ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಭವನೀಯ ಯುದ್ಧದಿಂದ ಹಿಂದೆ ಸರಿದ ಅಮೆರಿಕ–ಇರಾನ್‌

ಮುಂದುವರಿದ ಸಂಘರ್ಷದ ಬಿಕ್ಕಟ್ಟು
Last Updated 9 ಜನವರಿ 2020, 19:45 IST
ಅಕ್ಷರ ಗಾತ್ರ

ವಾಷಿಂಗ್ಟನ್‌: ಇರಾಕ್‌ನಲ್ಲಿರುವ ಅಮೆರಿಕದ ವಾಯುನೆಲೆಗಳ ಮೇಲೆ ಇರಾನ್‌ ನಡೆಸಿದ ಕ್ಷಿಪಣಿ ದಾಳಿಗೆ ಮಿಲಿಟರಿ ಪ್ರತೀಕಾರ ತೆಗೆದುಕೊಳ್ಳುವುದಿಲ್ಲ ಎಂದು ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ಹೇಳಿಕೆ ನೀಡಿದ್ದಾರೆ ಆದರೆ, ಅಮೆರಿಕ–ಇರಾನ್‌ ಸಂಭವನೀಯ ಯುದ್ಧದಿಂದ ಹಿಂದೆ ಸರಿದಿರುವ ಮಧ್ಯೆಯೂ ಸಂಘರ್ಷದ ಬಿಕ್ಕಟ್ಟು ಮುಂದುವರಿದಿದೆ.

ದಾಳಿಯಲ್ಲಿ ಯಾವುದೇ ಜೀವಹಾನಿ ಸಂಭವಿಸಿಲ್ಲ ಎಂದು ಹೇಳಿದ್ದರೂ, ಈ ಪ್ರದೇಶದಲ್ಲಿ ಅಮೆರಿಕ ಪಡೆಗಳು ಕಟ್ಟೆಚ್ಚರ ವಹಿಸಿವೆ.

ಶ್ವೇತಭವನದಲ್ಲಿ ಮಾತನಾಡಿದ ಟ್ರಂಪ್‌, ಬಿಕ್ಕಟ್ಟನ್ನು ನಿವಾರಿಸುವ ಉದ್ದೇಶವನ್ನು ತೋರಿದ್ದಾರೆ. ಆದರೆ, ಇರಾನ್‌ನ ಕುದ್ಸ್‌ ಪಡೆಯ ಮುಖ್ಯಸ್ಥ ಖಾಸಿಂ ಸುಲೇಮಾನಿ ಹತ್ಯೆ ನಂತರದ ಯುದ್ಧದ ಭೀತಿಯ ಪರಿಸ್ಥಿತಿ ಇನ್ನೂ ತಿಳಿಯಾಗಿಲ್ಲ.

ಅಮೆರಿಕವು 1979ರಲ್ಲಿ ರಾಯಭಾರ ಕಚೇರಿಯನ್ನು ವಶಪಡಿಸಿಕೊಂಡ ನಂತರ, ಮೊದಲ ಬಾರಿಗೆ ಇರಾನ್‌ ನೇರವಾಗಿ ಅಮೆರಿಕದ ಪಡೆಗಳ ಮೇಲೆ ಕ್ಷಿಪಣಿ ದಾಳಿ ನಡೆಸಿದೆ. ಅಮೆರಿಕದ ಯೋಧರನ್ನು ಕೊಲ್ಲುವ ಉದ್ದೇಶದಿಂದಲೇ ಈ ದಾಳಿ ನಡೆಸಲಾಗಿದೆಂದು ನಂಬಲಾಗಿದೆ ಎಂದು ಪೆಂಟಗನ್‌ ಬುಧವಾರ ಹೇಳಿದೆ.

ಟ್ರಂಪ್‌ ಮಾತನಾಡಿದ ಕೆಲವು ಗಂಟೆಗಳ ನಂತರ, ಬಾಗ್ದಾದ್‌ನ ಹಸಿರು ವಲಯದಲ್ಲಿರುವ ರಾಜತಾಂತ್ರಿಕ ಕಚೇರಿ ಪ್ರದೇಶದಲ್ಲಿ ಸಣ್ಣ ರಾಕೆಟ್‌ಗಳಿಂದ ದಾಳಿ ನಡೆದಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಆದರೆ, ಯಾವುದೇ ಸಾವುನೋವುಗಳ ಬಗ್ಗೆ ವರದಿಯಾಗಿಲ್ಲ.

‘ಸುಲೇಮಾನಿ ಹತ್ಯೆಗೆ ಪ್ರತೀಕಾರವಾಗಿ ಕ್ಷಿಪಣಿ ದಾಳಿ ನಡೆಸಿರುವ ಇರಾನ್‌, ಇಷ್ಟಕ್ಕೇ ತೃಪ್ತಿ ಪಟ್ಟಿದೆ ಎಂದು ಈಗಲೇ ಹೇಳುವುದು ಸರಿಯಲ್ಲ’ ಎಂದು ಜನರಲ್‌ ಮಾರ್ಕ್‌ ಮಿಲ್ಲೆ ಹೇಳಿದ್ದಾರೆ.

‘ಇರಾನ್‌ ನಿರ್ದೇಶನದ ಅಥವಾದ ನಿರ್ದೇಶನವಿಲ್ಲದೇ ಶಿಯಾ ಮಿಲಿಟರಿ ಗುಂಪುಗಳು ನಮ್ಮ ಅಸ್ತಿತ್ವವನ್ನು ಹಾಳುಮಾಡಲು ಪ್ರಯತ್ನಿಸುವುದು ಮುಂದುವರಿದಿದೆ’ ಎಂದು ರಕ್ಷಣಾ ಕಾರ್ಯದರ್ಶಿ ಮಾರ್ಕ್‌ ಎಸ್ಪರ್‌ ಹೇಳಿದ್ದಾರೆ.

‘ಆರ್ಥಿಕ ನಿರ್ಬಂಧಗಳ ಬಗ್ಗೆ ಹೆಚ್ಚಿನ ಒತ್ತಡ ಹೇರುವ ನಿಟ್ಟಿನಲ್ಲಿ ಅಭಿಯಾನ ನಡೆಸಲಾಗುವುದು. ಇರಾನ್‌ ತನ್ನ ನಡವಳಿಕೆಯನ್ನು ಬದಲಾಯಿಸಿಕೊಳ್ಳುವವರೆಗೆ ಹೊಸ ನಿರ್ಬಂಧಗಳು ಜಾರಿಯಲ್ಲಿರುತ್ತವೆ’ ಎಂದು ಟ್ರಂಪ್‌ ಹೇಳಿದ್ದಾರೆ.

ಇದಕ್ಕೆ ತಿರುಗೇಟು ನಿಡಿರುವ ಇರಾನ್‌ನ ಸರ್ವೋಚ್ಚ ನಾಯಕಅಯಾತ್‌ಉಲ್ಲಾ ಅಲಿ ಖೊಮೇನಿ ಅವರು, ‘ಸೇಡು ತೀರಿಸಿಕೊಳ್ಳಲು ಇಷ್ರಾಟೇ ಕ್ತ್ರಿರಮಗಳು ಸಾಕಾಗುವುದಿಲ್ಲ. ಈ ಪ್ರದೇಶದಲ್ಲಿರುವ ಅಮೆರಿಕದ ಪಡೆಗಳನ್ನು ಹೊರಹಾಕಬೇಕು. ಬಹುಶಃ ಅಧ್ಯಕ್ಷ ಪದವಿಯ ಅತಿದೊಡ್ಡ ಪರೀಕ್ಷೆಯನ್ನು ಎದುರಿಸುತ್ತಿರುವ ಟ್ರಂಪ್‌, ಮುಂದಿನ ಎಚ್ಚರಿಕೆಯಿಂದ ತಪ್ಪಿಸಿಕೊಳ್ಳಲು ಹಾನಿ ಪ್ರಮಾಣ ಕಡಿಮೆ ಮಾಡಲು ಮುಂದಾಗಿದ್ದಾರೆ’ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT