ಬುಧವಾರ, ಜೂನ್ 3, 2020
27 °C

ಕೋವಿಡ್-19ರ ಪರಿಣಾಮ ಕಡಿಮೆಯಾದಂತೆ ಬಾವಲಿ ಮಾರಾಟ ಆರಂಭಿಸಿದ ಚೀನಾ

ಏಜೆನ್ಸಿಸ್ Updated:

ಅಕ್ಷರ ಗಾತ್ರ : | |

ವಾಷಿಂಗ್‌ಟನ್: ಕೋವಿಡ್-19ರ ಪ್ರಭಾವ ಕಡಿಮೆಯಾದ ಹಿನ್ನೆಲೆಯಲ್ಲಿ ಚೀನಾ 'ವೆಟ್ ಮಾರ್ಕೆಟ್'ಗೆ (ಪ್ರಾಣಿಗಳ ಮಾರುಕಟ್ಟೆ) ಮತ್ತೆ ಚಾಲನೆ ನೀಡಿದೆ.

ಕೋವಿಡ್-19 ಕಾಯಿಲೆ ತರುವ ಕೊರೊನಾ ವೈರಸ್‌ ಚೀನಾದ ಇಂಥ ಪ್ರಾಣಿ ಮಾರುಕಟ್ಟೆಯೊಂದರಲ್ಲಿ ಮಾರಾಟವಾದ ಬಾವಲಿಯಿಂದಲೇ ಮನುಷ್ಯರಿಗೆ ಹರಡಿತು ಎಂದು ವಿಜ್ಞಾನಿಗಳು ನಂಬಿದ್ದಾರೆ. ಹೀಗಾಗಿಯೇ ಮತ್ತೆ ಪ್ರಾಣಿ ಮಾರುಕಟ್ಟೆ ತೆರೆಯುವ ಚೀನಾ ಸರ್ಕಾರದ ನಿರ್ಧಾರ ಹಲವು ವಿಜ್ಞಾನಿಗಳಲ್ಲಿ ಆತಂಕ ಮೂಡಿಸಿದೆ.

ಹುಬೇ ಪ್ರಾಂತ್ಯದ 55 ವರ್ಷದ ಪುರುಷನೇ ಜಗತ್ತಿನ ಮೊದಲ ಕೋವಿಡ್-19 ರೋಗಿ ಎಂದು ಹಲವು ವರದಿಗಳು ಉಲ್ಲೇಖಿಸಿವೆ. ಇಂಥದ್ದೊಂದು ಪ್ರಾಣಿ ಮಾರುಕಟ್ಟೆಯಿಂದಲೇ ಅವನಿಗೆ ಕೊರೊನಾ ವೈರಸ್ ಸೋಂಕು ತಗುಲಿತು ಎಂದು ಹೇಳಲಾಗಿದೆ.

ಕೊರೊನಾ ವೈರಸ್‌ ಪಿಡುಗು ಹರಡುವ ಮೊದಲು ಇದ್ದ ಮಾದರಿಯಲ್ಲೇ ಈಗಲೂ ಅಲ್ಲಿನ ಪ್ರಾಣಿ ಮಾರುಕಟ್ಟೆಗಳು ಕಾರ್ಯನಿರ್ವಹಿಸುತ್ತಿವೆ ಎಂದು ವಾಷಿಂಗ್‌ಟನ್‌ ಪೋಸ್ಟ್‌ ಹೇಳಿದೆ.

ಪ್ರಸ್ತುತ ಅಲ್ಲಿನ ಪ್ರಾಣಿ ಮಾರುಕಟ್ಟೆಗಳು ಕಾವಲುಗಾರರ ಕಟ್ಟುನಿಟ್ಟಿನ ನಿಗಾವಣೆಯಲ್ಲಿವೆ. ಅಲ್ಲಿನ ರಕ್ತ ತೋಯ್ದ ನೆಲ, ನಾಯಿ ಮತ್ತು ಮೊಲಗಳ ನಿರಂತರ ಹತ್ಯೆ, ಪಂಜರದೊಳಗೆ ಹೆದರಿ ಕುಳಿತ ಪ್ರಾಣಿಗಳ ಚಿತ್ರ ತೆಗೆದುಕೊಳ್ಳಲು ಯಾರಿಗೂ ಅವಕಾಶ ಸಿಗುತ್ತಿಲ್ಲ.

ವುಹಾನ್ ನಗರದಲ್ಲಿರುವ ಹುನಾನ್ ಸಮುದ್ರ ಖಾದ್ಯಗಳ ಮಾರುಕಟ್ಟೆಯೇ ಕೊರೊನಾ ವೈರಸ್‌ನ ಕೇಂದ್ರ ಸ್ಥಾನ ಎಂದು ಹೇಳಲಾಗಿದೆ. ಕೋವಿಡ್-19 ಪಿಡುಗು ವಿಶ್ವದ 179 ದೇಶಗಳಿಗೆ ವ್ಯಾಪಿಸಿದೆ. ಈವರೆಗೆ ವಿಶ್ವದ ವಿವಿಧೆಡೆ 39,545 ಮಂದಿ ಮೃತಪಟ್ಟಿದ್ದಾರೆ. 8,09,608 ಮಂದಿಗೆ ಸೋಂಕು ತಗುಲಿದೆ.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು