ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ಯಾನ್ಸರ್‌ಗೆ ಬಲಿಯಾದ ಹುಡುಗಿ ಉಳಿಸಿಹೋದ ಅಂಕಗಳ ಸಾಧನೆ

ದ್ವಿತೀಯ ಪಿಯು: ಕೊನೆ ಪರೀಕ್ಷೆ ಇಂಗ್ಲಿಷ್‌ ಬರೆಯಬೇಕಿದ್ದ ಹಿಂದಿನ ದಿನ ಸಾವು
Last Updated 16 ಜುಲೈ 2020, 19:30 IST
ಅಕ್ಷರ ಗಾತ್ರ

ದಾವಣಗೆರೆ: ಆಕೆ ದ್ವಿತೀಯ ಪಿಯು ಪರೀಕ್ಷೆಯಲ್ಲಿ ಐದು ವಿಷಯಗಳಿಗೆ ಹಾಜರಾಗಿದ್ದರು. ಕೊನೆಯ ಪರೀಕ್ಷೆಯ ಹಿಂದಿನ ದಿನ ಮೃತಪಟ್ಟಿದ್ದರು. ಈಗ ಫಲಿತಾಂಶ ಬಂದಿದ್ದು, ಆ ಐದು ವಿಷಯಗಳಲ್ಲಿ ಅವರು ಗಳಿಸಿದ ಅಂಕ ಶೇ 93.4.

ಇದು ಕ್ಯಾನ್ಸರ್‌ಗೆ ಬಲಿಯಾದ ಸಿದ್ಧಗಂಗಾ ಪದವಿ ಪೂರ್ವ ಕಾಲೇಜಿನ ವಿಜ್ಞಾನ ವಿಭಾಗದ ಪ್ರತಿಭಾವಂತ ವಿದ್ಯಾರ್ಥಿನಿಯ ಮನಕಲಕುವ ಕಥೆ.

ಹೆಸರು ಬಿ. ಅನುಷಾ. ಚನ್ನಗಿರಿ ತಾಲ್ಲೂಕಿನ ತಾಳಿಕಟ್ಟೆಯ ಬಸವರಾಜಪ್ಪ ಮತ್ತು ಮಂಜಮ್ಮ ಎಂಬ ಕೃಷಿಕ ದಂಪತಿಯ ಮೂವರು ಹೆಣ್ಣುಮಕ್ಕಳಲ್ಲಿ ಈಕೆಯೇ ದೊಡ್ಡವರು. ಸಿದ್ಧಗಂಗಾ ಪಿಯು ಕಾಲೇಜಿನ ಹಾಸ್ಟೆಲ್‌ನಲ್ಲಿ ಓದುತ್ತಿದ್ದರು. ಮಾರ್ಚ್‌ನಲ್ಲಿ ಪರೀಕ್ಷೆ ಪ್ರಾರಂಭವಾದಾಗ ಕನ್ನಡ, ಭೌತ ವಿಜ್ಞಾನ, ರಸಾಯನ ವಿಜ್ಞಾನ, ಗಣಿತ, ಜೀವವಿಜ್ಞಾನ ಪರೀಕ್ಷೆಗಳನ್ನು ಎಲ್ಲರಂತೆ ಬರೆದಿದ್ದರು. ಅಷ್ಟು ಹೊತ್ತಿಗೆ ಲಾಕ್‌ಡೌನ್‌ ಆಗಿದ್ದರಿಂದ ಇಂಗ್ಲಿಷ್‌ ಪರೀಕ್ಷೆಯನ್ನು ಮುಂದೂಡಲಾಗಿತ್ತು. ಮಕ್ಕಳೆಲ್ಲ ಅವರವರ ಮನೆಗೆ ತೆರಳಿದ್ದರು. ಅವರೂ ತಮ್ಮ ಮನೆಗೆ ಹೋಗಿದ್ದರು.

‘ಮೇ ತಿಂಗಳಿನಲ್ಲಿ ಆರೋಗ್ಯದಲ್ಲಿ ಏರುಪೇರು ಉಂಟಾದಾಗ ಶಿವಮೊಗ್ಗ ಬಳಿಯ ಮಣಿಪಾಲ ಕಸ್ತೂರಬಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ರಕ್ತದ ಕ್ಯಾನ್ಸರ್‌ ಇರುವುದು ಪತ್ತೆಯಾಗಿತ್ತು. ಅದಕ್ಕೆ ಚಿಕಿತ್ಸೆ ಪಡೆಯುತ್ತಿದ್ದಳು. ಜೂನ್‌ 18ಕ್ಕೆ ಇಂಗ್ಲಿಷ್‌ ಪರೀಕ್ಷೆಗೆ ದಿನ ನಿಗದಿಯಾಗಿತ್ತು. ಅದಕ್ಕೆ ತಯಾರಿ ನಡೆಸುತ್ತಲೇ ಜೂನ್‌ 17ರಂದು ನಮ್ಮನ್ನಗಲಿದಳು’ ಎಂದು ಸಿದ್ಧಗಂಗಾ ವಿದ್ಯಾಸಂಸ್ಥೆಯ ಮುಖ್ಯ ಶಿಕ್ಷಕಿ ಜಸ್ಟಿನ್‌ ಡಿಸೋಜ ಮರುಗಿದರು.

‘ಚಿಕಿತ್ಸೆಯ ನಡುವೆಯೂ ಪರೀಕ್ಷೆಗೆ ತಯಾರಿ ನಡೆಸಿದ್ದಳು. ಸಿದ್ಧಗಂಗಾ ಯೂಟ್ಯೂಬ್ ಚಾನೆಲ್ ಮೂಲಕ ಕಳುಹಿಸಲಾಗುತ್ತಿದ್ದ ಆನ್‌ಲೈನ್ ತರಗತಿಗಳನ್ನು ಬಿಡದೆ ವೀಕ್ಷಿಸುತ್ತಿದ್ದಳು. ನನ್ನ ಜತೆ ಫೋನ್ ಮೂಲಕ ಸಂಪರ್ಕದಲ್ಲಿದ್ದಳು. ಸಾಕಷ್ಟು ಧೈರ್ಯ ತುಂಬಿದ್ದೆ. ಪರೀಕ್ಷೆ ಬರೆಯುವ ಅದಮ್ಯ ಆಸೆ ಅವಳಲ್ಲಿತ್ತು. ನೀಟ್ ಪರೀಕ್ಷೆಗೂ ಸಿದ್ಧವಾಗುತ್ತಿದ್ದಳು’ ಎಂದು ಸಂಸ್ಥೆಯ ನಿರ್ದೇಶಕ ಡಾ. ಜಯಂತ್‌ ನೆನಪು ಮಾಡಿಕೊಂಡರು.

ಇದೀಗ ಪರೀಕ್ಷಾ ಫಲಿತಾಂಶ ಪ್ರಕಟಗೊಂಡಿದೆ. ಅನುಷಾ ಕನ್ನಡದಲ್ಲಿ 92, ಭೌತವಿಜ್ಞಾನದಲ್ಲಿ 91, ರಸಾಯನ ವಿಜ್ಞಾನದಲ್ಲಿ 98, ಗಣಿತದಲ್ಲಿ 100, ಜೀವವಿಜ್ಞಾನದಲ್ಲಿ 95 ಅಂಕ ಗಳಿಸಿದ್ದಳು. ವೈದ್ಯೆ ಆಗುವ ಕನಸು ಹೊತ್ತಿದ್ದ ಪ್ರತಿಭಾವಂತ ಹುಡುಗಿ ಮುರುಟಿಹೋದಳು ಎಂದು ಜಸ್ಟಿನ್‌ ಡಿಸೋಜ ದುಃಖಿಸಿದರು.

‘ಮುಗ್ಧ ಮಗಳನ್ನು ಕಳೆದೆಕೊಂಡೆವು’

‘ತುಂಬಾ ಮುಗ್ಧೆ ನನ್ನ ಮಗಳು. ಅವಳು ಕಲಿಕೆಯಲ್ಲಿ ಬಹಳ ಚುರುಕಾಗಿದ್ದಳು. ಎಸ್ಸೆಸ್ಸೆಲ್ಸಿಯಲ್ಲಿ 604 ಅಂಕ ಪಡೆದಿದ್ದಳು. ಸಿದ್ಧಗಂಗಾಕ್ಕೆ ಹಾಕಿದ್ದೆವು. ಮೇ 13ಕ್ಕೆ ತಲೆನೋವು, ಹೊಟ್ಟೆ ನೋವು ಎಂದು ಅವಳು ಹೇಳಿದ್ದರಿಂದ ಶಿವಮೊಗ್ಗ ಸರ್ಜಿ ಆಸ್ಪತ್ರೆಗೆ ಒಯ್ದೆವು. ಅಲ್ಲಿಂದ ಮೆಗ್ಗಾನ್‌ ಆಸ್ಪತ್ರೆಗೆ ಹೋದೆವು. ಅಲ್ಲಿ ಕೋವಿಡ್‌ ಪರೀಕ್ಷೆ ಮಾಡಿದರು. ನೆಗೆಟಿವ್‌ ವರದಿ ಬಂದಿತ್ತು. ಅವಳನ್ನು ಪರೀಕ್ಷೆ ಮಾಡಿದ ವೈದ್ಯರು ಕಿದ್ವಾಯಿ ಇಲ್ಲವೇ ಮಣಿಪಾಲಕ್ಕೆ ಕರೆದೊಯ್ಯಬೇಕು ಎಂದು ತಿಳಿಸಿದರು. ನಾವು ಮಣಿಪಾಲಕ್ಕೆ ಕರೆದುಕೊಂಡು ಹೋದೆವು’ ಎಂದು ತಂದೆ ಬಸವರಾಜ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಮಣಿಪಾಲದಲ್ಲಿ ಮತ್ತೆ ಕೊರೊನಾ ಟೆಸ್ಟ್‌ ಮಾಡಿದಾಗ ಪಾಸಿಟಿವ್‌ ಎಂದು ಬಂದಿದ್ದರಿಂದ ನಮ್ಮನ್ನು ಕ್ವಾರಂಟೈನ್‌ ಮಾಡಿದರು. ಅದು ತಪ್ಪು ವರದಿ ಪಾಸಿಟಿವ್‌ ಅಲ್ಲ, ನೆಗೆಟಿವ್‌ ಎಂದು ಎರಡೇ ದಿನಗಳಲ್ಲಿ ತಿಳಿಸಿದರು. ಆನಂತರ ಚಿಕಿತ್ಸೆ ನೀಡಿದರು. ಆಕೆ ಚೇತರಿಸಿಕೊಂಡಿದ್ದಳು. ಪರೀಕ್ಷೆಗೆ ತಯಾರಿ ಮಾಡತೊಡಗಿದಳು. ಆದರೆ, ಜೂನ್‌ 13ಕ್ಕೆ ಮತ್ತೆ ಹುಷಾರಿಲ್ಲದಾಯಿತು. ಚಿಕಿತ್ಸೆ ಕೊಡಿಸಿದರೂ ಜೂನ್‌ 17ರಂದು ನಮ್ಮನ್ನಗಲಿದಳು’ ಎಂದು ಅವರು ದುಃಖ ತೋಡಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT