ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌ ಔಷಧ: ರಷ್ಯಾ ಅನುಮೋದನೆ, ಮುಂದಿನ ವಾರದಿಂದ ಬಳಕೆಗೆ ಲಭ್ಯ

Last Updated 2 ಜೂನ್ 2020, 1:36 IST
ಅಕ್ಷರ ಗಾತ್ರ

ಮಾಸ್ಕೊ: ಕೋವಿಡ್‌–19ಗೆ ಚಿಕಿತ್ಸೆ ನೀಡುವ ಔಷಧಕ್ಕೆ ಅನುಮೋದನೆ ನೀಡಿರುವ ರಷ್ಯಾ, ಜೂನ್‌ 11ರಿಂದ ಬಳಸಲು ಉದ್ದೇಶಿಸಿದೆ. ಮಾರಕ ಕಾಯಿಲೆ ಕೋವಿಡ್‌–19 ನಿಯಂತ್ರಿಸುವ ನಿಟ್ಟಿನಲ್ಲಿ ಮಹತ್ವದ ಕ್ರಮ ಇದಾಗಲಿದೆ.

ವೈರಾಣುಗಳನ್ನು ನಿಗ್ರಹಿಸಲು ‘ಅವಿಫಾವಿರ್‌’ ಹೆಸರಿನಲ್ಲಿ ನೋಂದಣಿಯಾಗಿರುವ ಔಷಧವನ್ನು ರೋಗಿಗಳಿಗೆ ನೀಡಲಾಗುವುದು. ಪ್ರತಿ ತಿಂಗಳು ಸುಮಾರು 60 ಸಾವಿರ ಮಂದಿಗೆ ಒದಗಿಸಲಾಗುವುದು. ಈ ಬಗ್ಗೆ ಔಷಧ ತಯಾರಿಸುವ ಕಂಪನಿಯೂ ಒಪ್ಪಿಕೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

‘ಅವಿಫಾವಿರ್‌’ನ ಜೆನರಿಕ್‌ ಹೆಸರು ‘ಫಾವಿಪಿರವಿರ್‌’. ಈ ಔಷಧವನ್ನು 1990ರಲ್ಲಿ ಜಪಾನ್‌ ಕಂಪನಿ ಮೊದಲು ಅಭಿವೃದ್ಧಿಪಡಿಸಿತ್ತು. ಬಳಿಕ, ಆರೋಗ್ಯ ರಕ್ಷಣೆ ಕ್ಷೇತ್ರಕ್ಕೆ ಪ್ರವೇಶಿಸಿದ ‘ಫ್ಯುಜಿಫಿಲ್ಮ’ ಕಂಪನಿ ಇದನ್ನು ಖರೀದಿಸಿತ್ತು.

ರಷ್ಯಾದ ವಿಜ್ಞಾನಿಗಳು ಸಂಶೋಧನೆ ಕೈಗೊಂಡು ಹಲವು ಮಾರ್ಪಾಡುಗಳನ್ನು ಮಾಡಿ ‘ಅವಿಫಾವಿರ್‌’ ಅಭಿವೃದ್ಧಿಪಡಿಸಿದ್ದಾರೆ. ಮಾರ್ಪಾಡುಗಳ ವಿವರಗಳನ್ನು ಮುಂದಿನ ಎರಡು ವಾರಗಳಲ್ಲಿ ನೀಡಲಾಗುವುದು ಎಂದು ಆರೋಗ್ಯ ಕ್ಷೇತ್ರ ಸೇರಿದಂತೆ ವಿವಿಧ ವಲಯಗಳಲ್ಲಿ ಹೂಡಿಕೆ ಮಾಡುವ ಉದ್ದೇಶಕ್ಕೆ ಸ್ಥಾಪಿಸಿರುವ ‘ರಷ್ಯಾ ನೇರ ಹೂಡಿಕೆ ನಿಧಿ’ಯ (ಆರ್‌ಡಿಐಎಫ್‌) ಮುಖ್ಯಸ್ಥ ಕಿರಿಲ್‌ ಡಿಮಿಟ್ರಿವ್‌ ತಿಳಿಸಿದ್ದಾರೆ.

330 ಮಂದಿ ಮೇಲೆ ಈ ಔಷಧದ ಕ್ಲಿನಿಕಲ್‌ ಪ್ರಯೋಗ ನಡೆಸಲಾಗಿದೆ. ಬಹುತೇಕ ಪ್ರಕರಣಗಳಲ್ಲಿ ಕೇವಲ ನಾಲ್ಕು ದಿನಗಳಲ್ಲಿ ವೈರಸ್‌ಗೆ ಚಿಕಿತ್ಸೆ ನೀಡಿ ಯಶಸ್ಸು ಸಾಧಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಚೆಮ್‌ರಾರ್‌ ಕಂಪನಿ ‘ಅವಿಫಾವಿರ್‌’ ಔಷಧ ತಯಾರಿಸುತ್ತಿದೆ. ಈ ಕಂಪನಿಯಲ್ಲಿ ಆರ್‌ಡಿಐಎಫ್‌ ಶೇ 50ರಷ್ಟು ಪಾಲು ಹೊಂದಿದೆ. ಜಪಾನ್‌ನಲ್ಲಿ ಈ ಔಷಧದ ಬಗ್ಗೆ ಪ್ರಯೋಗಗಳನ್ನು ಕೈಗೊಂಡಿದ್ದರಿಂದ ರಷ್ಯಾಗೆ ಹೆಚ್ಚು ವೆಚ್ಚವಾಗಿಲ್ಲ ಎಂದು ಅವರು ತಿಳಿಸಿದ್ದಾರೆ.

ಶನಿವಾರ ರಷ್ಯಾ ಸರ್ಕಾರ ಬಿಡುಗಡೆ ಮಾಡಿದ ಅನುಮೋದನೆ ಪಡೆದ ಔಷಧಗಳ ಪಟ್ಟಿಯಲ್ಲಿ ‘ಅವಿಫಾವಿರ್‌’ ಸಹ ಸೇರಿದೆ.

‘ಅವಿಗಾನ್‌’ ಹೆಸರಿನಲ್ಲಿ ಜಪಾನ್‌ ಇದೇ ಔಷಧದ ಬಗ್ಗೆ ಪ್ರಯೋಗ ನಡೆಸುತ್ತಿದೆ. ಜಪಾನ್‌ ಸರ್ಕಾರ ₹967.50 ಕೋಟಿ(12.8 ಕೋಟಿ ಡಾಲರ್‌) ಹಣಕಾಸಿನ ನೆರವು ಸಹ ನೀಡಿದೆ. ಆದರೆ, ಚಿಕಿತ್ಸೆ ಬಳಸಲು ಜಪಾನ್‌ ಸರ್ಕಾರ ಇನ್ನೂ ಅನುಮೋದನೆ ನೀಡಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT