ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಣರಾಜ್ಯೋತ್ಸಕ್ಕೆ ಬ್ರೆಜಿಲ್ ಅಧ್ಯಕ್ಷ; ಭಾರತ–ಬ್ರೆಜಿಲ್ ಸಂಬಂಧ ವೃದ್ಧಿಯ ಹಾದಿ

Last Updated 19 ಜನವರಿ 2020, 7:58 IST
ಅಕ್ಷರ ಗಾತ್ರ
ADVERTISEMENT
""

ಭಾರತವು ಪ್ರತಿವರ್ಷ ಗಣರಾಜ್ಯೋತ್ಸವ ದಿನದಂದು ಅನ್ಯರಾಷ್ಟ್ರಗಳ ನಾಯಕರನ್ನು ಮುಖ್ಯ ಅತಿಥಿಯನ್ನಾಗಿ ಆಹ್ವಾನ ನೀಡುವುದು ವಾಡಿಕೆ. ಅದರಂತೆಜನವರಿ 26ರಂದು ನವದೆಹಲಿಯಲ್ಲಿ ನಡೆಯಲಿರುವ 71ನೇ ಗಣರಾಜ್ಯೋತ್ಸದ ಮುಖ್ಯ ಅತಿಥಿಯಾಗಿ ಬ್ರೆಜಿಲ್ ಅಧ್ಯಕ್ಷ ಜೈರ್ ಬೋಲ್ಸನಾರೊ ಅವರು ಪಾಲ್ಗೊಳ್ಳುತ್ತಿದ್ದಾರೆ.

ಬ್ರೆಜಿಲ್‌ನ ಮಾಜಿ ಅಧ್ಯಕ್ಷರಾದ ಫರ್ನಾಂಡೊ ಹೆನ್ರಿಕ್ ಕಾರ್ಡೋಸೊ ಮತ್ತು ಅಧ್ಯಕ್ಷ ಲೂಯಿಜ್ ಇನಾಸಿಯೊ ಲುಲಾ ಡಾ ಸಿಲ್ವಾ ಅವರು ಕ್ರಮವಾಗಿ 1996 ಮತ್ತು 2004ರಲ್ಲಿ ಭಾರತಕ್ಕೆ ಭೇಟಿ ನೀಡಿದ್ದರು. ಬಳಿಕಜೈರ್ ಬೋಲ್ಸನಾರೊಭಾರತಕ್ಕೆ ಭೇಟಿ ನೀಡುತ್ತಿರುವ ಬ್ರೆಜಿಲ್‌ನ ಮೂರನೇ ಅಧ್ಯಕ್ಷರಾಗಿದ್ದಾರೆ.

ವಸಾಹತುಶಾಹಿ ಆಳ್ವಿಕೆಯಲ್ಲಿದ್ದಾಗಿನಿಂದಲೂ ಭಾರತ ಮತ್ತು ಬ್ರೆಜಿಲ್ ಸಂಬಂಧ ಉತ್ತಮವಾಗಿತ್ತು.ಇಂದು ಕೂಡಪ್ರಮುಖ ದ್ವಿಪಕ್ಷೀಯ ಸಂಬಂಧಗಳನ್ನು ಹೊಂದಿವೆ.ಉಭಯ ರಾಷ್ಟ್ರಗಳು ಕೂಡ ಬ್ರಿಕ್ಸ್, ಬಿಎಎಸ್‌ಐಸಿ, ಜಿ -20, ಜಿ -4, ಐಬಿಎಸ್ಎ, ಅಂತರರಾಷ್ಟ್ರೀಯ ಸೌರ ಒಕ್ಕೂಟ ಮತ್ತು ಬಯೋಫ್ಯೂಚರ್‌ಗಳಂತಹ ಅನೇಕ ವೇದಿಕೆಗಳಲ್ಲಿ ಸದಸ್ಯ ರಾಷ್ಟ್ರಗಳಾಗಿವೆ.

ಭಾರತ-ಬ್ರೆಜಿಲ್ ಸಂಬಂಧದ ಇತಿಹಾಸ

ಬ್ರೆಜಿಲ್ ಮತ್ತು ಗೋವಾಪೋರ್ಚುಗೀಸ್ ವಸಾಹತುಶಾಹಿ ಆಳ್ವಿಕೆಯಲ್ಲಿ ಸರಕುಗಳನ್ನು ವಿನಿಮಯ ಮಾಡಿಕೊಳ್ಳುತ್ತಿದ್ದವು. ಈ ವೇಳೆ ಭಾರತವು ತೆಂಗಿನಕಾಯಿ ಮತ್ತು ಮಾವಿನ ಬೆಳೆಗಳನ್ನು ಬ್ರೆಜಿಲ್‌ಗೆ ಕಳುಹಿಸುತ್ತಿದ್ದರೆ, ಬ್ರೆಜಿಲ್ ಇಲ್ಲಿಗೆ ಗೋಡಂಬಿಯನ್ನು ರಫ್ತು ಮಾಡುತ್ತಿತ್ತು. ಇದಲ್ಲದೆ ಭಾರತೀಯ ಜಾನುವಾರು ತಳಿಗಳನ್ನು ಕೂಡ ಬ್ರೆಜಿಲ್‌ಗೆ ರಫ್ತು ಮಾಡಲಾಗುತ್ತಿತ್ತು. ಇದು ಈಗ ದೇಶದಲ್ಲಿ ಶೇ 80ರಷ್ಟು ಜಾನುವಾರುಗಳನ್ನು ರೂಪಿಸಿದೆ. ಈ ಜಾನುವಾರುಗಳನ್ನು ಸ್ಥಳೀಯವಾಗಿ ‘ನೆಲೋರ್’ (ಆಂಧ್ರಪ್ರದೇಶದ ನೆಲ್ಲೂರು) ಎಂದು ಕರೆಯಲಾಗುತ್ತದೆ. 1822ರಲ್ಲಿ ಬ್ರೆಜಿಲ್ ಪೋರ್ಚುಗಲ್‌ನಿಂದ ಸ್ವತಂತ್ರ ರಾಷ್ಟ್ರವಾಯಿತು.

ಭಾರತಕ್ಕೆ 1947ರಲ್ಲಿ ಸ್ವಾತಂತ್ರ್ಯ ಲಭ್ಯವಾದ ನಂತರ ಭಾರತ ಮತ್ತು ಬ್ರೆಜಿಲ್ ನಡುವೆ ಆಧುನಿಕ ದಿನದ ರಾಜತಾಂತ್ರಿಕ ಸಂಬಂಧಗಳನ್ನು 1948ರಲ್ಲಿ ಸ್ಥಾಪಿಸಲಾಯಿತು.

1961ರಲ್ಲಿ ಪೋರ್ಚುಗೀಸರ ಆಳ್ವಿಕೆಯಿಂದ ಗೋವಾವನ್ನು ಮುಕ್ತಗೊಳಿಸಲುಭಾರತ ಸರ್ಕಾರ ಕೈಗೊಂಡ ‘ಆಪರೇಷನ್ ವಿಜಯ್’ ಕಾರ್ಯಾಚರಣೆಯನ್ನು ಬ್ರೆಜಿಲ್ ವಿರೋಧಿಸಿತು. ಇದರಿಂದಾಗಿಇಂಡೋ-ಬ್ರೆಜಿಲ್ ಸಂಬಂಧ ಹಲವು ದಶಕಗಳ ಕಾಲ ಅಭಿವೃದ್ಧಿ ಕಾಣಲಿಲ್ಲ. 1990ರ ದಶಕದಲ್ಲಿ ಭಾರತ ಮತ್ತು ಬ್ರೆಜಿಲ್ ಆರ್ಥಿಕ ಸುಧಾರಣೆಗಳನ್ನು ಕೈಗೊಂಡವು. ನಂತರ ಉಭಯ ದೇಶಗಳ ನಡುವಿನ ವ್ಯಾಪಾರ ಸಂಬಂಧಗಳು ವಿಸ್ತರಿಸಲ್ಪಟ್ಟವು. ಅಲ್ಲದೆ ಉಭಯ ದೇಶಗಳ ರಾಜತಾಂತ್ರಿಕ ಭೇಟಿಗಳು ಕಳೆದ ಎರಡು ದಶಕಗಳಲ್ಲಿ ವೇಗ ಪಡೆದುಕೊಂಡವು.

ದ್ವಿಪಕ್ಷೀಯ ಭೇಟಿ; ಭಾರತದಿಂದ ಬ್ರೆಜಿಲ್‌ಗೆ ಪಯಣ ಬೆಳೆಸಿದವರು

ಮಾಜಿ ಉಪ ರಾಷ್ಟ್ರಪತಿ ಡಾ.ಎಸ್.ರಾಧಾಕೃಷ್ಣನ್ - 1954

ಮಾಜಿ ಪ್ರಧಾನಿ ಇಂದಿರಾ ಗಾಂಧಿ - 1968

ಮಾಜಿ ಪ್ರಧಾನಿ ನರಸಿಂಹ ರಾವ್ - 1992

ಮಾಜಿ ರಾಷ್ಟ್ರಪತಿ ಕೆ. ಆರ್. ನಾರಾಯಣ್ - 1998

ಮಾಜಿ ರಾಷ್ಟ್ರಪತಿ ಪ್ರತಿಭಾ ಪಾಟೀಲ್ - 2008

ಮಾಜಿ ಪ್ರಧಾನಿ ಮನಮೋಹನ್ ಸಿಂಗ್ - 2006, 2010 ಮತ್ತು2012

ಪ್ರಧಾನಿ ನರೇಂದ್ರ ಮೋದಿ - 2014, 2019

ಬ್ರೆಜಿಲ್‌ನಿಂದ ಭಾರತಕ್ಕೆ ಬಂದಿದ್ದವರು

ಅಧ್ಯಕ್ಷ ಫರ್ನಾಂಡೊ ಹೆನ್ರಿಕ್ ಕಾರ್ಡೊಸೊ - 1996

ಅಧ್ಯಕ್ಷ ಲುಲಾ ಡಾ ಸಿಲ್ವಾ - 2004, 2007, and 2008

ಅಧ್ಯಕ್ಷ ದಿಲ್ಮಾ ರೌಸೆಫ್ - 2012 ಮಾರ್ಚ್

ಅಧ್ಯಕ್ಷ ಮೈಕೆಲ್ ಟೆಮರ್ - 2016

ಬ್ರಿಜಿಲ್ ಅಧ್ಯಕ್ಷ ಜೈರ್ ಬೋಲ್ಸನಾರೊ ಮತ್ತು ಪ್ರಧಾನಿ ನರೇಂದ್ರ ಮೋದಿ

ಉಭಯ ದೇಶಗಳ ವ್ಯಾಪಾರ ಸಂಬಂಧ

ಬ್ರೆಸಿಲಿಯಾದ ಭಾರತೀಯ ರಾಯಭಾರ ಕಚೇರಿಯ ವೆಬ್‌ಸೈಟ್‌ನ ಪ್ರಕಾರ, 2015ರಲ್ಲಿ ಸರಕುಗಳ ಬೆಲೆಯಲ್ಲಿ ಜಾಗತಿಕ ಕುಸಿತ ಮತ್ತು ಸ್ಥಳೀಯವಾಗಿ ಆರ್ಥಿಕ ಹಿಂಜರಿತದ ನಂತರ ಬ್ರೆಜಿಲ್‌ನ ವ್ಯಾಪಾರ ವಹಿವಾಟು ಕುಸಿಯಿತು. 2015ರಲ್ಲಿ ಭಾರತ ಮತ್ತು ಬ್ರೆಜಿಲ್ ನಡುವಿನ ದ್ವಿಪಕ್ಷೀಯ ವ್ಯಾಪಾರವು 7.9 ಶತಕೋಟಿಯಿಂದ 2016ರಲ್ಲಿ 5.64 ಶತಕೋಟಿಗೆ ಕುಸಿತ ಕಂಡಿತು.

ಅದಾದ ಎರಡು ವರ್ಷಗಳಲ್ಲಿ ಬ್ರೆಜಿಲ್‌ನ ಆರ್ಥಿಕತೆಯು ಸ್ವಲ್ಪ ಮಟ್ಟಿಗೆ ಚೇತರಿಸಿಕೊಂಡು 2018ರಲ್ಲಿ 7.57 ಶತಕೋಟಿಗೆ ಏರಿತು. ಅದೇ ವರ್ಷ ಭಾರತ ಮತ್ತು ಬ್ರೆಜಿಲ್ ನಡುವಿನ ರಫ್ತು ಮತ್ತು ಆಮದು ಕ್ರಮವಾಗಿ 3.66 ಬಿಲಿಯನ್ ಡಾಲರ್ ಮತ್ತು 3.91 ಶತಕೋಟಿ ಆಗಿತ್ತು. ಆಗ ಭಾರತವು 0.246 ಶತಕೋಟಿ ವ್ಯಾಪಾರ ಕೊರತೆಯನ್ನು ಎದುರಿಸಿತು. ಅದೇ ವರ್ಷದಲ್ಲಿ ಬ್ರೆಜಿಲ್‌ಗೆ ಭಾರತವು 11ನೇ ಅತಿದೊಡ್ಡ ರಫ್ತುದಾರ ಮತ್ತು 10ನೇ ಅತಿದೊಡ್ಡ ಆಮದುದಾರ ರಾಷ್ಟ್ರವಾಗಿತ್ತು.

ಬ್ರೆಜಿಲ್‌ನ ಕಂಪನಿಗಳು ಭಾರತದಲ್ಲಿ ಆಟೊಮೊಬೈಲ್ಸ್, ಐಟಿ, ಗಣಿಗಾರಿಕೆ, ಇಂಧನ, ಜೈವಿಕ ಇಂಧನಗಳು ಮತ್ತು ಪಾದರಕ್ಷೆ ತಯಾರಿಕಾ ಕ್ಷೇತ್ರದಲ್ಲಿ ಹೂಡಿಕೆ ಮಾಡಿವೆ ಮತ್ತು ಭಾರತೀಯ ಕಂಪನಿಗಳು ಐಟಿ, ಔಷಧ, ಇಂಧನ, ಕೃಷಿ ವ್ಯವಹಾರ, ಗಣಿಗಾರಿಕೆ, ಎಂಜಿನಿಯರಿಂಗ್ ಮತ್ತು ಆಟೋಮೊಬೈಲ್ ಕ್ಷೇತ್ರಗಳಲ್ಲಿ ಹೂಡಿಕೆ ಮಾಡಿವೆ. ಬ್ರೆಜಿಲ್‌ನಲ್ಲಿ ಭಾರತೀಯ ಒಟ್ಟು ಹೂಡಿಕೆ 8 ಬಿಲಿಯನ್ ಡಾಲರ್ ಎಂದು ಅಂದಾಜಿಸಲಾಗಿದೆ.

ಉಭಯ ರಾಷ್ಟ್ರಗಳ ಸಾಂಸ್ಕೃತಿಕ ಸಂಬಂಧ

ಬ್ರೆಜಿಲ್ ನಗರಗಳಾದ ರಿಯೊ ಡಿ ಜನೈರೊ, ಸಾವೊ ಪಾಲೊ ಮತ್ತು ಲಾಂಡ್ರಿನಾದಲ್ಲಿ ಮಹಾತ್ಮ ಗಾಂಧಿಯವರ ಪ್ರತಿಮೆಗಳನ್ನು ಪ್ರತಿಷ್ಟಾಪಿಸಲಾಗಿದೆ.

ಗಾಂಧಿಯವರ ಸ್ಮರಣಾರ್ಥ 2018ರಲ್ಲಿ ಗಾಂಧಿ ಜಯಂತಿಯಂದು ಬ್ರೆಜಿಲ್ ಅಂಚೆ ಇಲಾಖೆ ಅಂಚೆ ಚೀಟಿಯನ್ನು ಬಿಡುಗಡೆ ಮಾಡಿತು. ಇದಕ್ಕೂ ಮೊದಲು 2015ರಲ್ಲಿ 'ಭಾರತೀಯ ಚಿತ್ರರಂಗಕ್ಕೆ 100 ವರ್ಷ'ದ ಸ್ಮರಣಾರ್ಥವಾಗಿ ಮತ್ತೊಂದು ಅಂಚೆ ಚೀಟಿಯನ್ನು ಬಿಡುಗಡೆ ಮಾಡಲಾಗಿತ್ತು.

ರಾಯಭಾರ ಕಚೇರಿಯ ಪ್ರಕಾರ, ಬ್ರೆಜಿಲ್‌ ಸುಮಾರು 4,700 ಭಾರತೀಯರನ್ನು ಒಳಗೊಂಡಿದ್ದು, ಅವರಲ್ಲಿ ಹೆಚ್ಚಿನವರು ಸಾವೊ ಪಾಲೊ, ರಿಯೊಡಿ ಜನೈರೊ ಮತ್ತು ಮನೌಸ್‌ಗಳಲ್ಲಿ ವಾಸಿಸುತ್ತಿದ್ದಾರೆ.

ಜೈರ್ ಬೋಲ್ಸನಾರೊ ಬಗ್ಗೆ ಒಂದಿಷ್ಟು

ಗಣರಾಜ್ಯೋತ್ಸವ ಸಮಾರಂಭಕ್ಕೆ ದೆಹಲಿಗೆ ಬರಲಿರುವ ಬ್ರೆಜಿಲ್ ಅಧ್ಯಕ್ಷಜೈರ್ ಬೋಲ್ಸನಾರೊ ಬ್ರೆಜಿಲ್‌ನ ಸಾವೊ ಪಾಲೊದಲ್ಲಿ 1955ರಲ್ಲಿ ಜನಿಸಿದರು. 1977ರಲ್ಲಿ ಬ್ರೆಜಿಲಿಯನ್ ಬ್ಲಾಕ್ ನೀಡ್ಲೆಸ್ ಮಿಲಿಟರಿ ಅಕಾಡೆಮಿಯಲ್ಲಿ ಪದವಿ ಪಡೆದರು.

1988ರಲ್ಲಿ ಮೊದಲ ಬಾರಿಗೆ ರಿಯೊಡಿ ಜನೈರೊದ ನಗರಸಭೆಗೆ ಆಯ್ಕೆಯಾದರು. 1991ರಿಂದ 2018ರವರೆಗೆ ಫೆಡರಲ್ ಸಂಸತ್ತಿನ ಕೆಳಮನೆ, ನ್ಯಾಷನಲ್ ಕಾಂಗ್ರೆಸ್ ಆಫ್ ಬ್ರೆಜಿಲ್‌ನ ಸದಸ್ಯರಾಗಿ ಸೇವೆ ಸಲ್ಲಿಸಿದರು. 2022ರ ಅಂತ್ಯದವರೆಗೆ ಒಂದು ಅವಧಿಗೆ ಬೋಲ್ಸನಾರೊ ಬ್ರೆಜಿಲ್‌ನ ನೂತನ ಅಧ್ಯಕ್ಷರಾಗಿ 2018ರ ಅಕ್ಟೋಬರ್‌ನಲ್ಲಿ ಆಯ್ಕೆಯಾದರು. ಬಳಿಕ 2019ರ ಜನವರಿ 1 ರಂದು ಅಧಿಕಾರ ಸ್ವೀಕರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT