ಶನಿವಾರ, ಡಿಸೆಂಬರ್ 7, 2019
24 °C
ಲೋಪ ಚಿಹ್ನೆಯ ಸಮರ್ಪಕ ಬಳಕೆಯಲ್ಲಿ ಹೊಸ ಪೀಳಿಗೆಗೆ ಸೋಮಾರಿತನ, ನಿರ್ಲಕ್ಷ್ಯ

'ಸೋಮಾರಿ'ಗಳಿಂದಾಗಿ ಮುಚ್ಚಿತು ಅಪಾಸ್ಟ್ರಫಿ ಸಂರಕ್ಷಣಾ ಸಂಸ್ಥೆ!

ಏಜೆನ್ಸೀಸ್ Updated:

ಅಕ್ಷರ ಗಾತ್ರ : | |

ಲಂಡನ್: ಆಂಗ್ಲ ಭಾಷೆಯಲ್ಲಿ ಬಳಕೆಯಲ್ಲಿರುವ ಲೋಪ ಚಿಹ್ನೆಯ ರಕ್ಷಣೆಗಾಗಿ ಹುಟ್ಟಿಕೊಂಡಿದ್ದ ಸಂಸ್ಥೆಯೊಂದು ಈಗಿನ ಪೀಳಿಗೆಯ "ನಿರ್ಲಕ್ಷ್ಯ ಮತ್ತು ಸೋಮಾರಿತನ"ದಿಂದಾಗಿ ಬಾಗಿಲು ಹಾಕಬೇಕಾಗಿ ಬಂದಿದೆ.

ಇಂಗ್ಲಿಷ್ ಪದಪುಂಜದಲ್ಲಿ ಹೆಚ್ಚಾಗಿ ಬಳಕೆಯಲ್ಲಿರುವ ಅಪಾಸ್ಟ್ರಫಿ (ಲೋಪ ಚಿಹ್ನೆ ಎಂಬ ಷಷ್ಠೀ ವಿಭಕ್ತಿ ಚಿಹ್ನೆ) ಸಂಕೇತವು ಅತೀ ಹೆಚ್ಚು ದುರ್ಬಳಕೆ ಆಗುತ್ತಿರುವುದರಿಂದ ರೋಸಿ ಹೋಗಿ, ಆ ಚಿಹ್ನೆಯ ರಕ್ಷಣೆಗಾಗಿಯೇ ಹುಟ್ಟಿಕೊಂಡಿದ್ದ ಸಂಸ್ಥೆಯೊಂದು ಎರಡು ದಶಕಗಳ ಬಳಿಕ ಬಾಗಿಲು ಮುಚ್ಚಲು ನಿರ್ಧರಿಸಿದೆ. ಅದರ ಅಧ್ಯಕ್ಷರ ಪ್ರಕಾರ, ಜನರ 'ನಿರ್ಲಕ್ಷ್ಯ ಹಾಗೂ ಸೋಮಾರಿತನ' ಗೆದ್ದಿದೆ.

ಪತ್ರಕರ್ತರಾಗಿ ಸಾಕಷ್ಟು ಕಾಲ ದುಡಿದು ನಿವೃತ್ತರಾದ ಬಳಿಕ ಜಾನ್ ರಿಚರ್ಡ್ಸ್ ಎಂಬವರು ಈ ಅಪಾಸ್ಟ್ರಫಿ ಸಂರಕ್ಷಣಾ ಸಮಾಜವನ್ನು (ಅಪಾಸ್ಟ್ರಫಿ ಪ್ರೊಟೆಕ್ಷನ್ ಸೊಸೈಟಿ) 2001ರಲ್ಲಿ ಹುಟ್ಟು ಹಾಕಿದ್ದರು. ಈಗವರಿಗೆ 96 ವರ್ಷ ವಯಸ್ಸು. ಈ ವಿರಾಮ ಚಿಹ್ನೆಯ ದುರುಪಯೋಗ ತಡೆಗಾಗಿ ಜಾಗೃತಿ ಮೂಡಿಸಲು ಹುಟ್ಟಿಕೊಂಡ ಈ ಸಮಾಜವು, ಜಗತ್ತಿನಾದ್ಯಂತ ಬೆಂಬಲ ಗಳಿಸಿತ್ತು.

ಬಳಕೆ: Do not ಅಥವಾ Can not ಎಂದು ಬರೆಯುವುದನ್ನು ಕಿರಿದುಗೊಳಿಸಿ Don't ಅಥವಾ Can't ಎಂದು ವಿರಾಮ ಚಿಹ್ನೆಯೊಂದಿಗೆ ಬರೆಯುವುದು, ಬಹುವಚನದಿಂದ ಕೊನೆಗೊಳ್ಳುವ ಅಕ್ಷರಕ್ಕೆ ಷಷ್ಠೀ ವಿಭಕ್ತಿ ಸೇರಿಸಬೇಕಾದಾಗ S ಅಕ್ಷರದ ಬಳಿಕ ಲೋಪ ಚಿಹ್ನೆ ಬಳಸುವುದು (ಉದಾ: ಪತ್ರಕರ್ತರ - Journalists'), ರಾಮನ ಎಂದು ಇಂಗ್ಲಿಷಿನಲ್ಲಿ ಅರ್ಥ ಬರುವಂತೆ ಬರೆಯಬೇಕಿದ್ದರೆ ಅಪಾಸ್ಟ್ರಫಿ ಸಹಿತ S ಬರೆಯುವುದು - ಹೀಗೆ ಹಲವು ವಿಧಗಳಲ್ಲಿ ಈ ಲೋಪ ಚಿಹ್ನೆಯನ್ನು ಬಳಸಲಾಗುತ್ತಿದೆ.

"ಇಂಗ್ಲಿಷ್ ಭಾಷೆಯಲ್ಲಿ ಇದರ ಸಮರ್ಪಕ ಬಳಕೆಯ ಬಗ್ಗೆ ಜನರು ಮತ್ತು ಸಂಘ ಸಂಸ್ಥೆಗಳು ತೀರಾ ಕಡಿಮೆ ಕಾಳಜಿ ತೋರಿಸುತ್ತಿವೆ. ನಾವು ಮತ್ತು ವಿಶ್ವದಾದ್ಯಂತ ಇರುವ ಅನೇಕ ಬೆಂಬಲಿಗರು, ನಮ್ಮಿಂದಾದಷ್ಟು ಪ್ರಯತ್ನ ಮಾಡಿದೆವು. ಆದರೆ. ಈಗಿನ ಆಧುನಿಕ ಪೀಳಿಗೆಯವರ ನಿರ್ಲಕ್ಷ್ಯ ಮತ್ತು ಸೋಮಾರಿತನವೇ ಗೆದ್ದುಬಿಟ್ಟಿತು" ಎಂದು ಲೋಪ ಚಿಹ್ನೆಯು ಸರಿಯಾಗಿ ಬಳಕೆಯಾಗದಿರುವುದರ ಕುರಿತು ವಿಷಾದ ವ್ಯಕ್ತಪಡಿಸುತ್ತಾ ಜಾನ್ ರಿಚರ್ಡ್ಸ್ ಅವರು ತಮ್ಮ ಸೊಸೈಟಿಯ ವೆಬ್ ಸೈಟ್‌ನಲ್ಲಿ ಬರೆದುಕೊಂಡಿದ್ದಾರೆ. ಪದೇ ಪದೇ ಒಂದೇ ರೀತಿಯ ತಪ್ಪುಗಳನ್ನು ಕಂಡು ರೋಸಿ ಹೋಗಿದ್ದ ರಿಚರ್ಡ್ಸ್ ಈ ಸೊಸೈಟಿ ಆರಂಭಿಸಿದ್ದರು.

ಉಪಸಂಪಾದಕರಾಗಿದ್ದಾಗ ಬೇರೆಯವರು ಬರೆದ ಸುದ್ದಿಗಳಲ್ಲಿನ ಅಪಾಸ್ಟ್ರಫಿ ಬಳಕೆಯನ್ನು ತಿದ್ದುತ್ತಿದ್ದ ಅವರು, ನಿವೃತ್ತರಾದ ಬಳಿಕವೂ ಇಂಥ ತಪ್ಪುಗಳು ಮರುಕಳಿಸುವುದನ್ನು ಅಸಹಾಯಕತೆಯಿಂದ ನೋಡುತ್ತಿದ್ದರು. ಈ ಲೋಪ ಚಿಹ್ನೆಯೇ ಅಪಾಯದಂಚಿನಲ್ಲಿದೆ ಎಂಬುದನ್ನು ಮನಗಂಡು ಸೊಸೈಟಿಗೆ ಪ್ರಾರಂಭಿಸಿದ್ದರು. ರಾಷ್ಟ್ರೀಯ ಪತ್ರಿಕೆಯಲ್ಲಿ ಅವರ ಈ ಕಾಳಜಿಯ ಬಗ್ಗೆ ಪ್ರಕಟವಾದ ಬೆನ್ನಿಗೇ ಯುನೈಟೆಡ್ ಕಿಂಗ್‌ಡಂ ಅಷ್ಟೇ ಅಲ್ಲದೆ ಅಮೆರಿಕಾ, ಆಸ್ಟ್ರೇಲಿಯಾ, ಫ್ರಾನ್ಸ್, ಸ್ವೀಡನ್, ಹಾಂಕಾಂಗ್ ಮತ್ತು ಕೆನಡಾ ಮುಂತಾಗಿ ಹಲವು ರಾಷ್ಟ್ರಗಳಿಂದ 500ಕ್ಕೂ ಹೆಚ್ಚು ಪತ್ರಗಳು ಬಂದಿದ್ದವು. ಅವೆಲ್ಲವೂ ಲೋಪ ಚಿಹ್ನೆಯ ಸದ್ಬಳಕೆಯ ಅವರ ಅಭಿಯಾನವನ್ನು ಬೆಂಬಲಿಸಿ ಬಂದ ಪತ್ರಗಳು.

ಅಪಾಸ್ಟ್ರಫಿ ರಕ್ಷಣಾ ಸೊಸೈಟಿ ಮುಚ್ಚಿದರೂ, ಸರಿಯಾಗಿ ಬಳಸಲಿಚ್ಛಿಸುವವರಿಗಾಗಿ www.apostrophe.org.uk ಮುಕ್ತವಾಗಿ ಲಭ್ಯವಿರುತ್ತದೆ ಎಂದು ಘೋಷಿಸಿದ್ದರು. ಆದರೆ, ಆ ಬಳಿಕ ಈ ತಾಣಕ್ಕೆ ಭೇಟಿ ನೀಡುವವರ ಸಂಖ್ಯೆ ಸುಮಾರು 600 ಪಟ್ಟು ಹೆಚ್ಚಾಗಿರುವುದರಿಂದ, ಇದರ ನಿರ್ವಹಣೆ ಕಷ್ಟವಾಗಿದ್ದು, ಹೊಸ ವರ್ಷದವರೆಗೆ ಈ ತಾಣವನ್ನು ಮುಚ್ಚಿರುವುದಾಗಿ ಈ ವೆಬ್ ತಾಣದಲ್ಲಿ ಪ್ರಕಟಿಸಲಾಗಿದೆ. ವಾಸ್ತವವಾಗಿ ಈ ಜಾಲತಾಣದಲ್ಲಿ ಸರಳ ಉದಾಹರಣೆಗಳೊಂದಿಗೆ ಅಪಾಸ್ಟ್ರಫಿ ಚಿಹ್ನೆಯ ಸರಿಯಾದ ಬಳಕೆಯ ಬಗ್ಗೆ ಮಾಹಿತಿ ಇದೆ. ಸದ್ಯ ಈ ತಾಣಕ್ಕೆ ಜಾಸ್ತಿ ಜನರು ಬರತೊಡಗಿರುವುದರಿಂದ ಸೇವೆ ಸ್ಥಗಿತವಾಗಿದೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು