ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶೇಷಾಧಿಕಾರ ರದ್ದು: ಪ್ರಧಾನಿ ಮೋದಿ ಸಮರ್ಥನೆ

ಭಯೋತ್ಪಾದನೆ ವಿರುದ್ಧ ಕಠಿಣ ಕ್ರಮ
Last Updated 23 ಆಗಸ್ಟ್ 2019, 20:27 IST
ಅಕ್ಷರ ಗಾತ್ರ

ಪ್ಯಾರಿಸ್‌: ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷಾಧಿಕಾರವನ್ನು ರದ್ದುಪಡಿಸಿರುವ ಕ್ರಮವನ್ನು ಪ್ರಧಾನಿ ನರೇಂದ್ರ ಮೋದಿ ಫ್ರಾನ್ಸ್‌ನಲ್ಲಿ ಸಮರ್ಥಿಸಿಕೊಂಡಿದ್ದಾರೆ.

‘ಭಾರತದಲ್ಲಿ ಇನ್ನು ತಾತ್ಕಾಲಿಕ ಎಂಬುದಕ್ಕೆ ಅವಕಾಶಗಳಿಲ್ಲ. ಮಹಾತ್ಮ ಗಾಂಧಿ, ಗೌತಮ ಬುದ್ಧ, ರಾಮ, ಕೃಷ್ಣರಂತಹ ಮಹಾತ್ಮರು ಜನಿಸಿದ ನಾಡಿನಲ್ಲಿರುವ 125 ಕೋಟಿ ಜನರಿಗೆ ಈ ತಾತ್ಕಾಲಿಕವನ್ನು ರದ್ದುಪಡಿಸಲು 70 ವರ್ಷಗಳೇ ಬೇಕಾಯಿತು’ ಎಂದರು.

1950 ಮತ್ತು 1960ರಲ್ಲಿ ಫ್ರಾನ್ಸ್‌ನಲ್ಲಿ ಸಂಭವಿಸಿದ ಎರಡು ಏರ್ ಇಂಡಿಯಾ ಅಪಘಾತಗಳಲ್ಲಿ ಬಲಿಯಾದವರ ಗೌರವಾರ್ಥ ನಿರ್ಮಿಸಲಾಗಿರುವ ಸ್ಮಾರಕವನ್ನು ಶುಕ್ರವಾರ ಉದ್ಘಾಟಿಸಿದ ಬಳಿಕ ಅವರು, ಯುನೆಸ್ಕೊ ಕೇಂದ್ರ ಕಚೇರಿಯಲ್ಲಿ ಭಾರತೀಯ ಸಮುದಾಯ ಉದ್ದೇಶಿಸಿ ಮಾತನಾಡಿದರು.

‘ನವ ಭಾರತ’ ನಿರ್ಮಾಣದ ಉದ್ದೇಶದಿಂದ ದೇಶದ ಜನರು 2019ರ ಲೋಕಸಭಾ ಚುನಾವಣೆಯಲ್ಲಿ ಪುನಃ ಬಿಜೆಪಿಗೆ ಬಹುಮತ ನೀಡಿದ್ದಾರೆ ಎಂದು ಪ್ರತಿಪಾದಿಸಿದ ಮೋದಿ,‘ನವ ಭಾರತ’ವು ಭ್ರಷ್ಟಾಚಾರ, ಸ್ವಜನ ಪಕ್ಷಪಾತ, ಜನರ ಹಣ ಲೂಟಿ ಮಾಡುವವರು ಮತ್ತು ಭಯೋತ್ಪಾದಕರ ವಿರುದ್ಧ ಕಠಿಣ ಕ್ರಮಗಳನ್ನು ತೆಗೆದುಕೊಳ್ಳುತ್ತದೆ ಎಂದು ಹೇಳಿದರು.

ಭಾರತದಲ್ಲಿ ಮುಸ್ಲಿಂ ಸಮುದಾಯದಲ್ಲಿ ಆಚರಣೆಯಲ್ಲಿದ್ದ ತ್ರಿವಳಿ ತಲಾಖ್ ಆಚರಣೆಗೆ ತಡೆ ನೀಡಲಾಗಿದೆ. ಈ ಮೂಲಕ ನವ ಭಾರತದಲ್ಲಿ ಮುಸ್ಲಿಂ ಮಹಿಳೆಯರಿಗೆ ಅನ್ಯಾಯ ಆಗದಂತೆ ಕ್ರಮ ತೆಗೆದುಕೊಳ್ಳಲಾಗಿದೆ ಎಂದರು.

ಹವಾಮಾನ ಬದಲಾವಣೆಯ ಬಹುತೇಕ ಗುರಿಗಳನ್ನು ಭಾರತಭಾರತವು 2030ರ ವೇಳೆಗೆ ಸಾಧಿಸಲಿದೆ ಎಂದ ಪ್ರಧಾನಿ, 2025ರ ವೇಳೆಗೆ ಭಾರತ ಕ್ಷಯರೋಗದಿಂದ ಮುಕ್ತವಾಗಲಿದೆ ಎಂದು ಹೇಳಿದರು.

ಸೈಬರ್‌ಸ್ಪೇಸ್‌ ಕುರಿತು ಬದ್ಧತೆ: ಮುಕ್ತ ಮತ್ತು ವಿಶ್ವಾಸಾರ್ಹ ಸೈಬರ್‌ಸ್ಪೇಸ್‌ಗೆ ಸಂಬಂಧಿಸಿದಂತೆ ಭಾರತ ಮತ್ತು ಫ್ರಾನ್ಸ್‌ ತಮ್ಮ ಬದ್ಧತೆ ವ್ಯಕ್ತಪಡಿಸಿವೆ. ಆರ್ಥಿಕ ಬೆಳವಣಿಗೆ ಮತ್ತು ಸುಸ್ಥಿರ ಅಭಿವೃದ್ಧಿ ಉತ್ತೇಜಿಸಲು ಡಿಜಿಟಲ್ ತಂತ್ರಜ್ಞಾನ ಬಳಸಿಕೊಳ್ಳಲು ಉಭಯ ದೇಶಗಳು ಸಮ್ಮತಿಸಿವೆ.

ಫ್ರಾನ್ಸ್‌ ಪ್ರಧಾನಿ, ಅಧ್ಯಕ್ಷರ ಜತೆ ಮೋದಿ ಚರ್ಚೆ
ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ಫ್ರಾನ್ಸ್‌ ಪ್ರಧಾನಿ ಎಡ್ವರ್ಡ್‌ ಚಾರ್ಲ್ಸ್‌ ಫಿಲಿಪ್‌ ಅವರನ್ನು ಭೇಟಿಯಾಗಿ ದ್ವಿಪಕ್ಷೀಯ ವಿಷಯಗಳ ಬಗ್ಗೆ ಚರ್ಚಿಸಿದರು. ಗುರುವಾರ ಅವರು ಫ್ರಾನ್ಸ್‌ನ ಅಧ್ಯಕ್ಷ ಎಮ್ಯಾನುಯೆಲ್‌ ಮ್ಯಾಕ್ರನ್‌ ಅವರೊಂದಿಗೆ ಮಾತುಕತೆ ನಡೆಸಿದ್ದರು.

ಉಭಯ ನಾಯಕರು ಎಲ್ಲ ಸ್ವರೂಪದ ಭಯೋತ್ಪಾದನೆಯನ್ನು ತೀವ್ರವಾಗಿ ಖಂಡಿಸಿದ್ದಾರೆ. ಗಡಿಯಾಚೆಗಿನ ಭಯೋತ್ಪಾದನೆ ಮತ್ತು ಭಾರತ ಹಾಗೂ ಫ್ರಾನ್ಸ್‌ನಲ್ಲಿ ನಡೆದಿರುವ ಭಯೋತ್ಪಾದನಾ ಕೃತ್ಯಗಳನ್ನು ಕೂಡ ಎರಡೂ ದೇಶಗಳ ನಾಯಕರು ಖಂಡಿಸಿದ್ದಾರೆ ಎಂದು ಜಂಟಿ ಹೇಳಿಕೆ ತಿಳಿಸಿದೆ.

ಇದೇ ವೇಳೆ ಉಭಯ ದೇಶಗಳು ನಾಲ್ಕು ಒಪ್ಪಂದಗಳಿಗೆ ಸಹಿ ಹಾಕಿವೆ. ಫ್ರಾನ್ಸ್‌ನಿಂದ ಯುಎಇ, ಬಹ್ರೇನ್‌ಗೂ ಭೇಟಿ ನೀಡಲಿರುವ ಪ್ರಧಾನಿ, ಭಾನುವಾರ ಫ್ರಾನ್ಸ್‌ನಲ್ಲಿ ನಡೆಯುವ ‘ಜಿ7’ ಶೃಂಗ ಸಭೆಯಲ್ಲಿ ಭಾಗವಹಿಸಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT