ಶನಿವಾರ, ಆಗಸ್ಟ್ 15, 2020
26 °C

ಅಮೆರಿಕ: ಭಾರತ ಮೂಲದ ಒಂದೇ ಕುಟುಂಬದ ನಾಲ್ವರ ಹತ್ಯೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಾಷಿಂಗ್ಟನ್: ಸಂಬಂಧಿಯೊಬ್ಬರು ಸೇರಿದಂತೆ ಸಿಖ್‌ ಕುಟುಂಬದ ನಾಲ್ವರನ್ನು ಗುಂಡಿಕ್ಕಿ ಹತ್ಯೆ ಮಾಡಿರುವ ಪ್ರಕರಣ ಒಹಿಯೊ ರಾಜ್ಯದ ವೆಸ್ಟ್‌ ಚೆಸ್ಟರ್‌ನಲ್ಲಿ ಭಾನುವಾರ ರಾತ್ರಿ ವರದಿಯಾಗಿದೆ.

ಮೃತಪಟ್ಟವರ ಸಂಬಂಧಿಯೊಬ್ಬರು ತಮಗೆ ಕರೆಮಾಡಿ ಮಾಹಿತಿ ನೀಡಿದ್ದಾಗಿ ವೆಸ್ಟ್‌ ಚೆಸ್ಟರ್‌ ಪೊಲೀಸ್‌ ಅಧಿಕಾರಿ ಜೋಲ್‌ ಹೆರ್ಝಾಗ್‌ ತಿಳಿಸಿದ್ದಾರೆ.

ಈ ಸಂಬಂಧ ಪ್ರತಿಕ್ರಿಯೆ ನೀಡಿರುವ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್‌, ಮೃತಪಟ್ಟವರಲ್ಲಿ ಒಬ್ಬ ಭಾರತೀಯನಾಗಿದ್ದು, ಅವರು ಅಮೆರಿಕಾಗೆ ಭೇಟಿ ನೀಡಿದ್ದರು. ಉಳಿದ ಮೂವರು ಭಾರತ ಮೂಲದವರು ಎಂದಿದ್ದಾರೆ.

‘ಪ್ರಕರಣದ ತನಿಖೆ ಪ್ರಗತಿಯಲ್ಲಿದೆ. ಆದರೆ, ಇದು ಜನಾಂಗೀಯ ದ್ವೇಷವಲ್ಲ. ನ್ಯೂಯಾರ್ಕ್‌ನಲ್ಲಿರುವ ನಮ್ಮ ಕಾನ್ಸುಲೇಟ್‌ ಜನರಲ್‌, ಸಂಬಂಧಪಟ್ಟ ಇಲಾಖೆ ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದಾರೆ. ನನಗೆ ಮಾಹಿತಿ ನೀಡಲಿದ್ದಾರೆ’ ಎಂದು ಟ್ವೀಟ್‌ ಮಾಡಿದ್ದಾರೆ.

ವೆಸ್ಟ್‌ ಚೆಸ್ಟರ್‌ ಪೊಲೀಸರು ಮೃತರ ಗುರುತು ಪ್ರಕಟಿಸಿಲ್ಲ. ಆದರೆ, ಸ್ಥಳೀಯ ಸುದ್ದಿ ಮಾಧ್ಯಮವೊಂದು ಪ್ರಕರಣದಲ್ಲಿ ಮೃತಪಟ್ಟವರನ್ನು ಹಕೀಕತ್‌ ಸಿಂಗ್‌ ಪನಾಗ್‌, ಅವರ ಪತ್ನಿ ಪರಮ್‌ಜೀತ್‌ ಕೌರ್‌, ಅವರ ಪತ್ನಿ ಶಾಲಿಂದರ್‌ ಕೌರ್‌ ಹಾಗೂ ಪಂಜಾಬ್‌ನಿಂದ ಬಂದಿದ್ದ ಸಂಬಂಧಿ ಅಮರ್‌ಜಿತ್‌ ಕೌರ್‌ ಎಂದು ವರದಿ ಮಾಡಿದೆ. ಪನಾಗ್‌ ಅವರ ಸಂಬಂಧಿಯ ಮಗ ಪೊಲೀಸರಿಗೆ ಕರೆ ಮಾಡಿರಬಹುದು ಎನ್ನಲಾಗಿದೆ.

ಪ್ರಕರಣ ಸಂಬಂಧ ಹೆಚ್ಚಿನ ಮಾಹಿತಿ ಹಾಗೂ ಹತ್ಯೆಗೆ ಕಾರಣ ಏನಿರಬಹುದು ಎಂಬುದನ್ನೂ ಪೊಲೀಸರು ತಿಳಿಸಿಲ್ಲ.

ಒಹಿಯೊದ ಗ್ರೇಟರ್ ಸಿನ್ಸಿನಾಟಿಯಲ್ಲಿರುವ ಗುರುನಾನಕ್‌ ಸಮಾಜ ಮುಖ್ಯಸ್ಥರೊಬ್ಬರು ತಲೆಗೆ ಗುಂಡಿಕ್ಕಿ ಹತ್ಯೆ ಮಾಡಲಾಗಿದೆ ಎಂದು ಹೇಳಿಕೆ ನೀಡಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು