ಶನಿವಾರ, ಸೆಪ್ಟೆಂಬರ್ 18, 2021
21 °C

ಅಂತರರಾಷ್ಟ್ರೀಯ ಯೋಗದಿನ: ವಿಶ್ವದ ಹಲವು ದೇಶಗಳಲ್ಲಿ ಯೋಗ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಿಶ್ವಸಂಸ್ಥೆ: ಐದನೇ ಅಂತರರಾಷ್ಟ್ರೀಯ ಯೋಗದಿನವನ್ನು ವಿಶ್ವದ ಹಲವು ದೇಶಗಳಲ್ಲಿ ಶುಕ್ರವಾರ ಆಚರಿಸಲಾಯಿತು.

ಸಾಮಾನ್ಯ ಸಭೆ ಸಭಾಂಗಣದಲ್ಲಿ: ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ಸಭಾಂಗಣದಲ್ಲಿ ಇದೇ ಮೊದಲ ಬಾರಿಗೆ ಯೋಗ ಆಯೋಜಿಸಲಾಗಿತ್ತು. ರಾಜತಾಂತ್ರಿಕರು, ರಾಯಭಾರಿಗಳು ಸೇರಿದಂತೆ ದೇಶದ ನಾಯಕರು ಈ ಸಭಾಂಗಣದಲ್ಲಿ ಮಹಾಸಭೆಯಲ್ಲಿ ಭಾಗವಹಿಸುವುದು ಸಾಮಾನ್ಯ. ಆದರೆ ಶುಕ್ರವಾರ ಇಲ್ಲಿ ಯೋಗಪಟುಗಳು ಸೇರಿದ್ದರು. ಮಹಾಸಭೆಯ ವೇದಿಕೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು 2004 ರಲ್ಲಿ ವಿಶ್ವ ಯೋಗ ದಿನದ ಬಗ್ಗೆ ಪ್ರಸ್ತಾಪ ಮಾಡಿದ್ದರು.

ವಿಶ್ವಸಂಸ್ಥೆಯ ಅಧಿಕಾರಿಗಳು, ಯೋಗ ಗುರುಗಳು, ಮಕ್ಕಳು ಯೋಗ ಮಾಡಿದರು. ವಿಶ್ವಸಂಸ್ಥೆಯಲ್ಲಿನ ಶಾಶ್ವತ ಮಿಷನ್‌ ಇದನ್ನು ಆಯೋಜಿಸಿತ್ತು. ಚರ್ಚೆಯ ವೇದಿಕೆಯಾಗುತ್ತಿದ್ದ ಸಾಮಾನ್ಯಸಭೆಯ ಸಭಾಂಗಣದಲ್ಲಿ ‘ಓಂ’ ಮತ್ತು ‘ಶಾಂತಿ’ ಮಂತ್ರಗಳು ಕೇಳಿಸಿದವು.

‌ಚೀನಾದಲ್ಲೂ ಯೋಗ (ಬೀಜಿಂಗ್ ವರದಿ): ಚೀನಾದಾದ್ಯಂತ ನಡೆದ ಯೋಗ ದಿನಾಚರಣೆಯಲ್ಲಿ ಸಾವಿರಾರು ಮಂದಿ ಭಾಗವಹಿಸಿದ್ದರು.

ಭಾರತ ಮತ್ತು ಚೀನಾ ದೇಶಗಳ ಸಹಯೋಗದಲ್ಲಿ ಕುನ್‌ಮಿಂಗ್‌ನ ಯುನ್‌ನುನ್ ಮಿಂಜು ವಿಶ್ವವಿದ್ಯಾಲಯದಲ್ಲಿ ಯೋಗ ಕಾಲೇಜನ್ನು ಆರಂಭಿಸಲಾಗಿದೆ. ಭಾರತದ ಯೋಗ ಶಿಕ್ಷಕರು ಚೀನಾಕ್ಕೆ ಬಂದು ಹಲವು ಯೋಗ ಸಂಸ್ಥೆಗಳನ್ನು ನಡೆಸುತ್ತಿದ್ದಾರೆ.

‘ಇಂಡಿಯಾ ಹೌಸ್‌’ನಲ್ಲಿ ಭಾರತೀಯ ರಾಯಭಾರ ಕಚೇರಿ ಆಯೋಜಿಸಿದ್ದ ಯೋಗದಿನದಲ್ಲಿ ರಾಯಭಾರಿ ವಿಕ್ರಂ ಮಿಶ್ರಿ ಮಾತನಾಡಿದರು.

ಇಸ್ರೇಲ್‌: ಟೆಲ್ ಅವೀವ್‌ನ ಹಟಚಾನದಲ್ಲಿ ಹಮ್ಮಿಕೊಂಡಿದ್ದ ಯೋಗದಿನದಲ್ಲಿ 400ಕ್ಕೂ ಹೆಚ್ಚು ಮಂದಿ ಯೋಗಾಸನಗಳನ್ನು ಮಾಡಿದರು. ಇಸ್ರೇಲ್‌ನಲ್ಲಿನ ಭಾರತದ ರಾಯಭಾರಿ ಪವನ್ ಕಪೂರ್‌ ಯೋಗದ ಕುರಿತು ಮಾತನಾಡಿದರು.

ಸ್ಥಳೀಯ ಆಡಳಿತ ಮತ್ತು ಕ್ರೀಡೆ ಮತ್ತು ಸಂಸ್ಕೃತಿ ಸಚಿವಾಲಯದ ಸಹಯೋಗದಲ್ಲಿ ಭಾರತೀಯ ರಾಯಭಾರ ಕಚೇರಿ ಆಯೋಜಿಸಿದ್ದ ಯೋಗದಿನದಲ್ಲಿ ಪ್ರಸಿದ್ಧ ಟಿ.ವಿ ಕಲಾವಿದರು, ಸಾರ್ವಜನಿಕರು ಭಾಗವಹಿಸಿದ್ದರು.

‘ಭಾರತೀಯ ಸಂಸ್ಕೃತಿ ಕೇಂದ್ರ’ದಲ್ಲಿ ಯೋಗಾಭ್ಯಾಸ ಮಾಡಲು ಅವಕಾಶ ನೀಡಲಾಗುವುದು ಎಂದು ಇದೇ ವೇಳೆ ಕಪೂರ್‌ ಮಾಹಿತಿ ನೀಡಿದ್ದರು. ಈ ಕೇಂದ್ರವನ್ನು 2017ರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಭೇಟಿ ನೀಡಿದ್ದ ವೇಳೆ ಆರಂಭಿಸಲಾಗಿತ್ತು.

**

ದೈಹಿಕ ಮತ್ತು ಮಾನಸಿಕ ಸಮತೋಲನ ಕಾಯ್ದುಕೊಳ್ಳುವುದೇ ಯೋಗದ ತಿರುಳು. ಮಾನವೀಯ ಮೌಲ್ಯಗಳೊಂದಿಗೂ ತಾದಾತ್ಯ ಹೊಂದಲು ಯೋಗ ಸಹಕಾರಿ.
-ಅಮೀನಾ ಮೊಹಮ್ಮದ್‌, ಉಪಮಹಾ ಕಾರ್ಯದರ್ಶಿ, ವಿಶ್ವಸಂಸ್ಥೆ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು