ಬುಧವಾರ, ಸೆಪ್ಟೆಂಬರ್ 18, 2019
23 °C

‘ತಾಲಿಬಾನಿ ಉಗ್ರರ ವಿರುದ್ಧ ಭಾರತ ಹೋರಾಡಬೇಕಾಗುತ್ತದೆ’

Published:
Updated:
Prajavani

ವಾಷಿಂಗ್ಟನ್: ‘ಅಫ್ಗಾನಿಸ್ತಾನದಲ್ಲಿನ ತಾಲಿಬಾನ್ ಉಗ್ರರ ವಿರುದ್ಧ ಅಮೆರಿಕ ಮಾತ್ರ ಹೋರಾಟ ನಡೆಸುತ್ತಿದೆ. ಆದರೆ ನೆರೆ ರಾಷ್ಟ್ರಗಳಾದ ಭಾರತ, ಪಾಕಿಸ್ತಾನ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ’ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.

‘ಆದರೆ ಶೀಘ್ರದಲ್ಲೇ ಭಾರತ, ಇರಾನ್, ರಷ್ಯಾ ಹಾಗೂ ಟರ್ಕಿ ಸಹ ಈ ಹೋರಾಟ ನಡೆಸಬೇಕಾಗುತ್ತದೆ. ತಾಲಿಬಾನಿಗಳನ್ನು ನಿರ್ಮೂಲನ ಮಾಡಲು ಬೇರೆ ರಾಷ್ಟ್ರಗಳು ಮುಂದಾಗಲೇಬೇಕು. ಏಕೆಂದರೆ ಅಮೆರಿಕದ ಯೋಧರನ್ನು ಇನ್ನೂ 19 ವರ್ಷ ಅಲ್ಲಿಯೇ ಇರಿಸಲು ನಾವು ಬಯಸುವುದಿಲ್ಲ’ ಎಂದು ಅವರು ತಿಳಿಸಿದ್ದಾರೆ.

‘ಯುದ್ಧಪೀಡಿತ ಅಫ್ಗಾನಿಸ್ತಾನದಿಂದ ನಮ್ಮ ಯೋಧರನ್ನು ಸಂಪೂರ್ಣವಾಗಿ ವಾಪಸ್ ಕರೆಸಿಕೊಂಡಿಲ್ಲ. ತಾಲಿಬಾನಿಗಳು ಪುನಃ ಅಲ್ಲಿ ಸಕ್ರಿಯರಾಗದಂತೆ ನೋಡಿಕೊಳ್ಳಲು ಬೇರೆಯವರು ಜವಾಬ್ದಾರಿ ವಹಿಸಿಕೊಂಡ ಬಳಿಕ ಈ ನಿಟ್ಟಿನಲ್ಲಿ ಕ್ರಮ ತೆಗೆದುಕೊಳ್ಳಬಹುದು’ ಎಂದು ಹೇಳಿದ ಮಾರನೇ ದಿನವೇ ಟ್ರಂಪ್ ಈ ವಿಷಯ ಪ್ರಸ್ತಾಪಿಸಿದ್ದಾರೆ.

ಶೀಘ್ರ ಮಾತುಕತೆ: ಪ್ರಮುಖ ರಾಜ ತಾಂತ್ರಿಕ ಮತ್ತು ಭದ್ರತಾ ವಿಷಯಗಳಲ್ಲಿ ಸಹಕಾರ ಹೆಚ್ಚಿಸುವ ಮತ್ತು ಭಾರತ– ಪೆಸಿಫಿಕ್‌ ವಲಯದ ಕುರಿತು ಚರ್ಚಿಸಲು ಅಮೆರಿಕ ಮತ್ತು ಭಾರತ ಶೀಘ್ರದಲ್ಲೇ ಎರಡು ಮಹತ್ವದ ಸಭೆಗಳನ್ನು ನಡೆಸಲಿವೆ.

ಈ ಮಾತುಕತೆ ಎರಡೂ ದೇಶಗಳ ನಡುವಿನ ಸಹಭಾಗಿತ್ವವನ್ನು ಇನ್ನಷ್ಟು ಉತ್ತಮಪಡಿಸುವ ಉದ್ದೇಶ ಹೊಂದಿದೆ ಎಂದು ಅಮೆರಿಕ ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಿಳಿಸಿದೆ.

Post Comments (+)