುನೀರ್ ಅಹಮದ್ (23) ಹೇಳಿದರು.

ದಾಳಿಯ ಬಳಿಕ ಮದುವೆ ಮಂಟಪದಲ್ಲಿ ಸುಮಾರು 20 ನಿಮಿಷಗಳ ಕಾಲ ಹೊಗೆ ಆವರಿಸಿಕೊಂಡಿತ್ತು. ರಕ್ತಸಿಕ್ತವಾಗಿದ್ದ ದೇಹಗಳು, ಅಲ್ಲಲ್ಲಿ ಬಿದ್ದಿದ್ದ ಮನುಷ್ಯ ದೇಹದ ಮಾಂಸದ ತುಣುಕುಗಳು ಕಾಣುತ್ತಿದ್ದವು. ಟೋಪಿ, ಚಪ್ಪಲಿ, ನೀರಿನ ಬಾಟಲಿಗಳ ಮೇಲೆಲ್ಲಾ ನೆತ್ತರು, ಮಾಂಸದ ತುಣುಕುಗಳು ಅಂಟಿಕೊಂಡಿದ್ದವು.

ವೈಭವದಿಂದ ನಡೆಯುವ ಅಘ್ಗನ್ ಮದುವೆಗಳಲ್ಲಿ ಸಾವಿರಾರು ಜನರು ಪಾಲ್ಗೊಳ್ಳುತ್ತಾರೆ. ಮಹಿಳೆ–ಮಕ್ಕಳು ಮತ್ತು ಪುರುಷರಿಗೆ ಮದುವೆ ಮಂಟಪಗಳಲ್ಲಿ ಪ್ರತ್ಯೇಕ ವಿಭಾಗಗಳನ್ನು ಮಾಡಲಾಗಿರುತ್ತದೆ.

‘ಬಾಂಬ್ ಸ್ಫೋಟಗೊಂಡ ಸಮಯದಲ್ಲಿ ನಾನು ಮಹಿಳೆಯರ ವಿಭಾಗದಲ್ಲಿದ್ದೆ. ಪುರುಷರ ವಿಭಾಗದಲ್ಲಿ ಇದ್ದಕ್ಕಿದ್ದಂತೆ ದೊಡ್ಡ ಶಬ್ದವಾಯಿತು. ಎಲ್ಲರೂ ಹೊರಗೆ ಓಡಲು ಯತ್ನಿಸಿದ್ದರು ಜೋರಾಗಿ ಅಳುತ್ತಿದ್ದರು. ಪುರುಷರ ವಿಭಾಗದಲ್ಲಿ ಬಹುತೇಕರು ಸಾವನ್ನಪ್ಪಿದ್ದರು ಇಲ್ಲವೇ ಗಾಯಗೊಂಡರು’ ಎಂದು ಮದುವೆಗೆ ಬಂದಿದ್ದ ಮೊಹಮ್ಮದ್ ಫರ್ಹಾಕ್ ತಿಳಿಸಿದರು. ಮದುವೆಗೆ ಸುಮಾರು 1, 200 ಮಂದಿಯನ್ನು ಆಹ್ವಾನಿಸಲಾಗಿತ್ತು. ಘಟನೆಯಿಂದಾಗಿ ಕಾಬೂಲ್‌ನಲ್ಲಿ ಮಂಕು ಕವಿದಿದೆ.

‘ಇದೊಂದು ಭೀಕರ ದಾಳಿ’ ಎಂದು ಆಫ್ಗಾನಿಸ್ತಾನದ ಅಧ್ಯಕ್ಷ ಅಶ್ರಫ್ ಘನಿ ಹೇಳಿದ್ದರೆ, ‘ಇದು ಮಾನವೀಯತೆ ಮೇಲಿನ ಅಪರಾಧದ ಕೃತ್ಯ’ಎಂದು ಅಫ್ಗನ್‌ನ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಅಬ್ದುಲ್ಲಾ ಅಬ್ದುಲ್ಲಾ ಬಣ್ಣಿಸಿದ್ದಾರೆ.

ಜುಲೈ 28ರಂದು ಅಧ್ಯಕ್ಷ ಅಶ್ರಫ್ ಮತ್ತು ಆಡಳಿತಾಧಿಕಾರಿ ಅಮ್ರುಲ್ಲಾ ಸಲೇಹ್ ಅವರನ್ನು ಗುರಿಯಾಗಿಸಿಕೊಂಡು ನಡೆದ ದಾಳಿಯಲ್ಲಿ 20 ಮಂದಿ ಸಾವಿಗೀಡಾಗಿದ್ದರು. ಈ ಎರಡೂ ದಾಳಿಗಳು ಪಡೆಗಳ ವೈಫಲ್ಯತೆಯನ್ನು ತೋರಿಸುತ್ತವೆ. ಆಘ್ಘಾನಿಸ್ತಾನದಲ್ಲಿ ಅಮೆರಿಕದ ಸೇನಾಪಡೆಗಳನ್ನು ಕಡಿಮೆಗೊಳಿಸಬೇಕೆಂಬ ಒಪ್ಪಂದಕ್ಕೆ ವಾಷಿಂಗ್ಟನ್ ಮತ್ತು ತಾಲಿಬಾನ್ ನಿರ್ಧರಿಸಿವೆ. ಜಿಹಾದಿ ಸಂಘಟನೆಗಳಾದ ಅಲ್ ಕೈದಾ ಮತ್ತು ಐಸ್ ಸಂಘಟನೆಗಳಿಗೆ ಇನ್ನು ಮುಂದೆ ಅಫ್ಗನ್ ಸುರಕ್ಷಿತ ತಾಣವಾಗಿರಲು ಬಿಡುವುದಿಲ್ಲವೆಂದು ತಾಲಿಬಾನ್ ಭರವಸೆ ನೀಡಿದೆ. ಆದರೆ, ಶನಿವಾರದ ಬಾಂಬ್ ದಾಳಿ ಘಟನೆ ಈ ಭರವಸೆ ದೀರ್ಘಕಾಲ ಉಳಿಯದು ಎನ್ನುವುದನ್ನು ಸೂಚಿಸಿದೆ.

‘ತಾಲಿಬಾನ್ ನಮ್ಮನ್ನು ದೂಷಿಸಲಾಗದು. ಅವರೇ ಉಗ್ರಗಾಮಿಗಳಿಗೆ ನೆಲೆಯೊದಗಿಸುತ್ತಿದ್ದಾರೆ’ ಎಂದು ಘನಿ ತಿರುಗೇಟು ನೀಡಿದ್ದಾರೆ.

ವಾಷಿಂಗ್ಟನ್ ಮತ್ತು ತಾಲಿಬಾನ್ ನಡುವೆ ಒಪ್ಪಂದವಾದಲ್ಲಿ ಇಲ್ಲಿರುವ ಸುಮಾರು 14 ಸಾವಿರ ಸೈನಿಕರನ್ನು ಅಮೆರಿಕ ಹಿಂದಕ್ಕೆ ಕರೆಸಿಕೊಳ್ಳಲಿದೆ. ಇದು ಇಲ್ಲಿ ಶಾಂತಿ ನೆಲೆಸಲು ಸಹಾಯಕವಾಗಬಹುದು ಎಂಬುದು ಕೆಲವರ ನಂಬಿಕೆ.

ದಾಳಿಗೆ ಪಾಕ್ ಖಂಡನೆ

ಇಸ್ಲಾಮಾಬಾದ್: ಕಾಬೂಲ್‌ನಲ್ಲಿ ಶನಿವಾರ ರಾತ್ರಿ ನಡೆದ ಆತ್ಮಾಹುತಿ ದಾಳಿಯನ್ನು ಪಾಕಿಸ್ತಾನ ತೀವ್ರವಾಗಿ ಖಂಡಿಸಿದೆ.

‘ನಾಗರಿಕರನ್ನು ಗುರಿಯಾಗಿಸಿಕೊಂಡು ನಡೆಸಿರುವ ದಾಳಿ ಇದಾಗಿದೆ. ಎಲ್ಲಾ ರೀತಿಯ ಭಯೋತ್ಪಾದನೆಯನ್ನು ಪಾಕ್ ಖಂಡಿಸುತ್ತದೆ. ಘಟನೆಯಲ್ಲಿ ಬಲಿಯಾದ ಮುಗ್ಧರ ಕುಟುಂಬಗಳಿಗೆ ನಮ್ಮ ಸಂತಾಪ ಸೂಚಿಸುತ್ತೇವೆ’ಎಂದು ಪಾಕ್ ವಿದೇಶಾಂಗ ಕಚೇರಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT