ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊರೊನಾ ಪರಿಹಾರ: ಚೀನಾಕ್ಕೇ ಶುಲ್ಕ ವಿಧಿಸಿದ ಜರ್ಮನಿಯ ಪತ್ರಿಕೆ!

Last Updated 21 ಏಪ್ರಿಲ್ 2020, 14:38 IST
ಅಕ್ಷರ ಗಾತ್ರ

ಬರ್ಲಿನ್: ಕೊರೊನ ವೈರಸ್‌ (ಕೋವಿಡ್–19) ಸೋಂಕಿನಿಂದ ವಿಶ್ವವೇ ತತ್ತರಿಸಿರುವ ಈ ಸಂದರ್ಭದಲ್ಲಿ ಚೀನಾ ವಿರುದ್ಧ ಜಗತ್ತಿನ ಹಲವು ರಾಷ್ಟ್ರಗಳು ಆಕ್ರೋಶ ವ್ಯಕ್ತಪಡಿಸಿವೆ. ಸೋಂಕಿನ ಬಗ್ಗೆ ವಿಶ್ವ ಸಮುದಾಯವನ್ನು ಎಚ್ಚರಿಸುವಲ್ಲಿ ಚೀನಾ ವಿಫಲವಾಗಿದೆ, ಸೋಂಕು ಇತರ ದೇಶಗಳಿಗೆ ಹರಡುವುದನ್ನು ತಡೆಯಲು ಕ್ರಮ ಕೈಗೊಂಡಿಲ್ಲ ಎಂಬ ಆರೋಪ ಆ ರಾಷ್ಟ್ರದ ಮೇಲಿದೆ.

ಇಂತಹ ಸನ್ನಿವೇಶದಲ್ಲಿ ಜರ್ಮನಿಯ ಅತಿ ದೊಡ್ಡ ಟ್ಯಾಬ್ಲಾಯ್ಡ್ ಪತ್ರಿಕೆ ‘ಬಿಲ್ಡ್’ ಚೀನಾಕ್ಕೆ ಬರೋಬ್ಬರಿ 130 ಶತಕೋಟಿ ಪೌಂಡ್ ಶುಲ್ಕ ವಿಧಿಸಿದೆ! ಯಾಕೆ ಗೊತ್ತೇ? ಕೊರೊನಾ ವೈರಸ್‌ ಕಾರಣಕ್ಕೆ. ಕೊರೊನಾ ವೈರಸ್‌ನಿಂದ ದೇಶಕ್ಕಾದ ನಷ್ಟವನ್ನು ಉಲ್ಲೇಖಿಸಿ ಈ ಶುಲ್ಕ ವಿಧಿಸಲಾಗಿದೆ ಎಂದು ಬರೆದುಕೊಂಡಿದೆ. ಇದು ಚೀನಾದ ಕೋಪಕ್ಕೆ ಕಾರಣವಾಗಿದೆ.

‘ಬಿಲ್ಡ್’ನ ಈ ವಾರದ ಆವೃತ್ತಿಯ ಒಪ್–ಎಡ್ ಪುಟದಲ್ಲಿ ಚೀನಾಕ್ಕೆ 149 ಶತಕೋಟಿ ಯುರೋ (130 ಶತಕೋಟಿ ಪೌಂಡ್) ಶುಲ್ಕ ವಿಧಿಸಿ ಬರಹ ಪ್ರಕಟಿಸಲಾಗಿದೆ. ‘ಚೀನಾ ನಮಗೆ ನೀಡಬೇಕಾಗಿರುವುದು’ (What China owes us) ಎಂಬ ಶೀರ್ಷಿಕೆಯಡಿ ಇದು ಪ್ರಕಟಗೊಂಡಿದೆ.

ಪ್ರವಾಸೋದ್ಯಮ ಆದಾಯಕ್ಕಾದ 27 ಶತಕೋಟಿ ಯುರೋ ನಷ್ಟ, ಸಿನಿಮಾ ಉದ್ಯಮಕ್ಕಾದ 7.2 ಶತಕೋಟಿ ಯುರೋ ನಷ್ಟ, ವಿಮಾನಯಾನ ಸಂಸ್ಥೆ ಲುಫ್ದಾನ್ಸಾಗಾದ ಲಕ್ಷಾಂತರ ಯುರೋ ನಷ್ಟ, ಸಣ್ಣ ಉದ್ದಿಮೆಗಳಿಗಾದ 50 ಶತಕೋಟಿ ಯುರೋ ನಷ್ಟವನ್ನು ಶುಲ್ಕದಲ್ಲಿ ಉಲ್ಲೇಖಿಸಲಾಗಿದೆ. ಜರ್ಮನಿಯ ಜಿಡಿಪಿ ಶೇ 4.2ಕ್ಕೆ ಕುಸಿದರೆ ಇದು ಪ್ರತಿ ವ್ಯಕ್ತಿಗೆ 1,784 ಯುರೋ ಆಗಲಿದೆ ಎಂದು ‘ಬಿಲ್ಡ್’ ಲೆಕ್ಕಹಾಕಿದೆ.

ಇದಕ್ಕೆ ಚೀನಾ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದೆ. ಈ ಶುಲ್ಕವು ತೀವ್ರವಾದಿ ರಾಷ್ಟ್ರೀಯತೆ ಮತ್ತು ಅನ್ಯ ದೇಶದ ಬಗ್ಗೆ ಪೂರ್ವಾಗ್ರಹ ಸೃಷ್ಟಿಸಲಿದೆ ಎಂದಿದೆ.

ವೈರಸ್‌ನ ಉಗಮಕ್ಕೆ ಸಂಬಂಧಿಸಿ ಚೀನಾ ಹೆಚ್ಚು ಪಾರದರ್ಶಕತೆ ಪ್ರದರ್ಶಿಸಬೇಕು ಎಂದು ಜರ್ಮನಿಯ ಚಾನ್ಸಲರ್‌ ಏಂಜೆಲಾ ಮರ್ಕೆಲ್‌ ಇತ್ತೀಚೆಗೆ ಹೇಳಿದ್ದರು.

ಅಮೆರಿಕವೂ ಚೀನಾದ ಬಗ್ಗೆ ಈಗಾಗಲೇ ಆಕ್ರೋಶ ವ್ಯಕ್ತಪಡಿಸಿದೆ. ಕೊರೊನಾ ವೈರಸ್‌ ಇತರ ದೇಶಗಳಿಗೆ ಹಬ್ಬುವಲ್ಲಿ ಚೀನಾದ ಪಾತ್ರ ಇದೆ ಎಂದಾದಲ್ಲಿ ಆ ದೇಶವು ತಕ್ಕ ಪರಿಣಾಮ ಎದುರಿಸಬೇಕಾದೀತು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎರಡು ದಿನ ಹಿಂದಷ್ಟೇ ಎಚ್ಚರಿಕೆ ನೀಡಿದ್ದರು. ಫ್ರಾನ್ಸ್, ಬ್ರಿಟನ್ ಸಹ ಚೀನಾ ವಿರುದ್ಧ ಕೆಂಡಕಾರಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT