ಶನಿವಾರ, ಸೆಪ್ಟೆಂಬರ್ 18, 2021
28 °C

ಸಮ್ಮಿಶ್ರ ಸರ್ಕಾರ ಇದ್ದಾಗ ಕಾರ್ಯಕರ್ತರ ಹಿತ ಕಾಯುವಲ್ಲಿ ಎಡವಿದ್ದೇವೆ: ದೇವೇಗೌಡ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಪಕ್ಷದ ನಿಷ್ಠಾವಂತ ನಾಯಕರು, ಕಾರ್ಯಕರ್ತರ ಹಿತ ಕಾಯುವಲ್ಲಿ ಎಡವಿದ್ದೇವೆ. ಇದರಿಂದ ಪಕ್ಷಕ್ಕೆ ದೊಡ್ಡ ಮಟ್ಟದ ಹಾನಿಯಾಗಿದೆ’ ಎಂದು ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ. ದೇವೇಗೌಡರು ಹೇಳಿದ್ದಾರೆ.

ಪಕ್ಷದ ಶಾಸಕರು, ಮಾಜಿ ಶಾಸಕರು, ವಿವಿಧ ಘಟಕಗಳ ಅಧ್ಯಕ್ಷರಿಗೆ ಪತ್ರ ಬರೆದಿರುವ ಅವರು, ಪಕ್ಷದ ಸಂಘಟನೆಯಲ್ಲಿ ತೊಡಗುವಂತೆ ಮನವಿ ಮಾಡಿದ್ದಾರೆ.

‘ಸಮ್ಮಿಶ್ರ ಸರ್ಕಾರದಲ್ಲಿ ನಮ್ಮ ಪಕ್ಷದ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ್ಯೂ ನಿಮ್ಮ ಹಿತ ರಕ್ಷಿಸುವಲ್ಲಿ ನಾವು ಎಡವಿ, ತಪ್ಪು ಮಾಡಿದ್ದೇವೆ ಎಂಬುದನ್ನು ನಾನು ಪ್ರಾಂಜಲ ಮನಸ್ಸಿನಿಂದ ಒಪ್ಪಿಕೊಳ್ಳುತ್ತೇನೆ. ಅದರಿಂದ ನೀವು ಉತ್ಸಾಹ ಮತ್ತು ಸ್ಥೈರ್ಯ ಕಳೆದುಕೊಂಡಿದ್ದರಿಂದ ಅದು ಪಕ್ಷಕ್ಕೆ ದೊಡ್ಡ ಹಾನಿಯನ್ನೇ ಮಾಡಿದೆ. ಸ್ವಲ್ಪ ಮಂಕಾಗಿರುವ ಮತ್ತು ನಿಸ್ತೇಜವಾಗಿರುವ ಪಕ್ಷವನ್ನು ಇನ್ನೂ ಒಂದು ವರ್ಷದ ಅವಧಿಯಲ್ಲಿನ ಚುರುಕುಗೊಳಿಸಲೇಬೇಕಾಗಿದೆ. ಇದರ ಅನಿವಾರ್ಯವನ್ನು ನೀವು ಅರ್ಥ ಮಾಡಿಕೊಳ್ಳುತ್ತೀರೆಂದು ನಾನು ನಂಬಿದ್ದೇನೆ’ ಎಂದು ಹೇಳಿದ್ದಾರೆ.

‘2019ರ ಲೋಕಸಭಾ ಚುನಾವಣೆಯಲ್ಲಿ ನಾವು ಕಾಂಗ್ರೆಸ್ ಜತೆ ಹೊಂದಾಣಿಕೆ ಮಾಡಿಕೊಂಡಿದ್ದರಿಂದ ಉಂಟಾದ ವೈಪರೀತ್ಯ ಹಾಗೂ ವಿರೋಧಾಭಾಸಗಳಿಂದ ನೀವು ಮುಜುಗರಕ್ಕೆ ಒಳಗಾದರೂ ಪಕ್ಷದ ತೀರ್ಮಾನಕ್ಕೆ ಬದ್ಧರಾಗಿ ಕೆಲಸ ಮಾಡಿದ್ದೀರಿ. ಇನ್ನು ಒಂದು ವರ್ಷದ ನಂತರ ಚುನಾವಣೆಯ ಬಿಸಿ ಆರಂಭವಾಗುತ್ತದೆ. ಪಕ್ಷದ ತತ್ವ, ಸಿದ್ಧಾಂತಗಳಿಗೆ ಬದ್ಧರಾಗಿ ಪಕ್ಷ ನಿಷ್ಠರಾಗಿ ಇಷ್ಟು ವರ್ಷ ನಮ್ಮೊಂದಿಗೆ ಕೆಲಸ ಮಾಡುತ್ತಾ ಬಂದಿರುವ ನಿಮ್ಮ ಭವಿಷ್ಯ ಉಜ್ವಲವಾಗಿರಬೇಕು ಎಂಬುದು ನನ್ನ ಅಪೇಕ್ಷೆ’ ಎಂದು ವಿವರಿಸಿದ್ದಾರೆ.

‘2018ರ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧೆ ಮಾಡಿದ ಕ್ಷೇತ್ರಗಳ ವ್ಯಾಪ್ತಿಯಲ್ಲಾದರೂ ನೀವು ಕ್ರಿಯಾಶೀಲರಾಗಿ. ಕೇಂದ್ರ, ರಾಜ್ಯದ ಬಿಜೆಪಿ ಸರ್ಕಾರಗಳು ಬಡವರು, ರೈತರ ವಿರೋಧಿಯಾಗಿ ತೆಗೆದುಕೊಂಡಿರುವ ನಿರ್ಣಯಗಳ ಬಗ್ಗೆ ಪ್ರಚಾರ ಮಾಡಿ, ಭೂಸುಧಾರಣೆ ಮತ್ತು ಎಪಿಎಂಸಿ ಕಾಯ್ದೆ ತಿದ್ದುಪಡಿಗಳು ರೈತರಿಗೆ ಮಾರಕ ಎಂಬುದನ್ನು ಯುವಕರಿಗೆ ಅರ್ಥ ಮಾಡಿಸಿ, ಜನಸ್ಪಂದನೆಯಲ್ಲಿ ತೊಡಗಿಕೊಳ್ಳಿ’ ಎಂದು ದೇವೇಗೌಡರು ಮನವಿ ಮಾಡಿದ್ದಾರೆ.

 

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು