ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಣಿಜ್ಯ ಒಪ್ಪಂದ ಸದ್ಯಕ್ಕಿಲ್ಲ, ಚುನಾವಣೆ ಬಳಿಕ ಚರ್ಚೆ: ಡೊನಾಲ್ಡ್‌ ಟ್ರಂಪ್‌

Last Updated 19 ಫೆಬ್ರುವರಿ 2020, 19:45 IST
ಅಕ್ಷರ ಗಾತ್ರ
ADVERTISEMENT
""

ವಾಷಿಂಗ್ಟನ್‌: ‘ಮುಂದಿನ ವಾರ ನಡೆಯಲಿರುವ ಭಾರತ ಭೇಟಿಯ ಸಂದರ್ಭದಲ್ಲಿ ಯಾವುದೇ ವಾಣಿಜ್ಯ ಒಪ್ಪಂದಕ್ಕೆ ಸಹಿ ಹಾಕುವ ಸಾಧ್ಯತೆ ಇಲ್ಲ’ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಹೇಳಿದ್ದಾರೆ.

ಫೆ.24 ಹಾಗೂ 25ರಂದು ಟ್ರಂಪ್‌ ಅವರು ಭಾರತಕ್ಕೆ ಭೇಟಿ ನೀಡಲಿದ್ದಾರೆ.

ಅಮೆರಿಕದಲ್ಲಿ ಬರುವ ನವೆಂಬರ್‌ ತಿಂಗಳಲ್ಲಿ ಅಧ್ಯಕ್ಷೀಯ ಚುನಾವಣೆಗಳು ನಡೆಯಲಿದ್ದು, ಅಲ್ಲಿಯವರೆಗೂ ಭಾರತದ ಜತೆ ಯಾವುದೇ ಒಪ್ಪಂದ ಮಾಡಿಕೊಳ್ಳುವುದಿಲ್ಲ ಎಂಬ ಸೂಚನೆಯನ್ನು ಅವರು ನೀಡಿದ್ದಾರೆ. ಅಧಿಕಾರಕ್ಕೆ ಬಂದ ಬಳಿಕ, ‘ಅಮೆರಿಕವೇ ಮೊದಲು’ ಎಂಬ ನೀತಿಗೆ ಒತ್ತು ನೀಡಿದ್ದ ಟ್ರಂಪ್‌, ಅತಿಯಾದ ಸುಂಕವನ್ನು ವಿಧಿಸುತ್ತದೆ ಎಂಬ ಕಾರಣಕ್ಕೆ ‘ಸುಂಕಗಳ ರಾಜ’ ಎಂದು ಭಾರತವನ್ನು ಗೇಲಿ ಮಾಡಿದ್ದರು. ಅಷ್ಟೇ ಅಲ್ಲ, ಭಾರತ– ಅಮೆರಿಕ ವ್ಯಾಪಾರ ಒಪ್ಪಂದಗಳ ಬಗ್ಗೆ ಹಲವು ಬಾರಿ ಅಸಮಾಧಾನವನ್ನೂ ವ್ಯಕ್ತಪಡಿಸಿದ್ದರು.

‘ನಾವು ಭಾರತದ ಜತೆ ದೊಡ್ಡ ವಾಣಿಜ್ಯ ಒಪ್ಪಂವೊಂದನ್ನು ಮಾಡಿಕೊಳ್ಳಲು ಸಿದ್ಧತೆ ಮಾಡಿಕೊಂಡಿದ್ದೇವೆ. ಅದು ಚುನಾವಣೆಗೂ ಮೊದಲು ನಡೆಯುವುದೇ ಎಂಬುದನ್ನು ಈಗಲೇ ಹೇಳಲಾಗದು. ಆ ಅವಕಾಶವನ್ನು ಮುಂದಿನ ದಿನಗಳಿಗಾಗಿ ಕಾಯ್ದಿರಿಸುತ್ತೇನೆ’ ಎಂದು ಬುಧವಾರ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡುತ್ತಾ ಹೇಳಿದ್ದಾರೆ.

ಆದರೆ, ಟ್ರಂಪ್‌ ಭೇಟಿಯ ವೇಳೆಗೆ ಭಾರತ–ಅಮೆರಿಕ ಮಧ್ಯೆ ವಾಣಿಜ್ಯ ಒಪ್ಪಂದಗಳು ನಡೆಯಲಿವೆ ಎಂದು ಕೆಲವು ಮಾಧ್ಯಮಗಳು ವರದಿ ಮಾಡಿವೆ. ವಾಣಿಜ್ಯ ವಿಚಾರದಲ್ಲಿ ಅಮೆರಿಕದ ಪರವಾಗಿ ಭಾರತದ ಜತೆ ಮಾತುಕತೆ ನಡೆಸುವ ಪ್ರತಿನಿಧಿ ರಾಬರ್ಟ್‌ ಲೈಟ್‌ ಹೈಜರ್‌ ಅವರು ಟ್ರಂಪ್‌ ಜೊತೆ ಭಾರತಕ್ಕೆ ಬರುತ್ತಿಲ್ಲ ಎಂದು ಮೂಲಗಳು ತಿಳಿಸಿವೆ.

ಕಳೆದ ಕೆಲವು ವಾರಗಳಿಂದ ಕೇಂದ್ರದ ಸಚಿವ ಪೀಯೂಷ್‌ ಗೋಯಲ್‌ ಹಾಗೂ ಲೈಟ್‌ಹೈಜರ್‌ ಮಧ್ಯೆ ದೂರವಾಣಿಯ ಮೂಲಕ ಹಲವು ಸುತ್ತಿನ ಮಾತುಕತೆಗಳು ನಡೆದಿವೆ. ಉಕ್ಕು ಹಾಗೂ ಅಲ್ಯುಮೀನಿಯಂ ಉತ್ಪನ್ನಗಳ ಮೇಲೆ ವಿಧಿಸಿರುವ ಸುಂಕವನ್ನು ಅಮೆರಿಕವು ಕಡಿತ ಮಾಡಬೇಕು ಎಂದು ಭಾರತವು ಒತ್ತಾಯಿಸಿದೆ. ತಮ್ಮ ಕೃಷಿ ಹಾಗೂ ತಯಾರಿಕಾ ಕ್ಷೇತ್ರದ ಉತ್ಪನ್ನಗಳು, ಹೈನು ಉತ್ಪನ್ನ ಹಾಗೂ ವೈದ್ಯಕೀಯ ಉಪಕರಣಗಳಿಗೆ ಭಾರತದಲ್ಲಿ ಹೆಚ್ಚಿನ ಮಾರುಕಟ್ಟೆ ಒದಗಿಸಬೇಕು ಎಂದು ಅಮೆರಿಕ ಒತ್ತಾಯಿಸುತ್ತಿದೆ. ಇದರ ಮಧ್ಯೆಯೂ ವಾಣಿಜ್ಯ ಒಪ್ಪಂದ ನಡೆಯುವ ಸಾಧ್ಯತೆಗಳನ್ನು ಅಧಿಕಾರಿಗಳು ಸಂಪೂರ್ಣವಾಗಿ ತಳ್ಳಿಹಾಕಿಲ್ಲ.

ಡೊನಾಲ್ಡ್‌ ಟ್ರಂಪ್‌

ಮೋದಿಯನ್ನು ಶ್ಲಾಘಿಸಿದ ಟ್ರಂಪ್‌
‘ವಾಣಿಜ್ಯ ಒಪ್ಪಂದಗಳ ವಿಚಾರದಲ್ಲಿ ಭಾರತವು ನಮ್ಮನ್ನು ಸರಿಯಾಗಿ ನಡೆಸಿಕೊಂಡಿಲ್ಲ’ ಎಂದು ಟ್ರಂಪ್‌ ಅಸಮಾಧಾನ ವ್ಯಕ್ತಪಡಿಸಿದ್ದರೂ ಪ್ರಧಾನಿ ನರೇಂದ್ರ ಮೋದಿಯ ವಿಚಾರದಲ್ಲಿ ಮೆಚ್ಚುಗೆ ಸೂಚಿಸಿದ್ದಾರೆ.

‘ನಾನು ಮೋದಿಯನ್ನು ತುಂಬಾ ಇಷ್ಟಪಡುತ್ತೇನೆ. ಭಾರತಕ್ಕೆ ಭೇಟಿ ನೀಡಲು ಉತ್ಸುಕನಾಗಿದ್ದೇನೆ’ ಎಂದು ಅವರು ಹೇಳಿದ್ದಾರೆ.

‘ಜಗತ್ತಿನ ಅತಿದೊಡ್ಡ ಕ್ರಿಕೆಟ್ ಕ್ರೀಡಾಂಗಣದ ಉದ್ಘಾಟನೆಯ ಬಳಿಕ ಅಲ್ಲಿಯೇ ಕಾರ್ಯಕ್ರಮವೂ ನಡೆಯಲಿದೆ. ವಿಮಾನ ನಿಲ್ದಾಣದಿಂದ ಕ್ರೀಡಾಂಗಣದವರೆಗೂ ಸುಮಾರು 70 ಲಕ್ಷ ಜನರು ಸೇರಲಿದ್ದಾರೆ ಎಂದು ಮೋದಿ ಹೇಳಿದ್ದಾರೆ. ಅದು ರೋಮಾಂಚನಕಾರಿಯಾಗಿರುತ್ತದೆ’ ಎಂದು ಟ್ರಂಪ್‌ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT