‘ಸುರಕ್ಷಿತ ಸ್ವರ್ಗ’ದಿಂದ ಅಕ್ರಮ ಚಟುವಟಿಕೆ

ಶುಕ್ರವಾರ, ಜೂಲೈ 19, 2019
24 °C
ಡಿ–ಕಂಪನಿ ಮೇಲೆ ನಿಗಾ ಇಡಿ– ವಿಶ್ವಸಂಸ್ಥೆ ಭದ್ರತಾ ಮಂಡಳಿಗೆ ಭಾರತ ಸಲಹೆ

‘ಸುರಕ್ಷಿತ ಸ್ವರ್ಗ’ದಿಂದ ಅಕ್ರಮ ಚಟುವಟಿಕೆ

Published:
Updated:
Prajavani

ವಿಶ್ವಸಂಸ್ಥೆ: ಪಾಕಿಸ್ತಾನದಲ್ಲಿ ನೆಲೆಸಿರುವ ಭೂಗತಲೋಕದ ಡಾನ್‌ ದಾವೂದ್‌ ಇಬ್ರಾಹಿಂ ನೇತೃತ್ವದ ಡಿ–ಕಂಪನಿ ಭಯೋತ್ಪಾದನಾ ಜಾಲವಾಗಿ ಮಾರ್ಪಾಡಾಗಿದೆ. ಜೆಇಎಂ, ಎಲ್‌ಇಟಿ ಜತೆಗೆ ಡಿ–ಕಂಪನಿ ಜಾಲದ ಮೇಲೂ ನಿಗಾ ಇರಿಸುವಂತೆ ವಿಶ್ವಸಂಸ್ಥೆ ಭದ್ರತಾ ಮಂಡಳಿಗೆ ಭಾರತ ಆಗ್ರಹಿಸಿದೆ. 

‘ಸುರಕ್ಷಿತ ಸ್ವರ್ಗ’ದಿಂದ ಅಕ್ರಮ ಚಟುವಟಿಕೆ ನಡೆಸುತ್ತಿರುವ ದಾವೂದ್ ಅಪಾಯಕಾರಿ. ಹಣ ಸಂಗ್ರಹಿಸಲು ನೈಸರ್ಗಿಕ ಸಂಪನ್ಮೂಲ ವಹಿವಾಟು ಹಾಗೂ ಮಾನವ ಕಳ್ಳಸಾಗಣೆ ಮುಂತಾದ ಅಪರಾಧ ಚಟುವಟಿಕೆಗಳಲ್ಲೂ ಭಯೋತ್ಪಾದನಾ ಸಂಘಟನೆಗಳು ಸೇರಿಕೊಳ್ಳುತ್ತಿವೆ’ ಎಂದು ವಿಶ್ವಸಂಸ್ಥೆ ರಾಯಭಾರಿಗೆ ಭಾರತದ ಶಾಶ್ವತ ಪ್ರತಿನಿಧಿಯಾಗಿರುವ ಸೈಯದ್ ಅಕ್ಬರುದ್ದೀನ್‌ ಮಂಗಳವಾರ ತಿಳಿಸಿದ್ದಾರೆ.

ಈ ಮೂಲಕ ಭಯೋತ್ಪಾದಕರಿಗೆ ಪಾಕಿಸ್ತಾನ ನೆಲೆ ನೀಡುತ್ತಿದೆ ಎಂದು ಸೈಯದ್‌ ವಾಗ್ದಾಳಿ ನಡೆಸಿದ್ದಾರೆ.

‘ಶಾಂತಿ ಮತ್ತು ಭದ್ರತೆಗಿರುವ ಅಪಾಯ: ಅಂತರರಾಷ್ಟ್ರೀಯ ಭಯೋತ್ಪಾದನೆ ಮತ್ತು ಸಂಘಟಿತ ಅಪರಾಧ’ ವಿಷಯದ ಕುರಿತು ನಡೆದ ಚರ್ಚಾ ಕಾರ್ಯಕ್ರಮದಲ್ಲಿ ಮಾತನಾಡಿದ ಸೈಯದ್‌, ‘ಅಪರಾಧಿ ಸಂಘಟನೆಗಳು ಭಯೋತ್ಪಾದನಾ ಸಂಘಟನೆಗಳ ಜತೆ ಕೈಜೋಡಿಸುತ್ತಿದ್ದು, ಅಕ್ರಮ ಶಸ್ತ್ರಾಸ್ತ್ರ, ಡ್ರಗ್‌ ಕಳ್ಳಸಾಗಣೆ, ಅಕ್ರಮ ಹಣ ವರ್ಗಾವಣೆ, ಗಡಿ ಭಾಗದಲ್ಲಿ ಭಯೋತ್ಪಾದಕ
ರಿಗೆ ಸಹಾಯ ಮಾಡುತ್ತಿವೆ.

ನಮ್ಮದೇ ಪ್ರದೇಶದಲ್ಲಿ ದಾವೂದ್ ಇಬ್ರಾಹಿಂನ ಅಪರಾಧಿ ಸಂಘಟನೆ ಡಿ–ಕಂಪನಿ ಎಂಬ ಭಯೋತ್ಪಾದನಾ ಜಾಲವಾಗಿ ಪರಿವರ್ತನೆಯಾಗಿರುವುದನ್ನು ನಾವು ನೋಡಿದ್ದೇವೆ. ಡಿ ಕಂಪನಿಯ ಆರ್ಥಿಕ ಚಟುವಟಿಕೆ ಹೊರ ದೇಶಗಳಿಗೆ ತಿಳಿದಿರಲು ಸಾಧ್ಯವಿಲ್ಲ. ಆದರೆ ‘ಸುರಕ್ಷಿತ ಸ್ವರ್ಗ’ದಲ್ಲಿದ್ದುಕೊಂಡು ಚಿನ್ನ ಕಳ್ಳಸಾಗಣೆ, ನಕಲಿ ನೋಟು ದಂಧೆ ಮುಂತಾದ ಅಕ್ರಮ ಚಟುವಟಿಕೆಗಳು ಪ್ರಸ್ತುತ ನಮ್ಮೆದುರಿಗಿರುವ ಅಪಾಯ’ಎಂದಿದ್ದಾರೆ. 

‘ಐಸಿಸ್ ವಿರುದ್ಧ ಮಂಡಳಿ ನಿಗಾ ಇರಿಸಿತ್ತು. ಇದರ ಪರಿಣಾಮವನ್ನು ನಾವೆಲ್ಲರೂ ಗಮನಿಸಿದ್ದೇವೆ. ಇದೇ ರೀತಿಯ ಡಿ–ಕಂಪನಿ, ಜೈಶ್‌ ಎ ಮಹಮ್ಮದ್‌, ಲಷ್ಕರ್‌ ಇ ತೈಬಾ ಸಂಘಟನೆಗಳ ಮೇಲೂ ನಿಗಾ ಇರಿಸಬೇಕಾದ ಅವಶ್ಯಕತೆ ಇದೆ’ ಎಂದರು.

ಪಾಕಿಸ್ತಾನದಿಂದ ನಿರಾಕರಣೆ: ಡಿ–ಕಂಪನಿ ಸದಸ್ಯ ಜಬೀರ್‌ ಮೋತಿಯ ವಿಚಾರಣೆ ಲಂಡನ್‌ನ ವೆಸ್ಟ್‌ಮಿನಿಸ್ಟರ್‌ ನ್ಯಾಯಾಲಯದಲ್ಲಿ ನಡೆಯುತ್ತಿದೆ. ಈ ಸಂದರ್ಭದಲ್ಲಿ ‘ 200ಕ್ಕೂ ಅಧಿಕ ಜನರ ಬಲಿ ಪಡೆದಿದ್ದ 1993ರ ಮುಂಬೈ ಬಾಂಬ್‌ ಸ್ಫೋಟ ಪ್ರಕರಣದ ನಂತರ ದಾವೂದ್‌ ಹಾಗೂ ಆತನ ಅಣ್ಣ ಅನಿಸ್‌ ಇಬ್ರಾಹಿಂ ಭಾರತದಿಂದ ಪರಾರಿಯಾಗಿದ್ದು, ದಾವೂದ್ ಪಾಕಿಸ್ತಾನದಲ್ಲಿರುವ ಮಾಹಿತಿಯಿದೆ’ ಎಂದು ‌ನ್ಯಾಯಾಲಯಕ್ಕೆ ತಿಳಿಸಲಾಗಿತ್ತು. ಇದನ್ನು ನಿರಾಕರಿಸಿದ್ದ ಪಾಕಿಸ್ತಾನದ ವಿದೇಶಾಂಗ ಇಲಾಖೆ ದಾವೂದ್ ಪಾಕಿಸ್ತಾನದಲ್ಲಿಲ್ಲ ಎಂದು ತಿಳಿಸಿತ್ತು.

**

ದಾವೂದ್‌ ನಮ್ಮ ದೇಶದಲ್ಲಿಲ್ಲ ಎನ್ನುವ ಪಾಕಿಸ್ತಾನದ ಹೇಳಿಕೆ, ಇಬ್ಬಂದಿ ನಿಲುವನ್ನು ತೋರಿಸುತ್ತದೆ.
-ರವೀಶ್‌ ಕುಮಾರ್‌, ವಿದೇಶಾಂಗ ವ್ಯವಹಾರಗಳ ಇಲಾಖೆ ವಕ್ತಾರ

 

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !