ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುರುದ್ವಾರದ ಮೇಲೆ ಉಗ್ರರ ದಾಳಿ: 25 ಸಿಖ್ಖರ ಸಾವು, ವಿಶ್ವಸಂಸ್ಥೆ ಖಂಡನೆ

Last Updated 27 ಮಾರ್ಚ್ 2020, 1:34 IST
ಅಕ್ಷರ ಗಾತ್ರ

ವಿಶ್ವಸಂಸ್ಥೆ (ಪಿಟಿಐ): ಅಫ್ಗಾನಿಸ್ತಾನ ರಾಜಧಾನಿ ಕಾಬೂಲ್‌ನಲ್ಲಿ ಗುರುದ್ವಾರದ ಮೇಲೆ ಬುಧವಾರ ಉಗ್ರರು ದಾಳಿ ನಡೆಸಿ, 25 ಸಿಖ್ಖರು ಸಾವನ್ನಪ್ಪಿದ ಘಟನೆಯನ್ನು ವಿಶ್ವಸಂಸ್ಥೆ ಕಟುವಾಗಿ ಖಂಡಿಸಿದೆ. ಇಸ್ಲಾಮಿಕ್‌ ಸ್ಟೇಟ್‌ (ಐಎಸ್) ಈ ದಾಳಿಯ ಹೊಣೆ ಹೊತ್ತುಕೊಂಡಿದೆ. ಗಲಭೆಗ್ರಸ್ತ ಅಫ್ಗಾನಿಸ್ತಾನದಲ್ಲಿ ಅಲ್ಪಸಂಖ್ಯಾತರಾಗಿರುವ ಸಿಖ್ಖರ ಇತ್ತೀಚಿನ ದಿನಗಳಲ್ಲಿ ನಡೆದ ಭೀಕರ ದಾಳಿ ಇದಾಗಿದೆ.

ಧಾರ್ಮಿಕ ಸ್ಥಳವೊಂದರ ಮೇಲೆ ಪೈಶಾಚಿಕ ದಾಳಿ ನಡೆಸಿ, ಅಮಾಯಕರ ಸಾವಿಗೆ ಕಾರಣರಾಗಿರುವವರ ವಿರುದ್ಧ ಕಠಿಣ ಕ್ರಮ ಅಗತ್ಯ ಎಂದು ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆ್ಯಂಟೊನಿಯೊ ಗುಟೆರಸ್‌ ಅವರ ವಕ್ತಾರ ಸ್ಟೀಫಾನ್‌ ದುಜಾರಿಕ್‌ ಹೇಳಿದ್ದಾರೆ. ಕಾಬೂಲ್‌ನ ಹೃದಯಭಾಗವಾದ ಶೋರ್‌ ಬಜಾರ್‌ ಪ್ರದೇಶದಲ್ಲಿರುವ ಗುರುದ್ವಾರದಲ್ಲಿ 150ಕ್ಕೂ ಹೆಚ್ಚು ಜನರು ಪ್ರಾರ್ಥನೆ ಸಲ್ಲಿಸುತ್ತಿದ್ದರು.

ಉಗ್ರನೊಬ್ಬ ಭಾರಿ ಪ್ರಮಾಣದ ಶಸ್ತ್ರಾಸ್ತ್ರದೊಂದಿಗೆ ಆತ್ಮಹತ್ಯಾ ದಾಳಿ ನಡೆಸಿದ್ದರಿಂದ, ಪ್ರಾರ್ಥನೆ ಸಲ್ಲಿಸುತ್ತಿದ್ದವರ ಪೈಕಿ 25 ಜನರು ಮೃತಪಟ್ಟು, 8 ಜನರು ಗಾಯಗೊಂಡಿದ್ದಾರೆ. ‘ಈಗಾಗಲೇ ವಿಶ್ವದ ಅನೇಕ ರಾಷ್ಟ್ರಗಳು ಕೋವಿಡ್‌ ಪಿಡುಗಿನಿಂದ ತತ್ತರಿಸಿವೆ. ಇಂತಹ ಹೊತ್ತಿನಲ್ಲಿಯೇ ನಡೆದಿರುವ ಉಗ್ರರ ದಾಳಿ, ಹಲವು ದೇಶಗಳನ್ನು ಮತ್ತಷ್ಟೂ ಸಂಕಷ್ಟಕ್ಕೆ ದೂಡುತ್ತದೆ. ಮಾನವೀಯ ನೆಲೆಗಟ್ಟಿನ ಮೇಲೆ ಎಲ್ಲರೂ ಒಂದೇ ಎಂಬ ಮನೋಭಾವ ಈಗ ಅಗತ್ಯ’ ಎಂದು ಯುನೈಟೆಡ್‌ ನೇಷನ್ಸ್‌ ಅಲೈಯನ್ಸ್‌ ಆಫ್‌ ಸಿವಿಲೈಜೇಷನ್ಸ್‌ನ (ಯುಎನ್‌ಎಒಸಿ) ಉನ್ನತಾಧಿಕಾರಿ ಮಿಗೆಲ್‌ ಏಂಜೆಲ್‌ ಮೊರಾಟಿನೋಸ್‌ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT