ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತವಿಲ್ಲದೆ ವಿಶ್ವಾಸಾರ್ಹತೆಗೆ ಧಕ್ಕೆ : ಸಚಿವ ಎಸ್. ಜೈಶಂಕರ್

Last Updated 2 ಅಕ್ಟೋಬರ್ 2019, 19:00 IST
ಅಕ್ಷರ ಗಾತ್ರ

ವಾಷಿಂಗ್ಟನ್: ‘ಭಾರತಕ್ಕೆ ಭದ್ರತಾ ಮಂಡಳಿಯಲ್ಲಿ ಕಾಯಂ ಸದಸ್ಯತ್ವ ನೀಡದಿದ್ದರೆ, ವಿಶ್ವಸಂಸ್ಥೆಯ ವಿಶ್ವಾಸಾರ್ಹತೆಗೆ ಧಕ್ಕೆಯಾಗಲಿದೆ’ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಅಭಿಪ್ರಾಯಪಟ್ಟಿದ್ದಾರೆ.

‘ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ‌ ಕಾಯಂ ಸದಸ್ಯತ್ವ ಪಡೆಯಲು ಭಾರತ ಉತ್ತಮ ಅಂಶಗಳನ್ನು ಹೊಂದಿದೆ’ ಎಂದು ಅವರು ಪುನರುಚ್ಚರಿಸಿದ್ದಾರೆ.

ಜಾಗತಿಕ ಮಟ್ಟದಲ್ಲಿ ಭಾರತ ಬಲಶಾಲಿ ರಾಷ್ಟ್ರವಾಗಿ ನಿರಂತರ ಪ್ರಗತಿ ಸಾಧಿಸುತ್ತಿರುವ ನಡುವೆಯೇ ಅವರು ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಅಮೆರಿಕದ ಪ್ರಮುಖ ಚಿಂತಕರ ಚಾವಡಿ ‘ಸೆಂಟರ್ ಫಾರ್ ಸ್ಟ್ರಾಟೆಜಿಕ್ ಆ್ಯಂಡ್ ಇಂಟರ್‌ನ್ಯಾಷನಲ್ ಸ್ಟಡೀಸ್’ ಆಯೋಜಿಸಿದ್ದ ವಿದೇಶಾಂಗ ನೀತಿ ಕುರಿತ ಉಪನ್ಯಾಸದಲ್ಲಿ ಅವರು ಈ ವಿಷಯ ಪ್ರಸ್ತಾಪಿಸಿದರು.

‘ವಿಶ್ವದಲ್ಲಿ ಹೆಚ್ಚು ಜನಸಂಖ್ಯೆ ಹೊಂದಿರುವ ರಾಷ್ಟ್ರಗಳ ಸಾಲಿನಲ್ಲಿರುವ ಭಾರತ, ಮುಂದಿನ 15 ವರ್ಷಗಳಲ್ಲಿ ಜಗತ್ತಿನ ಮೂರನೇ ಅತಿದೊಡ್ಡ ಆರ್ಥಿಕ ರಾಷ್ಟ್ರವಾಗಿ ಹೊರಹೊಮ್ಮಲಿದೆ. ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಸದಸ್ಯತ್ವ ಹೊಂದದೆ ಇದ್ದರೆ ಅದು ಭಾರತದ ಮೇಲೆ ಪರಿಣಾಮ ಬೀರಲಿದೆ. ಆದರೆ ಭಾರತಕ್ಕೆ ಕಾಯಂ ಸದಸ್ಯತ್ವ ನೀಡದೆ ಇದ್ದರೆ ವಿಶ್ವಸಂಸ್ಥೆಯ ಮೇಲೂ ಅದರ ಪರಿಣಾಮ ಉಂಟಾಗಲಿದೆ’ ಎಂದು ಅವರು ದೃಢನುಡಿಗಳನ್ನು ಹೇಳಿದ್ದಾರೆ.

‘ಜಗತ್ತಿನ ಮೇಲೆ ‍ಪರಿಣಾಮ ಬೀರಲಿದೆ’: ‘ಅಮೆರಿಕ ಮತ್ತು ಚೀನಾ ನಡುವೆ ಪ್ರಸ್ತುತ ಇರುವ ಬಿಕ್ಕಟ್ಟಿನ ಫಲಿತಾಂಶ ಇಡೀ ಜಗತ್ತಿನ ಮೇಲೆ ಪರಿಣಾಮ ಬೀರಲಿದೆ’ ಎಂದು ಜೈಶಂಕರ್ ತಿಳಿಸಿದ್ದಾರೆ.

ಈ ಫಲಿತಾಂಶದಿಂದ ಬಹುಶಃ ಜಾಗತಿಕ ವ್ಯವಹಾರಗಳನ್ನು ನಿರ್ವಹಿಸಬೇಕಾದ ರೀತಿಯೇ ಬದಲಾಗಬಹುದು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

‘ಇರಾನ್‌ಗೆ ನಿರಾಶೆ ಆಗಿಲ್ಲ’

ತನ್ನಿಂದ ತೈಲ ಖರೀದಿಸದೆ ಇರುವ ಭಾರತದ ನಿರ್ಣಯಕ್ಕೆ ಇರಾನ್ ನಿರಾಶೆ ವ್ಯಕ್ತಪಡಿಸಿದೆ ಎನ್ನುವ ವರದಿಯನ್ನು ಜೈಶಂಕರ್ ತಳ್ಳಿಹಾಕಿದ್ದಾರೆ.

ಅಮೆರಿಕ ಹೇರಿರುವ ಆರ್ಥಿಕ ನಿರ್ಬಂಧದಿಂದಾಗಿ ಭಾರತ ಈ ಕ್ರಮ ಕೈಗೊಂಡಿದೆ ಎಂದು ವರದಿಯಲ್ಲಿ ಹೇಳಲಾಗಿತ್ತು.

ಆದರೆ ಇದಕ್ಕೆ ಪ್ರತಿಕ್ರಿಯಿಸಿರುವ ಜೈಶಂಕರ್, ‘ಇರಾನ್‌ಗೆ ನಿರಾಶೆಯಾಗಿದೆ ಎನ್ನುವುದನ್ನು ನಾನು ಒಪ್ಪುವುದಿಲ್ಲ. ಅವರು ವಾಸ್ತವವಾದಿಗಳು. ಭಾರತ ಮತ್ತು ಇರಾನ್, ಪರಸ್ಪರರ ನಿಯಮಗಳು ಮತ್ತು ಸಾಧ್ಯಾಸಾಧ್ಯತೆಗಳನ್ನು ಅರ್ಥೈಸಿಕೊಳ್ಳುತ್ತವೆ’ ಎಂದಿದ್ದಾರೆ.

ಅಮೆರಿಕ ಭಾರತ ವ್ಯೂಹಾತ್ಮಕ ಮತ್ತು ಸಹಭಾಗಿತ್ವ ವೇದಿಕೆ (ಯುಎಸ್‌ಐಎಸ್‌ಪಿಎಫ್) ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಕೊಲ್ಲಿ ರಾಷ್ಟ್ರದಲ್ಲಿ ಉಂಟಾಗಿರುವ ಅಸ್ಥಿರತೆ ಕುರಿತು ಭಾರತಕ್ಕೆ ಕಳವಳ ಇದೆ. ಆದರೆ ನಮ್ಮ ದೃಷ್ಟಿಯಲ್ಲಿ ಮುಖ್ಯವಾದ ವಿಷಯ ಏನೆಂದರೆ ಯಾವುದೇ ಸಮಸ್ಯೆಗಳಿಲ್ಲದೆ ಕೈಗೆಟಕುವ ದರದಲ್ಲಿ ತೈಲ, ಅನಿಲವನ್ನು ಹೇಗೆ ಖರೀದಿಸುವುದು ಎನ್ನುವುದು’ ಎಂದು ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT