ಗುರುವಾರ , ಸೆಪ್ಟೆಂಬರ್ 24, 2020
20 °C
ಎರಡು ವರ್ಷ ಅವಧಿಯ ತಾತ್ಕಾಲಿಕ ಸದಸ್ಯತ್ವಕ್ಕೆ ಚೀನಾ, ಪಾಕಿಸ್ತಾನ ಸೇರಿ 55 ದೇಶಗಳ ಬೆಂಬಲ

ಭದ್ರತಾ ಮಂಡಳಿ: ಭಾರತಕ್ಕೆ ಏಷ್ಯಾ–ಪೆಸಿಫಿಕ್ ಬಲ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ವಿಶ್ವಸಂಸ್ಥೆ: ಪ್ರಮುಖ ರಾಜತಾಂತ್ರಿಕ ವಿದ್ಯಮಾನದಲ್ಲಿ ಭಾರತಕ್ಕೆ ಜಯ ಲಭಿಸಿದ್ದು, ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಎರಡು ವರ್ಷಗಳ ಅವಧಿಯ ತಾತ್ಕಾಲಿಕ ಸದಸ್ಯತ್ವಕ್ಕೆ (ನಾನ್ ಪರ್ಮನೆಂಟ್) ಚೀನಾ, ಪಾಕಿಸ್ತಾನ ಸೇರಿದಂತೆ 55 ರಾಷ್ಟ್ರಗಳ ಏಷ್ಯಾ–ಪೆಸಿಫಿಕ್ ಒಕ್ಕೂಟ ಅನುಮೋದನೆ ನೀಡಿದೆ.

ವಿಶ್ವಸಂಸ್ಥೆಯಲ್ಲಿ ಭಾರತದ ಕಾಯಂ ಪ್ರತಿನಿಧಿಯಾಗಿರುವ ಸೈಯದ್ ಅಕ್ಬರುದ್ದೀನ್ ಅವರು ಈ ವಿಷಯವನ್ನು ಟ್ವೀಟ್ ಮಾಡಿದ್ದಾರೆ. ಭಾರತದ ಉಮೇದುವಾರಿಕೆಯನ್ನು ಬೆಂಬಲಿಸಿದ ಎಲ್ಲ 55 ರಾಷ್ಟ್ರಗಳನ್ನು ಅವರು ಅಭಿನಂದಿಸಿದ್ದಾರೆ. 

ಭದ್ರತಾ ಮಂಡಳಿಯ ಶಾಶ್ವತ ರಾಷ್ಟ್ರಗಳ ಪಟ್ಟಿಯಲ್ಲಿ ಚೀನಾ, ಫ್ರಾನ್ಸ್, ರಷ್ಯಾ, ಬ್ರಿಟನ್ ಹಾಗೂ ಅಮೆರಿಕ ಇವೆ. ಕಾಯಂ ಸದಸ್ಯತ್ವ ಪಡೆಯಲು ತಾನು ಅರ್ಹ ಎಂದು ಪ್ರತಿಪಾದಿಸಿರುವ ಭಾರತ, ವಿಶ್ವಸಂಸ್ಥೆಯ ಸುಧಾರಣೆಗೆ ಹಲವು ವರ್ಷಗಳಿಂದ ಒತ್ತಾಯಿಸುತ್ತಾ ಬಂದಿದೆ. 

ಭಾರತವನ್ನು ಬೆಂಬಲಿಸಿದ ದೇಶಗಳು

ಚೀನಾ, ಪಾಕಿಸ್ತಾನ, ಅಫ್ಗಾನಿಸ್ತಾನ, ಬಾಂಗ್ಲಾದೇಶ, ಭೂತಾನ್, ಇಂಡೊನೇಷ್ಯಾ, ಇರಾನ್, ಜಪಾನ್, ಕುವೈತ್, ಕಿರ್ಗಿಸ್ತಾನ, ಮಲೇಷ್ಯಾ, ಮಾಲ್ಡೀವ್ಸ್, ಮ್ಯಾನ್ಮಾರ್, ನೇಪಾಳ, ಕತಾರ್, ಸೌದಿ ಅರೇಬಿಯಾ, ಶ್ರೀಲಂಕಾ, ಸಿರಿಯಾ, ಟರ್ಕಿ, ಯುಎಇ, ವಿಯೆಟ್ನಾಂ.

ಆಯ್ಕೆ ಪ್ರಕ್ರಿಯೆ

193 ಸದಸ್ಯರಾಷ್ಟ್ರಗಳ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯು ಪ್ರತಿ ವರ್ಷ ಐದು ತಾತ್ಕಾಲಿಕ ಸದಸ್ಯ ರಾಷ್ಟ್ರಗಳನ್ನು ಚುನಾವಣೆ ಮೂಲಕ ಆಯ್ಕೆ ಮಾಡುತ್ತದೆ. ಸದಸ್ಯತ್ವದ ಅವಧಿ 2 ವರ್ಷ ಮಾತ್ರ. 2021–22ರ ಅವಧಿಗೆ ಭದ್ರತಾ ಮಂಡಳಿಯಲ್ಲಿ ತೆರವಾಗಲಿರುವ ಐದು ತಾತ್ಕಾಲಿಕ ಸದಸ್ಯ ಸ್ಥಾನಗಳಿಗೆ ಮುಂದಿನ ವರ್ಷದ ಜೂನ್‌ನಲ್ಲಿ ಚುನಾವಣೆ ನಡೆಯುವ ಸಾಧ್ಯತೆಯಿದೆ. 

ಪ್ರದೇಶಿಕವಾರು ಹಂಚಿಕೆ

ಒಟ್ಟು 10 ಸ್ಥಾನಗಳನ್ನು ಪ್ರದೇಶವಾರು ಪ್ರಾತಿನಿಧ್ಯದಡಿ ಹಂಚಿಕೆ ಮಾಡಲಾಗಿದೆ. 5 ಸ್ಥಾನಗಳು ಆಫ್ರಿಕಾ ಮತ್ತು ಏಷ್ಯಾ ಖಂಡದ ದೇಶಗಳಿಗೆ, ಒಂದು ಸ್ಥಾನ ಪೂರ್ವ ಯೂರೋಪ್ ದೇಶಗಳಿಗೆ, ಎರಡು ಸ್ಥಾನಗಳು ಲ್ಯಾಟಿನ್ ಅಮೆರಿಕ ಮತ್ತು ಕೆರಿಬಿಯನ್ ದೇಶಗಳಿಗೆ, ಇನ್ನುಳಿದ ಎರಡು ಹುದ್ದೆಗಳು ಪಶ್ಚಿಮ ಯೂರೋಪ್ ಹಾಗೂ ಇತರೆ ದೇಶಗಳಿಗೆ ಹಂಚಿಕೆ ಮಾಡಲಾಗಿದೆ.

ಭಾರತಕ್ಕೆ ಹೊಸದೇನಲ್ಲ

ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಭಾರತವು ಶಾಶ್ವತವಲ್ಲದ ಸದಸ್ಯತ್ವ ಪಡೆಯುತ್ತಿರುವುದು ಹೊಸದೇನಲ್ಲ. ಈ ಮೊದಲು 7 ಬಾರಿ ಈ ಸದಸ್ಯತ್ವವನ್ನು ಭಾರತ ಪಡೆದಿದೆ. 1950–1951, 1967–1968, 1972–1973, 1977–1978, 1984–1985, 1991–1992 ಮತ್ತು ಮಾಜಿ ರಾಯಭಾರಿ ಹರ್ದೀಪ್‌ಸಿಂಗ್ ಪುರಿ ನೇತೃತ್ವದಲ್ಲಿ ಇತ್ತೀಚೆಗೆ ಅಂದರೆ 2011–2012ರಲ್ಲಿ ಭಾರತ ಆಯ್ಕೆಯಾಗಿತ್ತು. 

10 ತಾತ್ಕಾಲಿಕ ಸದಸ್ಯ ದೇಶಗಳು

ಬೆಲ್ಜಿಯಂ, ಐವರಿ ಕೋಸ್ಟ್, ಡೊಮಿನಿಕ್ ರಿಪಬ್ಲಿಕ್, ಈಕ್ವೆಟೋರಿಯಲ್ ಗಿನಿ, ಜರ್ಮನಿ, ಇಂಡೊನೇಷ್ಯಾ, ಕುವೈತ್, ಪೆರು, ಪೋಲೆಂಡ್ ಮತ್ತು ದಕ್ಷಿಣ ಆಫ್ರಿಕಾ.

2020ರ ಜನವರಿಯಿಂದ ಆರಂಭವಾಗಲಿರುವ ಎರಡು ವರ್ಷಗಳ ತಾತ್ಕಾಲಿಕ ಸದಸ್ಯತ್ವಕ್ಕೆ ಎಸ್ಟೋನಿಯಾ, ನಿಗೆರ್, ಸೇಂಟ್ ವಿನ್ಸೆಂಟ್ ಅಂಡ್ ಗ್ರೆನಡೈನ್ಸ್ ಮತ್ತು ವಿಯೆಟ್ನಾಂ ದೇಶಗಳು ಇದೇ ತಿಂಗಳ ಆರಂಭದಲ್ಲಿ ಆಯ್ಕೆಯಾಗಿವೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು