ಭಾನುವಾರ, ಮಾರ್ಚ್ 29, 2020
19 °C

ಭಾರತೀಯ ವಿಮಾನಕ್ಕೆ ಅನುಮತಿ ವಿಳಂಬ ಆರೋಪ: ಚೀನಾ ನಿರಾಕರಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೀಜಿಂಗ್‌: ಕೊರೊನಾ ವೈರಸ್‌ ಪೀಡಿತ ವುಹಾನ್‌ ನಗರಕ್ಕೆ ವೈದ್ಯಕೀಯ ಸಾಮಗ್ರಿಗಳನ್ನು ತಲುಪಿಸಲು ಹಾಗೂ ಅಲ್ಲಿರುವ ಭಾರತೀಯರನ್ನು ಮರಳಿ ಕರೆತರಲು ಭಾರತದ ವಿಮಾನಕ್ಕೆ ಅನುಮತಿ ನೀಡುವಲ್ಲಿ ಯಾವುದೇ ವಿಳಂಬ ಮಾಡುತ್ತಿಲ್ಲ ಎಂದು ಚೀನಾ ಶುಕ್ರವಾರ ಹೇಳಿದೆ. 

ಎರಡೂ ದೇಶಗಳ ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳು ಪರಸ್ಪರ ಸಂಪರ್ಕದಲ್ಲಿದ್ದು, ದಿನಾಂಕವನ್ನು ಅಂತಿಮಗೊಳಿಸಲಿದ್ದಾರೆ ಎಂದು ಚೀನಾದ ವಿದೇಶಾಂಗ ಸಚಿವಾಲಯ ವಕ್ತಾರ ಗೆಂಗ್ ಶುವಾಂಗ್ ತಿಳಿಸಿದ್ದಾರೆ.

ವುಹಾನ್‌ ನಗರಕ್ಕೆ ಭಾರತೀಯ ವಾಯುಸೇನೆಯ ಸಿ–17 ವಿಮಾನವನ್ನು ಕಳುಹಿಸುವುದಾಗಿ ಭಾರತ ಫೆಬ್ರುವರಿ 17 ರಂದು ಪ್ರಕಟಿಸಿತ್ತು. ಚೀನಾದ ಅನುಮತಿಯನ್ನು ಎದುರು ನೋಡಲಾಗುತ್ತಿದೆ. 

‘ಈ ಮೊದಲು ಭಾರತೀಯರನ್ನು ಕರೆದುಕೊಂಡು ಹೋಗಲು ಬಂದಿದ್ದ ಭಾರತದ ವಿಮಾನಕ್ಕೆ ಎಲ್ಲ ರೀತಿಯ ನೆರವು ಒದಗಿಸಲಾಗಿತ್ತು. ಈಗಲೂ ಸಹ ಎಲ್ಲ ನೆರವು ನೀಡಲು ಸಿದ್ಧವಿದ್ದು, ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಮಾತುಕತೆ ನಡೆಸಿದ್ದಾರೆ. ವುಹಾನ್‌ದಲ್ಲಿ ಉಳಿದಿರುವ 80 ಭಾರತೀಯರನ್ನು ಕರೆದುಕೊಂಡು ಹೋಗಲು ಹಾಗೂ ವೈದ್ಯಕೀಯ ಸಾಮಗ್ರಿಗಳನ್ನು ನೀಡಲು ಬರಲಿರುವ ವಿಮಾನಕ್ಕೆ ಸದ್ಯದಲ್ಲಿಯೇ ಅನುಮತಿ ದೊರೆಯಲಿದೆ’ ಎಂದು ಅವರು ಹೇಳಿದ್ದಾರೆ.

ಸೋಂಕಿಗೆ ವೈದ್ಯ ಬಲಿ

ಕೊರೊನಾ ವೈರಸ್‌ ಪೀಡಿತರಿಗೆ ಚಿಕಿತ್ಸೆ ನೀಡುವುದಕ್ಕಾಗಿ ತಮ್ಮ ಮದುವೆಯನ್ನೇ ಮುಂದೂಡಿದ್ದ ಯುವ ವೈದ್ಯರೊಬ್ಬರು ವೈರಸ್‌ ಸೋಂಕಿಗೆ ಬಲಿಯಾಗಿದ್ದಾರೆ. ವುಹಾನ್‌ ಆಸ್ಪತ್ರೆಯಲ್ಲಿ ಸೋಂಕು ಪೀಡಿತರಿಗೆ ಚಿಕಿತ್ಸೆ ಒದಗಿಸುತ್ತಿದ್ದ ಡಾ. ಪೆಂಗ್‌ ಯಿನ್ಹುವಾ ಮೃತಪಟ್ಟವರು. ಆರೋಗ್ಯ ಸೇವೆ ಒದಗಿಸುವವರೇ 9 ಮಂದಿ ಮೃತಪಟ್ಟಂತಾಗಿದೆ.

ಭಾರತೀಯರ ಆರೋಗ್ಯದಲ್ಲಿ ಸುಧಾರಣೆ

ಕೊರೊನಾ ವೈರಸ್ ಕಾರಣಕ್ಕಾಗಿ ಜಪಾನ್‌ ಕಡಲತಡಿಯಲ್ಲಿ ಪ್ರವೇಶ ನಿರ್ಬಂಧಕ್ಕೊಳಗಾಗಿದ್ದ ಐಷಾರಾಮಿ ಹಡಗು ‘ಡೈಮೆಂಡ್ ಪ್ರಿನ್ಸೆಸ್’ ದಡಕ್ಕೆ ತಲುಪಿದ್ದು, ಇದರಲ್ಲಿದ್ದ ಎಂಟು ಭಾರತೀಯರಿಗೆ ಸೋಂಕು ತಗುಲಿತ್ತು. ಇವರೆಲ್ಲರಿಗೂ ಚಿಕಿತ್ಸೆ ನೀಡಲಾಗಿದ್ದು, ಅವರ ಆರೋಗ್ಯದಲ್ಲಿ ಸುಧಾರಣೆ ಕಂಡು ಬರುತ್ತಿದೆ ಎಂದು ಭಾರತೀಯ ರಾಯಭಾರ ಕಚೇರಿ ತಿಳಿಸಿದೆ.

ಹಡಗಿನಲ್ಲಿ 138 ಭಾರತೀಯರಿದ್ದರು. ಇವರಲ್ಲಿ ಎಂಟು ಮಂದಿಯಲ್ಲಿ ಈ ಸೋಂಕು ಪತ್ತೆಯಾಗಿತ್ತು. ಹಡಗಿನಲ್ಲಿ ಒಟ್ಟು 634 ಮಂದಿಗೆ ಈ ಸೋಂಕು ತಗುಲಿದ್ದು ದೃಢಪಟ್ಟಿದೆ. 

ಜೈಲಿಗೂ ಹಬ್ಬಿದ ಸೋಂಕು

ಚೀನಾದ ಕಾರಾಗೃಹಗಳಲ್ಲಿ ಕೊರೊನಾ ವೈರಸ್‌ನ 400ಕ್ಕೂ ಹೆಚ್ಚು ಹೊಸ ಪ್ರಕರಣಗಳು ಪತ್ತೆಯಾಗಿವೆ ಎಂದು ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ. 

ಪೂರ್ವ ಶಾಂಡೊಂಗ್‌ ಪ್ರಾಂತ್ಯದ ರೆನ್‌ಚೆಂಗ್‌ ಜೈಲಿನಲ್ಲಿ ಏಳು ಗಾರ್ಡ್‌ಗಳು ಮತ್ತು 200 ಕೈದಿಗಳಲ್ಲಿ ಈ ಸೋಂಕು ತಗುಲಿರುವುದು ದೃಢಪಟ್ಟಿದೆ ಎಂದು ಪ್ರಾಂತೀಯ ಆರೋಗ್ಯ ಆಯೋಗ ತಿಳಿಸಿದೆ. ಜೈಲುಗಲ್ಲೂ ಈ ಸೋಂಕು ಹರಡುತ್ತಿರುವುದಕ್ಕೆ ಅಧಿಕಾರಿಗಳು ತೀವ್ರ ಆತಂಕ ವ್ಯಕ್ತಪಡಿಸಿದ್ದಾರೆ.

ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳುವಲ್ಲಿ ವಿಫಲರಾದ ಇಬ್ಬರು ಪ್ರಾಂತೀಯ ಜೈಲು ಆಡಳಿತ ಅಧಿಕಾರಿಗಳು ಮತ್ತು ಕಾರಾಗೃಹದ ಐವರು ಅಧಿಕಾರಿಗಳನ್ನು  ಶಾಂಡೊಂಗ್‌ನ ನ್ಯಾಯಾಂಗ ಇಲಾಖೆ ಮುಖ್ಯಸ್ಥ  ಕ್ಸಿ ವೀಜುನ್‌ ಅವರು ವಜಾ ಮಾಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

ಸೋಂಕು ಹರಡುವುದನ್ನು ತಡೆಗಟ್ಟುವಿಕೆ ಮತ್ತು ನಿಯಂತ್ರಣಕ್ಕೆ ಪರಿಣಾಮಕಾರಿಯಾಗಿ ಕ್ರಮಗಳನ್ನು ತೆಗೆದುಕೊಳ್ಳದಿರುವುದು ಇದಕ್ಕೆ ಕಾರಣ ಎಂದು ಜೈಲು ಆಡಳಿತದ ನಿರ್ದೇಶಕ ವು ಲೀ ಹೇಳಿದ್ದಾರೆ.

ಪೂರ್ವ ಜೆಜಿಯಾಂಗ್‌ ಪ್ರಾಂತ್ಯದ ಶಿಲಿಫೆಂಗ್‌ ಜೈಲಿನಲ್ಲಿ 34 ಪ್ರಕರಣಗಳು ಪತ್ತೆಯಾಗಿದ್ದು, ಇಲ್ಲಿನ ನಿರ್ದೇಶಕ ಹಾಗೂ ಒಬ್ಬ ಅಧಿಕಾರಿಯನ್ನು ವಜಾ ಮಾಡಲಾಗಿದೆ. ಹುಬೆ ಪ್ರಾಂತ್ಯದ ಜೈಲುಗಳಲ್ಲಿ 411 hos ಪ್ರಕರಣಗಳು ಪತ್ತೆಯಾಗಿದ್ದು, ಒಟ್ಟು 631 ಕೈದಿಗಳಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು