ಬುಧವಾರ, ಸೆಪ್ಟೆಂಬರ್ 22, 2021
23 °C

ಪ್ರಧಾನಿ ನರೇಂದ್ರ ಮೋದಿ ಬಹರೇನ್‌ ಭೇಟಿ: ಭಯೋತ್ಪಾದನೆ ವಿರುದ್ಧ ಜಂಟಿ ಧ್ವನಿ

ಪಿಟಿಐ Updated:

ಅಕ್ಷರ ಗಾತ್ರ : | |

ಮನಾಮಾ: ಯಾವುದೇ ದೇಶವು ಇತರ ದೇಶಗಳ ವಿರುದ್ಧ ಭಯೋತ್ಪಾದನೆಯನ್ನು ಅಸ್ತ್ರವಾಗಿ ಬಳಸುವುದು ಸರಿಯಲ್ಲ. ಹೀಗೆ ಭಯೋತ್ಪಾದನೆ ಬಳಸುವ ದೇಶವನ್ನು ಅಂತರರಾಷ್ಟ್ರೀಯ ಸಮುದಾಯ ತಿರಸ್ಕರಿಸಬೇಕು ಎಂದು ಭಾರತ ಮತ್ತು ಬಹರೇನ್‌ ಜಂಟಿಯಾಗಿ ಅಂತರರಾಷ್ಟ್ರೀಯ ಸಮುದಾಯಕ್ಕೆ ಕರೆ ನೀಡಿವೆ.

ಪ್ರಧಾನಿ ನರೇಂದ್ರ ಮೋದಿ ಅವರು ಎರಡು ದಿನಗಳ ಭೇಟಿಯ ಸಂದರ್ಭದಲ್ಲಿ ಬಹರೇನ್‌ ರಾಜ ಹಮದ್ ಬಿನ್ ಇಸಾ ಅಲ್ ಖಲೀಫಾ ಮತ್ತು ಪ್ರಧಾನಿ ಖಲೀಫಾ ಬಿನ್ ಸಲ್ಮಾನ್ ಅಲ್ ಖಲೀಫಾ ಅವರೊಂದಿಗೆ ದ್ವಿಪಕ್ಷೀಯ ಸಭೆ ನಡೆಸಿದರು. ಈ ವೇಳೆ ಉಭಯ ದೇಶಗಳ ಮುಖಂಡರು ಭಯೋತ್ಪಾದನೆ ಮತ್ತು ಅದನ್ನು ಬಳಸುವ ರಾಷ್ಟ್ರಗಳನ್ನು ಬಲವಾಗಿ ಖಂಡಿಸಿದ್ದಾರೆ.

ಭದ್ರತೆ ವಿಷಯದಲ್ಲಿ ಉಭಯ ದೇಶಗಳ ಸಹಕಾರವನ್ನು ಮತ್ತಷ್ಟು ಉತ್ತಮಪಡಿಸಲು ಒಪ್ಪಿಗೆ ನೀಡ ಲಾಯಿತು. ಪರಸ್ಪರ ಆಸಕ್ತಿಯ ದ್ವಿಪಕ್ಷೀಯ, ಪ್ರಾದೇಶಿಕ ಮತ್ತು ಬಹುಪಕ್ಷೀಯ ವಿಷಯಗಳ ಕುರಿತು ಚರ್ಚೆ ಮಾಡಲಾಯಿತು ಎಂದು ಜಂಟಿ ಹೇಳಿಕೆಯಲ್ಲಿ ತಿಳಿಸಲಾಗಿದೆ.

ಅಲ್ಲದೆ ಸಾಂಸ್ಕೃತಿಕ ವಿನಿಮಯ ಕಾರ್ಯಕ್ರಮ, ಬಾಹ್ಯಾಕಾಶ ತಂತ್ರಜ್ಞಾನ, ಸೌರ ವಿದ್ಯುತ್‌ ವಿಷಯಗಳಿಗೆ ಸಂಬಂ ಧಿಸಿದಂತೆ ಎರಡೂ ದೇಶಗಳ ನಡುವಿನ ಒಪ್ಪಂದಗಳಿಗೆ ಸಹಿ ಹಾಕಲಾಯಿತು. 

ಶ್ರೀಕೃಷ್ಣ ದೇವಾಲಯದ ಜೀರ್ಣೋದ್ಧಾರ
ಮನಾಮಾ (ಪಿಟಿಐ):
ಬಹರೇನ್‌ಗೆ ಭೇಟಿ ನೀಡಿರುವ ಪ್ರಧಾನಿ ನರೇಂದ್ರ ಮೋದಿ ಅವರು ಅಲ್ಲಿನ 200 ವರ್ಷಗಳಷ್ಟು ಹಳೆಯದಾದ ಶ್ರೀಕೃಷ್ಣ ದೇವಾಲಯವನ್ನು ₹ 30.04 ಕೋಟಿ (4.2ಮಿಲಿಯನ್‌ ಡಾಲರ್‌) ವೆಚ್ಚದಲ್ಲಿ ಜೀರ್ಣೋದ್ಧಾರಗೊಳಿಸುವ ಯೋಜನೆಗೆ ಭಾನುವಾರ ಚಾಲನೆ ನೀಡಿದರು.

ಈ ಯೋಜನೆಯು ಭಾರತ ಮತ್ತು ಬಹರೇನ್‌ ನಡುವಿನ ಸಂಬಂಧವನ್ನು ಮತ್ತಷ್ಟು ಬಲಪಡಿಸುತ್ತದೆ ಎಂದು ಅವರು ಇದೇ ವೇಳೆ ತಿಳಿಸಿದರು.

ಪ್ರಮುಖ ಗಲ್ಫ್ ರಾಷ್ಟ್ರವಾಗಿರುವ ಬಹರೇನ್‌ಗೆ ಭೇಟಿ ನೀಡಿದ ಭಾರತದ ಮೊದಲ ಪ್ರಧಾನಿಯಾದ ಮೋದಿ. ಈ ದೇವಾಲಯದಲ್ಲಿ ಕೆಲಕಾಲ ಪ್ರಾರ್ಥಿಸಿದ ಅವರು, ಅಲ್ಲಿ ನೆರೆದಿದ್ದ ಭಾರತೀಯ ವಲಸಿಗರೊಂದಿಗೆ ಸಂವಾದ ನಡೆಸಿದರು.

‘ದೇವಾಲಯದ ಜೀರ್ಣೋದ್ಧಾರ ಯೋಜನೆಯಲ್ಲಿ 45 ಸಾವಿರ ಚ.ಅ ವಿಸ್ತೀರ್ಣದ ನಾಲ್ಕು ಅಂತಸ್ತಿನ ಕಟ್ಟಡ ನಿರ್ಮಿಸಲಾಗುತ್ತದೆ. ಹಿಂದೂ ಸಂಪ್ರದಾಯದಂತೆ ವಿವಾಹ ಸಮಾರಂಭ, ಆಚರಣೆಗಳಿಗೆ ಇಲ್ಲಿ ಅಗತ್ಯ ಸೌಲಭ್ಯ ಕಲ್ಪಿಸಲಾಗುತ್ತದೆ. ಇದು ಬಹರೇನ್‌ ಪ್ರವಾಸೋದ್ಯಮಕ್ಕೆ ಉತ್ತೇಜನ ದೊರೆಯುತ್ತದೆ’ ಎಂದು ಪ್ರಧಾನಿ ಹೇಳಿದರು.

ಬಹರೇನ್‌ನಲ್ಲಿ ಸುಮಾರು 3.50 ಲಕ್ಷ ಭಾರತೀಯ ಪ್ರಜೆಗಳು ಇದ್ದಾರೆ. ಅವರಲ್ಲಿ ಕೇರಳದವರೇ ಹೆಚ್ಚು. 

ಜಿ–7 ಶೃಂಗಸಭೆಗೆ ಪ್ರಧಾನಿ ಮೋದಿ
ಬಿಯರಿಟ್ಜ್ (ಪಿಟಿಐ):
ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ಫ್ರಾನ್ಸ್‌ಗೆ ಆಗಮಿಸಿದ್ದು, ಬಿಯರಿಟ್ಜ್‌ನಲ್ಲಿ ನಡೆಯುತ್ತಿರುವ ಜಿ7 ಶೃಂಗಸಭೆಯಲ್ಲಿ ಪರಿಸರ, ಹವಾಮಾನ ಸೇರಿದಂತೆ ಹಲವು ಜಾಗತಿಕ ವಿಷಯಗಳನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಇದೇ ವೇಳೆ ಅವರು ಜಾಗತಿಕ ನಾಯಕರನ್ನು ಭೇಟಿ ಮಾಡಲಿದ್ದಾರೆ.

ಭಾರತ ಅಧಿಕೃತವಾಗಿ ಜಿ–7 ಸಮೂಹದ ಸದಸ್ಯ ರಾಷ್ಟ್ರ ಅಲ್ಲದಿದ್ದರೂ, ಫ್ರಾನ್ಸ್ ಅಧ್ಯಕ್ಷ ಎಮ್ಯಾನುವಲ್ ಮ್ಯಾಕ್ರನ್ ಅವರ ವೈಯಕ್ತಿಕ ಆಹ್ವಾನದ ಮೇರೆಗೆ ಈ ಶೃಂಗಸಭೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ.

ಶೃಂಗಸಭೆಯ ಹೊರತಾಗಿ ಮೋದಿ ಹಾಗೂ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಕಾಶ್ಮೀರ ಪರಿಸ್ಥಿತಿ, ವಾಣಿಜ್ಯ ಹಾಗೂ ಇತರೆ ವಿಷಯಗಳ ಕುರಿತು ಚರ್ಚೆ ನಡೆಸುವ ಸಂಭವ ಇದೆ.

‘ಈ ಆಹ್ವಾನ, ಉಭಯ ನಾಯಕರ ನಡುವೆ ಇರುವ ವೈಯಕ್ತಿಕ ಬಾಂಧವ್ಯ ಹಾಗೂ ಭಾರತವನ್ನು ಪ್ರಮುಖ ಆರ್ಥಿಕ ರಾಷ್ಟ್ರ ಎಂದು ಗುರುತಿಸಿರುವುದನ್ನು ತೋರಿಸುತ್ತದೆ’ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಹೇಳಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು