ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜಯ್‌ ಮಲ್ಯಗೆ ಹಿನ್ನಡೆ: ಭಾರತಕ್ಕೆ ಹಸ್ತಾಂತರ ಅನಿವಾರ್ಯ

ಬ್ರಿಟನ್‌ ಸುಪ್ರೀಂ ಕೋರ್ಟ್‌ನಲ್ಲೂ ಮೇಲ್ಮನವಿ ವಜಾ
Last Updated 14 ಮೇ 2020, 19:45 IST
ಅಕ್ಷರ ಗಾತ್ರ

ಲಂಡನ್‌:ಭಾರತಕ್ಕೆ ಹಸ್ತಾಂತರ ಮಾಡುವಂತೆ ಹೊರಡಿಸಿದ್ದ ಆದೇಶ ಪ್ರಶ್ನಿಸಿ ಉದ್ಯಮಿ ವಿಜಯ ಮಲ್ಯ ಸಲ್ಲಿಸಿದ್ದ ಮೇಲ್ಮನವಿಯನ್ನುಲಂಡನ್‌ ಸುಪ್ರೀಂ ಕೋರ್ಟ್ ಗುರುವಾರ‌ ವಜಾ ಮಾಡಿರುವುದರಿಂದಭಾರೀ ಹಿನ್ನಡೆಯಾಗಿದೆ. ಹೀಗಾಗಿ ಮಲ್ಯ ಅವರನ್ನು 28 ದಿನಗಳ ಒಳಗಾಗಿ ಭಾರತಕ್ಕೆ ಹಸ್ತಾಂತರಿಸುವ ಪ್ರಕ್ರಿಯೆ ಪೂರ್ಣಗೊಳ್ಳಬೇಕಾಗುತ್ತದೆ.

ಸ್ಥಗಿತವಾಗಿರುವ ಕಿಂಗ್‌ಫಿಷರ್‌ ವಿಮಾನಯಾನ ಸಂಸ್ಥೆಯ ಸಾಲ ಮರುಪಾವತಿಸಲು ವಂಚನೆ ಎಸಗಿದ ಹಾಗೂ ಅಕ್ರಮ ಹಣ ವರ್ಗಾವಣೆ ಆರೋಪ ಸಂಬಂಧ ಮಲ್ಯ ಅವರನ್ನು ಭಾರತಕ್ಕೆ ಹಸ್ತಾಂತರಿಸಬೇಕು ಎಂದು ವೆಸ್ಟ್‌ಮಿನ್‌ಸ್ಟರ್‌ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯ ತೀರ್ಪು ನೀಡಿತ್ತು. ಇದನ್ನು ಪ್ರಶ್ನಿಸಿ ಮಲ್ಯ ಅವರು ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ಏಪ್ರಿಲ್‌ 20ರಂದು ಹೈಕೋರ್ಟ್‌ ಈ ಅರ್ಜಿಯನ್ನು ವಜಾಗೊಳಿಸಿತ್ತು. ಇದಾದ ಬಳಿಕ ಅವರು ಸುಪ್ರೀಂ ಕೋರ್ಟ್‌ ಮೊರೆ ಹೋಗಿದ್ದರು.

ಭಾರತ-ಬ್ರಿಟನ್‌ ಹಸ್ತಾಂತರ ಒಪ್ಪಂದ ಹಾಗೂ ಕೋರ್ಟ್‌ ಆದೇಶದ ಪ್ರಕಾರ ಬ್ರಿಟನ್‌ ಗೃಹ ವ್ಯವಹಾರಗಳ ಕಚೇರಿ, ಮಲ್ಯ ಅವರನ್ನು 28 ದಿನಗಳ ಒಳಗಾಗಿ ಭಾರತಕ್ಕೆ ಹಸ್ತಾಂತರಿಸಬೇಕಾಗುತ್ತದೆ.

ಮುಂದಿನ ಆಯ್ಕೆ ಏನು?

ಹಸ್ತಾಂತರ ಪ್ರಕ್ರಿಯೆ ತಡೆಯಲು, ಯುರೋಪಿಯನ್‌ ಕೋರ್ಟ್‌ ಆಫ್‌ ಹ್ಯೂಮನ್‌ ರೈಟ್ಸ್‌ಗೆ (ಇಸಿಎಚ್‌ಆರ್) ಮೊರೆ ಹೋಗುವ ಆಯ್ಕೆ ಮಲ್ಯ ಮುಂದಿದೆ. ನ್ಯಾಯಯುತ ವಿಚಾರಣೆ ನಡೆಯುವುದಿಲ್ಲ ಹಾಗೂ ಮಾನವ ಹಕ್ಕುಗಳ ಕುರಿತ ಯರೋಪ್‌ ಒಪ್ಪಂದದ 3ನೇ ಕಲಂ ಉಲ್ಲಂಘಿಸಿ ತನ್ನನ್ನು ವಶಕ್ಕೆ ಪಡೆಯಲಾಗುತ್ತದೆ ಎನ್ನುವ ಆಧಾರದ ಮೇಲೆ ಅವರು ಇಸಿಎಚ್‌ಆರ್‌ಗೆ ಮನವಿ ಸಲ್ಲಿಸಬಹುದಾಗಿದೆ. ಒಂದು ವೇಳೆ ಇಸಿಎಚ್‌ಆರ್‌ಗೆ ಅರ್ಜಿ ಸಲ್ಲಿಕೆಯಾದರೆ ಅದು ಇತ್ಯರ್ಥವಾಗುವವರೆಗೂ ಹಸ್ತಾಂತರ ಪ್ರಕ್ರಿಯೆಗೆ ತಡೆಯಾಗಲಿದೆ.

'ಸಾಲಮರುಪಾವತಿಗೆ ಅವಕಾಶ ನೀಡಿ; ಪ್ರಕರಣ ಮುಕ್ತಾಯಗೊಳಿಸಿ'

ನವದೆಹಲಿ: ‘ಸಾಲ ಮರುಪಾವತಿಸಲು ಅವಕಾಶ ನೀಡಿ, ತನ್ನ ವಿರುದ್ಧದ ಪ್ರಕರಣವನ್ನು ಮುಕ್ತಾಯಗೊಳಿಸಬೇಕು’ ಎಂದು ಉದ್ಯಮಿ ವಿಜಯ್‌ ಮಲ್ಯ ಕೇಂದ್ರ ಸರ್ಕಾರಕ್ಕೆ ಮತ್ತೊಮ್ಮೆ ಮನವಿ ಮಾಡಿದ್ದಾರೆ.

ಕೊರೊನಾ ಪರಿಹಾರಕ್ಕಾಗಿ ₹20 ಲಕ್ಷ ಕೋಟಿ ಪ್ಯಾಕೇಜ್‌ ಘೋಷಿಸಿದ್ದಕ್ಕಾಗಿ ಕೇಂದ್ರ ಸರ್ಕಾರವನ್ನು ಅಭಿನಂದಿಸಿದ ಅವರು, ‘ಸರ್ಕಾರ ಬೇಕಾದಷ್ಟು ಹಣ ಮುದ್ರಿಸಬಹುದು. ಆದರೆ, ಬ್ಯಾಂಕ್‌ಗಳಿಗೆ ಶೇ 100ರಷ್ಟು ಸಾಲ ಮರುಪಾವತಿಸಲು ಅವಕಾಶ ನೀಡಿ ಎನ್ನುವ ನನ್ನಂತಹ ಸಣ್ಣ ಕೊಡುಗೆದಾರನ ಮನವಿಯನ್ನು ಸತತವಾಗಿ ನಿರ್ಲಕ್ಷಿಸಬಹುದೆ?’ ಎಂದು ಟ್ವೀಟ್‌ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT