ಮಂಗಳವಾರ, ಸೆಪ್ಟೆಂಬರ್ 22, 2020
26 °C

ರಸಾಯನ ವಿಜ್ಞಾನ ಕ್ಷೇತ್ರ: ಮೂವರಿಗೆ ನೊಬೆಲ್‌ ಪ್ರಶಸ್ತಿ

ಎಪಿ Updated:

ಅಕ್ಷರ ಗಾತ್ರ : | |

ಸ್ಟಾಕ್‌ಹೋಮ್‌: ಲೀಥಿಯಮ್‌ ಐಯಾನ್ ಬ್ಯಾಟರಿಗಳ ಅಭಿವೃದ್ಧಿಗೆ ನೀಡಿದ ಕೊಡುಗೆಗಾಗಿ ರಸಾಯನ ವಿಜ್ಞಾನ ಕ್ಷೇತ್ರದ ಮೂವರು ವಿಜ್ಞಾನಿಗಳಿಗೆ ಬುಧವಾರ ನೊಬೆಲ್‌ ಪ್ರಶಸ್ತಿ ಪ್ರಕಟಿಸಲಾಗಿದೆ. 

ಟೆಕ್ಸಾಸ್‌ ಯೂನಿವರ್ಸಿಟಿಯ 97 ವರ್ಷದ ಹಿರಿಯ ವಿಜ್ಞಾನಿ ಜಾನ್‌ ಬಿ. ಗೂಡೆನಫ್‌, ಸ್ಟೇಟ್‌ ಯೂನಿವರ್ಸಿಟಿ ಆಫ್‌ ನ್ಯೂಯಾರ್ಕ್‌ನ ಎಂ. ಸ್ಟಾನ್ಲಿ ವಿಟ್ಟಿಂಗ್‌ಹ್ಯಾಮ್‌ ಮತ್ತು ಜಪಾನ್‌ನ ಅಸಹಿ ಕಸೆ ಕಾರ್ಪೊರೇಷನ್‌ ಮತ್ತು ಮೇಜೊ ಯೂನಿವರ್ಸಿಟಿಯ ಅಕಿರಾ ಯೋಶಿನೊ ಅವರು ಪುರಸ್ಕಾರಕ್ಕೆ ಪಾತ್ರರಾಗಿದ್ದಾರೆ. 

ಕಾರು, ಮೊಬೈಲ್‌ ಫೋನ್‌, ಲ್ಯಾಪ್‌ಟಾಪ್‌ ಸೇರಿದಂತೆ ಅನೇಕ  ಎಲೆಕ್ಟ್ರಾನಿಕ್‌ ವಸ್ತುಗಳ ಇಂಧನ ಸಂಗ್ರಹ  ವಿಧಾನವನ್ನು ಮರುರೂಪಿಸುವ ನಿಟ್ಟಿನಲ್ಲಿ ಈ ವಿಜ್ಞಾನಿಗಳ ಕೊಡುಗೆ ಮಹತ್ವದ್ದಾಗಿದೆ. ಹಗುರವಾದ ಬ್ಯಾಟರಿಗಳನ್ನು ನಾವು ಈಗ ಎಲ್ಲ ಕಡೆಗಳಲ್ಲಿ ಸುಲಭವಾಗಿ  ಬಳಸಲು ಈ ಸಂಶೋಧನೆಗಳಿಂದಾಗಿ ಅನುಕೂಲವಾಗಿದೆ.

‘ಬ್ಯಾಟರಿಗಳ ರಿಚಾರ್ಜ್‌ ಕ್ಷೇತ್ರಕ್ಕೆ ಸಂದ ಪ್ರಶಸ್ತಿ ಇದಾಗಿದೆ’ ಎಂದು ರಾಯಲ್‌ ಸ್ವೀಡಿಷ್‌ ವಿಜ್ಞಾನ ಅಕಾಡೆಮಿಯ ಪ್ರಧಾನ ಕಾರ್ಯ
ದರ್ಶಿ ಗೊರನ್‌ ಹನ್‌ಸ್ಸನ್‌ ಹೇಳಿಕೆಯೊಂದರಲ್ಲಿ ಅಭಿಪ್ರಾಯಪಟ್ಟಿದ್ದಾರೆ.

1970ರಲ್ಲಿ ತೈಲ ಸಮಸ್ಯೆ ಎದುರಾದಾಗ ವಿಟ್ಟಿಂಗ್‌ಹ್ಯಾಮ್‌ ಅವರು ರಿಚಾರ್ಜ್‌ ಮಾಡಬಹುದಾದ ಬ್ಯಾಟರಿ ಕುರಿತು ಸಂಶೋಧನೆಗಳಲ್ಲಿ ತೊಡಗಿಸಿಕೊಂಡಿದ್ದರು. ಈ ಮೂವರು ವಿಜ್ಞಾನಿಗಳ ಸಂಶೋಧನೆಯು ಕಚ್ಚಾ ತೈಲದ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಿವೆ. 

ಬಹುಮಾನದ ಮೊತ್ತವು ಒಂಬತ್ತು ದಶಲಕ್ಷ ಕ್ರೊನಾರ್‌ ಆಗಿದ್ದು (ಸುಮಾರು ₹65.1 ಕೋಟಿ) ಸ್ಟಾಕ್‌ಹೋಮ್‌ನಲ್ಲಿ ಡಿಸೆಂಬರ್‌ 10ರಂದು  ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ. 

 ಸಾಹಿತ್ಯ ಕ್ಷೇತ್ರಕ್ಕೆ ನೀಡುವ ನೊಬೆಲ್‌ ಪ್ರಶಸ್ತಿ ಪುರಸ್ಕೃತರ ಹೆಸರನ್ನು ಗುರುವಾರ ಪ್ರಕಟಿಸಲಾಗುತ್ತದೆ. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು