ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾಕ್‌: ರೈಲಿನಲ್ಲಿ ಸ್ಫೋಟ, 74 ಸಾವು

ಮೂರು ಬೋಗಿಗಳಲ್ಲಿ ವ್ಯಾಪಿಸಿದ ಬೆಂಕಿ, ಭಯದಿಂದ ಹೊರಜಿಗಿದ ಪ್ರಯಾಣಿಕರು
Last Updated 31 ಅಕ್ಟೋಬರ್ 2019, 19:02 IST
ಅಕ್ಷರ ಗಾತ್ರ

ಲಾಹೋರ್‌ : ಕರಾಚಿಯಿಂದ ರಾವಲ್ಪಿಂಡಿ ಕಡೆಗೆ ಚಲಿಸುತ್ತಿದ್ದ ತೇಜ್‌ಗಮ್‌ ಎಕ್ಸ್‌ಪ್ರೆಸ್‌ ರೈಲಿನಲ್ಲಿ ಕೆಲ ಪ್ರಯಾಣಿಕರು ಉಪಾಹಾರ ತಯಾರಿಸುತ್ತಿದ್ದ ವೇಳೆ ಸ್ಟೌ ಮತ್ತು ಸಿಲಿಂಡರ್‌ ಸ್ಫೋಟಗೊಂಡ ಪರಿಣಾಮ ಕನಿಷ್ಠ 74 ಮಂದಿ ಮೃತಪಟ್ಟಿದ್ದಾರೆ. 40 ಮಂದಿಗೆ ತೀವ್ರ ಸುಟ್ಟ ಗಾಯಗಳಾಗಿದ್ದು ಮೃತರ ಸಂಖ್ಯೆ ಏರಿಕೆಯಾಗುವ ಸಾಧ್ಯತೆ ಇದೆ.

ಮೃತರ ಪೈಕಿ ಹೆಚ್ಚಿನವರು ರಾಯ್‌ವಿಂಡ್‌ನಲ್ಲಿ ನಡೆಯುವ ವಾರ್ಷಿಕ ಧಾರ್ಮಿಕ ಸಮ್ಮೇಳನದಲ್ಲಿ ಭಾಗವಹಿಸಲು ತೆರಳುತ್ತಿದ್ದ ಇಸ್ಲಾಂನ ತಬ್ಲೀಕ್‌ ಜಮಾತ್‌ಗೆ ಸೇರಿದ ಧರ್ಮಗುರುಗಳು ಎಂದು ಪಾಕಿಸ್ತಾನದ ರೈಲ್ವೆ ಸಚಿವ ಶೇಕ್‌ ರಶೀದ್‌ ಅಹಮದ್‌ ಹೇಳಿದ್ದಾರೆ.

ನಿಯಮಬಾಹಿರವಾಗಿ ಸಿಲಿಂಡರ್‌ ಬಳಸಿ ಅಡುಗೆ ಮಾಡುತ್ತಿದ್ದಾಗ ಸ್ಟೌ ಮತ್ತುಸಿಲಿಂಡರ್‌ ಸ್ಫೋಟಗೊಂಡಿದ್ದಾಗಿ ಅಧಿಕಾರಿಗಳು ಹೇಳಿದ್ದಾರೆ. ಆದರೆ ತಬ್ಲೀಕ್‌ ಜಮಾತ್‌ ಸದಸ್ಯರು ಈ ಹೇಳಿಕೆಯನ್ನು ತಿರಸ್ಕರಿಸಿದ್ದು ಶಾರ್ಟ್‌ ಸರ್ಕ್ಯೂಟ್‌ನಿಂದ ಬೆಂಕಿ ಕಾಣಿಸಿಕೊಂಡಿತು ಎಂದು ಹೇಳಿದ್ದಾರೆ.

ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಸುಮಾರು 200 ಪ್ರಯಾಣಿಕರು ಇದ್ದ ಮೂರು ಬೋಗಿಗಳಿಗೆ ಹಾನಿಯಾಗಿದೆ. ವೇಗವಾಗಿ ಚಲಿಸುತ್ತಿದ್ದ ರೈಲ್ವೆ ಬೋಗಿಯಲ್ಲಿ ಸೀಮೆ ಎಣ್ಣೆಯೂ ಇದ್ದುದರಿಂದ ಬೆಂಕಿ ಬೇಗನೇ ಹರಡಿತು. ಗ್ಯಾಸ್‌ ಸ್ಟೌ ಬಳಸಿ ಅಡುಗೆ ಮಾಡದಂತೆ ರೈಲ್ವೆ ಸುರಕ್ಷತಾ ಸಿಬ್ಬಂದಿ ಪ್ರಯಾಣಿಕರಿಗೆ ಎಚ್ಚರಿಕೆ ನೀಡಿದ್ದರು. ಆ ಸಂದರ್ಭದಲ್ಲಿ ಸ್ಟೌ ನಂದಿಸಿದ ಪ್ರಯಾಣಿಕರು ಸಿಬ್ಬಂದಿ ಅಲ್ಲಿಂದ ತೆರಳಿದ ಕೂಡಲೇ ಮತ್ತೆ ಸ್ಟೌ ಹಚ್ಚಿದ್ದರು ಎಂದು ಅಧಿಕಾರಿಗಳು ಹೇಳಿದ್ದಾರೆ. ಘಟನೆ ಕುರಿತು ತನಿಖೆ ನಡೆಸುವುದಾಗಿ ಪ್ರಧಾನಿ ಇಮ್ರಾನ್‌ ಖಾನ್‌ ತಿಳಿಸಿದ್ದಾರೆ.

ದುರಂತದಲ್ಲಿ ಗಾಯಗೊಂಡವರಿಗೆ ಸೂಕ್ತ ಚಿಕಿತ್ಸೆ ನೀಡಲು ಎಲ್ಲ ವ್ಯವಸ್ಥೆ ಕಲ್ಪಿಸಲಾಗುವುದು. ಘಟನೆಯ ಬಗ್ಗೆ ತನಿಖೆಯನ್ನೂ ನಡೆಸಲಾಗುವುದು.
-ಇಮ್ರಾನ್‌ ಖಾನ್‌
ಪಾಕಿಸ್ತಾನ ಪ್ರಧಾನಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT