ಗುರುವಾರ , ಜೂಲೈ 2, 2020
28 °C

ವೈರಸ್‌ ಕುರಿತ ಹೊಸ ಸಂದೇಶದೊಂದಿಗೆ ಪ್ರತ್ಯಕ್ಷರಾದ ಚೀನಾದ ‘ಬಾವಲಿ ಮಹಿಳೆ’

ಏಜನ್ಸೀಸ್‌ Updated:

ಅಕ್ಷರ ಗಾತ್ರ : | |

ಬೀಜಿಂಗ್‌: ಬಾವಲಿಗಳಲ್ಲಿನ ಕೊರೊನಾ ವೈರಸ್‌ಗಳ ಮೇಲಿನ ಅಧ್ಯಯನಕ್ಕೆ ಹೆಸರುವಾಸಿಯಾಗಿರುವ ಚೀನಾದ ‘ಬಾವಲಿ ಮಹಿಳೆ’, ಶಿ ಝೇಂಗ್ಲಿ ಹೊಸ ಸಂದೇಶದೊಂದಿಗೆ ಮರಳಿ ಪ್ರತ್ಯಕ್ಷರಾಗಿದ್ದಾರೆ. ವೈರಸ್‌ಗಳ ಕುರಿತು ಸರಿಯಾಗಿ ಅಧ್ಯಯನ ಮಾಡದೇ ಹೋದರೆ ಮುಂದಿನ ದಿನಗಳಲ್ಲಿ ಇಂಥದ್ದೇ ಸಾಂಕ್ರಾಮಿಕ ರೋಗಗಳು ಹುಟ್ಟಿಕೊಳ್ಳುವುದು ಖಚಿತ ಎಂದು ಅವರು ಎಚ್ಚರಿಕೆ ನೀಡಿದ್ದಾರೆ.  

ಇದನ್ನೂ ಓದಿ: ಬಾವಲಿಜನ್ಯ ವೈರಸ್‌‌ಗಳಿಂದ ಮುಂದಿದೆ ಮನುಷ್ಯಕುಲಕ್ಕೆ ಮಹಾವಿಪತ್ತು!

ಚೀನಾ ಸರ್ಕಾರದ ಸುದ್ದಿವಾಹಿನಿಯೊಂದಕ್ಕೆ ಸಂದರ್ಶನ ನೀಡಿರುವ ಅವರು, ‘ಈಗ ಪತ್ತೆಯಾದ ವೈರಸ್‌ಗಳು ‘ಹಿಮ ಪರ್ವತದ ತುದಿ ಮಾತ್ರ’. ಸಾಂಕ್ರಾಮಿಕ ರೋಗಗಳ ವಿರುದ್ಧದ ಹೋರಾಡಲು ಅಂತರರಾಷ್ಟ್ರೀಯ ಸಹಕಾರ ಅಗತ್ಯ,’ ಎಂದು ಅವರು ಪ್ರತಿಪಾದಿಸಿದ್ದಾರೆ. 

ಚೀನಾದ "ಬಾವಲಿ ಮಹಿಳೆ" ಎಂದೇ ಕರೆಸಿಕೊಳ್ಳುವ, ವುಹಾನ್‌ನ ವೈರಾಣು ಪ್ರಯೋಗಾಲಯದ ಉಪನಿರ್ದೇಶಕರೂ ಆಗಿರುವ ಶಿ ಝೇಂಗ್ಲಿ, ‘ವೈರಸ್‌ಗಳ ಸಂಶೋಧನೆಯಲ್ಲಿ ವಿಜ್ಞಾನಿಗಳು ಮತ್ತು ಸರ್ಕಾರಗಳ ನಡುವೆ ಪಾರದರ್ಶಕತೆ ಮತ್ತು ಪರಸ್ಪರ ಸಹಕಾರ ಇರಬೇಕು. ಮತ್ತು, ವಿಜ್ಞಾನವನ್ನು ರಾಜಕೀಯಗೊಳಿಸುವುದು ತೀರಾ ಬೇಸರದ ಸಂಗತಿ,’ ಎಂದು ಅಭಿಪ್ರಾಯಪಟ್ಟಿದ್ದಾರೆ. 

‘ಭವಿಷ್ಯದಲ್ಲಿ ಯಾವುದೇ ಸಾಂಕ್ರಾಮಿಕ ಸೋಂಕುಗಳಿಗೆ ಮಾನವರು ತುತ್ತಾಗದಂತೆ ಮಾಡಲು ನಾವು ಬಯಸಿದ್ದೇ ಆದರೆ, ವನ್ಯಜೀವಿಗಳಲ್ಲಿರುವ ಅಪರಿಚಿತ ವೈರಸ್‌ಗಳ ಕುರಿತು ಈಗಿನಿಂದಲೇ ಅಧ್ಯಯನ ಆರಂಭಿಸಬೇಕು. ಮುನ್ನೆಚ್ಚರಿಕೆಗಳನ್ನು ನೀಡಬೇಕು. ಒಂದು ವೇಳೆ ನಾವು ವೈರಸ್‌ಗಳ ಮೇಲೆ ಸೂಕ್ತ ಅಧ್ಯಯನ ಕೈಗೊಳ್ಳದೇ ಹೋದರೆ, ಇದೇ ರೀತಿಯ ಮಹಾಮಾರಿ ಸೋಂಕುಗಳು ನಮ್ಮನ್ನು ಕಾಡುವುದು ಖಚಿತ,’ ಎಂದು ಅವರು ಹೇಳಿದ್ದಾರೆ.  

ಕೊರೊನಾ ವೈರಸ್‌ ಚೀನಾದ ವುಹಾನ್‌ ಲ್ಯಾಬ್‌ನಿಂದ ಬಂದದ್ದು ಎಂದು ಅಮೆರಿಕ ಈ ವರೆಗೆ ಆರೋಪಿಸುತ್ತಲೇ ಬಂದಿದೆ. ಈ ಆರೋಪವನ್ನು ಚೀನಾ ನಿರಾಕರಿಸಿದೆ. ಈ ಬಗ್ಗೆ ಶೀ ಝೇಂಗ್ಲಿ ಅವರು ಮಾತನಾಡಿದ್ದಾರೆ. ‘ತಾನು ಕೆಲಸ ಮಾಡಿದ ವೈರಸ್‌ಗಳ ಆನುವಂಶಿಕತೆಗೂ, ಸದ್ಯ ಜತ್ತಿನಾದ್ಯಂತ ಹರಡುತ್ತಿರುವ ಕೊರೊನಾ ವೈರಸ್‌ನ ಅನುವಂಶಿಕತೆಗೂ ತಾಳೆಯೇ ಇಲ್ಲ,’ ಎಂದು ಹೇಳಿದ್ದಾರೆ. 

ಇದಕ್ಕೂ ಮೊದಲು ಸಾಮಾಜಿಕ ತಾಣದಲ್ಲಿ ಪೋಸ್ಟ್‌ ಪ್ರಕಟಿಸಿದ್ದ ಅವರು, ‘ಈಗಿನ ಕೊರೊನಾ ವೈರಸ್‌ ನನ್ನ ಲ್ಯಾಬ್‌ನಿಂದ ಹರಡಿದ್ದ. ಅದಕ್ಕೂ ಲ್ಯಾಬ್‌ಗೂ ಸಂಬಂಧವಿಲ್ಲ. "ನನ್ನ ಜೀವನದ ಮೇಲೆ ಆಣೆ ಮಾಡಿ ನಾನು ಹೇಳುತ್ತಿದ್ದೇನೆ,’’ ಎಂದು ಅವರು ಬರೆದುಕೊಂಡಿದ್ದರು.  
ಇದಕ್ಕೂ ಹಿಂದಿನ ಸಂದರ್ಶನದಲ್ಲಿ ಮಾತನಾಡಿದ್ದ ವುಹಾನ್ ವೈರಾಣು ಪ್ರಯೋಗಾಲಯದ ನಿರ್ದೇಶಕ ವಾಂಗ್ ಯಾನ್ಯಿ, ‘ವುಹಾನ್‌ನ ಪ್ರಯೋಗಾಲಯದಿಂದ ವೈರಸ್ ತಪ್ಪಿಸಿಕೊಂಡಿದೆ’ ಎಂಬ ಕಲ್ಪನೆಯು “ಶುದ್ಧ ಕಟ್ಟುಕಥೆ” ಎಂದು ಹೇಳಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು