ಭಾನುವಾರ, ಮಾರ್ಚ್ 29, 2020
19 °C

ವಿಶ್ವಸಂಸ್ಥೆ ಮಾನವ ಹಕ್ಕು ಮಂಡಳಿ ಅಧಿವೇಶನ ಇಂದು: ಭಾರತ–ಪಾಕ್ ಜಟಾಪಟಿ ನಿರೀಕ್ಷಿತ

ಏಜೆನ್ಸೀಸ್ Updated:

ಅಕ್ಷರ ಗಾತ್ರ : | |

ವಿಶ್ವಸಂಸ್ಥೆಯಲ್ಲಿ ಮಂಗಳವಾರ ಮಾನವ ಹಕ್ಕುಗಳ ಮಂಡಳಿಯ ಅಧಿವೇಶನ ನಡೆಯಲಿದೆ. ಪಾಕಿಸ್ತಾನವು ಈ ಹಿಂದೆ ನಿಗದಿಯಾಗಿದ್ದಂತೆ ವಿದೇಶಾಂಗ ಖಾತೆ ಸಚಿವ ಮಕ್ದೂಮ್ ಶಾ ಮೆಹ್ಮೂದ್ ಖುರೇಶಿ ಬದಲಿಗೆ ಮಾನವ ಹಕ್ಕುಗಳ ಸಚಿವ ಶಿರೀನ್ ಮಝ್ರಿ ಅವರನ್ನು ಅಧಿವೇಶನಕ್ಕೆ ಕಳಿಸಲು ನಿರ್ಧರಿಸಿದೆ.

ವಿಶ್ವಸಂಸ್ಥೆಯಲ್ಲಿ ಜಮ್ಮು ಮತ್ತು ಕಾಶ್ಮೀರದ ವಿಚಾರವನ್ನು ಪ್ರಸ್ತಾಪಿಸಿ, ಕಾಶ್ಮೀರದಲ್ಲಿ ಭಾರತ ಸರ್ಕಾರ ಮಾನವ ಹಕ್ಕುಗಳ ದಮನ ಮಾಡುತ್ತಿದೆ ಎಂದು ಪಾಕ್ ಆರೋಪಿಸುವ ಸಾಧ್ಯತೆಯನ್ನು ಈ ನಡೆ ದಟ್ಟವಾಗಿಸಿದೆ. 

‘ಭಾರತದ ಹಿಡಿತದಲ್ಲಿರುವ ಕಾಶ್ಮೀರದಲ್ಲಿ ನಡೆಯುತ್ತಿರುವ ಮಾನವ ಹಕ್ಕು ಉಲ್ಲಂಘನೆಗಳ ಬಗ್ಗೆ ಮೌನ ವಹಿಸುವ ಮೂಲಕ ಐರೋಪ್ಯ ಒಕ್ಕೂಟ ತಾರತಮ್ಯ ಧೋರಣೆ ಅನುಸರಿಸುತ್ತಿದೆ’ ಎಂದು ಮಝ್ರಿ ಈ ಹಿಂದೆ ಹರಿಹಾಯ್ದಿದ್ದರು. ಇಂದು ನಡೆಯುವ ವಿಶ್ವಸಂಸ್ಥೆ ಅಧಿವೇಶನದಲ್ಲಿಯೂ ಮಝ್ರಿ ಪೌರತ್ವ ತಿದ್ದುಪಡಿ ಕಾಯ್ದೆಯ ವಿಚಾರ ಪ್ರಸ್ತಾಪಿಸಬಹುದು ಎಂದು ವಿಶ್ಲೇಷಿಸಲಾಗುತ್ತಿದೆ.

ಭಾರತವನ್ನು ಪ್ರತಿನಿಧಿಸಲಿರುವ ವಿದೇಶಾಂಗ ವ್ಯವಹಾರಗಳ ಇಲಾಖೆ ಕಾರ್ಯದರ್ಶಿ ವಿಕಾಸ್ ಸ್ವರೂಪ್ ಫೆ.26ರಂದು ಭಾಷಣ ಮಾಡಲಿದ್ದಾರೆ. ತಮ್ಮ ಭಾಷಣದಲ್ಲಿ ಪಾಕಿಸ್ತಾನದ ಆರೋಪಗಳಿಗೆ ತಿರುಗೇಟು ನೀಡುವ ಸಾಧ್ಯತೆ ಇದೆ. ಮಾನವ ಹಕ್ಕು ಮಂಡಳಿಯಲ್ಲಿ ಚೀನಾ ಸದಸ್ಯ ರಾಷ್ಟ್ರವಲ್ಲ. ಪಾಕಿಸ್ತಾನದ ಆಪ್ತ ರಾಷ್ಟ್ರಗಳಾದ ಮಲೇಷಿಯಾ ಮತ್ತು ಟರ್ಕಿಯ ಬೆಂಬಲವೂ ಪಾಕಿಸ್ತಾನಕ್ಕೆ ಸಿಗದು.

ಕಳೆದ ವಾರ ಬ್ರುಸೆಲ್ಸ್‌ನಲ್ಲಿ ನಡೆದ ಐರೋಪ್ಯ ಒಕ್ಕೂಟದ ವಿದೇಶಾಂಗ ಸಚಿವರ ಸಭೆಯಲ್ಲಿ ಭಾರತದ ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ್, ಸಂವಿಧಾನದ 370ನೇ ವಿಧಿ ರದ್ದತಿ ಮತ್ತು ಪೌರತ್ವ ತಿದ್ದುಪಡಿ ಕಾಯ್ದೆ ಜಾರಿಯನ್ನು ಬಲವಾಗಿ ಸಮರ್ಥಿಸಿಕೊಂಡಿದ್ದರು. ಇದನ್ನು ವಿರೋಧಿಸಿ ಪಾಕಿಸ್ತಾನದ ಶಿರೀನ್ ಮಝ್ರಿ ದನಿ ಎತ್ತಿದ್ದರಾದರೂ, ಅದಕ್ಕೆ ಅಂಥ ಮನ್ನಣೆ ಸಿಕ್ಕಿರಲಿಲ್ಲ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು