ಶನಿವಾರ, ಜುಲೈ 24, 2021
21 °C
ರಷ್ಯಾದಿಂದ ವಿಮಾನದಲ್ಲಿ ಬಂದ ವಿದ್ಯಾರ್ಥಿಗಳಲ್ಲಿ ರಾಜ್ಯದ 170 ಮಂದಿ

ಬೆಂಗಳೂರಿಗೆ ಬಂದ 227 ವಿದ್ಯಾರ್ಥಿಗಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು/ದಾವಣಗೆರೆ: ಸತತ ಮೂರು ತಿಂಗಳುಗಳ ಪ್ರಯತ್ನದ ನಂತರ ರಾಜ್ಯದ ವೈದ್ಯಕೀಯ ವಿದ್ಯಾರ್ಥಿಗಳ ತಂಡವು ರಷ್ಯಾದ ಮಾಸ್ಕೋದಿಂದ ನಗರದ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಮಂಗಳವಾರ ಮುಂಜಾನೆ 4.30ಕ್ಕೆ ಬಂದಿಳಿದಿದೆ. ವಿದ್ಯಾರ್ಥಿಗಳನ್ನು ವಸತಿ ಗೃಹಗಳಲ್ಲಿ ಕ್ವಾರಂಟೈನ್‌ಗೆ ಒಳಪಡಿಸಲಾಗಿದೆ.

ರಷ್ಯಾದಲ್ಲಿಯೂ ಕೋವಿಡ್‌–19 ಬಿಕ್ಕಟ್ಟಿನಿಂದಾಗಿ ಕಾಲೇಜು, ಹಾಸ್ಟೆಲ್‌ಗಳೆಲ್ಲ ಮುಚ್ಚಿವೆ. ರಾಜ್ಯಕ್ಕೆ ಮರಳಲು ವೈದ್ಯಕೀಯ ವಿದ್ಯಾರ್ಥಿಗಳು ಶತಪ್ರಯತ್ನ ನಡೆಸಿದ್ದರು. ಕೇಂದ್ರ ಸಚಿವರು, ಸಂಸದರು, ರಾಜ್ಯದ ಮಂತ್ರಿಗಳು, ಶಾಸಕರಿಗೆ ಸಾಮಾಜಿಕ ಮಾಧ್ಯಮಗಳ ಮೂಲಕ ಮನವಿ ಮಾಡಿಕೊಂಡಿದ್ದರು.

ಸೋಮವಾರ ಸಂಜೆ 6ಕ್ಕೆ ಮಾಸ್ಕೊದಿಂದ ಹೊರಟ ‘ರಾಯಲ್‌ ಫ್ಲೈಟ್‌’ ಏರ್‌ಲೈನ್ಸ್‌ನ ವಿಶೇಷ ವಿಮಾನದಲ್ಲಿ ಒಟ್ಟು 227 ವಿದ್ಯಾರ್ಥಿಗಳು ಬೆಂಗಳೂರಿಗೆ ಬಂದಿಳಿದಿದ್ದಾರೆ. ಇವರಲ್ಲಿ ರಾಜ್ಯದ 170 ವಿದ್ಯಾರ್ಥಿಗಳು ಇದ್ದಾರೆ. ಉಳಿದವರು ಪಕ್ಕದ ರಾಜ್ಯಗಳಾದ ಆಂಧ್ರಪ್ರದೇಶ, ತಮಿಳುನಾಡು, ಕೇರಳದವರಾಗಿದ್ದಾರೆ.

ಬೆಂಗಳೂರಿಗೆ ಬರಲು ಅಗತ್ಯ ವ್ಯವಸ್ಥೆ ಮಾಡಿಕೊಡುವಂತೆ ದಾವಣಗೆರೆ ಜಿಲ್ಲೆಯ 11 ವಿದ್ಯಾರ್ಥಿಗಳು ಸಂಸದ ಜಿ.ಎಂ. ಸಿದ್ದೇಶ್ವರ ಅವರಿಗೆ ಫೇಸ್‍ಬುಕ್ ಹಾಗೂ ಟ್ವಿಟರ್ ಮೂಲಕ ಮನವಿ ಮಾಡಿದ್ದರು. ವಿದ್ಯಾರ್ಥಿಗಳ ಮನವಿಗೆ ಸ್ಪಂದಿಸಿದ ಸಂಸದರು ಜುಲೈ 1ರಂದು ವಿದೇಶಾಂಗ ಸಚಿವ ಜೈಶಂಕರ್‌ ಹಾಗೂ ವಿಮಾನಯಾನ ಸಚಿವ ಹರದೀಪ್‌ಸಿಂಗ್ ಪುರಿ ಅವರಿಗೆ ಪತ್ರ ಬರೆದು ಗಮನ ಸೆಳೆದಿದ್ದರು.

‘ಬೆಂಗಳೂರು, ದಾವಣಗೆರೆ, ತುಮಕೂರು, ಹುಬ್ಬಳ್ಳಿ, ಗಂಗಾವತಿ ಸೇರಿ ರಾಜ್ಯದ ವಿವಿಧ ಕಡೆಗಳ ವಿದ್ಯಾರ್ಥಿಗಳು ವಿಮಾನದಲ್ಲಿ ಬಂದಿದ್ದೇವೆ. ದೇಶ ಹಾಗೂ ರಾಜ್ಯದ ಬಹುತೇಕ ಜನಪ್ರತಿನಿಧಿಗಳಿಗೆ ಮೂರು ತಿಂಗಳುಗಳಿಂದ ಟ್ವಿಟರ್‌ ಮೂಲಕ ಮನವಿ ಸಲ್ಲಿಸಿದ್ದೆವು. ಈ ಮೊದಲು ವಿಮಾನಗಳು ಬಂದಿದ್ದರೂ, ದೇಶದ ಎಲ್ಲ ರಾಜ್ಯಗಳ ಜನ ಅದರಲ್ಲಿ ಹೋಗಿದ್ದರು. ನಾವು ದೆಹಲಿಗೆ ತೆರಳಿ ಅಲ್ಲಿಂದ ಬೆಂಗಳೂರಿಗೆ ಬರಬೇಕಿತ್ತು. ನೇರವಾಗಿ ಬೆಂಗಳೂರಿಗೇ ವಿಶೇಷ ವಿಮಾನದ ವ್ಯವಸ್ಥೆ ಮಾಡಬೇಕು ಎಂದು ಒತ್ತಾಯ ಮಾಡಿದ್ದೆವು. ರಾಜ್ಯಸಭಾ ಸದಸ್ಯ ಜಿ.ಸಿ. ಚಂದ್ರಶೇಖರ್ ನಮ್ಮ ನೆರವಿಗೆ ಬಂದಿದ್ದಲ್ಲದೆ, ವಿಮಾನ ವ್ಯವಸ್ಥೆ ಮಾಡಲು ತುಂಬಾ ಶ್ರಮಿಸಿದರು’ ಎಂದು ದಾವಣಗೆರೆಯ ವಿದ್ಯಾರ್ಥಿ ಪರಶುರಾಮ್‌ ‘ಪ್ರಜಾವಾಣಿ’ಗೆ ತಿಳಿಸಿದರು. 

‘ವಿಶ್ವವಿದ್ಯಾಲಯಗಳು, ಕಾಲೇಜುಗಳು ಎಲ್ಲ ಮುಚ್ಚಿವೆ. ಸ್ವದೇಶಕ್ಕೆ ಮರಳುವಂತೆ ಕಾಲೇಜಿನವರು ತಿಳಿಸಿದರು. ಮರಳಿ ಬರುವ ದಿನಾಂಕವನ್ನು ಹೇಳಿಲ್ಲ. ಕೊರೊನಾ ಬಿಕ್ಕಟ್ಟು ಮುಗಿದ ನಂತರ, ಮತ್ತೆ ವ್ಯಾಸಂಗಕ್ಕೆ ಮಾಸ್ಕೋಗೆ ಮರಳುತ್ತೇವೆ’ ಎಂದು ಹೇಳಿದರು. 

‘ವಿಮಾನದಿಂದ ಬಂದು ಇಳಿದವರನ್ನು ಏಳು ದಿನ ಸಾಂಸ್ಥಿಕ ಕ್ವಾರಂಟೈನ್‌ಗೆ ಒಳಪಡಿಸಲಾಗಿದೆ. ಬಳಿಕ ಏಳು ದಿನ ಹೋಂ ಕ್ವಾರಂಟೈನ್ ಆಗಬಹುದು ಇಲ್ಲವೇ ಸಾಂಸ್ಥಿಕ ಕ್ವಾರಂಟೈನ್‌ ಅನ್ನು ಆಯ್ಕೆ ಮಾಡಿಕೊಳ್ಳಬಹುದು’ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು