ಶುಕ್ರವಾರ, ಮಾರ್ಚ್ 5, 2021
24 °C
ಸಂಕಷ್ಟಕ್ಕೆ ಸಿಲುಕಿರುವ ನೂರಾರು ಕುಟುಂಬ

ಕೋವಿಡ್–19 | ಏರ್‌ಲಿಫ್ಟ್‌ ನಿರೀಕ್ಷೆಯಲ್ಲಿ ಬಾಂಗ್ಲಾ ಕನ್ನಡಿಗರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಬದುಕು ಕಟ್ಟಿಕೊಳ್ಳಲು ಬಾಂಗ್ಲಾದೇಶಕ್ಕೆ ಹೋದ ನೂರಾರು ಕನ್ನಡಿಗರು ಕೊರನಾ ಲಾಕ್‌ಡೌನ್‌ನಿಂದಾಗಿ ಭಾರಿ ಸಂಕಷ್ಟಕ್ಕೆ ಸಿಲುಕಿದ್ದಾರೆ. 

ಢಾಕಾದ ನೂರಾರು ಗಾರ್ಮೆಂಟ್ಸ್‌, ಟೆಕ್ಸ್‌ಟೈಲ್‌ ಮಿಲ್‌ಗಳಲ್ಲಿ ದುಡಿಯುತ್ತಿರುವ ಉದ್ಯೋಗಿಗಳು ಮತ್ತು ಕಾರ್ಮಿಕರಲ್ಲಿ ಹೆಚ್ಚಿನ ಸಂಖ್ಯೆಯ ಕನ್ನಡಿಗರಿದ್ದಾರೆ. ಅವರೆಲ್ಲ ಲಾಕ್‌ಡೌನ್‌ ನಂತರ ತಾಯ್ನಾಡಿಗೆ ಬರಲು ಆಗದೆ, ಅತ್ತ ಬಾಂಗ್ಲಾದೇಶದಲ್ಲಿ ಇರಲೂ ಆಗದೆ ಪರಿತಪಿಸುತ್ತಿದ್ದಾರೆ. 

ಲಾಕ್‌ಡೌನ್‌ ಘೋಷಣೆಯಾಗುತ್ತಲೇ ಢಾಕಾದ ಗಾರ್ಮೆಂಟ್ಸ್‌ಗಳಲ್ಲಿ ಕಲಸ ಮಾಡುತ್ತಿದ್ದ ಪಶ್ಚಿಮ ಬಂಗಾಳ, ಬಿಹಾರ, ಜಾರ್ಖಂಡ, ಒಡಿಶಾದ ಗಾರ್ಮೆಂಟ್ಸ್‌ ಕಾರ್ಮಿಕರು ಕಾಲ್ನಡಿಗೆಯಲ್ಲಿಯೇ ಸುರಕ್ಷಿತವಾಗಿ ತಮ್ಮ, ತಮ್ಮ ರಾಜ್ಯಗಳನ್ನು ಸೇರಿಕೊಂಡಿದ್ದಾರೆ. ಇನ್ನೂ ನೂರಾರು ಕಾರ್ಮಿಕರನ್ನು ಗಡಿಯಲ್ಲಿಯೇ ತಡೆ ಹಿಡಿಯಲಾಗಿದೆ.

ಸಿದ್ಧ ಉಡುಪು ಕಾರ್ಖಾನೆಗಳ ಎಂಜಿನಿಯರಿಂಗ್‌, ಅಕೌಂಟ್ಸ್‌ ವಿಭಾಗ, ಮ್ಯಾನೇಜ್‌ಮೆಂಟ್‌ ಹುದ್ದೆಗಳಲ್ಲಿರುವ ಹೆಚ್ಚಿನ ಕನ್ನಡಿಗರು,  ವಿಮಾನ ಸೇವೆ ಸ್ಥಗಿತಗೊಂಡಿದ್ದರಿಂದ ಇಕ್ಕಟ್ಟಿಗೆ ಸಿಲುಕಿದ್ದಾರೆ.

ಅತಂತ್ರರಾಗಿರುವ ಸಾವಿರಕ್ಕೂ ಹೆಚ್ಚು ಕನ್ನಡಿಗ ಕುಟುಂಬಗಳು ತಾಯ್ನಾಡಿಗೆ ಮರಳಲು ತುದಿಗಾಲ ಮೇಲೆ ನಿಂತಿವೆ. ವಾಟ್ಸ್ ಆ್ಯಪ್‌ ಗ್ರೂಪ್‌ ಕೂಡ ರಚಿಸಿಕೊಂಡಿದ್ದಾರೆ. ತಾಯ್ನಾಡಿಗೆ ಕರೆಸಿಕೊಳ್ಳುವಂತೆ ಭಾರತೀಯ ಹೈಕಮಿಷನ್, ಪ್ರಧಾನಿ ಕಚೇರಿ, ಭಾರತದ ವಿದೇಶಾಂಗ ವ್ಯವಹಾರಗಳ ಕಚೇರಿಗೆ ಪತ್ರ ಬರೆದಿದ್ದಾರೆ. 

ಏರ್‌ಲಿಫ್ಟ್‌ ಮಾಡುವಂತೆ ಹಲವಾರು ಬಾರಿ ಭಾರತ ಸರ್ಕಾರ ಮತ್ತು ಕರ್ನಾಟಕ ಸರ್ಕಾರಕ್ಕೆ ಮನವಿ ಮಾಡಿಕೊಳ್ಳುತ್ತಿದ್ದಾರೆ. ಇದರಿಂದ ಏನೂ ಪ್ರಯೋಜನವಾಗಿಲ್ಲ. ಇಂದಲ್ಲ, ನಾಳೆ ಯಾರಾದರೂ ತಮ್ಮ ನೆರವಿಗೆ ಬಂದಾರೂ ಎಂಬ ಆಶಾಭಾವನೆಯಲ್ಲಿಯೇ ದಿನ ದೂಡುತ್ತಿದ್ದಾರೆ. 

ಬಾಂಗ್ಲಾದೇಶಕ್ಕೆ ತೆರಳಿದ ಹೆಚ್ಚಿನವರು ತಮ್ಮ ಕುಟುಂಬಗಳನ್ನು ಕರ್ನಾಟಕದಲ್ಲಿಯೇ ಬಿಟ್ಟು ಹೋಗಿದ್ದಾರೆ. ಈಗ ಆ ಕುಟುಂಬ ಸದಸ್ಯರೂ ತಮ್ಮರಿಗಾಗಿ ಪರಿತಪಿಸುತ್ತಿದ್ದಾರೆ. ತಮ್ಮವರನ್ನು ಅಲ್ಲಿಂದ ಕರೆತರಲು ಯಾರನ್ನು ಸಂಪರ್ಕಿಸಬೇಕು ಎಂದು  ತಿಳಿಯದೆ ಹತಾಶರಾಗಿದ್ದಾರೆ.   

ಗರ್ಭಿಣಿಯರ ಪರದಾಟ

ಬಾಂಗ್ಲಾದಲ್ಲಿ ಕೊರೊನಾ ಸೋಂಕಿನ ನಡುವೆಯೂ ಕಾರ್ಖಾನೆಗಳು ಪುನಃ ಕೆಲಸ ಆರಂಭಿಸಿವೆ. ಇದರಿಂದ ಸೋಂಕು ಹರಡುವ ಭೀತಿ ಹೆಚ್ಚಾಗಿದೆ. ಆಸ್ಪತ್ರೆಗಳಲ್ಲಿ ಉತ್ತಮ ಚಿಕಿತ್ಸೆ ಸಿಗುತ್ತಿಲ್ಲ. ಸಕಾಲಕ್ಕೆ ಚಿಕಿತ್ಸೆ ಸಿಗದೆ ಮಕ್ಕಳು, ವೃದ್ಧರು ಮತ್ತು ಗರ್ಭಿಣಿಯರು ಪರದಾಡುತ್ತಿದ್ದಾರೆ.

ಬಾಂಗ್ಲಾದೇಶದಿಂದ ಕರೆ ಮಾಡಿ ‘ಪ್ರಜಾವಾಣಿ’ ಜತೆ ಮಾತನಾಡಿದ ಹಲವಾರು ಕನ್ನಡಿಗರು, ತಮ್ಮ ಸಂಕಷ್ಟದ ಬಗ್ಗೆ ಕರ್ನಾಟಕದ ಸರ್ಕಾರದ ಗಮನ ಸೆಳೆಯುವಂತೆ ಮನವಿ ಮಾಡಿದ್ದಾರೆ. ತಮ್ಮನ್ನು ತಾಯ್ನಾಡಿಗೆ ಕರೆಸಿಕೊಳ್ಳುವಂತೆ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರಲ್ಲಿ ಗೋಗರೆದಿದ್ದಾರೆ.    

‘ನಾನೀಗ ಆರು ತಿಂಗಳ ಗರ್ಭಿಣಿ. ಚಿಕಿತ್ಸೆ ಸಿಗದೆ ಆರೋಗ್ಯ ಏರುಪೇರು ಆಗಿದೆ. ಮುಂದೆ ಏನಾಗುವುದೋ ಎಂಬ ಆತಂಕ ಬೇರೆ. ಇಲ್ಲಿಂದ ನಮ್ಮನ್ನು ಕರೆಸಿಕೊಳ್ಳಲು ಸಹಾಯ ಮಾಡಿ. ನಮ್ಮ ಕೂಗನ್ನು ಯಡಿಯೂರಪ್ಪ ಅವರಿಗೆ ತಲುಪಿಸಿ’ ಎಂದು ಶಶಿಕಲಾ ಕೋಟ್ಯಾನ್‌ ಮನವಿ ಮಾಡಿದ್ದಾರೆ.

ಕೆಲವು ವರ್ಷಗಳಿಂದ ಢಾಕಾದಲ್ಲಿ ನೆಲೆಸಿರುವ ಶಶಿಕಲಾ ಮೂಲತಃ ಮಂಗಳೂರಿನವರು. ತಮ್ಮಂತೆಯೇ ತೊಂದರೆಗೆ ಸಿಲುಕಿರುವ ಇತರ ಕನ್ನಡಿಗರ ಗೋಳನ್ನು ಗಮನಕ್ಕೆ ತಂದಿದ್ದಾರೆ.

‘ಆಸ್ಪತ್ರೆಗಳು ಬಾಗಿಲು ಮುಚ್ಚಿವೆ. ತುಂಬು ಗರ್ಭಿಣಿಯಾಗಿದ್ದು ಎರಡು ತಿಂಗಳಿಂದ ರೆಗ್ಯುಲರ್‌ ಚೆಕ್‌ ಅಪ್ ಮಾಡಿಸಿಕೊಳ್ಳಲು ಆಗಿಲ್ಲ. ಕರ್ನಾಟಕ ಸರ್ಕಾರದ ಹಿರಿಯ ಅಧಿಕಾರಿಗಳಿಗೆ ಟ್ವೀಟ್‌ ಮಾಡಿ ಪರಿಸ್ಥಿತಿ ವಿವರಿಸಿದ್ದೇವೆ. ಅಲ್ಲಿಂದ ಯಾವುದೇ ಉತ್ತರವಿಲ್ಲ. ನಮ್ಮ ದಯನೀಯ ಸ್ಥಿತಿಯನ್ನು ಸರ್ಕಾರದ ಗಮನಕ್ಕೆ ತನ್ನಿ’ ಎಂದು ಹಾಸನದ ದೀಪಿಕಾ ಕಣ್ಣೀರಿಟ್ಟಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು