ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತದ ಭೂಪ್ರದೇಶಗಳನ್ನು ತನ್ನ ನಕಾಶೆಯಲ್ಲಿ ಸೇರಿಸುವ ಮಸೂದೆ ಮಂಡಿಸಿದ ನೇಪಾಳ

Last Updated 31 ಮೇ 2020, 10:50 IST
ಅಕ್ಷರ ಗಾತ್ರ

ಕಠ್ಮಂಡು: ದೇಶದ ನಕ್ಷೆಯನ್ನು ಬದಲಾಯಿಸುವ ಉದ್ದೇಶದೊಂದಿಗೆ ನೇಪಾಳ ಸರ್ಕಾರವು ಭಾನುವಾರ ಸಂವಿಧಾನ ತಿದ್ದುಪಡಿ ಮಸೂದೆಯನ್ನು ಸಂಸತ್ತಿನಲ್ಲಿ ಮಂಡಿಸಿದೆ. ಭಾರತದ ಜೊತೆಗಿನ ಗಡಿ ವಿವಾದದ ನಡುವೆಯೇ ನೇಪಾಳ ಸರ್ಕಾರ ಈ ಕ್ರಮಕ್ಕೆ ಮುಂದಾಗಿದೆ.

ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಶಿವಮಯ ತುಂಬಹಾಂಗ್‌ಪೆ ಅವರು ನೇಪಾಳ ಸರ್ಕಾರದ ಪರವಾಗಿ ಮಸೂದೆಯನ್ನು ಮಂಡಿಸಿದ್ದಾರೆ. ಇದಕ್ಕೆ ಅಲ್ಲಿನ ಪ್ರಮುಖ ಪ್ರತಿಪಕ್ಷ ನೇಪಾಳಿ ಕಾಂಗ್ರೆಸ್ ಶನಿವಾರ ಬೆಂಬಲ ಸೂಚಿಸಿತ್ತು.

ಲಿಪುಲೇಶ್, ಕಾಲಾಪಾನಿ ಮತ್ತು ಲಿಂಪಿಯಾಧುರಾ ಪ್ರದೇಶಗಳನ್ನು ಒಳಗೊಂಡ ರಾಜಕೀಯ ಮತ್ತು ಆಡಳಿತಾತ್ಮಕ ಪರಿಷ್ಕೃತ ನಕಾಶೆಯನ್ನು ನೇಪಾಳ ಸರ್ಕಾರ ಇತ್ತೀಚೆಗೆ ಬಿಡುಗಡೆ ಮಾಡಿತ್ತು. ಇದಕ್ಕೆ ಭಾರತ ತೀವ್ರ ಆಕ್ಷೇಪ ವ್ಯಕ್ತಪಡಿಸಿತ್ತು. ಕೃತ್ರಿಮವಾಗಿ ಭೂಪ್ರದೇಶವನ್ನು ವಿಸ್ತರಿಸಿ ನಕಾಶೆ ಸಿದ್ಧಪಡಿಸುವ ಈ ಕ್ರಮ ನ್ಯಾಯಸಮ್ಮತವಲ್ಲ. ಇಂತಹ ಚಟುವಟಿಕೆಗಳಿಂದ ದೂರವಿರಬೇಕು ಎಂದು ನೇಪಾಳಕ್ಕೆ ಸೂಚಿಸಿತ್ತು.

ನೇಪಾಳ ಸಂವಿಧಾನದ 3ನೇ ಪರಿಚ್ಛೇದದಲ್ಲಿ ಉಲ್ಲೇಖಿಸಲಾಗಿರುವ ಆಡಳಿತಾತ್ಮಕ ನಕಾಶೆ ತಿದ್ದುಪಡಿಗೆ ಸಂಬಂಧಿಸಿದ ಮಸೂದೆ ಇದಾಗಿದೆ. ಇದಕ್ಕೆ ಅನುಮೋದನೆ ದೊರೆತು ಕಾನೂನಾಗಿ ರೂಪುಗೊಂಡರೆ ಎಲ್ಲಾ ಅಧಿಕೃತ ದಾಖಲೆಗಳಲ್ಲಿ ಪರಿಷ್ಕೃತ ನಕಾಶೆಯನ್ನೇ ಬಳಸಲಾಗುತ್ತದೆ. ಸದ್ಯ ಸಂಸತ್ತಿನಲ್ಲಿ ಮಸೂದೆ ಮೇಲೆ ಚರ್ಚೆ ನಡೆಯಲಿದೆ. ಉಭಯ ಸದನಗಳು ಅನುಮೋದನೆ ನೀಡಿದ ನಂತರ ಮಸೂದೆ ರಾಷ್ಟ್ರಪತಿಗಳ ಸಹಿಗಾಗಿ ಕಳುಹಿಸಿಕೊಡಲಾಗುತ್ತದೆ.

ಕಳೆದ ವಾರ ಮಸೂದೆ ಮಂಡನೆ ಆಗಬೇಕಿತ್ತು. ಆದರೆ ಪ್ರಧಾನಿ ಕೆ.ಪಿ. ಶರ್ಮಾ ಓಲಿ ಅವರ ಮನವಿ ಮೇರೆಗೆ ಕೊನೇ ಕ್ಷಣದಲ್ಲಿ ಮಸೂದೆಯನ್ನು ಹಿಂಪಡೆಯಲಾಗಿತ್ತು. ಪ್ರತಿಪಕ್ಷ ನೇಪಾಳಿ ಕಾಂಗ್ರೆಸ್ ಉನ್ನತ ಮಟ್ಟದ ಚರ್ಚೆಯಾಗಬೇಕು ಎಂದಿದ್ದರಿಂದ ಸಂವಿಧಾನ ತಿದ್ದುಪಡಿ ಮಸೂದೆ ಮಂಡನೆ ವಿಳಂಬವಾಗಿತ್ತು.

‘ಭಾರತದ ನಕ್ಷೆಯೊಳಗೆ ಸೇರಿಕೊಂಡಿರುವ ‘ಕಾಲಾಪಾನಿ’ ಮತ್ತು ‘ಲಿಪುಲೇಶ್’ ಪ್ರದೇಶಗಳನ್ನು ಮರಳಿ ಪಡೆದೇ ತೀರುತ್ತೇವೆ’ ಎಂದು ನೇಪಾಳ ಪ್ರಧಾನಿ ಕೆ.ಪಿ. ಶರ್ಮಾ ಓಲಿ ಇತ್ತೀಚೆಗೆ ಹೇಳಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT