ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಹಾಯಕ ಪ್ರಾಧ್ಯಾಪಕರ ನೇಮಕ ನಿಯಮ: ಅತಿಥಿ ಉಪನ್ಯಾಸಕರಲ್ಲಿ ಆತಂಕ

Last Updated 19 ಜುಲೈ 2020, 19:53 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಖಾಲಿ ಇರುವ ಸಹಾಯಕ ಪ್ರಾಧ್ಯಾಪಕ ಹುದ್ದೆಗಳಿಗೆ ನೇಮಕ ಮಾಡಿಕೊಳ್ಳುವ ಸಂಬಂಧ ನಿಯಮ ರೂಪಿಸಿ ಹೊರಡಿಸಿರುವ ರಾಜ್ಯಪತ್ರದಲ್ಲಿ, ಅತಿಥಿ ಉಪನ್ಯಾಸಕರಿಗೆ ಮೀಸಲಾತಿ ನೀಡುವ ಬಗ್ಗೆ ಪ್ರಸ್ತಾವ ಇಲ್ಲದಿರುವುದು ಈ ಉಪನ್ಯಾಸಕರನ್ನು ಚಿಂತೆಗೀಡು ಮಾಡಿದೆ.

ಈ ನಿಯಮದಂತೆ ನೇಮಕಾತಿ ನಡೆದರೆ 15–20 ವರ್ಷಗಳಿಂದ ಸರ್ಕಾರಿ ಪದವಿ ಕಾಲೇಜುಗಳಲ್ಲಿ ಕಡಿಮೆ ಸಂಬಳಕ್ಕೆ ಕೆಲಸ ಮಾಡುತ್ತಿರುವ 14,500ಕ್ಕೂ ಹೆಚ್ಚು ಅತಿಥಿ ಉಪನ್ಯಾಸಕರಿಗೆ ಬೀದಿಗೆ ಬೀಳುವ ಆತಂಕ ಎದುರಾಗಿದೆ.

ಸರ್ಕಾರಿ ಪದವಿ ಕಾಲೇಜುಗಳಲ್ಲಿ ಖಾಲಿ ಇರುವ 1,200 ಹುದ್ದೆಗಳನ್ನು ಭರ್ತಿ ಮಾಡುವ ಉದ್ದೇಶದಿಂದ ರಾಜ್ಯ ಸರ್ಕಾರ ನೇಮಕಾತಿ ನಿಯಮ ರೂಪಿಸಿ, ಅರ್ಹತೆ ನಿಗದಿಪಡಿಸಿ ಇದೇ ಜುಲೈ 8ರಂದು ಗೆಜೆಟ್‌ ಅಧಿಸೂಚನೆ ಹೊರಡಿಸಿದೆ. ವಿದ್ಯಾರ್ಹತೆಯ ಜೊತೆಗೆ ಸಾಮಾನ್ಯ ವರ್ಗ 40, ಹಿಂದುಳಿದ ವರ್ಗಕ್ಕೆ 43, ಎಸ್‌ಸಿ, ಎಸ್‌ಟಿ ವರ್ಗಕ್ಕೆ 45 ವರ್ಷ ವಯೋಮಿತಿ ನಿಗದಿಪಡಿಸಲಾಗಿದೆ. ಆದರೆ, ರಾಜ್ಯದ ವಿವಿಧ ಕಾಲೇಜುಗಳಲ್ಲಿ 10–15 ವರ್ಷಗಳಿಗಿಂತಲೂ ಹೆಚ್ಚು ಅವಧಿಯಿಂದ ಉಪನ್ಯಾಸಕರಾಗಿ ಕೆಲಸ ಮಾಡುತ್ತಿರುವವರು, ಅರ್ಹತೆ ಇದ್ದರೂ ವಯೋಮಿತಿ ಕಾರಣದಿಂದ ಅರ್ಜಿ ಸಲ್ಲಿಸಲು ಅನರ್ಹರಾಗುತ್ತಾರೆ.

ಈ ಬಗ್ಗೆ ಪ್ರತಿಕ್ರಿಯಿಸಿದ ಅತಿಥಿ ಉಪನ್ಯಾಸಕ, ದಾವಣಗೆರೆ ಜಿಲ್ಲೆ ಚನ್ನಗಿರಿಯ ಶಿವಕುಮಾರ್ ಯರಗಟ್ಟಿಹಳ್ಳಿ, ‘ಸರ್ಕಾರ ರೂಪಿಸಿದ ನೇಮಕಾತಿ ನಿಯಮದಿಂದ 15 ವರ್ಷಗಳಿಂದ ಕೆಲಸ ಮಾಡುತ್ತಿರುವ ನನ್ನಂಥವರಿಗೆ ಅನ್ಯಾಯವಾಗಿದೆ. ಶೇ 50ರಷ್ಟು ಹುದ್ದೆಗಳನ್ನು ಅತಿಥಿ ಉಪನ್ಯಾಸಕರಿಗೆ ಮೀಸಲಿಡಬೇಕು ಮತ್ತು ಅರ್ಜಿ ಸಲ್ಲಿಸಲು ಕನಿಷ್ಠ 5 ವರ್ಷ ವಯೋಮಿತಿ ಸಡಿಲಿಸಿ ಅವಕಾಶ ನೀಡಬೇಕು ಎಂಬ ಬೇಡಿಕೆಗೆ ಮನ್ನಣೆ ನೀಡಿಲ್ಲ’ ಎಂದು ಬೇಸರಿಸಿದರು.

‘ಮಾಸಿಕ ₹1,200 ವೇತನ ಪಡೆದು ಕೆಲಸ ಮಾಡುತ್ತಾ ಬಂದವರಿದ್ದಾರೆ. ಸದ್ಯ ಎರಡು ಕೆಟಗರಿಯಲ್ಲಿ ₹ 11 ಸಾವಿರ ಮತ್ತು ₹ 13 ಸಾವಿರ ಮಾಸಿಕ ವೇತನ ನೀಡಲಾಗುತ್ತಿದೆ. ಅದೂ ವರ್ಷದಲ್ಲಿ 8ರಿಂದ 9 ತಿಂಗಳು ಮಾತ್ರ. ಕಳೆದ ನವೆಂಬರ್‌ನಿಂದ ಮಾರ್ಚ್‌ವರೆಗಿನ ವೇತನವನ್ನು ಮೇ ತಿಂಗಳಿನಲ್ಲಿ ನೀಡಲಾಗಿದೆ. ನಂತರ ಈವರೆಗೆ ಕೆಲಸವೂ ಇಲ್ಲ. ವೇತನವೂ ಇಲ್ಲ’ ಎಂದು ಅಲವತ್ತುಕೊಂಡರು.

‘ಎಚ್‌.ಡಿ. ಕುಮಾರಸ್ವಾಮಿ ನೇತೃತ್ವದ ಸರ್ಕಾರದಲ್ಲಿ ಉನ್ನತ ಶಿಕ್ಷಣ ಸಚಿವರಾಗಿದ್ದ ಜಿ.ಟಿ. ದೇವೇಗೌಡರು, ನೇಮಕಾತಿ ವೇಳೆ ಅತಿಥಿ ಉಪನ್ಯಾಸಕರಿಗೆ ಶೇ 50ರಷ್ಟು ಮೀಸಲಾತಿ ನೀಡುವ ಭರವಸೆ ನೀಡಿದ್ದರು. ಹುದ್ದೆಗಳನ್ನು ಭರ್ತಿ ಮಾಡುವವರೆಗೆ ₹ 25 ಸಾವಿರ ವೇತನ ನೀಡುವ ಆಶ್ವಾಸನೆ ಕೊಟ್ಟಿದ್ದರು. ಆದರೆ, ಎರಡೂ ಈಡೇರಿಲ್ಲ’ ಎಂದೂ ನೋವು
ತೋಡಿಕೊಂಡರು.

‘ಪಶ್ಚಿಮ ಬಂಗಾಳದಲ್ಲಿ ಅತಿಥಿ ಉಪನ್ಯಾಸಕರಿಗೆ ತಿಂಗಳಿಗೆ ₹ 25 ಸಾವಿರ ವೇತನ ಹಾಗೂ ಸೇವಾ ಭದ್ರತೆ ನೀಡಲಾಗಿದೆ. ಅದೇ ಮಾದರಿಯಲ್ಲಿ ನಮಗೂ ಸೇವಾ ಭದ್ರತೆ ನೀಡಬೇಕು’ ಎಂದೂ ಅವರು ಆಗ್ರಹಿಸಿದರು.

3 ಎಂ.ಎ, ಪಿಎಚ್.ಡಿ, ನೆಟ್‌ ಇದ್ದರೂ ಅವಕಾಶ ಇಲ್ಲ!

ಮೂರು ಎಂ.ಎ (ಜಾನಪದ, ಕನ್ನಡ, ಇಂಗ್ಲಿಷ್‌) ಹಾಗೂ ಒಂದು ಪಿಎಚ್‌.ಡಿ (ಜಾನಪದ) ಮಾಡಿರುವ, ನೆಟ್‌ ಪರೀಕ್ಷೆ ತೇರ್ಗಡೆಯಾಗಿರುವ ಎಂ. ಕನ್ನಿಕಾ ಅವರು ಮೈಸೂರು ವಿಶ್ವವಿದ್ಯಾಲಯದ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯಲ್ಲಿ 7 ವರ್ಷಗಳಿಂದ ಅತಿಥಿ ಉಪನ್ಯಾಸಕಿಯಾಗಿ ಕೆಲಸ ಮಾಡುತ್ತಿದ್ದಾರೆ. ಸದ್ಯ ಅವರು ಕೇವಲ ಮಾಸಿಕ ₹ 7,500 ವೇತನ ಪಡೆಯುತ್ತಿದ್ದಾರೆ. ಹೊಸ ನಿಯಮದ ಪ್ರಕಾರ ಅವರಂಥವರಿಗೂ ಉಪನ್ಯಾಸಕರಾಗಿ ನೇಮಕಗೊಳ್ಳಲು ಅರ್ಹತೆ ಇಲ್ಲ!

‘ಡಿಸ್ಟಿಕ್ಷನ್‌, ಚಿನ್ನದ ಪದಕ ಸಹಿತ ಶೈಕ್ಷಣಿಕ ಅರ್ಹತೆ, 15ಕ್ಕೂ ಹೆಚ್ಚು ಕೃತಿಗಳನ್ನೂ ಬರೆದಿದ್ದರೂ ಈಗಲೂ ಅತಿಥಿ ಉಪನ್ಯಾಸಕಿಯಾಗಿ ಕೆಲಸ ಮಾಡುತ್ತಿದ್ದೇನೆ’ ಎಂದು ಕನ್ನಿಕಾ ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT