ವಲಸಿಗರ ಪ್ರವೇಶಕ್ಕೆ ನಿರ್ಬಂಧ; ಅಮೆರಿಕ ನಾಗರಿಕರ ಉದ್ಯೋಗ ಕಾಪಾಡಲು ಟ್ರಂಪ್ ಕ್ರಮ

ನವದೆಹಲಿ: ಕೊರೊನಾ ವೈರಸ್ ಸೋಂಕಿನಿಂದ ಉಂಟಾಗಿರುವ ಬಿಕ್ಕಟ್ಟಿನಿಂದಾಗಿ ಅಮೆರಿಕದ ನಾಗರಿಕರ ಉದ್ಯೋಗ ರಕ್ಷಣೆಗಾಗಿ ವಲಸಿಗರ ಪ್ರವೇಶಕ್ಕೆ ಡೊನಾಲ್ಡ್ ಟ್ರಂಪ್ ನಿರ್ಬಂಧ ಹೇರಲು ನಿರ್ಧರಿಸಿದ್ದಾರೆ.
'ಅದೃಶ್ಯ ಶತ್ರುವಿನಿಂದ ದಾಳಿ ಎದುರಿಸುತ್ತಿರುವ ಸಮಯದಲ್ಲಿ ನಮ್ಮ ಗ್ರೇಟ್ ಅಮೆರಿಕದ ಪ್ರಜೆಗಳ ಉದ್ಯೋಗ ಕಾಪಾಡುವುದು ಅವಶ್ಯವಾಗಿದೆ. ಅಮೆರಿಕಕ್ಕೆ ವಲಸಿಗರ ಪ್ರವೇಶವನ್ನು ತಾತ್ಕಾಲಿಕವಾಗಿ ನಿಷೇಧಿಸುವ ಕಾರ್ಯಕಾರಿ ಆದೇಶಕ್ಕೆ ಸಹಿ ಮಾಡಲಿದ್ದೇನೆ' ಎಂದು ಮಂಗಳವಾರ ಬೆಳಿಗ್ಗೆ ಟ್ವೀಟಿಸಿದ್ದಾರೆ.
ಕಳೆದ ತಿಂಗಳಿನಿಂದ 2.2 ಕೋಟಿ ಅಮೆರಿಕನ್ನರು ನಿರುದ್ಯೋಗ ಸೌಲಭ್ಯಗಳನ್ನು ಬಯಸಿದ್ದಾರೆ, ಇನ್ನೂ 10 ಲಕ್ಷ ಜನರು ಏಪ್ರಿಲ್‌ನಲ್ಲಿ ಮನವಿ ಸಲ್ಲಿಸಲು ಅಣಿಯಾಗಿದ್ದಾರೆ. ಮಹಾ ಆರ್ಥಿಕ ಹಿಂಜರಿತದ ನಂತರದಲ್ಲಿ ಸೃಷ್ಟಿಯಾಗಿದ್ದ ಉದ್ಯೋಗಗಳೆಲ್ಲ ಕೊಚ್ಚಿ ಹೋದಂತಹ ಸ್ಥಿತಿ ನಿರ್ಮಾಣವಾಗಿದೆ. ಕೊರೊನಾ ವೈರಸ್ ಬಿಕ್ಕಟಿನ ನಡುವೆ ಆರ್ಥಿಕತೆಗೆ ಪುಷ್ಠಿ ನೀಡಲು ಹಲವು ಕ್ರಮಗಳಿಗೆ ಅಮೆರಿಕ ಮುಂದಾಗಿದೆ.
In light of the attack from the Invisible Enemy, as well as the need to protect the jobs of our GREAT American Citizens, I will be signing an Executive Order to temporarily suspend immigration into the United States!
— Donald J. Trump (@realDonaldTrump) April 21, 2020
1946ರ ನಂತರದಲ್ಲಿ ಇದೇ ಮೊದಲ ಬಾರಿಗೆ ಕಾರ್ಖಾನೆಗಳ ತಯಾರಿಕೆಯಲ್ಲಿ ಅತಿ ದೊಡ್ಡ ಕುಸಿತ ದಾಖಲಾಗಿದೆ ಹಾಗೂ ಮಾರ್ಚ್‌ನಲ್ಲಿ ರಿಟೇಲ್ ಮಾರಾಟಗಳ ಪ್ರಮಾಣ ತೀವ್ರ ಇಳಿಕೆಯಾಗಿದೆ. ಎರಡನೇ ಮಹಾಯುದ್ಧದ ನಂತರದಲ್ಲಿ ತ್ರೈಮಾಸಿಕದ ಆರ್ಥಿಕ ಸ್ಥಿತಿಯು ಪ್ರಸ್ತುತ ತೀಕ್ಷ್ಣ ಇಳಿಕೆಯತ್ತ ಮುಖ ಮಾಡಿರುವುದಾಗಿ ಆರ್ಥಿಕ ತಜ್ಞರು ವಿಶ್ಲೇಷಿಸಿದ್ದಾರೆ.
ಕೊರೊನಾ ವೈರಸ್ ಸೋಂಕು ನಿಯಂತ್ರಣಕ್ಕೆ 'ಮನೆಯಲ್ಲಿಯೇ ಉಳಿಯಿರಿ' ಎಂದು ಅಮೆರಿಕ ನೀಡಿರುವ ಸೂಚನೆಯಿಂದಾಗಿ ಆರ್ಥಿಕ ಚಟುವಟಿಕೆಗಳು ತಟಸ್ಥಗೊಂಡಿವೆ. ಜಗತ್ತಿನಲ್ಲಿ ಅತಿ ಹೆಚ್ಚು ಕೋವಿಡ್–19 ಪ್ರಕರಣಗಳನ್ನು ಹೊಂದಿರುವ ಅಮೆರಿಕದಲ್ಲಿ ಸೋಂಕಿನಿಂದ 42,000ಕ್ಕೂ ಹೆಚ್ಚು ಜನರು ಸಾವಿಗೀಡಿದ್ದಾರೆ. ಪ್ರಕರಣಗಳ ಸಂಖ್ಯೆ 7.84 ಲಕ್ಷ ದಾಟಿದೆ.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.