ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Covid 19 World Update: ಏರುತ್ತಲೇ ಇದೆ ಸೋಂಕಿತರ ಸಂಖ್ಯೆ

Last Updated 2 ಜೂನ್ 2020, 17:02 IST
ಅಕ್ಷರ ಗಾತ್ರ
ADVERTISEMENT
""

ಲ್ಯಾಟಿನ್ ಅಮೆರಿಕ ದೇಶಗಳಾದ ಬ್ರೆಜಿಲ್, ಪೆರು, ಚಿಲಿ, ಮೆಕ್ಸಿಕೊ ಮತ್ತು ಈಕ್ವೆಡಾರ್‌ಗಳಲ್ಲಿ ಕೊರೊನಾ ವೈರಸ್ ಹಾವಳಿ ತೀವ್ರಗತಿಯಲ್ಲಿ ಹೆಚ್ಚಾಗುತ್ತಿದೆ. 'ಕೋವಿಡ್ ಪಿಡುಗಿನ ಹೊಸ ಕೇಂದ್ರ ಸ್ಥಾನವಾಗಲಿದೆ ಲ್ಯಾಟಿನ್ ಅಮೆರಿಕ' ಎಂದು ವಿಶ್ವ ಆರೋಗ್ಯ ಸಂಸ್ಥೆ ಈ ಬೆಳವಣಿಗೆಯನ್ನು ವ್ಯಾಖ್ಯಾನಿಸಿದೆ.

ಕೊರೊನಾ ವೈರಸ್ ಹಾವಳಿಯನ್ನು 'ಸಾಮಾನ್ಯ ನೆಗಡಿ' ಎಂದು ವ್ಯಾಖ್ಯಾನಿಸಿರುವ ಬ್ರೆಜಿಲ್ ಅಧ್ಯಕ್ಷ ಜೈರ್ ಬೊಲ್ನೊನಾರೊ ಕುದುರೆ ಸವಾರಿ ಮಾಡಿ, ಜನರೊಂದಿಗೆ ಬೆರೆತು ಅಂತರ ಕಾಯ್ದುಕೊಳ್ಳುವ ನಿಯಮವನ್ನು ಸ್ವತಃ ಉಲ್ಲಂಘಿಸಿದ್ದರು. ಬ್ರೆಜಿಲ್‌ನಲ್ಲಿ ಈವರೆಗೆ 5 ಲಕ್ಷಕ್ಕೂ ಹೆಚ್ಚು ಮಂದಿಗೆ ಸೋಂಕು ತಗುಲಿದೆ. 30 ಸಾವಿರಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ. ಆಗಸ್ಟ್‌ ತಿಂಗಳು ಮುಗಿಯುವ ಹೊತ್ತಿಗೆ ಬ್ರೆಜಿಲ್‌ನಲ್ಲಿ ಸಾವಿನ ಸಂಖ್ಯೆ 1.25 ಲಕ್ಷ ದಾಟಬಹುದು ಎಂದು ವಾಷಿಂಗ್‌ಟನ್ ವಿವಿ ತಜ್ಞರು ಅಂದಾಜಿಸಿದ್ದಾರೆ.

ರಷ್ಯಾದಲ್ಲಿಯೂ ಈಚಿನ ದಿನಗಳಲ್ಲಿ ಸೋಂಕಿನ ಹಾವಳಿ ತೀವ್ರವಾಗಿದೆ. ಈವರೆಗೆ 4.23 ಲಕ್ಷ ಮಂದಿಗೆ ಸೋಂಕು ತಗುಲಿದ್ದು, 5037 ಮಂದಿ ಮೃತಪಟ್ಟಿದ್ದಾರೆ.

ಆಫ್ರಿಕಾ ಖಂಡದಲ್ಲಿ ದಕ್ಷಿಣ ಆಫ್ರಿಕಾ, ಈಜಿಪ್ಟ್ ಮತ್ತು ನೈಜಿರಿಯಾ ದೇಶಗಳಲ್ಲಿ ಕೊರೊನಾ ಹಾವಳಿ ಹೆಚ್ಚಾಗಿದೆ. ದಕ್ಷಿಣ ಆಫ್ರಿಕಾದಲ್ಲಿ 35,812 ಮಂದಿಗೆ ಸೋಂಕು ತಗುಲಿದ್ದರೆ 705 ಮಂದಿ ಮೃತಪಟ್ಟಿದ್ದಾರೆ. ಈಜಿಪ್ಟ್‌ನಲ್ಲಿ 26,384 ಸೋಂಕಿತರಿದ್ದರೆ, 1,005 ಮಂದಿ ಸತ್ತಿದ್ದಾರೆ. ನೈಜಿರಿಯಾದಲ್ಲಿ 10,578 ಮಂದಿಗೆ ಸೋಂಕು ತಗುಲಿದೆ. 299 ಮಂದಿ ಮೃತಪಟ್ಟಿದ್ದಾರೆ.

ತಪಾಸಣೆ ಮತ್ತು ಚಿಕಿತ್ಸಾ ಕ್ರಮಗಳನ್ನು ವ್ಯಾಪಕವಾಗಿ ಹೆಚ್ಚಿಸುವ ಮೂಲಕ ಪಿಡುಗು ನಿಯಂತ್ರಿಸಿದ್ದ ದಕ್ಷಿಣ ಕೊರಿಯಾದಲ್ಲಿ ಮತ್ತೆ ಸೋಂಕಿತರು ಪತ್ತೆಯಾದ ಹಿನ್ನೆಲೆಯಲ್ಲಿ ನಿರ್ಬಂಧಗಳನ್ನು ಮತ್ತೆ ವಿಧಿಸಲಾಗಿದೆ.

ಬ್ರಿಟನ್, ಇಟಲಿ, ಸ್ಪೇನ್ ಮತ್ತು ಫ್ರಾನ್ಸ್‌ಗಳಲ್ಲಿ ಸೋಂಕು ಇಳಿಮುಖವಾಗಿದೆ. ಯೂರೋಪಿನ ಹಲವು ದೇಶಗಳು ನಿರ್ಬಂಧ ಸಡಿಲಿಸುತ್ತಿವೆ.

ಸೋಂಕಿನಿಂದಾಗಿ ಈವರೆಗೆ ಬ್ರಿಟನ್‌ನಲ್ಲಿ 39,000 ಮಂದಿ ಮೃತಪಟ್ಟಿದ್ದಾರೆ. ಇಟಲಿಯಲ್ಲಿ 33,000 ಸಾವುಗಳು ವರದಿಯಾಗಿವೆ. ಫ್ರಾನ್ಸ್ ಮತ್ತು ಸ್ಪೇನ್‌ನಲ್ಲಿ ಸಾವಿನ ಸಂಖ್ಯೆ 30,000 ದಾಟಿಲ್ಲ.

18 ಲಕ್ಷ ಸೋಂಕಿತರು ಪತ್ತೆಯಾಗುವುದರೊಂದಿಗೆ ವಿಶ್ವದಲ್ಲಿ ಅತಿಹೆಚ್ಚು ಬಾಧಿತ ದೇಶ ಎಂಬ ಹಣೆಪಟ್ಟಿಕೊಂಡಿರುವ ಅಮೆರಿಕದಲ್ಲಿ ಸೋಂಕಿನಿಂದ ಈವರೆಗೆ 1.05 ಲಕ್ಷ ಮಂದಿ ಮೃತಪಟ್ಟಿದ್ದಾರೆ. ಅಮೆರಿಕದಲ್ಲಿ ಅತ್ಯಂತ ಕೆಟ್ಟ ಪರಿಸ್ಥಿತಿ ಎದುರಿಸುತ್ತಿರುವ ನ್ಯೂಯಾರ್ಕ್ ರಾಜ್ಯ ಒಂದರಲ್ಲೇ 30,000 ಸಾವುಗಳು ವರದಿಯಾಗಿವೆ. ಆದರೆ ಒಟ್ಟಾರೆ ಸಾವಿನ ಪ್ರಮಾಣ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿದೆ. ಪೊಲೀಸ್ ದೌರ್ಜನ್ಯ ಮತ್ತು ಅದರ ವಿರುದ್ಧ ನಡೆಯುತ್ತಿರುವ ಪ್ರತಿಭಟನೆಗಳನ್ನು ನಿಭಾಯಿಸುವುದು ಅಮೆರಿಕ ಆಡಳಿತ ಪಾಲಿಗೆ ಹೊಸ ತಲೆನೋವಾಗಿವೆ.

ಕೊರೊನಾ ವೈರಸ್ ಕಾಣಿಸಿಕೊಂಡ ನಂತರ ಅಮೆರಿಕದಲ್ಲಿ 4 ಕೋಟಿ ಮಂದಿ ನಿರುದ್ಯೋಗಿಗಳಾಗಿದ್ದಾರೆ. 1930ರ ಮಹಾ ಆರ್ಥಿಕ ಕುಸಿತದ ನಂತರದ ಭೀಕರ ಆರ್ಥಿಕ ಸಂಕಷ್ಟ ಇದು ಎಂದೇ ವ್ಯಾಖ್ಯಾನಿಸಲಾಗುತ್ತಿದೆ.

ಪಾಕಿಸ್ತಾನದಲ್ಲಿ ಸೋಂಕಿತರ ಸಂಖ್ಯೆ 76,398ಕ್ಕೆ ಏರಿಕೆಯಾಗಿದೆ. ಈವರೆಗೆ ಸೋಂಕಿನಿಂದ 1,621 ಮಂದಿ ಮೃತಪಟ್ಟಿದ್ದಾರೆ.

ಕೋವಿಡ್-19 ಸೋಂಕಿತರು ಮತ್ತು ಮೃತರ ಮಾಹಿತಿ. (www.worldometers.info/coronavirus)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT