ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನಸಾಗಿಯೇ ಉಳಿದ ಕನಿಷ್ಠ ವೇತನ

24 ವರ್ಷಗಳಿಂದ ಹೋರಾಟ ನಡೆಸುತ್ತಿರುವ ಎಪಿಎಂಸಿ ತೂಕ ದಾಖಲಾತಿದಾರರು
Last Updated 4 ಆಗಸ್ಟ್ 2020, 21:18 IST
ಅಕ್ಷರ ಗಾತ್ರ

ಬೆಂಗಳೂರು: ಕೃಷಿ ಉತ್ಪನ್ನ ಮಾರುಕಟ್ಟೆಗಳಲ್ಲಿ (ಎಪಿಎಂಸಿ) ಕೆಲಸ ನಿರ್ವಹಿಸುತ್ತಿರುವ ತೂಕ ದಾಖಲಾತಿದಾರರ ಕನಿಷ್ಠ ವೇತನದ ಕನಸು 24 ವರ್ಷಗಳಿಂದ ಕನಸಾಗಿಯೇ ಉಳಿದಿದೆ.

ರಾಜ್ಯದ 150 ಎಪಿಎಂಸಿಗಳಲ್ಲಿ 1,400ಕ್ಕೂ ಹೆಚ್ಚಿದ್ದ ತೂಕ ದಾಖಲಾತಿದಾರರ ಸಂಖ್ಯೆ ಈಗ 900ಕ್ಕೆ ಇಳಿದಿದೆ. ತಿಂಗಳಿಗೆ ₹400 ವೇತನದಿಂದ ಕೆಲಸ ಆರಂಭಿಸಿದ ಇವರು ಕನಿಷ್ಠ ವೇತನಕ್ಕಾಗಿ ನಿರಂತರವಾಗಿ ಹೋರಾಟ ನಡೆಸಿಕೊಂಡೇ ಬಂದಿದ್ದಾರೆ.

ಎಪಿಎಂಸಿಯು ಸುಂಕದ ಜತೆಗೆ ತೂಕದವರ ಶುಲ್ಕವನ್ನೂ ಸಂಗ್ರಹಿಸುತ್ತದೆ. ತೂಕದವರ ಕಲ್ಯಾಣ ನಿಧಿಗೆ ಆ ಹಣ ವರ್ಗಾಯಿಸಿ ಅದರ ಮೂಲಕ ವೇತನ ಪಾವತಿಸಲಾಗುತ್ತಿದೆ.

ಕಾರ್ಮಿಕ ಇಲಾಖೆಯ ಕನಿಷ್ಠ ವೇತನ ಕಾಯ್ದೆ ಪ್ರಕಾರ ವೇತನ ನಿಗದಿ ಮಾಡಬೇಕು ಎಂಬ ಹೋರಾಟವನ್ನು ತೂಕದವರು 30 ವರ್ಷಗಳ ಹಿಂದೆಯೇ ಆರಂಭಿಸಿದ್ದರು. ಕನಿಷ್ಠ ವೇತನ ನೀಡಬೇಕು ಎಂದು ಹೈಕೋರ್ಟ್‌ 1996ರಲ್ಲಿ ಆದೇಶಿಸಿತು.ಆದರೆ, ಅದು ಈವರೆಗೆ ಪಾಲನೆಯಾಗಿಲ್ಲ.

‘ಕಾರ್ಮಿಕರ ಕನಿಷ್ಠ ವೇತನ ಕಾಯ್ದೆ ಪ್ರಕಾರ ತಿಂಗಳಿಗೆ ₹12,500 ವೇತನ ನಿಗದಿ ಮಾಡಬೇಕು. ಯಶವಂತಪುರ ಎಪಿಎಂಸಿಯ 15 ಜನರಿಗೆ ಮಾತ್ರ ಈ ವೇತನ ಸಿಗುತ್ತಿದೆ. ಉಳಿದವರಿಗೆ ₹3 ಸಾವಿರದಿಂದ ₹7 ಸಾವಿರದ ತನಕ ವೇತನ ಸಿಗುತ್ತಿದೆ. ಒಂದೊಂದು ಎಪಿಎಂಸಿಯಲ್ಲಿ ಒಂದೊಂದು ರೀತಿಯ ವೇತನ ನೀಡಲಾಗುತ್ತಿದೆ’ ಎಂದು ತೂಕ ದಾಖಲಾತಿದಾರರ ಸಂಘದ ಅಧ್ಯಕ್ಷ ಯು. ಮಲ್ಲಿಕಾರ್ಜುನಪ್ಪ ಹೇಳಿದರು.

‘ಕಾರ್ಮಿಕ ಕಾಯ್ದೆ ಪ್ರಕಾರಪಿಎಫ್‌, ಇಎಸ್‌ಐ, ಗ್ರಾಚ್ಯುಟಿ ಸೇರಿ ಎಲ್ಲಾ ರೀತಿಯ ಸೌಲಭ್ಯಗಳನ್ನೂ ನೀಡಬೇಕು ಎಂದು ಕೋರ್ಟ್‌ ಹೇಳಿದೆ. ಆದರೆ, ಕನಿಷ್ಠ ವೇತನಕ್ಕೆ ಸಮನಾದ ವೇತನ ನೀಡುವುದಾಗಿ ನ್ಯಾಯಾಲಯಕ್ಕೆ ತಿಳಿಸಿರುವ ಎಪಿಎಂಸಿ ಅಧಿಕಾರಿಗಳು, ಅದನ್ನೂ ಈವರೆಗೂ ನೀಡಿಲ್ಲ’ ಎಂದು ಅವರು ತಿಳಿಸಿದರು.

‘ಯಾರ ಆದೇಶಕ್ಕೂ ಬೆಲೆ ಇಲ್ಲ’

‘ಬಿ.ಎಸ್. ಯಡಿಯೂರಪ್ಪ ಅವರು ಮೊದಲ ಬಾರಿಗೆ ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲೇ ಕನಿಷ್ಠ ವೇತನ ನೀಡಬೇಕು ಎಂದು ಆದೇಶಿಸಿದ್ದರು. ಕನಿಷ್ಠ ವೇತನ ನೀಡುವಂತೆ ಸೂಚಿಸಿ ಕೃಷಿ ಮಾರುಕಟ್ಟೆ ಇಲಾಖೆಯ ನಿರ್ದೇಶಕ ಕರೀಗೌಡ ಅವರೂ ಇತ್ತೀಚೆಗೆ ಸುತ್ತೊಲೆ ಹೊರಡಿಸಿದ್ದಾರೆ. ಆದರೆ, ಎಪಿಎಂಸಿಗಳ ಯಾವೊಬ್ಬ ಕಾರ್ಯದರ್ಶಿಯೂ ಈ ಆದೇಶಗಳನ್ನು ಪಾಲಿಸಿಲ್ಲ’ ಎಂದು ಮಲ್ಲಿಕಾರ್ಜುನಪ್ಪ ಹೇಳಿದರು.

‘ಮೇಲಧಿಕಾರಿಗಳಿಗೆ ಸುಳ್ಳು ಮಾಹಿತಿ ನೀಡಿ ದಾರಿ ತಪ್ಪಿಸುವ ಕೆಲಸವನ್ನು ಎಪಿಎಂಸಿ ಕಾರ್ಯದರ್ಶಿಗಳು ನಿರಂತರವಾಗಿ ಮಾಡಿಕೊಂಡು ಬಂದಿದ್ದಾರೆ. ಪ್ರಶ್ನೆ ಮಾಡಿದವರ ವಿರುದ್ಧ ಸಲ್ಲದ ಆರೋಪಗಳನ್ನು ಹೊರಿಸಿ ಕೆಲಸದಿಂದಲೇ ತೆಗೆದು ಹಾಕುತ್ತಿದ್ದಾರೆ’ ಎಂದರು.

‘ಅಧಿಕಾರಿಗಳು ದುರುದ್ದೇಶದಿಂದ ನಮಗೆ ಕನಿಷ್ಠ ವೇತನ ಸಿಗದಂತೆ ಮಾಡುತ್ತಿದ್ದಾರೆ. ನ್ಯಾಯಾಲಯ, ಕಾರ್ಮಿಕ ಇಲಾಖೆ, ಮುಖ್ಯಮಂತ್ರಿ ಆದೇಶಗಳಿಗೂ ಈ ಅಧಿಕಾರಿಗಳು ಬೆಲೆ ಕೊಡುತ್ತಿಲ್ಲ’ ಎಂದು ಹೇಳಿದರು.

ಈ ಬಗ್ಗೆ ಪ್ರತಿಕ್ರಿಯೆ ಪಡೆಯಲು ಕೃಷಿ ಮಾರುಕಟ್ಟೆ ಇಲಾಖೆಯ ನಿರ್ದೇಶಕ ಕರೀಗೌಡ ಅವರನ್ನು ಸಂಪರ್ಕಿಸಲು ಹಲವು ಬಾರಿ ಪ್ರಯತ್ನಿಸಲಾಯಿತು. ಆದರೆ, ಅವರು ಸಂಪರ್ಕಕ್ಕೆ ಸಿಗಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT